Site icon Vistara News

Mahila Samman Savings Certificate: ಮಹಿಳಾ ಸಮ್ಮಾನ್‌‌ನಲ್ಲಿ ಹೂಡಿಕೆಯಿಂದ ಏನು ಲಾಭ?

Mahila Samman Savings Certificate

ಮಹಿಳಾ ಹೂಡಿಕೆದಾರರನ್ನು ಆಕರ್ಷಿಸಲು ಕೇಂದ್ರ ಸರ್ಕಾರ ವಿವಿಧ ಯೋಜನೆಗಳನ್ನು ಪ್ರಕಟಿಸುತ್ತಲೇ ಇರುತ್ತದೆ. ಇದರಲ್ಲಿ 2023ರ ಬಜೆಟ್ ನಲ್ಲಿ (Budget 2023) ಘೋಷಿಸಿರುವ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ (Mahila Samman Savings Certificate:) ಕೂಡ ಒಂದಾಗಿದೆ. ಇದು ಮಹಿಳಾ ಹೂಡಿಕೆದಾರರಿಗೆ ಭಾರತ ಸರ್ಕಾರವು ನೀಡುವ ಸಣ್ಣ ಉಳಿತಾಯ ಪ್ರಮಾಣ (small savings certificate) ಪತ್ರವಾಗಿದೆ.

ಇದರಲ್ಲಿ ಹೂಡಿಕೆ ಮಾಡುವ ಮೂಲಕ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಆರ್ಥಿಕವಾಗಿ ಸಬಲರಾಗಬಹುದು ಎಂದು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಕಡಿಮೆ ಸಮಯದಲ್ಲಿ ಮಹಿಳೆಯರಿಗೆ ಉತ್ತಮ ಆದಾಯವನ್ನು ನೀಡಲು ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯನ್ನು ಸರ್ಕಾರವು 2025ರವರೆಗೆ ಮುಂದುವರಿಸಲಿದೆ.

2024ರಲ್ಲಿ ವಿಸ್ತರಿಸಲಾಗಿದೆಯೇ?

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರದ ಕುರಿತು 2024ರ ಬಜೆಟ್‌ನಲ್ಲಿ ಯಾವುದೇ ಪ್ರಕಟಣೆಯನ್ನು ಮಾಡಲಾಗಿಲ್ಲ. ಪ್ರಸ್ತುತ, ಬಡ್ಡಿ ದರ ಮತ್ತು ಹೂಡಿಕೆಯ ಸಮಯದ ಮಿತಿ ಮೊದಲಿನಂತೆಯೇ ಇರುತ್ತದೆ. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವು ಏಪ್ರಿಲ್ 2023 ರಿಂದ ಮಾರ್ಚ್ 2025 ರವರೆಗೆ 2 ವರ್ಷಗಳವರೆಗೆ ಲಭ್ಯವಿರುವ ಒಂದು ಬಾರಿಯ ಯೋಜನೆಯಾಗಿದೆ. ಇದರ ಖಾತೆಯನ್ನು ಯಾವುದೇ ಪೋಸ್ಟ್ ಆಫೀಸ್‌ನಲ್ಲಿ ತೆರೆಯಬಹುದು. ಆದರೆ, ಕೆಲವು ಬ್ಯಾಂಕ್‌ಗಳು ತಮ್ಮೊಂದಿಗೆ ಈ ಖಾತೆ ತೆರೆಯುವ ಸೌಲಭ್ಯವನ್ನೂ ಒದಗಿಸುತ್ತಿವೆ.


ಯಾರು ತೆರೆಯಬಹುದು?

ಈ ಯೋಜನೆಯ ಅಡಿಯಲ್ಲಿ ಯಾವುದೇ ವಯಸ್ಸಿನ ಭಾರತೀಯ ಮಹಿಳೆ ಖಾತೆಯನ್ನು ತೆರೆಯಬಹುದು. ಪುರುಷ ಪೋಷಕರು ತಮ್ಮ ಅಪ್ರಾಪ್ತ ಮಗಳಿಗೆ ಈ ಖಾತೆಯನ್ನು ತೆರೆಯಬಹುದು. ಈ ಯೋಜನೆಯು ಅಪ್ರಾಪ್ತ ಬಾಲಕಿಯರಿಗೆ ಹಣಕಾಸಿನ ಉತ್ಪನ್ನಗಳಲ್ಲಿ ಹೂಡಿಕೆ ಮಾಡಲು ಅವಕಾಶವನ್ನು ಒದಗಿಸುತ್ತದೆ.

ಬಡ್ಡಿ ಎಷ್ಟಿದೆ?

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರವು ವಾರ್ಷಿಕವಾಗಿ ಶೇ. 7.5ರ ಬಡ್ಡಿಯನ್ನು ನೀಡುತ್ತದೆ. ಇದನ್ನು ಪ್ರತಿ ತ್ರೈಮಾಸಿಕದಲ್ಲಿ ಖಾತೆಗೆ ಸೇರಿಸಲಾಗುತ್ತದೆ. ಆದರೆ ಬಡ್ಡಿ ಮತ್ತು ಅಸಲು ಮುಕ್ತಾಯದ ಮೇಲೆ ಮಾತ್ರ ಲಭ್ಯವಿರುತ್ತದೆ. ಈ ಯೋಜನೆಯ ಮುಕ್ತಾಯ ಅವಧಿಯು 2 ವರ್ಷಗಳು. ನೀವು 2 ವರ್ಷಗಳವರೆಗೆ ಈ ಯೋಜನೆಯಲ್ಲಿ 2 ಲಕ್ಷವನ್ನು ಹೂಡಿಕೆ ಮಾಡಿದರೆ ಮುಕ್ತಾಯದ ವೇಳೆಗೆ 2.32 ಲಕ್ಷ ರೂ. ವನ್ನು ಪಡೆಯಬಹುದು.

ಇದನ್ನೂ ಓದಿ: Mudra loan: ಕೇಂದ್ರ ಬಜೆಟ್‌ನಲ್ಲಿ ಮುದ್ರಾ ಸಾಲ ಮಿತಿ ಹೆಚ್ಚಳ; ಷರತ್ತುಗಳೇನು? ಯಾರಿಗೆ ಪ್ರಯೋಜನ?

ಹೂಡಿಕೆ ಮಿತಿ

ಈ ಯೋಜನೆಯಲ್ಲಿ ಕನಿಷ್ಠ 1,000 ರೂ. ಗಳನ್ನು 2 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಗರಿಷ್ಠ ಹೂಡಿಕೆ ಮಿತಿ ಪ್ರತಿ ಖಾತೆಗೆ 2 ಲಕ್ಷ ರೂ. 1000 ರೂ. ಗಿಂತ ಹೆಚ್ಚಿನ ಮೊತ್ತವನ್ನು 100 ರ ಗುಣಕಗಳಲ್ಲಿ ಮಾತ್ರ ಠೇವಣಿ ಮಾಡಬಹುದು. ಖಾತೆಯನ್ನು ತೆರೆದ 1 ವರ್ಷದ ಅನಂತರ ಒಟ್ಟು ಠೇವಣಿ ಮೊತ್ತದ ಶೇ. 40ರಷ್ಟನ್ನು ಹಿಂಪಡೆಯಬಹುದು.

Exit mobile version