Site icon Vistara News

Money Guide: ಆನ್‌ಲೈನ್‌ ಮೂಲಕ ಪರ್ಸನಲ್‌ ಲೋನ್‌ಗೆ ಅರ್ಜಿ ಸಲ್ಲಿಸುತ್ತಿದ್ದೀರಾ? ಈ ಅಂಶ ನಿಮ್ಮ ಗಮನದಲ್ಲಿರಲಿ

online personal loan

online personal loan

ಬೆಂಗಳೂರು: ಬದಲಾದ ಜೀವನ ಶೈಲಿ, ಬೆಲೆ ಏರಿಕೆಯಿಂದಾಗಿ ಪ್ರಸ್ತುತ ಪರ್ಸನಲ್‌ ಲೋನ್‌ (Personal loan) ಪಡೆಯುವುದು ಪ್ರತಿಯೊಬ್ಬರಿಗೂ ಅನಿವಾರ್ಯ ಎನಿಸಿಕೊಂಡಿದೆ. ಇದಕ್ಕಾಗಿಯೇ ದೇಶದಲ್ಲಿ ಗೃಹ ಸಾಲಗಳ ನಂತರ ಪರ್ಸನಲ್ ಲೋನ್ ಪಡೆಯುವವರ ಸಂಖ್ಯೆ ಹೆಚ್ಚಿದೆ ಎಂದು ಅಂಕಿ-ಅಂಶಗಳು ಹೇಳುತ್ತವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸುವ ವಿಧಾನವೂ ಜನಪ್ರಿಯವಾಗುತ್ತಿದೆ. ಇದು ಕೂಡ ಪರ್ಸನಲ್‌ ಲೋನ್‌ಗಳ ಸಂಖ್ಯೆ ಹೆಚ್ಚಲು ಮತ್ತೊಂದು ಕಾರಣ. ಇಂದಿನ ಮನಿಗೈಡ್‌ (Money Guide)ನಲ್ಲಿ ಆನ್‌ಲೈನ್‌ ಮೂಲಕ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಯಾವೆಲ್ಲ ವಿಚಾರಗಳನ್ನು ಗಮನಿಸಬೇಕು ಎನ್ನುವುದನ್ನು ನೋಡೋಣ.

ತುಲನೆ ಮಾಡಿ

ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ವಿವಿಧ ಬ್ಯಾಂಕ್‌ಗಳಲ್ಲಿನ ಮಾಹಿತಿಗಳನ್ನು ಕಲೆ ಹಾಕಿ. ಬಡ್ಡಿದರದ ಜತೆಗೆ ಇನ್ನೊಂದಿಷ್ಟು ಅಂಶಗಳೂ ಮುಖ್ಯವಾಗುತ್ತವೆ. ಹೀಗಾಗಿ ಮರುಪಾವತಿ ನಿಯಮಗಳು, ಶುಲ್ಕಗಳು, ಅರ್ಹತಾ ಮಾನದಂಡಗಳು ಮತ್ತು ಗ್ರಾಹಕರ ವಿಮರ್ಶೆಗಳನ್ನು ಗಮನಿಸಿ ತುಲನೆ ಮಾಡಿ. ಒಮ್ಮೆ ನೀವು ಸಾಲ ಪಡೆದುಕೊಳ್ಳುವ ಬ್ಯಾಂಕ್‌ ಅನ್ನು ಆಯ್ಕೆ ಮಾಡಿಕೊಂಡ ಬಳಿಕ ಅರ್ಹತಾ ಮಾನದಂಡಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ. ಈ ಮಾನದಂಡಗಳು ಕ್ರೆಡಿಟ್ ಸ್ಕೋರ್, ಆದಾಯ, ಉದ್ಯೋಗ ಸ್ಥಿತಿಯಂತಹ ಅಂಶಗಳನ್ನು ಒಳಗೊಂಡಿರುತ್ತದೆ.

ಅಗತ್ಯ ದಾಖಲೆಗಳನ್ನು ಮುಂಚಿತವಾಗಿ ಸಿದ್ಧಪಡಿಸಿ

ತ್ವರಿತ ಪರ್ಸನಲ್ ಲೋನ್ ಮಂಜೂರಾತಿಗಾಗಿ ಮುಂಚಿತವಾಗಿ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸುವುದು ಅತ್ಯಗತ್ಯ. ಸಾಮಾನ್ಯವಾಗಿ ಆಧಾರ್ ಕಾರ್ಡ್, ಪಾಸ್‌ಪೋರ್ಟ್‌, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಗುರುತಿನ ಚೀಟಿ ಮತ್ತು ಎರಡು ವರ್ಷಗಳ ಆದಾಯ ತೆರಿಗೆ ರಿಟರ್ನ್ (ಐಟಿಆರ್)ನಂತಹ ಗುರುತಿನ ಪುರಾವೆಗಳನ್ನು ಬ್ಯಾಂಕ್‌ಗಳು ಕೇಳುತ್ತವೆ. ಈ ದಾಖಲೆಗಳನ್ನು ಎಷ್ಟು ಬೇಗ ಸಲ್ಲಿಸುತ್ತೀರೋ ಅಷ್ಟು ಬೇಗ ಸಾಲ ಮಂಜೂರಾಗುತ್ತದೆ. ಜತೆಗೆ ಆದಾಯದ ಮೂಲ (ಸ್ಯಾಲರಿ ಸ್ಲಿಪ್‌ ಅಥವಾ ಬ್ಯಾಂಕ್‌ ಸ್ಟೇಟ್‌ಮೆಂಟ್‌) ಸಿದ್ಧವಾಗಿಟ್ಟುಕೊಳ್ಳಿ.

ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ

ಎಲ್ಲ ದಾಖಲೆಗಳನ್ನು ಸಂಗ್ರಹಿಸಿದ ನಂತರ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಆನ್‌ಲೈನ್‌ ಫಾರಂನ ಭರ್ತಿ ಮಾಡಲು ಪ್ರಾರಂಭಿಸಲು ಅಪ್ಲಿಕೇಶನ್ ಲಿಂಕ್ ಅನ್ನು ಕ್ಲಿಕ್ ಮಾಡಿ. ನಿಮ್ಮ ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಸಾಮಾಜಿಕ ಭದ್ರತಾ ಸಂಖ್ಯೆ, ಉದ್ಯೋಗ ವಿವರಗಳು, ಆದಾಯ ಮತ್ತು ನೀವು ಸಾಲ ಪಡೆಯಲು ಬಯಸುವ ಮೊತ್ತದಂತಹ ವೈಯಕ್ತಿಕ ಮಾಹಿತಿಯನ್ನು ನೀಡುವ ಪೂಲಕ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ. ನಿಮ್ಮ ಸ್ವತ್ತುಗಳು, ಹೊಣೆಗಾರಿಕೆಗಳು ಮತ್ತು ಅಸ್ತಿತ್ವದಲ್ಲಿರುವ ಸಾಲಗಳು ಸೇರಿದಂತೆ ನಿಮ್ಮ ಆರ್ಥಿಕ ಬಗ್ಗೆ ಸ್ಥಿತಿಯ ಬಗ್ಗೆಯೂ ಸೂಕ್ತ ಮಾಹಿತಿ ಒದಗಿಸಿ.

ಅನುಕೂಲಕರ ಅವಧಿಯನ್ನು ಆಯ್ಕೆ ಮಾಡಿ

ವೈಯಕ್ತಿಕ ಸಾಲದ ಬಗ್ಗೆ ಯೋಚಿಸುವಾಗ ಸಾಲದ ಅವಧಿಯನ್ನು ಅರ್ಥ ಮಾಡಿಕೊಳ್ಳುವುದು ಕೂಡ ಬಹಳ ಮುಖ್ಯ. ಸಾಮಾನ್ಯವಾಗಿ ಈ ಸಾಲದ ಅವಧಿ 12ರಿಂದ 60 ತಿಂಗಳವರೆಗೆ ಇರುತ್ತದೆ. ಕೆಲವೊಮ್ಮೆ 96 ತಿಂಗಳವರೆಗೆ ಅವಧಿಯನ್ನು ವಿಸ್ತರಿಸುವ ಸಾಧ್ಯತೆಯೂ ಇರುತ್ತದೆ. ನಿಮ್ಮ ಮರುಪಾವತಿ ಸಾಮರ್ಥ್ಯ ನೋಡಿಕೊಂಡು ಸೂಕ್ತ ಅವಧಿಯನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ದೀರ್ಘಾವಧಿಯ ಸಾಲವನ್ನು ಆರಿಸಿಕೊಳ್ಳುವುದು ಇಎಂಐ ಹೊರೆಯನ್ನು ಕಡಿಮೆ ಮಾಡುತ್ತದೆ. ಆದಾಗ್ಯೂ ಅಲ್ಪಾವಧಿಯ ಸಾಲಗಳು ಸಾಮಾನ್ಯವಾಗಿ ಕಡಿಮೆ ಬಡ್ಡಿದರಗಳನ್ನು ಹೊಂದಿರುತ್ತವೆ. ಹೀಗಾಗಿ ಈ ಎಲ್ಲ ಅಂಶಗಳು ನಿಮ್ಮ ಗಮನದಲ್ಲಿರಿಸಿ ಸೂಕ್ತವಾದ ಅವಧಿಯನ್ನು ಆಯ್ಕೆ ಮಾಡಿಕೊಳ್ಳಿ.

ಅರ್ಜಿ ಸಲ್ಲಿಸುವ ಮುನ್ನ ಮತ್ತೊಮ್ಮೆ ಗಮನಿಸಿ

ಭರ್ತಿ ಮಾಡಿದ ನಿಮ್ಮ ಪರ್ಸನಲ್‌ ಲೋನ್‌ ಅಪ್ಲಿಕೇಷನ್‌ ಫಾರಂ ಅನ್ನು ಕೂಡಲೇ ಸಲ್ಲಿಸಬೇಡಿ. ಮತ್ತೊಮ್ಮೆ ವಿವರಗಳನ್ನು ಕಣ್ಣಾಡಿಸಿ ಮಾಹಿತಿ ಸರಿಯಾಗಿದೆ ಎನ್ನುವುದು ಖಚಿತಪಡಿಸಿಕೊಳ್ಳಿ. ಕೆಲವೊಂದು ಬ್ಯಾಂಕ್‌ಗಳು ಡಾಕ್ಯಮೆಂಟ್‌ ಅಪ್‌ಲೋಡ್‌ ಮಾಡಲು ಕೇಳುತ್ತವೆ. ಇದನ್ನೂ ಗಮನಿಸಿ. ಪೂರ್ಣವಾಗದ ಅರ್ಜಿ ತಿರಸ್ಕೃತವಾಗುವ ಸಾಧ್ಯತೆ ಇದೆ. ಹೀಗಾಗಿ ಷರತ್ತುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ.

ಅನುಮೋದನೆಗಾಗಿ ಕಾಯಿರಿ

ಅರ್ಜಿಯನ್ನು ಸಲ್ಲಿಸಿದ ನಂತರ ಬ್ಯಾಂಕ್‌ ನಿಮ್ಮ ಮಾಹಿತಿಯನ್ನು ಪರಿಶೀಲಿಸುತ್ತದೆ. ಬಳಿಕ ಲೋನ್‌ ನೀಡಬೇಕೆ ಎನ್ನುವುದನ್ನು ನಿರ್ಧರಿಸುತ್ತದೆ. ಬ್ಯಾಂಕ್‌ನ ನೀತಿಯನ್ನು ಅವಲಂಬಿಸಿ ಈ ಪ್ರಕ್ರಿಯೆಯು ಕೆಲವು ನಿಮಿಷಗಳಿಂದ ಕೆಲವು ದಿನಗಳವರೆಗೆ ಹಿಡಿಯುತ್ತದೆ. ಹೀಗಾಗಿ ತಾಳ್ಮೆಯಿಂದ ಕಾಯಿರಿ.

ನಿಯಮಗಳನ್ನು ಗಮನಿಸಿ ಸಾಲ ಸ್ವೀಕರಿಸಿ

ಅರ್ಜಿ ಸ್ವೀಕೃತವಾದರೆ ಬಡ್ಡಿದರ, ಮರುಪಾವತಿಯ ವೇಳಾಪಟ್ಟಿ ಮತ್ತು ಅನ್ವಯವಾಗುವ ಯಾವುದೇ ಶುಲ್ಕಗಳು ಸೇರಿದಂತೆ ಸಾಲದ ನಿಯಮಗಳನ್ನು ವಿವರಿಸುವ ಪ್ರಸ್ತಾವ ನಿಮಗೆ ಸಲ್ಲಿಕೆಯಾಗುತ್ತದೆ. ಇದನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ನಿಯಮಗಳು ನಿಮಗೆ ಒಪ್ಪಿಗೆಯಾದರೆ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಸಾಲ ಪಡೆಯಬಹುದು.

ಮೊತ್ತ ಬ್ಯಾಂಕ್‌ ಅಕೌಂಟ್‌ಗೆ ಜಮೆಯಾಗುತ್ತದೆ

ಇದಾಗಿ ಕೆಲವೇ ದಿನಗಳಲ್ಲಿ ನಿಮ್ಮ ಬ್ಯಾಂಕ್‌ ಟಕೌಂಟ್‌ಗೆ ಸಾಲದ ಮೊತ್ತ ಜಮೆ ಆಗಲಿದೆ. ಈ ಸಾಲದ ಮೊತ್ತವನ್ನು ಸಮಯಕ್ಕೆ ಸರಿಯಾಗಿ ಮರು ಪಾವತಿಸುವುದು ಕೂಡ ಮುಖ್ಯ. ವಿಳಂಬ ಶುಲ್ಕ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದರಿಂದ ಸಕಾಲಿಕವಾಗಿ ಪಾವತಿಸುವತ್ತ ಗಮನ ಹರಿಸಿ.

ಇದನ್ನೂ ಓದಿ: Money Guide: ತೆರಿಗೆ ಉಳಿತಾಯ ಮಾಡಬೇಕೆ? ಈ ತಪ್ಪಿನಿಂದ ದೂರವಿರಿ

Exit mobile version