ಬೆಂಗಳೂರು: ನೀವು ಬ್ಯಾಂಕ್ ವ್ಯವಹಾರಗಳನ್ನು ದಿನ ನಿತ್ಯ ಮಾಡುತ್ತೀರಿ. ಒಂದು ವೇಳೆ ಎಟಿಎಂಗೆ ಹೋಗಿ ನಗದು ವಿತ್ ಡ್ರಾವಲ್ಸ್ ಮಾಡಲು ಯತ್ನಿಸಿದಾಗ ಅಮೌಂಟ್ ಬರದೆ, ನಿಮ್ಮ ಖಾತೆಯಿಂದ ಕಡಿತವಾದರೆ ಏನು ಮಾಡುತ್ತೀರಿ? ಬ್ಯಾಂಕ್ ಅನ್ನು ಸಂಪರ್ಕಿಸುತ್ತೀರಿ. ಆದರೆ ಹಣವನ್ನು ಖಾತೆಗೆ ಹಾಕಲು ಬ್ಯಾಂಕ್ ವಿಳಂಬ ಮಾಡಿದರೆ, ಸರಿಯಾಗಿ ಉತ್ತರ ನೀಡದೆ ಸತಾಯಿಸಿದರೆ ಏನು ಮಾಡಬೇಕು? ಇದಕ್ಕೆ ಪರಿಹಾರ ಮಾರ್ಗ ಇದೆ. ನೀವು ಆರ್‌ಬಿಐ ಒಂಬುಡ್ಸ್‌ಮನ್‌ಗೆ ದೂರು ನೀಡಬಹುದು. ಆಗ ಅದು ಕೂಡಲೇ ಸಂಬಂಧಪಟ್ಟ ಬ್ಯಾಂಕ್‌ಗೆ ಸೂಚಿಸುತ್ತದೆ. ಜತೆಗೆ ಕಾನೂನು ಪ್ರಕಾರ ತಪ್ಪಿತಸ್ಥ ಬ್ಯಾಂಕ್ ಪರಿಹಾರವನ್ನೂ ಗ್ರಾಹಕರಿಗೆ ನೀಡಬೇಕಾಗುತ್ತದೆ. ಅಂಥದ್ದೊಂದು ಪ್ರಸಂಗವಿದು.
ವಿಸ್ತಾರ ಕಚೇರಿಯಲ್ಲಿ ಇಂಥ ನಿದರ್ಶನ ನಡೆದಿದೆ. ಆಗಿದ್ದೇನು ಎನ್ನುತ್ತೀರಾ? ವಿಸ್ತಾರ ಕಚೇರಿಯ ಮಹಿಳಾ ಸಿಬ್ಬಂದಿಯೊಬ್ಬರು ಎಟಿಎಂನಲ್ಲಿ 10,000 ರೂ. ನಗದು ಹಿಂತೆಗೆದುಕೊಳ್ಳಲು ಯತ್ನಿಸಿದ್ದರು. ಬ್ಯಾಂಕ್ ಆಫ್ ಬರೋಡಾದಲ್ಲಿದ್ದ ಅವರ ಖಾತೆಯಿಂದ 10,000 ರೂ. ಮೊತ್ತ ಕಡಿತವಾಗಿತ್ತು. ಆದರೆ ಎಟಿಎಂನಲ್ಲಿ ನಗದು ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಹಿಳಾ ಸಿಬ್ಬಂದಿ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿದರು. ಲಿಖಿತ ದೂರು ಸಲ್ಲಿಸಿದ್ದರು.
12 ದಿನಗಳೊಳಗೆ ದುಡ್ಡು ಕೊಡದಿದ್ದರೆ ದಿನಕ್ಕೆ 100 ರೂ. ಪರಿಹಾರ:ಹೀಗಿದ್ದರೂ, ತಿಂಗಳುಗಟ್ಟಲೆ ಬ್ಯಾಂಕ್ ಅನ್ನು ಸಂಪರ್ಕಿಸಿದ್ದರೂ, ಪ್ರಯೋಜನವಾಗಿರಲಿಲ್ಲ. 58 ದಿನಗಳಾದರೂ ದುಡ್ಡು ಬಂದಿರಲಿಲ್ಲ. ಆದರೆ ಕಾನೂನು ಏನೆನ್ನುತ್ತದೆ? ಒಂದು ವೇಳೆ ಎಟಿಎಂನಲ್ಲಿ ಗ್ರಾಹಕರಿಗೆ ನಗದು ಹಿಂತೆಗೆತ ಆಗದೆ, ಖಾತೆಯಿಂದ ದುಡ್ಡು ಕಡಿತವಾಗಿದ್ದರೆ, ದೂರು ದಾಖಲಿಸಿದ 12 ದಿನಗಳೊಳಗೆ ಬ್ಯಾಂಕ್ ಮರು ಪಾವತಿಸಬೇಕು. ತಪ್ಪಿದರೆ ಬ್ಯಾಂಕ್, ಗ್ರಾಹಕರಿಗೆ ಪ್ರತಿ ದಿನ 100 ರೂ. ಪರಿಹಾರ ಕೊಡಬೇಕು. ಕೊನೆಗೆ ವಿಸ್ತಾರ ನ್ಯೂಸ್‌ನ ಆ್ಯಂಕರ್ ಅಭಿಷೇಕ್ ರಾಮಪ್ಪ ಅವರ ಜತೆ ಸಮಾಲೋಚಿಸಿ ಆರ್‌ಬಿಐ ಒಂಬುಡ್ಸ್‌ಮನ್‌ಗೆ ದೂರು ಸಲ್ಲಿಸಿದ್ದರು. ಜೂನ್ 1 ಕ್ಕೆ ದೂರು ನೀಡಲಾಯಿತು. ಜೂನ್ 13ಕ್ಕೆ 10,000 ರೂ. ಹಾಗೂ ಜೂನ್ 21ಕ್ಕೆ 4200 ರೂ. ಲಭಿಸಿತು.
ಇದನ್ನೂ ಓದಿ: Vistara Money Plus : ಮಕ್ಕಳಿಗೆ ಕ್ರೆಡಿಟ್ ಕಾರ್ಡ್ ಕೊಡುವಾಗ ಇರಲಿ ಎಚ್ಚರ, ವೀಕ್ಷಿಸಿ ವಿಸ್ತಾರ ಮನಿ ಪ್ಲಸ್ ವಿಡಿಯೊ
ಪ್ರತಿ ದಿನ ಇಂಥ ನೂರಾರು ಪ್ರಕರಣಗಳು ನಡೆಯುತ್ತವೆ. ಆದರೆ ಅನೇಕ ಮಂದಿಗೆ ಇಂಥ ಘಟನೆಗಳ ಸಂದರ್ಭ ಆರ್‌ಬಿಐ ಒಂಬುಡ್ಸ್‌ಮನ್‌ಗೆ ದೂರು ನೀಡಬಹುದು ಎಂಬುದೇ ತಿಳಿದಿರುವುದಿಲ್ಲ. ಬ್ಯಾಂಕ್‌ಗಳಲ್ಲಿನ ಸಿಬ್ಬಂದಿಯಂತೂ ಇಂಥ ಉಪಯುಕ್ತ ವಿಚಾರಗಳನ್ನು ತಿಳಿಸುವುದಿಲ್ಲ. ಯುಪಿಐ ಮೂಲಕ ಹಣ ವರ್ಗಾವಣೆ ನಡೆಸುವ ಸಂದರ್ಭವೂ ವರ್ಗಾವಣೆ ವಿಫಲವಾಗಿ ಹಣವು ಖಾತೆಗೆ ಬರದಿದ್ದರೆ, 12 ದಿನಗಳೊಳಗೆ ಬ್ಯಾಂಕ್ ಒದಗಿಸಬೇಕಾಗುತ್ತದೆ. ಇಲ್ಲದಿದ್ದರೆ ದಿನಕ್ಕೆ 100 ರೂ. ದಂಡದ ಜತೆಗೆ ಪಾವತಿಸಬೇಕಾಗುತ್ತದೆ.
ಮತ್ತೊಂದು ಉದಾಹರಣೆ ಗಮನಿಸಿ, ನೀವು ಎಟಿಎಂನಲ್ಲಿ 500 ರೂ. ವಿತ್ ಡ್ರಾವಲ್‌ಗೆ ಯತ್ನಿಸುತ್ತೀರಿ. ಕೇವಲ 400 ರೂ. ಸಿಗುತ್ತದೆ. 100 ರೂ. ಕೊರತೆಯಾದರೂ, ಅಕೌಂಟ್‌ನಲ್ಲಿ 500 ರೂ. ಕಡಿತ ಎಂದು ನಮೂದಾಗಿರುತ್ತದೆ. ಇಂಥ ಸಂದರ್ಭದಲ್ಲಿ ನೀವೇನು ಮಾಡಬಹುದು. ಬ್ಯಾಂಕನ್ನು ಸಂಪರ್ಕಿಸಬಹುದು. ಒಂದು ವೇಳೆ ಬ್ಯಾಂಕ್ ಸ್ಪಂದಿಸದಿದ್ದರೆ ಆರ್ ಬಿಐ ಒಂಬುಡ್ಸ್‌ಮನ್‌ಗೆ ದೂರು ನೀಡಬಹುದು.