Site icon Vistara News

Money Guide: ಮನೆ ಖರೀದಿಗೆ ಮುಂದಾಗಿದ್ದೀರಾ? ಹಾಗಾದರೆ ಈ ವಿಚಾರ ನಿಮಗೆ ತಿಳಿದಿರಲೇ ಬೇಕು

home-loan

home-loan

ಬೆಂಗಳೂರು: ಮನೆ ಅಥವಾ ಫ್ಲ್ಯಾಟ್‌ ಖರೀದಿಸಬೇಕು ಎನ್ನುವುದು ಬಹುತೇಕರ ಕನಸು. ಆದರೆ ಇಂದಿನ ಈ ದುಬಾರಿ ದುನಿಯಾದಲ್ಲಿ ಮನೆ ಖರೀದಿಸುವ ಮುನ್ನ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ನಮ್ಮ ಬಜೆಟ್‌ ಬಗ್ಗೆ ಗಮನ ಹರಿಸುವುದು ಮೊದಲ ಅಂಶವಾದರೂ ಇದರ ಜತೆಗೆ ಇನ್ನೊಂದಿಷ್ಟು ವಿಚಾರಗಳತ್ತ ಗಮನ ಹರಿಸುವುದು ಕೂಡ ಮುಖ್ಯ. ಆ ಕುರಿತಾದ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಮೂಲ ಸೌಕರ್ಯ

ನೀವು ಖರೀದಿಸಲು ಉದ್ದೇಶಿಸಿರುವ ಫ್ಲ್ಯಾಟ್‌ ಅಥವಾ ಮನೆ ಎಲ್ಲ ಮೂಲ ಸೌಕರ್ಯಗಳನ್ನು ಹೊಂದಿದೆ ಎನ್ನುವುದನ್ನು ಮೊದಲೇ ಖಚಿತಪಡಿಸಿಕೊಳ್ಳಿ. ಅದರಲ್ಲೂ ನೀರು, ರಸ್ತೆ, ವಿದ್ಯುತ್‌ ಸೌಲಭ್ಯಗಳು ಇವೆ ಎನ್ನುವುದನ್ನು ಗಮನಿಸಿ. ಜತೆಗೆ ದೇವಸ್ಥಾನ, ಶಾಲೆ, ಮಾರುಕಟ್ಟೆ, ಆಸ್ಪತ್ರೆ, ನಿಮ್ಮ ಉದ್ಯೋಗದ ಸ್ಥಳ ಮುಂತಾದವುಗಳ ಸಮೀಪದಲ್ಲೇ ಇರುವ ಮನೆಗೆ ಆದ್ಯತೆ ನೀಡಿ. ಕೆಲವು ಅಪಾರ್ಟ್‌ಮೆಂಟ್‌ಗಳು ಕ್ಲಬ್‌ ಹೌಸ್‌, ಸ್ವಿಮ್ಮಿಂಗ್‌ ಪೂಲ್‌, ಪಾರ್ಕಿಂಗ್‌ ಏರಿಯಾ, ಪಾರ್ಕ್‌, ಕಸದ ತೊಟ್ಟಿ ಮೊದಲಾದ ಹೆಚ್ಚುವರಿ ಸೌಕರ್ಯಗಳ ಆಫರ್‌ ನೀಡುತ್ತವೆ. ಅದನ್ನು ಸದುಪಯೋಗಪಡಿಸಿಕೊಳ್ಳಿ.

ಸುರಕ್ಷತೆ

ನಿಮ್ಮ ಕುಟುಂಬದವರ ಸುರಕ್ಷತೆ ಪ್ರಧಾನ ಆದ್ಯತೆ ಎನ್ನುವುದರಲ್ಲಿ ಸಂದೇಹವಿಲ್ಲ. ಹೀಗಾಗಿ ನೀವು ಆಸ್ತಿ ಖರೀದಿಸುವ ಏರಿಯಾ ಸುರಕ್ಷಿತ ತಾಣದಲ್ಲಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಸಾಧ್ಯವಾದಷ್ಟು ಪ್ರತಿಷ್ಠಿತ, ಶಾಂತ ಪರಿಸರವನ್ನು ಇದಕ್ಕಾಗಿ ಪರಿಗಣಿಸಿ. ಅಲ್ಲದೆ ಕಾಲೋನಿಯಲ್ಲಿನ ಭದ್ರತಾ ವ್ಯವಸ್ಥೆ (Patrolling guards) ಸಮರ್ಥವಾಗಿದೆಯೇ ಎಂಬುದನ್ನು ಮೊದಲೇ ವಿಚಾರಿಸಿ.

ಭವಿಷ್ಯದ ಬೆಳವಣಿಗೆ

ನೀವು ಮನೆ / ಫ್ಲ್ಯಾಟ್ ಖರೀದಿಸಲಿರುವ ಪ್ರದೇಶದ ಭವಿಷ್ಯವೇನು? ಇಲ್ಲಿ ಭವಿಷ್ಯದಲ್ಲಿ ಮತ್ತಷ್ಟು ಅಭಿವೃದ್ಧಿಗೆ ಅವಕಾಶವಿದೆಯೇ? ಎನ್ನುವ ಬಗ್ಗೆ ಮೊದಲೇ ಲೆಕ್ಕಾಚಾರ ಹಾಕಿ. ಮನೆ ಖರೀದಿಸುವ ಮುನ್ನ ಗಮನಿಸಬೇಕಾದ ಪ್ರಮುಖ ಅಂಶಗಳಲ್ಲಿ ಇದೂ ಒಂದು ಎನ್ನುತ್ತಾರೆ ತಜ್ಞರು.

ರಿಸೇಲ್‌ ವ್ಯಾಲ್ಯೂ

ಆಸ್ತಿ ಅಂತಲ್ಲ ನಾವು ಯಾವುದೇ ದುಬಾರಿ ವಸ್ತು ಖರೀದಿಸುವ ಮುನ್ನ ಅದಕ್ಕೆ ರಿಸೇಲ್‌ ವ್ಯಾಲ್ಯೂ ಹೇಗಿದೆ ಎನ್ನುವುದನ್ನು ಮೊದಲೇ ಅಂದಾಜು ಮಾಡಬೇಕಾಗುತ್ತದೆ. ಅಂದರೆ ಮಾರಾಟ ಮಾಡುವಾಗ ನಷ್ಟವಾಗದಂತೆ ಮೊದಲೇ ಎಚ್ಚರಿಕೆ ವಹಿಸಬೇಕು. ಭವಿಷ್ಯದಲ್ಲಿ ನೀವು ಕೊಂಡುಕೊಂಡ ಮನೆ ಅಥವಾ ಫ್ಲ್ಯಾಟ್ ಅನ್ನು ಮಾರಾಟ ಮಾಡಲು ಬಯಸಿದರೆ ಉತ್ತಮ ಮರು ಮಾರಾಟ ಮೌಲ್ಯವನ್ನು ಪಡೆಯುತ್ತೀರಿ ಎನ್ನುವುದನ್ನು ಖಚಿತ ಪಡಿಸಿಕೊಳ್ಳಿ. ಕೆಲವು ವರ್ಷಗಳ ನಂತರ ನಿಮ್ಮ ಈ ಆಸ್ತಿಯ ಮಾರುಕಟ್ಟೆ ಮೌಲ್ಯವನ್ನು ಲೆಕ್ಕ ಹಾಕಲು ರಿಯಲ್ ಎಸ್ಟೇಟ್ ತಜ್ಞ ಸಹಾಯ ಪಡೆದುಕೊಳ್ಳಿ.

ಸಮಾಲೋಚನೆ ನಡೆಸಿ

ಆಸ್ತಿ ಖರೀದಿ ಎನ್ನುವುದು ನಿಮ್ಮ ಜೀವನದ ಬಹುದೊಡ್ಡ ನಿರ್ಧಾರ ಎನ್ನುವುದರಲ್ಲಿ ಸಂಶಯವಿಲ್ಲ. ಹೀಗಾಗಿ ನಿಮ್ಮ ಮನೆಯವರೊಂದಿಗೆ, ಆತ್ಮೀಯರೊಂದಿಗೆ, ತಜ್ಞರ ಜತೆ ಈ ಕುರಿತು ಸಮಾಲೋಚನೆ ನಡೆಸಿ. ಅವರ ಸಲಹೆ ಪಡೆದುಕೊಂಡೇ ಮುಂದುವರಿಯಿಸಿ. ಸ್ವಲ್ಪ ನಿಧಾನವಾದರೂ ಎಲ್ಲ ವಿಚಾರವನ್ನೂ ಕೂಲಂಕುಷವಾಗಿ ವಿಚಾರಿಸಿಯೇ ಮುಂದಡಿ ಇಡಿ. ಈ ವಿಚಾರದಲ್ಲಿ ಪ್ರಸ್ತುತ ಯಾವುದೇ ಕಾನೂನು ತೊಡಕಿಲ್ಲದಿದ್ದರೂ ಭವಿಷ್ಯದಲ್ಲಿ ಎದುರಾಗಬಾರದು ಎಂದಿಲ್ಲ. ಹೀಗಾಗಿ ಈ ಎಲ್ಲ ಆಯಾಯಮದಲ್ಲಿಯೂ ಚಿಂತನೆ ನಡೆಸಿ.

ಇದನ್ನೂ ಓದಿ: Money Guide : ತೆರಿಗೆ ಉಳಿಸಲು ಮತ್ತೊಂದು ಮನೆ ಖರೀದಿಸುವುದು ಸೂಕ್ತವೇ?

Exit mobile version