Site icon Vistara News

Money Guide: ಕ್ರೆಡಿಟ್‌ ಕಾರ್ಡ್‌ ಹೊಂದಿದ್ದೀರಾ? ವಂಚಕರ ಬಲೆಗೆ ಬೀಳದಿರಲು ಈ ಟಿಪ್ಸ್‌ ಫಾಲೋ ಮಾಡಿ

Money Guide

Money Guide

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಗದು ವಹಿವಾಟು ಗಣನೀಯವಾಗಿ ಕುಸಿಯುತ್ತಿದೆ ಮತ್ತು ಬಹುತೇಕರು ಡಿಜಿಟಲ್ ಪಾವತಿಯತ್ತ (Digital payments) ಮುಖ ಮಾಡುತ್ತಿದ್ದಾರೆ. ನಗರ ಮಾತ್ರವಲ್ಲ ಗ್ರಾಮಾಂತರ ಪ್ರದೇಶಗಳಲ್ಲಿಯೂ ಡಿಜಿಟಲ್‌ ಪೇಮೆಂಟ್‌ ಜನಪ್ರಿಯವಾಗುತ್ತಿದೆ. ಆನ್‌ಲೈನ್‌ ಪಾವತಿ ಲಭ್ಯವಿಲ್ಲದ ಕಡೆ ಕ್ರೆಡಿಟ್‌ ಕಾರ್ಡ್‌ (Credit card) ನೆರವಿಗೆ ಬರುತ್ತದೆ. ಹೀಗಾಗಿ ಹೆಚ್ಚಿನ ವ್ಯಾಪಾರಿಗಳು ಈಗ ಕ್ರೆಡಿಟ್ ಕಾರ್ಡ್ ಪಾವತಿಯನ್ನು ಸ್ವೀಕರಿಸುತ್ತಿದ್ದಾರೆ. ದೊಡ್ಡ ಮೊತ್ತದ ಖರೀದಿಗೆ ಇದು ಹೆಚ್ಚು ಸೂಕ್ತ. ಆದರೆ ಕೆಲವೊಮ್ಮೆ ವಂಚಕರು ಕ್ರೆಡಿಟ್‌ ಕಾರ್ಡ್‌ ಮೂಲಕ ನಿಮ್ಮನ್ನು ಮೋಸಗೊಳಿಸಲು ಮುಂದಾಗಬಹುದು. ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಅದು ಹೇಗೆ ಎನ್ನುವ ವಿವರ ಇಲ್ಲಿದೆ (Money Guide).

ಅನೇಕ ಕ್ರೆಡಿಟ್ ಕಾರ್ಡ್‌ಗಳು ಆಕರ್ಷಕ ಕೊಡುಗೆಗಳನ್ನೂ ನೀಡುತ್ತವೆ. ರಿವಾರ್ಡ್, ಕ್ಯಾಶ್ ಬ್ಯಾಕ್, ಪ್ರಯಾಣ ವಿಮೆ ಅಥವಾ ಲಾಂಜ್ ಪ್ರವೇಶದಂತಹ ಇತರ ಪ್ರಯೋಜನಗಳನ್ನು ನೀಡುವ ಮೂಲಕ ಗಮನ ಸೆಳೆಯುತ್ತವೆ. ಈ ಎಲ್ಲ ಕಾರಣಗಳಿಂದ ಕ್ರೆಡಿಟ್‌ ಕಾರ್ಡ್‌ ಬಳಕೆ ಇನ್ನಷ್ಟು ಹೆಚ್ಚಿದೆ. ಆದಾಗ್ಯೂ ಕ್ರೆಡಿಟ್ ಕಾರ್ಡ್ ವಂಚನೆ ಇಂದು ಎದುರಾಗುವ ಬಹು ದೊಡ್ಡ ಸವಾಲು ಎನಿಸಿಕೊಂಡಿದೆ. ಹಾಗಂತ ಗಾಬರಿಯಾಗಬೇಕಾಗಿಲ್ಲ. ಒಂದಷ್ಟು ಮುಂಜಾಗ್ರತಾ ಕ್ರಮ ಕೈಗೊಂಡರೆ ಕ್ರೆಡಿಟ್‌ ಕಾರ್ಡ್‌ ಅನ್ನು ಸುರಕ್ಷಿತವಾಗಿಸಿಕೊಳ್ಳಬಹುದು. ವೈಯಕ್ತಿಕ ಜಾಗರೂಕತೆ, ತಾಂತ್ರಿಕ ಕ್ರಮಗಳು ಮತ್ತು ಸುರಕ್ಷತಾ ಕ್ರಮಗಳ ಸಂಯೋಜನೆಯ ಮೂಲಕ ನೀವು ವಂಚಕರ ಕಾಟದಿಂದ ಪಾರಾಗಬಹುದು. ಅದಕ್ಕಾಗಿ ನೀವು ಅನುಸರಿಸಬೇಕಾದ ಕ್ರಮಗಳ ಮಾಹಿತಿ ಇಂತಿದೆ.

ರಹಸ್ಯ ಕಾಪಾಡಿ

ನಿಮ್ಮ ಕಾರ್ಡ್‌ ಪಿನ್, ಸಿವಿವಿ ಕೋಡ್ ಅಥವಾ ಪೂರ್ಣ ಕ್ರೆಡಿಟ್ ಕಾರ್ಡ್ ಸಂಖ್ಯೆಯನ್ನು ನೇರವಾಗಿ, ಇಮೇಲ್ ಅಥವಾ ಫೋನ್ ಮೂಲಕ ಯಾರೊಂದಿಗೂ ಹಂಚಿಕೊಳ್ಳಬೇಡಿ. ಇದು ಸುರಕ್ಷತೆಗಾಗಿ ನೀವು ಅನುಸರಿಸಬಹುದಾದ ಅತಿ ಮುಖ್ಯ ಹೆಜ್ಜೆ. ಅಲ್ಲದೆ ಬ್ಯಾಂಕ್‌ಗಳು ಈ ಮಾಹಿತಿಯನ್ನು ಯಾವ ಕಾರಣಕ್ಕೂ, ಯಾರ ಬಳಿಯೂ ಕೇಳುವುದಿಲ್ಲ. ವಂಚಕರು ಬ್ಯಾಂಕ್‌ ಹೆಸರಲ್ಲಿ ಕರೆ ಮಾಡಿ ಅಥವಾ ಎಸ್‌ಎಂಎಸ್‌ ಮಾಡಿ ಈ ಬಗ್ಗೆ ನಿಮ್ಮ ಬಾಯಿ ಬಿಡಿಸಲು ನೋಡಬಹುದು. ಯಾವ ಕಾರಣಕ್ಕೂ ಇದನ್ನು ಹಂಚಿಕೊಳ್ಳಬೇಡಿ.

ಕ್ರೆಡಿಟ್ ಕಾರ್ಡ್ ವಹಿವಾಟು ಮೇಲೆ ಗಮನ ಹರಿಸಿ

ಆನ್‌ಲೈನ್‌ ಬ್ಯಾಂಕಿಂಗ್ ಆಯ್ಕೆ ಅಥವಾ ಮೊಬೈಲ್ ಅಪ್ಲಿಕೇಶನ್‌ ಮೂಲಕ ನಿಮ್ಮ ಕ್ರೆಡಿಟ್ ಕಾರ್ಡ್ ವಹಿವಾಟುಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ. ಯಾವುದೇ ಅನಧಿಕೃತ ವಹಿವಾಟು ಕಂಡು ಬಂದರೆ ತಕ್ಷಣ ನಿಮ್ಮ ಬ್ಯಾಂಕಿಗೆ ವರದಿ ಮಾಡಿ. ಕಾರ್ಡ್ ರೀಡರ್‌ಗಳನ್ನು ಬಳಸುವಾಗ ಜಾಗರೂಕರಾಗಿರಿ. ಅವು ಕಾನೂನುಬದ್ಧವಾಗಿವೆ ಮತ್ತು ತಿರುಚಲಾಗಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಪಾಯಿಂಟ್ ಆಫ್ ಸೇಲ್ ಟರ್ಮಿನಲ್‌ಗಳಲ್ಲಿ ನಮೂದಿಸುವಾಗ ನಿಮ್ಮ ಪಿನ್ ಅನ್ನು ಗೌಪ್ಯವಾಗಿಡಿ.

ಸುರಕ್ಷಿತ ಆನ್‌ಲೈನ್ ವಹಿವಾಟುಗಳು

ಈಗಂತೂ ಆನ್‌ಲೈನ್‌ ಶಾಪಿಂಗ್‌ ಹೆಸರಿನಲ್ಲಿ ಸಾಕಷ್ಟು ವಂಚನೆ ನಡೆಯುತ್ತಿದೆ. ಉತ್ತಮ ಕೊಡುಗೆ ಪ್ರದರ್ಶಿಸಿ ನಿಮ್ಮ ಗಮನ ಸೆಳೆದು ವಂಚನೆ ನಡೆಸುವ ಪ್ರವೃತ್ತಿಯೂ ಹೆಚ್ಚುತ್ತಿದೆ. ಹೀಗಾಗಿ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ ವೆಬ್ ಸೈಟ್ ಕಾನೂನುಬದ್ಧವಾಗಿದೆ ಮತ್ತು ಸುರಕ್ಷಿತ ಸಂಪರ್ಕವನ್ನು ಬಳಸುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಕ್ಯಾಶ್‌ ಆನ್‌ ಡೆಲಿವರಿ ಆಯ್ಕೆಯನ್ನೇ ಬಳಸಿ. ಕ್ರೆಡಿಟ್ ಕಾರ್ಡ್ ವಹಿವಾಟುಗಳಿಗೆ ಸಾರ್ವಜನಿಕ ವೈ-ಫೈ ಬಳಸುವುದನ್ನು ತಪ್ಪಿಸಿ. ಸೈಬರ್ ಭದ್ರತೆಗೆ ಸಂಬಂಧಿಸಿದಂತೆ ನಿಮ್ಮ ಬ್ಯಾಂಕ್ ಹೊರಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಿ. ಯಾವುದೇ ಕಾರಣಕ್ಕೂ ಅನುಮಾನಾಸ್ಪದ ವೆಬ್‌ಸೈಟ್‌ಗಳಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ವಿವರಗಳನ್ನು ನಮೂದಿಸಬೇಡಿ. ನಿಮ್ಮ ಕಾರ್ಡ್ ಮಾಹಿತಿಯನ್ನು ವಿನಂತಿಸುವ ಇಮೇಲ್ ಅಥವಾ ಕರೆಗಳಿಗೆ ಪ್ರತಿಕ್ರಿಯಿಸಬೇಡಿ.

ಸುರಕ್ಷಿತ ವೈಶಿಷ್ಟ್ಯಗಳನ್ನು ಅಳವಡಿಸಿಕೊಳ್ಳಿ

ನಿಮ್ಮ ಬ್ಯಾಂಕ್ ನೀಡುವ ಭದ್ರತಾ ವೈಶಿಷ್ಟ್ಯಗಳ ಲಾಭ ಪಡೆಯಿರಿ. ವೆಚ್ಚದ ಮಿತಿಗಳನ್ನು ನಿಗದಿಪಡಿಸುವುದು, ಎರಡು-ಅಂಶಗಳ ದೃಢೀಕರಣವನ್ನು ಸಕ್ರಿಯಗೊಳಿಸುವುದು ಅಥವಾ ನಿಮ್ಮ ನಿಜವಾದ ಕಾರ್ಡ್ ವಿವರಗಳನ್ನು ಹಂಚಿಕೊಳ್ಳುವ ಅಗತ್ಯವಿಲ್ಲದ ಮೊಬೈಲ್ ವ್ಯಾಲೆಟ್‌ಗಳನ್ನು ಬಳಸಿಕೊಳ್ಳಿ. ನಿಮ್ಮ ಕ್ರೆಡಿಟ್ ಕಾರ್ಡ್‌ನೊಂದಿಗೆ ಮಾಡಿದ ಪ್ರತಿಯೊಂದು ವಹಿವಾಟಿನ ಅಧಿಸೂಚನೆಗಳನ್ನು ಎಸ್‌ಎಂಎಸ್‌ / ಇಮೇಲ್‌ ಮೂಲಕ ಸ್ವೀಕರಿಸುವ ಎಚ್ಚರಿಕೆಗಳನ್ನು ಸಕ್ರಿಯಗೊಳಿಸಿ. ಸಾಂಪ್ರದಾಯಿಕ ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡ್ (Magnetic stripe cards)ಗಳಿಗೆ ಹೋಲಿಸಿದರೆ ಹೆಚ್ಚುವರಿ ಭದ್ರತೆಯನ್ನು ಒದಗಿಸುವ ಇಎಂವಿ ಚಿಪ್ ತಂತ್ರಜ್ಞಾನ ಅಳವಡಿಸಿರುವ ಕಾರ್ಡ್‌ ಅಥವಾ ನಿಮ್ಮ ಬ್ಯಾಂಕಿನಲ್ಲಿ ಲಭ್ಯವಿರುವ ಇತ್ತೀಚಿನ ಕಾರ್ಡ್‌ ಮಾದರಿಯನ್ನು ಆಯ್ಕೆ ಮಾಡಿ.

ಕಾರ್ಡ್ ಬಗ್ಗೆ ಸ್ಮಾರ್ಟ್ ಆಗಿರಿ

ನಿಮ್ಮ ಕಾರ್ಡ್‌ಗಳನ್ನು ಸುರಕ್ಷಿತವಾಗಿರಿಸಿಕೊಳ್ಳಿ ಮತ್ತು ಅಂಗಡಿಗಳು ಅಥವಾ ರೆಸ್ಟೋರೆಂಟ್‌ಗಳಲ್ಲಿ ನಿಮ್ಮ ಕಣ್ಣೆದುರೇ ಸ್ವೈಪ್‌ ಮಾಡಿ. ನಿಮ್ಮ ಕಾರ್ಡ್ ಮಾಹಿತಿಯನ್ನು ಕದಿಯುವ ಸ್ಕಿಮ್ಮಿಂಗ್ ಸಾಧನಗಳ ಬಗ್ಗೆ ಜಾಗರೂಕರಾಗಿರಿ. ಹಳೆಯ ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್‌ ಮತ್ತು ರಸೀದಿಗಳನ್ನು ಹಾಗೆಯೇ ಎಸೆಯುವ ಮೊದಲು ಅವುಗಳನ್ನು ಚೂರು ಚೂರು ಮಾಡಿ. ಒಂದು ವೇಳೆ ವಂಚನೆಯ ಸುಳಿವು ಸಿಕ್ಕರೆ ತಕ್ಷಣ ಕಸ್ಟಮರ್‌ ಕೇರ್‌ ನಂಬರ್‌ಗೆ ಕರೆ ಮಾಡಿ ಬ್ಲಾಕ್‌ ಮಾಡುವುದನ್ನು ಮರೆಯಬೇಡಿ.

ಇದನ್ನೂ ಓದಿ: Money Guide: ಮಕ್ಕಳಿಗೆ ಉಡುಗೊರೆ ಕೊಡಬೇಕೆ? ಅವರ ಹೆಸರಿನಲ್ಲಿ ಪಿಪಿಎಫ್‌ ಖಾತೆ ಆರಂಭಿಸಿ; ಇಲ್ಲಿದೆ ಸಂಪೂರ್ಣ ವಿವರ

Exit mobile version