ಭಾರತೀಯರು ಉಳಿತಾಯ ಮನೋಪ್ರವೃತ್ತಿಯವರು. ನಮ್ಮವರಿಗೆ ಉಳಿತಾಯ ಹೇಗೆ ಮಾಡುವುದು ಎಂಬುದನ್ನು ಹೇಳಿ ಕೊಡಬೇಕಿಲ್ಲ. ಆದರೆ ಹೂಡಿಕೆ ಮಾಡುವುದು ಹೇಗೆ ಎಂಬುದು ಮಾತ್ರ ಅಷ್ಟಾಗಿ ಗೊತ್ತಿಲ್ಲ (Investment Tips) ಎನ್ನುತ್ತಾರೆ ತಜ್ಞರು. ಹಾಗಾರೆ ಉಳಿತಾಯ ಮಾಡುವ ಹಣವನ್ನು ಇನ್ವೆಸ್ಟ್ ಮಾಡುವುದು ಹೇಗೆ, ಏನು-ಎತ್ತ ಎಂಬುದನ್ನು ನೋಡೋಣ.
ಒಂದು ಪ್ಲಾನ್ ಕಟ್ಟಿಕೊಳ್ಳಿ: ಮಾಡಿದ ಉಳಿತಾಯದ ಹಣವನ್ನು ಎಲ್ಲಿ ಹೂಡಬೇಕು ಎಂಬ ಪ್ರಶ್ನೆಗೆ ಉತ್ತರವಾಗಿ ಮೊದಲು ಒಂದು ಪ್ಲಾನ್ ಮಾಡಬೇಕು. ನಾನು ಎಷ್ಟು ಹೂಡಿಕೆ ಮಾಡಬಹುದು? ಎಷ್ಟು ನಷ್ಟವನ್ನು ನಾನು ತಡೆದುಕೊಳ್ಳಬಲ್ಲೆ? ನನ್ನ ಹೂಡಿಕೆಯ ಗುರಿ ಯಾವುದು ಎಂಬುದನ್ನು ಖಚಿತಪಡಿಸಿಕೊಳ್ಳಿ.
ಅಪಾಯವನ್ನು ಅರ್ಥ ಮಾಡಿಕೊಳ್ಳಿ: ಒಂದು ವೇಳೆ ನೀವು ನಿಮ್ಮ ಹೂಡಿಕೆಯಲ್ಲಿ ಸ್ವಲ್ಪ ಅಥವಾ ಎಲ್ಲ ಹಣವನ್ನು ನಷ್ಟ ಮಾಡಿಕೊಂಡರೆ ಭರಿಸಬಲ್ಲಿರಾ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ.. ಅನೇಕ ಮಂದಿ ನಷ್ಟವನ್ನು ತಡೆದುಕೊಳ್ಳಲು ಸಾಧ್ಯ ಎಂದು ತಪ್ಪಾಗಿ ಭಾವಿಸುತ್ತಾರೆ. ರಿಸ್ಕ್ ಮತ್ತು ರಿವಾರ್ಡ್ ಸಲುವಾಗಿ ಸದಾ ಸಿದ್ಧರಾಗಿರಬೇಕು. ಪೂರ್ವ ತಯಾರಿ ನಡೆಸಿರಬೇಕು. ನೀವು ಹೂಡಿಕೆ ಮಾಡದಿದ್ದರೆ ಹಣದುಬ್ಬರ ನಿಮ್ಮ ಹಣದ ಮೌಲ್ಯವನ್ನು ಕರಗಿಸಿ ಬಿಡುತ್ತದೆ. ಇದೂ ನಿಮಗೆ ಅರಿವರಿಲ್ಲದೆ ಉಂಟಾಗುವ ನಷ್ಟ. ಯಾವುದೇ ರಿಸ್ಕ್ ತೆಗೆದುಕೊಳ್ಳದೆ ಇರುವುದು ಕೂಡ ಒಂದು ರಿಸ್ಕ್ ಆಗಿಬಿಡುತ್ತದೆ.
ಶುರುವಿನಲ್ಲಿಯೇ ತೆರಿಗೆ ಉಳಿಸಿರಿ: ಹೂಡಿಕೆ ಮಾಡುವ ಆರಂಭದಲ್ಲಿ ಬಹಳ ಮಂದಿ ತೆರಿಗೆ ಬಗ್ಗೆ ಆಲೋಚಿಸುವುದಿಲ್ಲ. ಅದು ಸಣ್ಣದಾಗಿದ್ದರೂ ದೀರ್ಘಕಾಲೀನವಾದ ಹೂಡಿಕೆ ಮೇಲೆ ಪ್ರಭಾವ ಬೀರುತ್ತದೆ. ಲಾಂಗ್ ಟರ್ಮ್ ಸ್ಟ್ರಾಟಜಿಯ ಸಂದರ್ಭ ನೀವು ತೆರಿಗೆಯ ಪರಿಣಾಮಗಳನ್ನೂ ಕಂಡುಕೊಳ್ಳುವುದು ಮುಖ್ಯ. ನೀವು ತೆರಿಗೆ ಎಫೀಶಿಯೆಂಟ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿಲ್ಲ ಎಂದಿಟ್ಟುಕೊಳ್ಳಿ. ಆಗ ನಿಮಗೆ ಸಿಗುವ ಪಿಂಚಣಿ ಮೌಲ್ಯವೂ ಕಡಿಮೆಯಾಗುತ್ತದೆ ಎಂಬುದನ್ನು ಖಾತೆ ತೆರೆಯುವಾಗಲೇ ನೆನಪಿಟ್ಟುಕೊಳ್ಳಿ.
ಹೂಡಿಕೆಯಲ್ಲಿ ಇರಲಿ ವೈವಿಧ್ಯತೆ: ನಾನಾ ಬಗೆಯ ಮಾರುಕಟ್ಟೆಗಳು ಏಳುತ್ತವೆ ಮತ್ತು ಬೀಳುತ್ತವೆ. ಆದ್ದರಿಂದ ವಿಭಿನ್ನ ಹೂಡಿಕೆಯ ಸಾಧನಗಳನ್ನು ಬಳಸುವುದು ಉತ್ತಮ. ಎಲ್ಲ ಮೊಟ್ಟೆಗಳನ್ನೂ ಒಂದೇ ಬುಟ್ಟಿಯಲ್ಲಿ ಇಡಬಾರದು ಎನ್ನುತ್ತಾರೆ ಹಣಕಾಸು ಸಲಹೆಗಾರರು. ಬ್ಯಾಂಕ್ ಡಿಪಾಸಿಟ್, ಪಿಂಚಣಿ ಪ್ಲಾನ್, ವಿಮೆ, ಚಿನ್ನ, ರಿಯಾಲ್ಟಿ, ಮ್ಯೂಚುವಲ್ ಫಂಡ್, ಷೇರು ಹೀಗೆ ಹೂಡಿಕೆ ವೈವಿಧ್ಯಮಯವಾಗಿ ಇರಲಿ. ಆಗ ಸಂಭವನೀಯ ನಷ್ಟ ಕಡಿಮೆಯಾಗುತ್ತದೆ. ಲಾಭ ಹೆಚ್ಚುತ್ತದೆ.
ಟಿಪ್ಸ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸಿ ನಿರ್ಧರಿಸಿ: ಈಗ ಇಂಟರ್‌ನೆಟ್ ನೋಡಿದರೆ ಅನೇಕ ಪಂಡಿತರು ನೂರೆಂಟು ಬಗೆಯ ಸಲಹೆಗಳನ್ನು ನೀಡುತ್ತಾರೆ. ಯಾವ ಷೇರುಗಳಲ್ಲಿ ಹೂಡಬೇಕು ಎಂದು ಹೇಳುತ್ತಾರೆ. ಆದರೆ ಕೆಲವು ಟಿಪ್ಸ್‌ಗಳ ಬಗ್ಗೆ ನೀವೇ ಯೋಚಿಸಿ ನಿರ್ಧರಿಸಿ. ಕುರುಡಾಗಿ ಅನುಕರಿಸುವುದು ಬೇಡ.
ಅಪರಿಚಿತ ಕಂಪನಿಗಳ ಷೇರು ಬೇಡ: ಷೇರಿನ ದರ ಕಡಿಮೆ ಇದೆ ಎಂದುಕೊಂಡು ಕಣ್ಣು ಮುಚ್ಚಿಕೊಂಡು ಲಕ್ಷಾಂತರ ರೂ. ಹೂಡುವ ಅವಿವೇಕದ ನಿರ್ಧಾರ ಕೈಗೊಳ್ಳದಿರಿ. ಕಂಪನಿಯ ಬ್ಯಾಲೆನ್ಸ್ ಶೀಟ್, ತ್ರೈಮಾಸಿಕ ಫಲಿತಾಂಶ ವಿವರಗಳನ್ನು ಸಮಗ್ರ ಪರಿಶೀಲಿಸಿ ಅದರ ಷೇರುಗಳಲ್ಲಿ ಹೂಡಿಕೆ ಮಾಡಿ. ಮ್ಯೂಚುವಲ್ ಫಂಡ್‌ನಲ್ಲೂ ನಾನಾ ವಿಧಗಳಿವೆ. ಅರಿತು ಹೂಡಿಕೆ ಮಾಡುವುದು ಮುಖ್ಯ.
ನಿಯಮಿತ ಹೂಡಿಕೆ ಇರಲಿ: ಒಂದೇ ಸಲ ಲಂಪ್ಸಮ್ ಆಗಿ ಹೂಡಿಕೆ ಮಾಡುವುದಕ್ಕಿಂತ ನಿಯಮಿತವಾಗಿ ಸಿಪ್ ಮೂಲಕ ಹೂಡುವುದು ಸೂಕ್ತ.
ಮರು ಹೂಡಿಕೆ: ತೀರ ಅಗತ್ಯ ಇದ್ದರೆ ಮಾತ್ರ ಹೂಡಿಕೆಯ ಲಾಭ ತೆಗೆದುಕೊಳ್ಳಿ ಹಾಗೂ ಖರ್ಚು ಮಾಡಿ. ಇಲ್ಲದಿದ್ದರೆ ಹೂಡಿಕೆಯ ಲಾಭವನ್ನು ಹಿಂತೆಗೆದು ಮರು ಹೂಡಿಕೆ ಮಾಡಿಕೊಳ್ಳಿ. ಇದರಿಂದ ದೀರ್ಘಕಾಲೀನವಾಗಿ ದೊಡ್ಡ ನಿಧಿಯನ್ನು ಗಳಿಸಬಹುದು.
ಮರು ಮೌಲ್ಯಮಾಪನ: ಒಮ್ಮೆ ಹೂಡಿಕೆ ಶುರು ಮಾಡಿದ ಮೇಲೆ ನಿಯಮಿತವಾಗಿ ಮರು ಪರಿಶೀಲನೆ ಮುಖ್ಯ. ಅದರಲ್ಲೂ ದೀರ್ಘಕಾಲೀನ ಹೂಡಿಕೆ, ಸಾಲದ ಬಗ್ಗೆ ಆಗಾಗ್ಗೆ ಅಕೌಂಟ್ ನೋಡಿಕೊಳ್ಳಬೇಕು. ಲಾಭದಾಯಕ ಮಾರ್ಗಗಳ ಬಗ್ಗೆ ತಿಳಿಯಬೇಕು.
ನಿಮ್ಮ ಪ್ಲಾನ್‌ಗೆ ಬದ್ಧರಾಗಿ: ನಿಮ್ಮ ಹಣಕಾಸು ಹೂಡಿಕೆಯ ಯೋಜನೆಯನ್ನು ಒಮ್ಮೆ ಶುರು ಮಾಡಿದ ಬಳಿಕ ಅದಕ್ಕೆ ಬದ್ಧರಾಗುವುದು ಮುಖ್ಯ. ಸಾಮಾನ್ಯವಾಗಿ ಜನ ಸಿಪ್ ಮೂಲಕ ಹೂಡಿದರೆ ಉಳಿದ ಸಂಗತಿಯನ್ನು ಮರೆಯುತ್ತಾರೆ. ಮಾರುಕಟ್ಟೆ ಸಂಚಲನ, ಕಮಾಡಿಟೀಸ್, ಹಣದುಬ್ಬರ, ಬಡ್ಡಿ ದರ, ಡಿವಿಡೆಂಡ್ ವಿಚಾರಗಳನ್ನು ಮರೆಯದಿರಿ.
ಇದನ್ನೂ ಓದಿ: Krishi Khajane : ಹೂವು ಬೆಳೆದು ಹಣ ಗಳಿಸಿ; ಒಂದು ಎಕರೆಯಲ್ಲಿ ಮಲ್ಲಿಗೆ ಬೆಳೆದರೆ 3 ಲಕ್ಷ ರೂ. ಆದಾಯ!