ಸೈಬರ್ ವಂಚನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಬೆಂಗಳೂರಿನಲ್ಲಂತೂ ( Money Guide) ದಿನೇದಿನೆ ಸೈಬರ್ ವಂಚನೆಯ ಪ್ರಕರಣಗಳು ನಡೆಯುತ್ತಿವೆ. ಖ್ಯಾತ ಸೈಬರ್ ತಜ್ಞ ಸತೀಶ್ ವೆಂಕಟಸುಬ್ಬು ಅವರು ಸೈಬರ್ ಕ್ರೈಮ್ ಎಂಬ ಪುಸ್ತಕವನ್ನು ಬರೆದಿದ್ದಾರೆ. ವಿಸ್ತಾರ ಮನಿಪ್ಲಸ್‌ನಲ್ಲಿ ಸೈಬರ್ ವಂಚನೆಗಳ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ಸತೀಶ್ ವೆಂಕಟಸುಬ್ಬು ಅವರು ನೀಡಿದ್ದಾರೆ.
ಸೈಬರ್ ಕ್ರೈಮ್ ಪುಸ್ತಕದಲ್ಲಿ 26 ಸೈಬರ್ ಕ್ರೈಮ್‌ಗಳ ಬಗ್ಗೆ ನಾನು ಬರೆದಿದ್ದೇನೆ. ಈ ಪ್ರತಿಯೊಂದು ಪ್ರಕರಣದಲ್ಲೂ ಅದರದ್ದೇ ಆದ ವಿಧಾನಗಳಿವೆ. ಆದರೆ ಎಲ್ಲ ಡಿಜಿಟಲ್ ಟ್ರಾನ್ಸಕ್ಷನ್‌ಗಳ ಸಂದರ್ಭ ಅಪರಿಚಿತ ಸಂದೇಶಗಳಿಗೆ ಮಾರು ಹೋಗಬಾರದು ಎನ್ನುವ ಸೂತ್ರ ಎಲ್ಲ ಪ್ರಕರಣಗಳಿಗೂ ಅನ್ವಯ. ಸಂದೇಶಗಳು ಎಲ್ಲಿಂದ ಬಂದಿವೆ ಎಂಬುದನ್ನು ತಾಳ್ಮೆಯಿಂದ ತಿಳಿದುಕೊಳ್ಳಬೇಕು. ದೃಢೀಕರಣವಾದ ಬಳಿಕವಷ್ಟೇ ಸಂದೇಶಗಳಿಗೆ ಸ್ಪಂದಿಸಬೇಕು. ಯಾವುದೇ ಅಪರಿಚಿತ ಕರೆ ಅಥವಾ ಮೆಸೇಜ್ ಬಂದರೆ ಎಚ್ಚೆತ್ತುಕೊಳ್ಳಬೇಕು. ಅವುಗಳಿಗೆ ಒಟಿಪಿ ನೀಡಬಾರದು. ಇಷ್ಟು ಮಾಡಿದರೆ 70-80% ಸೈಬರ್ ಕ್ರೈಮ್ ನಿಂದ ಪಾರಾಗಬಹುದು.
ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅನ್ನು ಅನವಶ್ಯಕವಾಗಿ ಯಾರಿಗೂ ಕೊಡಬೇಡಿ. ಭಾರತ ಈಗ ಡಿಜಿಟಲ್ ವರ್ಗಾವಣೆಗಳಿಗೆ ಮುಂಚೂಣಿಯಲ್ಲಿದೆ. ಹೀಗಾಗಿ ವ್ಯವಹರಿಸುವಾಗ ಸಾಕಷ್ಟು ಜಾಗರೂಕತೆಯಿಂದಿರಿ. ನಿಮ್ಮ ಪರ್ಸಲ್ಲಿ ನೀವು ನಿಮ್ಮೆಲ್ಲ ಹಣ ಇಡುವುದಿಲ್ಲ ಅಲ್ಲವೇ. ಅದೇ ರೀತಿ ಮುಖ್ಯವಾದ ಬ್ಯಾಂಕ್ ಅಕೌಂಟ್ ಅನ್ನು ಪ್ರತ್ಯೇಕವಾಗಿಟ್ಟು ಇಡಿ. ಡಿಜಿಟಲ್ ಟ್ರಾನ್ಸಕ್ಷನ್‌ಗಳಿಗೆ ಬೇರೆ ಬ್ಯಾಂಕ್ ಅಕೌಂಟ್ ಇಡಿ. ಇದರಿಂದ ಒಂದು ವೇಳೇ ಸೈಬರ್ ದಾಳಿಗೆ ಗುರಿಯಾದರೂ ನಷ್ಟದ ಪ್ರಮಾಣ ಕಡಿಮೆಯಾಗುತ್ತದೆ.
ನಿಮಗೆ ಅಪರಿಚಿತರಿಂದ ಸಾಮಾಜಿಕ ಜಾಲತಾಣಗಳಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂದಿದ್ದರೆ, ಹುಷಾರಾಗಿರಿ. ಮ್ಯೂಚುವಲ್ ಫ್ರೆಂಡ್ಸ್ ಇರದಿದ್ದರೆ ಸ್ವೀಕರಿಸದಿರಿ. ಸ್ಮಾರ್ಟ್ ಫೋನ್ ಒಂದು ರೀತಿಯಲ್ಲಿ ಕಂಪ್ಯೂಟರ್ ಇದ್ದ ಹಾಗೆ ಇರುತ್ತದೆ. ನಿಮಗೇ ಗೊತ್ತಿಲ್ಲದಂತೆ ನಿಮ್ಮ ಫೋಟೊಗಳನ್ನು ಯಾರಾದರೂ ತೆಗೆಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ಯಾವುದಾದರೂ ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡುವುದಿದ್ದರೆ ಎಚ್ಚರಿಕೆ ಇರಲಿ.