Site icon Vistara News

Business Guide : ಗಾಣದ ಎಣ್ಣೆಯ ಬಿಸಿನೆಸ್‌ನಲ್ಲಿ ಹೆಚ್ಚು ಲಾಭ ಮಾಡೋದು ಹೇಗೆ?

Olive Oil

ಬೆಂಗಳೂರು: ಬೆಂಗಳೂರಿನ ರಾಜಾಜಿನಗರದಲ್ಲಿರುವ ( Business Guide) ನಿಸರ್ಗ ಫುಡ್ಸ್‌ ಆಂಡ್‌ ಬೇವರೇಜಸ್‌ ಸಂಸ್ಥೆಯಲ್ಲಿ ಮರದ ಗಾಣದಲ್ಲಿ ಗ್ರಾಹಕರಿಗೆ ಬೇಕಾಗುವ ಅಡುಗೆ ಎಣ್ಣೆಯನ್ನು ತಯಾರಿಸಿಕೊಡುತ್ತಾರೆ. ನೆಲಗಡಲೆ ಎಣ್ಣೆ, ತೆಂಗಿನ ಎಣ್ಣೆ, ಸೂರ್ಯಕಾಂತಿ, ಸಾಸಿವೆ, ಹರಳೆಣ್ಣೆ ಇತ್ಯಾದಿಗಳ ಜತೆಗೆ ಜೇನು, ತುಪ್ಪ ಇತ್ಯಾದಿ ಇತರ ಉತ್ಪನ್ನಗಳನ್ನೂ ಇಲ್ಲಿ ಖರೀದಿಸಬಹುದು. ನೀವು ತೈಲ ಬೀಜಗಳನ್ನು ತೆಗೆದುಕೊಂಡು ಹೋದರೆ, ಎಣ್ಣೆಯನ್ನೂ ನಿಮ್ಮ ಎದುರೇ ತಯಾರಿಸಿ ಕೊಡುತ್ತಾರೆ. ಮರದ ಗಾಣವಾದ್ದರಿಂದ ಬೀಜಗಳ ಪೋಷಕಾಂಶಗಳು ನಷ್ಟವಾಗುವುದಿಲ್ಲ ಎನ್ನುತ್ತಾರೆ ಕಂಪನಿಯ ಸ್ಥಾಪಕರಾದ ಶ್ರೀನಿವಾಸ್‌ ಪ್ರಸಾದ್‌ ಅವರು.

ಕೆಲ ವರ್ಷಗಳ ಹಿಂದೆ ಕೇವಲ 18 ಲಕ್ಷ ರೂ. ಬಂಡವಾಳದಲ್ಲಿ ಆರಂಭವಾದ ನಿಸರ್ಗ ಫುಡ್ಸ್‌ ಆಂಡ್‌ ಬೇವರೇಜಸ್‌ ಸಂಸ್ಥೆ ಈಗ ವಾರ್ಷಿಕ 3 ಕೋಟಿ ರೂ.ಗೂ ಅಧಿಕ ವಹಿವಾಟನ್ನು ನಡೆಸುತ್ತಿರುವುದು ವಿಶೇಷ.

ಅಡುಗೆ ಎಣ್ಣೆಯ ಬಿಸಿನೆಸ್‌ ಮಾಡುವವರು ಗ್ರಾಹಕರ ಪ್ರಶ್ನೆಗಳಿಗೆ ಸೂಕ್ತವಾಗಿ ಸ್ಪಂದಿಸಬೇಕು. ರಿಫೈನ್ಡ್‌ ಆಯಿಲ್‌ ಮತ್ತು ಮರದ ಗಾಣದ ಎಣ್ಣೆಯ ನಡುವೆ ವ್ಯತ್ಯಾಸವೇನು ಎಂಬುದನ್ನು ಪಾರದರ್ಶಕವಾಗಿ ತಿಳಿಸಿಕೊಡಬೇಕು. ನಮ್ಮಲ್ಲಿ ಗ್ರಾಹಕರು ಅಡುಗೆ ಎಣ್ಣೆ ತಯಾರಿಸುವ ಎಲ್ಲ ಹಂತಗಳನ್ನೂ ಪರಿಶೀಲಿಸಬೇಕು.

ಅಡುಗೆ ಎಣ್ಣೆ ತಯಾರಿಸುವ ಸ್ಥಳದಲ್ಲಿ ಅಲ್ಪ ಸ್ವಲ್ಪ ಜಿಡ್ಡಿನ ಅಂಶ ಸಹಜ. ಆದರೆ ಒಟ್ಟಾರೆಯಾಗಿ ಸ್ವಚ್ಛತೆ ಕಾಪಾಡಬೇಕು. ಉತ್ಪನ್ನ ಹೇಗೆ ತಯಾರಾಗುತ್ತದೆ ಎಂಬುದನ್ನು ತೋರಿಸಬೇಕು. ಪ್ರಾಮಾಣಿಕತೆ ಮತ್ತು ಪರಿಶ್ರಮದಿಂದ ಉತ್ತಮ ವಹಿವಾಟು ನಡೆಸಬಹುದು. ಜನರಿಗೆ ಒಳ್ಳೆಯದನ್ನು ಕೊಡಬೇಕು. ವ್ಯಾಪಾರಂ ದ್ರೋಹ ಚಿಂತನಂ ಎನ್ನುತ್ತಾರೆ. ಆದರೆ ಈಗಿನ ಕಾಲಕ್ಕೆ ಅದು ಅನ್ವಯವಾಗದು. ಪ್ರಾಮಾಣಿಕತೆಯೇ ಯಶಸ್ಸಿನ ಗುಟ್ಟು ಎನ್ನುತ್ತಾರೆ ಶ್ರೀನಿವಾಸ ಪ್ರಸಾದ್.‌

ನಾಟಿ ಕಡ್ಲೆ ಬೀಜಗಳನ್ನು ಬಳಸಿ. ಕುಸುಬೆ ಎಂಬ ತೈಲ ಧಾನ್ಯವನ್ನು ಉತ್ತರ ಕರ್ನಾಟಕದಲ್ಲಿ ಬೆಳೆಸುತ್ತಾರೆ. ಆರೋಗ್ಯದಾಯಕ. ಅದನ್ನು ಬಳಸಿ. ಉತ್ತಮ ಧಾನ್ಯಗಳನ್ನು ಆಯ್ಕೆ ಮಾಡಿ. ಕಡಿಮೆ ರೇಟಿಗೆ ಸಿಗುತ್ತದೆ ಎಂದು ಕಳಪೆ ಕೊಬ್ಬರಿ ಖರೀದಿಸದಿರಿ. ಒಳ್ಳೆಯ ಬೀಜ ಕರ್ನಾಟಕದಲ್ಲಿಯೇ ಸಿಗುತ್ತದೆ ಎನ್ನುತ್ತಾರೆ ಅವರು.

Exit mobile version