Site icon Vistara News

Money Guide: ಹಬ್ಬಕ್ಕೆ ಚಿನ್ನ ಖರೀದಿಸುತ್ತಿದ್ದೀರಾ? ಈ ಸಂಗತಿಗಳು ಗೊತ್ತಿರಲಿ

gold

gold

ಬೆಂಗಳೂರು: ಹಬ್ಬಗಳ ಸಂದರ್ಭದಲ್ಲಿ ಚಿನ್ನ ಖರೀದಿಸುವುದು ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುವ ವಿದ್ಯಮಾನ. ಅಲ್ಲದೆ ಈ ಸಂದರ್ಭಗಳಲ್ಲಿ ಜ್ಯುವೆಲ್ಲರಿಗಳು ವಿವಿಧ ಕೊಡುಗೆಗಳನ್ನು ಘೋಷಿಸಿ ಗ್ರಾಹಕರನ್ನು ಆಕರ್ಷಿಸುತ್ತವೆ. ಅದರಲ್ಲೂ ಈಗ ನವರಾತ್ರಿ (Navaratri) ಹಬ್ಬ. ಚಿನ್ನಾಭರಣ ಖರೀದಿ ಜೋರಾಗಿಯೇ ಇದೆ. ವಿಶೇಷವಾಗಿ ಆರ್ಥಿಕ ಅನಿಶ್ಚಿತತೆಯ ಸಮಯದಲ್ಲಿ ಚಿನ್ನವನ್ನು ಸುರಕ್ಷಿತ ಮತ್ತು ಮೌಲ್ಯಯುತ ಹೂಡಿಕೆಯಾಗಿ ಪರಿಗಣಿಸಲಾಗುತ್ತದೆ. ಹಬ್ಬದ ಋತುವಿನಲ್ಲಿ ಚಿನ್ನವನ್ನು ಖರೀದಿಸುವುದು ಭವಿಷ್ಯಕ್ಕಾಗಿ ಉಳಿತಾಯ ಮಾಡಲು ಮತ್ತು ಭವಿಷ್ಯದ ಪೀಳಿಗೆಗೆ ಸಂಪತ್ತನ್ನು ರವಾನಿಸುವ ಮತ್ತೊಂದು ಮಾರ್ಗವೇ ಆಗಿರುತ್ತದೆ. ಹೀಗಿದ್ದೂ ಚಿನ್ನ ಖರೀದಿಸುವಾಗ ಕೆಲವೊಂದು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು(Money Guide).

ಚಿನ್ನದ ಪರಿಶುದ್ಧತೆ

ಚಿನ್ನವನ್ನು ಕ್ಯಾರೆಟ್‌ ವಿಧಾನದಲ್ಲಿ ಅಳೆಯಲಾಗುತ್ತದೆ. ನೀವು ಖರೀದಿಸುವ ಚಿನ್ನದ ಪರಿಶುದ್ಧತೆಯನ್ನು ಅದರ ಕ್ಯಾರೆಟ್‌ ಗಮನಿಸಿ ತಿಳಿದುಕೊಳ್ಳಿ. ಸಾಮಾನ್ಯವಾಗಿ 24, 22 ಮತ್ತು 18 ಕ್ಯಾರೆಟ್‌ ಚಿನ್ನವನ್ನು ಪರಿಶುದ್ಧವೆಂದು ಪರಿಗಣಿಸಲಾಗುತ್ತದೆ. ಚಿನ್ನದ ಆಭರಣಗಳ ಮೇಲೆ ಹಾಲ್‌ ಮಾರ್ಕಿಂಗ್ ಇದೆಯೇ ಎಂಬುದನ್ನು ಪರಿಶೀಲಿಸಿ. ಇದು ಶುದ್ಧತೆಯನ್ನು ಪ್ರಮಾಣೀಕರಿಸುತ್ತದೆ. ಭಾರತದಲ್ಲಿ ಸಾಮಾನ್ಯವಾಗಿ 24 ಮತ್ತು 22 ಕ್ಯಾರೆಟ್‌ ಶುದ್ಧ ಚಿನ್ನವನ್ನು ಮಾರಾಟ ಮಾಡಲಾಗುತ್ತದೆ. ಅದರಲ್ಲೂ 24 ಕ್ಯಾರೆಟ್‌ ಚಿನ್ನ ಪರಿಶುದ್ಧವಾಗಿದ್ದರೂ ಇದು ತುಂಬಾ ಮೃದುವಾಗಿರುತ್ತದೆ. ಇದರಲ್ಲಿ ಆಭರಣ ಮಾಡಲು ಸಾಧ್ಯವಿಲ್ಲ. ಇತ್ತ 22 ಕ್ಯಾರೆಟ್‌ ಅನ್ನು ಸುಲಭವಾಗಿ ಬೇಕಾದ ಆಕಾರಕ್ಕೆ ತರಬಹುದು. ಹೀಗಾಗಿ ಜ್ಯುವೆಲ್ಲರಿಯಿಂದ ಪರಿಶುದ್ಧತೆಯ ಸರ್ಟಿಫಿಕೆಟ್‌ ಕೇಳಿ ಪಡೆಯಿರಿ.

ಮಾರುಕಟ್ಟೆ ಬೆಲೆ

ಖರೀದಿಗೆ ಮುನ್ನ ಚಿನ್ನದ ಪ್ರಸ್ತುತ ಬೆಲೆಯ ಬಗ್ಗೆ ಸಾಕಷ್ಟು ಮಾಹಿತಿ ಕಲೆ ಹಾಕಿ. ಚಿನ್ನದ ಬೆಲೆಯ ಮೇಲೆ ಹಲವು ವಿಚಾರಗಳು ಪ್ರಭಾವ ಬೀರುತ್ತದೆ. ಅದರಲ್ಲೂ ಜಾಗತಿಕ ಆರ್ಥಿಕ ಪರಿಸ್ಥಿತಿ ಪ್ರಭಾವ ತುಸು ಹೆಚ್ಚೇ ಇರುತ್ತದೆ. ಹೀಗಾಗಿ ದರ ತಿಳಿದುಕೊಂಡರೆ ಖರೀದಿಯ ಬಗ್ಗೆ ಸ್ಪಷ್ಟ ನಿಲುವು ತಾಳಲು ಸಾಧ್ಯವಾಗುತ್ತದೆ. ಅಲ್ಲದೆ ಇದರಿಂದ ಕೊನೆಯ ಕ್ಷಣದ ಗೊಂದಲದಿಂದ ಪಾರಾಗಬಹುದು.

ವೆಚ್ಚದ ಬಗ್ಗೆ ಮಾಹಿತಿ ಇರಲಿ

ಚಿನ್ನದ ತೂಕ ಮತ್ತು ಪರಿಶುದ್ಧತೆಯ ಜತೆಗೆ ಆಭರಣಗಳನ್ನು ತಯಾರಿಸುವ ಶುಲ್ಕವನ್ನೂ ಖರೀದಿ ಸಂದರ್ಭದಲ್ಲಿ ವಿಧಿಸಲಾಗುತ್ತದೆ. ಇದನ್ನು ಮೇಕಿಂಗ್‌ ಚಾರ್ಜಸ್‌ (Making Charges) ಎಂದು ಕರೆಯುತ್ತಾರೆ. ಈ ವೆಚ್ಚವು ಪ್ರತಿ ಜ್ಯುವೆಲ್ಲರಿಯಲ್ಲಿ ಬದಲಾಗಬಹುದು. ಹೀಗಾಗಿ ತಯಾರಿಕಾ ವೆಚ್ಚದ ಬಗ್ಗೆಯೂ ಗಮನ ಹರಿಸಿ.

ಬಿಲ್ ರಶೀದಿಯನ್ನು ಕೇಳಿ ಪಡೆಯಿರಿ

ಯಾವಾಗಲೂ ವಿವರವಾದ ಬಿಲ್ ಮತ್ತು ರಸೀದಿಯನ್ನು ಕೇಳಿ ಪಡೆಯಿರಿ. ಈ ದಾಖಲೆಯು ಚಿನ್ನದ ಶುದ್ಧತೆ, ತೂಕ, ಮೇಕಿಂಗ್ ಶುಲ್ಕಗಳು ಮತ್ತು ಪಾವತಿಸಿದ ಒಟ್ಟು ಮೊತ್ತದ ಮಾಹಿತಿಯನ್ನು ಒಳಗೊಂಡಿರಬೇಕು. ಭವಿಷ್ಯದ ಅಗತ್ಯಗಳಿಗಾಗಿ ಬಿಲ್ ಅನ್ನು ಸುರಕ್ಷಿತವಾಗಿ ತೆಗೆದಿರಿಸಿಕೊಳ್ಳಿ. ವಿಶೇಷವಾಗಿ ನೀವು ಆಭರಣಗಳನ್ನು ಮಾರಾಟ ಮಾಡಲು ಅಥವಾ ವಿನಿಮಯ ಮಾಡಲು ಯೋಚಿಸುತ್ತಿದ್ದರೆ ಇದು ಮುಖ್ಯ. ಬಿಲ್ ಈ ಮಾಹಿತಿಗಳನ್ನು ಒಗೊಂಡಿರುವುದು ಕಡ್ಡಾಯ: ಖರೀದಿಯ ದಿನಾಂಕ ಮತ್ತು ಸಮಯ, ಚಿನ್ನದ ತೂಕ, ಚಿನ್ನದ ಪರಿಶುದ್ಧತೆ, ತಯಾರಿಕಾ ವೆಚ್ಚ, ಒಟ್ಟು ಬೆಲೆ, ಮರು ಖರೀದಿ ನೀತಿ.

ಬಿಐಎಸ್ ಹಾಲ್‌ಮಾರ್ಕ್ ಪರೀಕ್ಷಿಸಿ

ಚಿನ್ನದ ಆಭರಣಗಳ ಮೇಲೆ ಬಿಐಎಸ್(ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಹಾಲ್‌ಮಾರ್ಕ್‌ ಇರುವುದನ್ನು ಖಚಿತಪಡಿಸಿ. ಬಿಐಎಸ್ ಹಾಲ್‌ಮಾರ್ಕ್‌ ಆಭರಣಗಳನ್ನು ಸಾಮಾನ್ಯವಾಗಿ ಹೆಚ್ಚು ವಿಶ್ವಾಸಾರ್ಹವೆಂದು ಪರಿಗಣಿಸಲಾಗುತ್ತದೆ.

ಮಾರಾಟಗಾರರ ನೀತಿಗಳನ್ನು ಗಮನಿಸಿ

ಜ್ಯುವೆಲ್ಲರಿಯ ರಿಟರ್ನ್ ಅಥವಾ ವಿನಿಮಯ ನೀತಿಗಳ ಬಗ್ಗೆ ವಿಚಾರಿಸಿ. ನೀವು ಆಭರಣಗಳನ್ನು ಹಿಂದಿರುಗಿಸಲು ಅಥವಾ ವಿನಿಮಯ ಮಾಡಿಕೊಳ್ಳಲು ಬಯಸಿದರೆ ನಿಯಮಗಳು ಮತ್ತು ಷರತ್ತುಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಕೆಲವು ವ್ಯಾಪಾರಿಗಳು ಆಭರಣಗಳಲ್ಲಿ ಹುದುಗಿರುವ ವಜ್ರಗಳು ಅಥವಾ ಇತರ ಅಮೂಲ್ಯ ಕಲ್ಲುಗಳಿಗೆ ಪ್ರಮಾಣಪತ್ರಗಳನ್ನು ನೀಡಬಹುದು. ಅದನ್ನು ಖಚಿತಪಡಿಸಿಕೊಳ್ಳಿ.

ಸುರಕ್ಷಿತ ಪಾವತಿ ಮಾಡಿ

ಖರೀದಿ ಮಾಡುವಾಗ ಸುರಕ್ಷಿತ ಪಾವತಿ ವಿಧಾನಗಳನ್ನು ಬಳಸಿ. ನಗದು ರೂಪದಲ್ಲಿ ದೊಡ್ಡ ವಹಿವಾಟುಗಳನ್ನು ಮಾಡುವುದನ್ನು ತಪ್ಪಿಸಿ ಮತ್ತು ಡಿಜಿಟಲ್ ಪಾವತಿ ವಿಧಾನಗಳು ಅಥವಾ ಚೆಕ್ ಉಪಯೋಗಿಸಿ. ನೀವು ಅಧಿಕ ಮೊತ್ತದ ಖರೀದಿ ಮಾಡುತ್ತಿದ್ದರೆ ಹೆಚ್ಚುವರಿ ಭದ್ರತೆ ಮತ್ತು ಕೊಡುಗೆಗಳಿಗಾಗಿ ಕ್ರೆಡಿಟ್ ಕಾರ್ಡ್ ಬಳಸುವುದು ಉತ್ತಮ.

ಬೆಲೆಗಳನ್ನು ಹೋಲಿಸಿ

ಬೆಲೆಗಳು ಮತ್ತು ಗುಣಮಟ್ಟವನ್ನು ಹೋಲಿಸಲು ಅನೇಕ ಆಭರಣ ತಯಾರಕರಲ್ಲಿ ವಿಚಾರಿಸಿ. ನಿಮ್ಮ ಹಣಕ್ಕೆ ಉತ್ತಮ ಮೌಲ್ಯವನ್ನು ಪಡೆಯಲು ಇದು ಸಹಾಯ ಮಾಡುತ್ತದೆ.

ಇದನ್ನೂ ಓದಿ: Money Guide: ದುಡ್ಡೇ ದೊಡ್ಡಪ್ಪ, ಸೇವಿಂಗ್ಸ್ ಅದರ ಅಪ್ಪ;‌ ಹಣ ಉಳಿಸಲು ಇಲ್ಲಿವೆ 9 ಸೂತ್ರಗಳು

ಸಮಯೋಚಿತ ಪಾವತಿ ಮಾಡಿ

ನೀವು ಬುಕಿಂಗ್ ಅಥವಾ ಮುಂಗಡ ಪಾವತಿ ಮಾಡುತ್ತಿದ್ದರೆ ವ್ಯವಹಾರವನ್ನು ಪೂರ್ಣಗೊಳಿಸುವ ಸಮಯದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ. ವಿಳಂಬವು ಚಿನ್ನದ ಬೆಲೆಯಲ್ಲಿ ಬದಲಾವಣೆಗಳಿಗೆ ಕಾರಣವಾಗಬಹುದು.

ನಿಯಮಗಳ ಬಗ್ಗೆ ಗೊತ್ತಿರಲಿ

ಚಿನ್ನದ ಖರೀದಿಗೆ ಸಂಬಂಧಿಸಿದ ಯಾವುದೇ ಸರ್ಕಾರಿ ನಿಯಮಗಳು ಅಥವಾ ತೆರಿಗೆಯಲ್ಲಿನ ಬದಲಾವಣೆಗಳ ಬಗ್ಗೆ ನಿಮಗೆ ಮಾಹಿತಿ ಇರಲಿ. ಇದು ಚಿನ್ನವನ್ನು ಖರೀದಿಸುವ ಒಟ್ಟಾರೆ ವೆಚ್ಚದ ಮೇಲೆ ಇದು ಪರಿಣಾಮ ಬೀರುತ್ತದೆ.

Exit mobile version