ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಬಿಎಸ್‌ಇನಲ್ಲಿ ನೋಂದಾಯಿತ ಕಂಪನಿಗಳ ಷೇರುಗಳ ಮಾರುಕಟ್ಟೆ ಮೌಲ್ಯವು ಜುಲೈ 5ರಂದು ದಾಖಲೆಯ 300 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. (Stock Market) ಈ ವರ್ಷ ಇದುವರೆಗೆ ಬಿಎಸ್‌ಇ ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಮೌಲ್ಯದಲ್ಲಿ ಸುಮಾರು 6.6 ಪರ್ಸೆಂಟ್ ಹೆಚ್ಚಳ ದಾಖಲಾಗಿದೆ ಎಂದು ಕೋಟಕ್ ಇನ್‌ಸ್ಟಿಟ್ಯೂಷನಲ್ ಈಕ್ವಿಟೀಸ್, ಸಿಸ್ಟಮಾಟಿಕ್ ಇನ್‌ಸ್ಟಿಟ್ಯೂಷನಲ್ ಈಕ್ವಿಟೀಸ್ ಮತ್ತು ಸಿಎಲ್‌ಎಸ್‌ಎ ವರದಿ ತಿಳಿಸಿದೆ.
ಬಿಎಸ್‌ಇ ನೋಂದಾಯಿತ ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಮೌಲ್ಯವು ಡಾಲರ್ ಹಾಗೂ ರೂಪಾಯಿ ಮೌಲ್ಯದಲ್ಲಿ ಏರಿಕೆಯಾಗಿದೆ. ಕಳೆದ ಮಾರ್ಚ್ 28ರಿಂದ ಬಿಎಸ್ ಇ ಸೂಚ್ಯಂಕ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 13 % ಏರಿಕೆಯಾಗಿದೆ. ವಿದೇಶಿ ಹೂಡಿಕೆದಾರರು ಕಳೆದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 10 ಶತಕೋಟಿ ಡಾಲರ್ (82,000 ಕೋಟಿ ರೂ.) ಮೌಲ್ಯದ ಷೇರುಗಳನ್ನು ಖರೀದಿಸಿದ್ದರು. ಇದು 2020ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಿಂದೀಚೆಗೆ ಗರಿಷ್ಠ ಮಟ್ಟದ್ದಾಗಿದೆ.
2023ರ ದ್ವಿತೀಯಾರ್ಧದಲ್ಲಿ ಹಲವಾರು ಮಹತ್ವದ ವಿದ್ಯಮಾನಗಳು ಮಾರುಕಟ್ಟೆಯನ್ನು ಪ್ರಭಾವಿಸುವ ನಿರೀಕ್ಷೆ ಇದೆ. ಮುಂಗಾರು ಮಾರುತದ ಚಲನವಲನಗಳೂ ನಿರ್ಣಾಯಕವಾಗಲಿದೆ. ಹಣದುಬ್ಬರ, ರಾಜ್ಯಗಳ ಚುನಾವಣೆ ಫಲಿತಾಂಶಗಳು, ಕಾರ್ಪೊರೇಟ್ ಕಂಪನಿಗಳ ಹಣಕಾಸು ಫಲಿತಾಂಶಗಳು ಪ್ರಭಾವ ಬೀರಲಿದೆ.
ಇದನ್ನೂ ಓದಿ: Stock Market : ಸೆನ್ಸೆಕ್ಸ್ ಮೊದಲ ಬಾರಿಗೆ 65,000ಕ್ಕೆ ಜಿಗಿತ, ನಿಫ್ಟಿ ಹೈ ಜಂಪ್
ಸೆನ್ಸೆಕ್ಸ್ 33 ಅಂಕ ಇಳಿಕೆ: ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ 33 ಅಂಕ ಕಳೆದುಕೊಂಡು 65,446ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 9.50 ಅಂಕ ಏರಿಕೆಯಾಗಿ 19,398ಕ್ಕೆ ಸ್ಥಿರವಾಯಿತು. ಸೂಚ್ಯಂಕಗಳು ಉನ್ನತ ಮಟ್ಟದಲ್ಲಿ ಇದ್ದುದರಿಂದ ಷೇರುದಾರರು ಪ್ರಾಫಿಟ್ ಬುಕಿಂಗ್ ಪಡೆಯಲು ಯತ್ನಿಸಿದರು. ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಇಂಡಸ್‌ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಏಷ್ಯನ್ ಪೇಂಟ್ಸ್, ಲಾರ್ಸನ್ & ಟೂಬ್ರೊ, ಮಾರುತಿ ಸುಜುಕಿ, ಬಜಾಜ್ ಫೈನಾನ್ಸ್, ಹಿಂದುಸ್ತಾನ್ ಯುನಿಲಿವರ್, ನೆಸ್ಲೆ ಕಂಪನಿ ಷೇರುಗಳು ಅತಿ ಹೆಚ್ಚು ಲಾಭ ಗಳಿಸಿವೆ. ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಡಿಎಫ್‌ಸಿ, ಬಜಾಜ್ ಫಿನ್‌ಸರ್ವ್, ಕೋಟಕ್ ಮಹೀಂದ್ರಾ ಬ್ಯಾಂಕ್ ಷೇರುಗಳು ನಷ್ಟಕ್ಕೀಡಾಯಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಂಗಳವಾರ 2,134 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದರು.