ಬೆಂಗಳೂರು: ನಿವೃತ್ತಿಯ ನಂತರ ಹಾಯಾಗಿ, ಯಾವುದೇ ಚಿಂತೆ ಇಲ್ಲದೆ ಜೀವನ ಕಳೆಯಬೇಕು ಎನ್ನುವುದು ಬಹುತೇಕರ ಕನಸು. ಬೆಳಗ್ಗೆ ಬೇಗ ಗಡಿಬಿಡಿಯಲ್ಲಿ ಎದ್ದು ಆಫೀಸ್‌ಗೆ ಹೋಗುವ ಅಗತ್ಯವಿಲ್ಲದೆ ತಮ್ಮಿಷ್ಟದ ಚಟುವಟಿಕೆ ನಡೆಸಿಕೊಂಡು, ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಬೇಕು ಎನ್ನುವುದು ಹಲವರ ಲೆಕ್ಕಾಚಾರ. ಈ ರೀತಿಯ ನೆಮ್ಮದಿಯ ಜೀವನಕ್ಕೆ ಆರ್ಥಿಕವಾಗಿ ಸ್ವಾವಲಂಭಿಯಾಗಿರುವುದು ಮುಖ್ಯ. ಮಾಸಿಕ ಪಿಂಚಣಿ ಇಲ್ಲದಿದ್ದರೂ ಒಂದಷ್ಟು ಉಳಿತಾಯ ಮಾಡಿಕೊಂಡರೆ, ಸೂಕ್ತವಾಗಿ ಹೂಡಿಕೆ ಮಾಡಿದರೆ ನಿವೃತ್ತಿಯ ಬಳಿಕ ಹಾಯಾಗಿರಬಹುದು. ಅದಕ್ಕಾಗಿ ಇಲ್ಲಿದೆ ಉಳಿತಾಯದ ಒಂದಷ್ಟು ಟಿಪ್ಸ್ (Money Guide).
ಸೀನಿಯರ್ ಸಿಟಿಜನ್ಸ್ ಸೇವಿಂಗ್ ಸ್ಕೀಮ್ (Senior Citizens’ Savings Scheme-SCSS)
60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಇದು ಉತ್ತಮ ಹೂಡಿಕೆಯ ಆಯ್ಕೆ. ಇತ್ತೀಚೆಗೆ ಇದರ ಬಡ್ಡಿ ದರ ಏರಿಕೆಯಾಗಿದೆ. ಈ ಯೋಜನೆಯಲ್ಲಿ 50,000 ರೂ. ತನಕದ ಬಡ್ಡಿ ಆದಾಯ ತೆರಿಗೆ ಮುಕ್ತ. ಪಿಪಿಎಫ್‌ಗಿಂತ ಹೆಚ್ಚಿನ ಆದಾಯವನ್ನು ನೀಡುತ್ತದೆ. ಹೀಗಿದ್ದರೂ ಇದರಲ್ಲಿ ವೈಯಕ್ತಿಕವಾಗಿ ಗರಿಷ್ಠ 15 ಲಕ್ಷ ರೂ. ಹೂಡಿಕೆ ಮಾಡಬಹುದು. ಈ ಯೋಜನೆಯು ಐದು ವರ್ಷಗಳ ಅವಧಿಯನ್ನು ಹೊಂದಿದೆ. ಇನ್ನೂ ಮೂರು ವರ್ಷಗಳವರೆಗೆ ವಿಸ್ತರಿಸಬಹುದು. ಎಸ್‌ಸಿಎಸ್‌ಎಸ್ ಯೋಜನೆಯಲ್ಲಿ ಸರ್ಕಾರ ಇತ್ತೀಚೆಗೆ ಹಲವು ಬದಲಾವಣೆಗಳನ್ನು ತಂದಿದೆ. ಒಬ್ಬ ವ್ಯಕ್ತಿಯು ನಿವೃತ್ತಿ ಹೊಂದಿದ ದಿನಾಂಕದಿಂದ ಮೂರು ತಿಂಗಳೊಳಗೆ ಹಿರಿಯ ನಾಗರಿಕರ ಉಳಿತಾಯ ಯೋಜನೆಯಡಿ ಖಾತೆಯನ್ನು ತೆರೆಯಬಹುದು. ಅಲ್ಲದೆ ಹೊಸ ಅಧಿಸೂಚನೆಯು, ಸರ್ಕಾರಿ ಉದ್ಯೋಗಿಯ ಸಂಗಾತಿಯೂ ಯೋಜನೆಯಲ್ಲಿ ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ.
ಪೋಸ್ಟ್ ಆಫೀಸ್ ಮಂತ್ಲಿ ಇನ್‌ಕಮ್ ಸ್ಕೀಮ್ (Post Office Monthly Income Scheme-POMIS)
ಅಪಾಯವನ್ನು ಇಷ್ಟಪಡದ ಹೂಡಿಕೆದಾರರಿಗೆ ಪರಿಪೂರ್ಣ ಆಯ್ಕೆ ಇದು. ಪಿಒಎಂಐಎಸ್ ಸ್ಥಿರ ಮಾಸಿಕ ಆದಾಯ ಒದಗಿಸುತ್ತದೆ. ಈ ಐದು ವರ್ಷಗಳ ಹೂಡಿಕೆ ಯೋಜನೆ ಹಿರಿಯ ನಾಗರಿಕರಿಗೆ ತಮ್ಮ ನಿವೃತ್ತಿ ನಿಧಿಯನ್ನು ಹೂಡಿಕೆ ಮಾಡಲು ಮತ್ತು ಪ್ರತಿ ತಿಂಗಳು ಸ್ಥಿರ ಬಡ್ಡಿಯನ್ನು ಪಡೆಯಲು ಅತ್ಯುತ್ತಮ ಮಾರ್ಗ ಎನ್ನುವುದರಲ್ಲಿ ಸಂಶಯವಿಲ್ಲ.
ಪ್ರಧಾನ್ ಮಂತ್ರಿ ವಯಾ ವಂದನಾ ಯೋಜನೆ (Pradhan Mantri Vaya Vandana Yojana-PMVVY)
60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಪಿಎಂವಿವಿವೈ ಪಿಂಚಣಿ ಯೋಜನೆ ಆದಾಯದ ಭದ್ರತೆಯನ್ನು ಖಾತರಿಪಡಿಸುತ್ತದೆ.
ಬ್ಯಾಂಕ್ ಫಿಕ್ಸಡ್ ಡೆಪಾಸಿಟ್ಸ್ (Bank Fixed Deposits-FDs)
ಬ್ಯಾಂಕ್ ಎಫ್‌ಡಿ ಹಿರಿಯ ನಾಗರಿಕರ ಅತ್ಯಂತ ಜನಪ್ರಿಯ ಉಳಿತಾಯ ಆಯ್ಕೆಗಳಲ್ಲಿ ಒಂದು. ಇದು ಹಿರಿಯರಿಗೆ ತಮ್ಮ ಠೇವಣಿಯ ಅವಧಿಯನ್ನು ಆಯ್ಕೆ ಮಾಡುವ ಸ್ವತಂತ್ರ ನೀಡುವುದಲ್ಲದೆ, ಅವರಿಗೆ ಸ್ಥಿರ ಬಡ್ಡಿದರವನ್ನು ಖಾತರಿಪಡಿಸುತ್ತದೆ. ಇದರಲ್ಲಿನ ಬಡ್ಡಿದರ ಸಾಮಾನ್ಯ ಉಳಿತಾಯ ಖಾತೆಗಳಿಗಿಂತ ಹೆಚ್ಚು.
ಮ್ಯೂಚುವಲ್ ಫಂಡ್ (Mutual Funds)
ಮ್ಯೂಚುವಲ್ ಫಂಡ್ ಎಂದರೆ ಹಲವರು ಒಟ್ಟಾಗಿ ಮಾಡುವ ಹಣದ ಹೂಡಿಕೆ. ಈ ಹೂಡಿಕೆಯನ್ನು ವೃತ್ತಿಪರ ಫಂಡ್ ಮ್ಯಾನೇಜರ್‌ಗಳು ನಿರ್ವಹಣೆ ಮಾಡುತ್ತಾರೆ. ಈ ರೀತಿ ಸಂಗ್ರಹಿಸುವ ಹಣವನ್ನು ಷೇರು, ಬಾಂಡ್, ಹಣಕಾಸು ಮಾರುಕಟ್ಟೆಯ ಸಾಧನಗಳು, ಸೆಕ್ಯುರಿಟೀಸ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ. ಅದರಲ್ಲಿ ಬರುವ ಆದಾಯ ಹೂಡಿಕೆದಾರರಿಗೆ ಸಿಗುತ್ತದೆ. ಹೂಡಿಕೆ ಮಾಡಲು ದೊಡ್ಡ ಮೊತ್ತದ ಹಣದ ಕೊರತೆ ಇರುವವರು, ಮಾರುಕಟ್ಟೆ ಸಂಶೋಧನೆಗೆ ಸಮಯದ ಅಭಾವ ಇರುವವರು, ತಮ್ಮ ಸಂಪತ್ತನ್ನು ಬೆಳೆಸಲು ಬಯಸುವವರು ಮ್ಯೂಚುವಲ್ ಫಂಡ್ ಹೂಡಿಕೆದಾರರಾಗಬಹುದು. ಹೀಗೆ ಸಂಗ್ರಹವಾಗುವ ಹಣವನ್ನು ಪ್ರೊಫೆಷನಲ್ ಫಂಡ್ ಮ್ಯಾನೇಜರ್‌ಗಳು ಯೋಜನೆಯ ಉದ್ದೇಶಕ್ಕೆನುಗುಣವಾಗು ಹೂಡಿಕೆ ಮಾಡುತ್ತಾರೆ. ಇದು ಕೂಡ ಅತ್ಯುತ್ತಮ ಆಯ್ಕೆಗಳಲ್ಲಿ ಒಂದು.
ಇದನ್ನೂ ಓದಿ: Money Guide: ನೆಮ್ಮದಿಯ ನಿವೃತ್ತ ಜೀವನ ನಿಮ್ಮದಾಗಬೇಕೆ? ಹಾಗಾದರೆ ಈಗಲೇ ಹೀಗೆ ಮಾಡಿ