ಬೆಂಗಳೂರು: ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಆದಾಯ ಹೊಂದಿರುವವರು ತೆರಿಗೆ ಪಾವತಿಸಬೇಕಾದುದು ಕಡ್ಡಾಯ. ಅದಾಗ್ಯೂ ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ತೆರಿಗೆ ಉಳಿತಾಯ ಮಾಡಲು ಕೂಡ ಕೆಲವು ಮಾರ್ಗಗಳಿವೆ. ಹೂಡಿಕೆ, ಗೃಹ ಸಾಲ, ನಿವೃತ್ತಿ ಯೋಜನೆ ಮುಂತಾದ ಕೆಲವೊಂದು ನಿರ್ದಿಷ್ಟ ವಿಚಾರಗಳಿಗೆ ಸಂಬಂಧಿಸಿ ತೆರಿಗೆ ವಿನಾಯಿತಿ ಲಭ್ಯವಿದೆ. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ತೆರಿಗೆ ಮೊತ್ತವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಮತ್ತು ನಿಮ್ಮ ಆರ್ಥಿಕ ಸ್ಥಿತಿಯನ್ನು ಇನ್ನೂ ಉತ್ತಮಗೊಳಿಸಬಹುದು. ಹಾಗಾದರೆ ತೆರಿಗೆ ಉಳಿತಾಯ ಮಾಡಬಹುದಾದ ಮಾರ್ಗ ಯಾವುದು? ಇದಕ್ಕಾಗಿ ಗಮನಿಸಬೇಕಾದ ಅಂಶಗಳೇನು? ಯಾವೆಲ್ಲ ಕಾರಣಗಳಿಂದ ತಪ್ಪು ಸಂಭವಿಸುತ್ತದೆ? ಮುಂತಾದ ವಿವರ ಮನಿಗೈಡ್ (Money Guide)ನಲ್ಲಿದೆ.
ಸೆಕ್ಷನ್ 80 ಸಿ ಬಗ್ಗೆ ಮಾಹಿತಿ ಕೊರತೆ
ಸಾರ್ವಜನಿಕ ಭವಿಷ್ಯ ನಿಧಿ (PPF), ಇಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್‌ಗಳು (ELSS), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC), ಮತ್ತು ಉದ್ಯೋಗಿ ಭವಿಷ್ಯ ನಿಧಿ (EPF) ಮುಂತಾದ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಸೆಕ್ಷನ್ 80 ಸಿ (Section 80 C) ಮುಖಾಂತರ ತೆರಿಗೆ ವಿನಾಯಿತಿ ಪಡೆಯಬಹುದು. ಆದರೆ ಬಹುತೇಕರು ಈ ಆಯ್ಕೆಯನ್ನು ಕಡೆಗಣಿಸುವುದು ಅಥವಾ ಅವುಗಳ ಸೂಕ್ಷ್ಮತೆಗಳನ್ನು ಅರ್ಥ ಮಾಡಿಕೊಳ್ಳಲು ವಿಫಲವಾಗುವುದರಿಂದ ತೆರಿಗೆ ವಿನಾಯಿತಿ ದೊರೆಯದೆ ಹೆಚ್ಚಿನ ಹೊರೆ ನಿಮ್ಮ ಹೆಗಲ ಮೇಲೆ ಬೀಳುತ್ತದೆ. ಈ ಬಗ್ಗೆ ಎಚ್ಚರಿಕೆ ವಹಿಸಿ.
ಮನೆ ಬಾಡಿಗೆ ಭತ್ಯೆ (House Rent Allowance) ವಿನಾಯಿತಿ ಬಳಸದಿರುವುದು
ನೀವು ಸಂಬಳದ ಭಾಗವಾಗಿ ಎಚ್‌ಆರ್‌ಎ ಪಡೆಯುತ್ತಿದ್ದರೆ ಕೆಲವು ಷರತ್ತುಗಳಿಗೆ ಒಳಪಟ್ಟು ಮನೆಗೆ ಪಾವತಿಸಿದ ಬಾಡಿಗೆಯ ಮೇಲೂ ನೀವು ವಿನಾಯಿತಿಯನ್ನು ಪಡೆಯಬಹುದು. ನಿಮ್ಮ ಉದ್ಯೋಗದಾತರಿಗೆ ಬಾಡಿಗೆ ರಸೀದಿಗಳನ್ನು ಸಲ್ಲಿಸಲು ಅಥವಾ ಸರಿಯಾದ ದಾಖಲಾತಿಗಳನ್ನು ಒದಗಿಸಲು ವಿಫಲವಾದರೆ ಈ ತೆರಿಗೆ ಉಳಿಸುವ ಅವಕಾಶದಿಂದ ವಂಚಿತರಾಗುತ್ತೀರಿ ಎಂದೇ ಅರ್ಥ. ಹೀಗಾಗಿ ಸೂಕ್ತ ಡಾಕ್ಯುಮೆಂಟ್ ಮತ್ತು ಮಾಹಿತಿಯನ್ನು ತಪ್ಪದೆ ಸಲ್ಲಿಸಿ.
ಆರೋಗ್ಯ ವಿಮಾ ಪ್ರೀಮಿಯಂ (Health Insurance Premiums)ಗಳ ನಿರ್ಲಕ್ಷ್ಯ
ವೈಯಕ್ತಿಕ, ಸಂಗಾತಿ, ಮಕ್ಕಳು ಮತ್ತು ಪೋಷಕರಿಗೆ ಮಾಡಿಸಿರುವ ಆರೋಗ್ಯ ವಿಮಾ ಪಾಲಿಸಿಗಳಿಗೆ ಪಾವತಿಸಿದ ಪ್ರೀಮಿಯಂಗಳು ಸೆಕ್ಷನ್ 80ಡಿ (Section 80D) ಅಡಿಯಲ್ಲಿ ತೆರಿಗೆ ರಿಯಾಯಿತಿಗೆ ಅರ್ಹ. ಇದರ ಸದುಪಯೋಗಪಡಿಸಿಕೊಳ್ಳದಿರುವುದು ಹೆಚ್ಚಿನ ತೆರಿಗೆ ಹೊರೆಗೆ ಕಾರಣವಾಗಬಹುದು. ಹೆಚ್ಚುವರಿಯಾಗಿ ಹಿರಿಯ ನಾಗರಿಕರು ಈ ವಿಭಾಗದ ಅಡಿಯಲ್ಲಿ ಹೆಚ್ಚಿನ ತೆರಿಗೆ ಕಡಿತವನ್ನು ಪಡೆದುಕೊಳ್ಳುತ್ತಾರೆ. ಹೀಗಾಗಿ ಇದರ ಪ್ರಯೋಜನ ಪಡೆದುಕೊಳ್ಳಿ.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (National Pension System) ಪ್ರಯೋಜನ ಬಳಸದಿರುವುದು
ಎನ್‌ಪಿಎಸ್ ಚಂದಾದಾರರು ಸೆಕ್ಷನ್ 80ಸಿಡಿ (1ಬಿ) (80 C D (1B) ಅಡಿಯಲ್ಲಿ ತೆರಿಗೆ ಪ್ರಯೋಜನವನ್ನು ಕ್ಲೈಮ್ ಮಾಡಬಹುದು. ಇದು ಸೆಕ್ಷನ್ 80ಸಿ ಅಡಿಯಲ್ಲಿ ಲಭ್ಯವಿರುವ ಮಿತಿಗಿಂತ ಹೆಚ್ಚಿನ ತೆರಿಗೆ ಪ್ರಯೋಜನಗಳನ್ನು ಒದಗಿಸುತ್ತದೆ. ಈ ಹೆಚ್ಚುವರಿ ಕಡಿತವನ್ನು ಪಡೆಯದಿದ್ದರೆ ತೆರಿಗೆ ಉಳಿತಾಯ ಮತ್ತು ಅಮೂಲ್ಯವಾದ ನಿವೃತ್ತಿ ಯೋಜನಾ ಅವಕಾಶವನ್ನು ಕಳೆದುಕೊಳ್ಳುವಂತಾಗುತ್ತದೆ.
ಕೊನೆಯ ಕ್ಷಣಕ್ಕಾಗಿ ಕಾಯುವುದು
ನೆನಪಿಡಿ ತೆರಿಗೆ ವಿನಾಯಿತಿ ಪಡೆಯಲು ಕೊನೆ ಕ್ಷಣದವರೆಗೆ ಕಾಯುವುದು ಖಂಡಿತಾ ದುಬಾರಿಯಾಗಿ ಪರಿಣಮಿಸುತ್ತದೆ. ಹೀಗಾಗಿ ತೆರಿಗೆ ಉಳಿತಾಯಕ್ಕಾಗಿ ಹೂಡಿಕೆ ಮಾಡಲು ಮಾರ್ಚ್‌ವರೆಗೆ ಕಾಯಬೇಡಿ. ಆರಂಭದಲ್ಲೇ ನೀವು ಈ ಬಗ್ಗೆ ಗಮನ ಹರಿಸಿದರೆ ವರ್ಷವಿಡೀ ಹೂಡಿಕೆಗಳನ್ನು ಸರಿಯಾಗಿ ಹಂಚಲು ಮತ್ತು ಹೆಚ್ಚು ತೆರಿಗೆ ಮುಕ್ತ ಅವಕಾಶ ಗಳಿಸಲು ಅನುಕೂಲ ಮಾಡಿಕೊಡುತ್ತದೆ.
ಇದನ್ನೂ ಓದಿ: Money Guide: ಹೋಮ್ ಲೋನ್‌ಗೆ ಇನ್ಶೂರೆನ್ಸ್ ಮಾಡಿಸಿದ್ದೀರಾ? ಏನಿದರ ಮಹತ್ವ? ನಿಮ್ಮ ಸಂಶಯಗಳಿಗೆ ಇಲ್ಲಿದೆ ಉತ್ತರ