Site icon Vistara News

Money Guide: ಹಣ ಪಾವತಿ ಅಂಗಳಕ್ಕೆ ಕಾಲಿಡಲು ಅದಾನಿ ಗ್ರೂಪ್‌ ಸಜ್ಜು; ಗೂಗಲ್‌ ಪೇ, ಫೋನ್‌ ಪೇಗೆ ಪ್ರಬಲ ಪೈಪೋಟಿ?

Money Guide

Money Guide

ಬೆಂಗಳೂರು: ಭಾರತದಲ್ಲಿ ಡಿಜಿಟಲ್‌ ಪೇಮೆಂಟ್‌ (Digital Payments) ವಿಧಾನ ಜನಪ್ರಿಯವಾಗಿದೆ. ಮಾಲ್‌ಗಳಿಂದ ಹಿಡಿದು ತಳ್ಳುಗಾಡಿಯವರೆಗೆ ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ (UPI) ಮೂಲಕ ವ್ಯವಹಾರ ನಡೆಸಲಾಗುತ್ತದೆ. ಗೂಗಲ್ ಪೇ, ಫೋನ್ ಪೇ, ಅಮೆಜಾನ್ ಪೇ ಹಾಗೂ ಇತರ ಪಾವತಿ ವ್ಯವಸ್ಥೆಗಳು ಭಾರತದಲ್ಲಿ ಯುಪಿಐ ಪಾವತಿ ವ್ಯವಸ್ಥೆಯ ಬಳಕೆಯನ್ನು ವ್ಯಾಪಕಗೊಳಿಸಿವೆ. ಜತೆಗೆ ಕ್ರೆಡಿಟ್‌ ಕಾರ್ಡ್‌ ಬಳಕೆಯೂ ಅಧಿಕವಾಗಿದೆ. ಇದೀಗ ಈ ಎಲ್ಲ ಕಂಪನಿಗಳಿಗೆ ತೀವ್ರ ಸ್ಪರ್ಧೆ ಒಡ್ಡಲು ಭಾರತದ ಮತ್ತೊಂದು ದೈತ್ಯ ಕಂಪನಿಯೊಂದು ಮುಂದಾಗಿದೆ. ಹೌದು, ಭಾರತದ ಉದ್ಯಮಿ, ವಿಶ್ವದ ಸಿರಿವಂತರ ಪೈಕಿ ಒಬ್ಬರೆನಿಸಿಕೊಂಡಿರುವ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ (Adani Group) ಇದೀಗ ಯುಪಿಐ ಮತ್ತು ಕ್ರೆಡಿಟ್ ಕಾರ್ಡ್ ವ್ಯವಹಾರಕ್ಕೆ ಪ್ರವೇಶಿಸಲು ತಯಾರಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಭಾರತದಲ್ಲಿ ಈಗಾಗಲೇ ಯುಪಿಐ ಮತ್ತು ಕ್ರೆಡಿಟ್ ಕಾರ್ಡ್ ಕ್ಷೇತ್ರದಲ್ಲಿ ನೆಲೆಯೂರಿರುವ ಗೂಗಲ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ಗೆ ಪ್ರತಿಸ್ಪರ್ಧಿಯಾಗಿ ಅದಾನಿ ಗ್ರೂಪ್ ಇ-ಕಾಮರ್ಸ್ ಮತ್ತು ಪಾವತಿ ಕ್ಷೇತ್ರವನ್ನು ಪ್ರವೇಶಿಸುವ ಪ್ರಯತ್ನದಲ್ಲಿದೆ ಎಂದು ಫೈನಾನ್ಶಿಯಲ್‌ ಟೈಮ್ಸ್‌ ವರದಿ ಮಾಡಿದೆ.

ಭಾರತದಲ್ಲಿ ವ್ಯಾಪಕವಾಗಿ ಬಳಸಲಾಗುವ ಹಣ ಪಾವತಿ ವಿಧಾನವಾದ ಯುಪಿಐ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಅಗತ್ಯವಾದ ಪರವಾನಗಿ ಪಡೆಯಲು ಕಂಪನಿಯು ಈಗಾಗಲೇ ಕೆಲಸ ಆರಂಭಿಸಿದೆ. ಮಾತ್ರವಲ್ಲ ಅದಾನಿ ಕ್ರೆಡಿಟ್ ಕಾರ್ಡ್‌ ಯೋಜನೆಗಳನ್ನು ಅಂತಿಮಗೊಳಿಸಲು ಬ್ಯಾಂಕ್‌ಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಸರ್ಕಾರದ ಬೆಂಬಲದೊಂದಿಗೆ ಭಾರತದಲ್ಲಿ ವೇಗವಾಗಿ ವಿಸ್ತರಿಸುತ್ತಿರುವ ಸಾರ್ವಜನಿಕ ಇ-ಕಾಮರ್ಸ್ ನೆಟ್‌ವರ್ಕ್‌ ಓಪನ್ ನೆಟ್‌ವರ್ಕ್‌ ಫಾರ್ ಡಿಜಿಟಲ್ ಕಾಮರ್ಸ್ (Open Network for Digital Commerce) ಮೂಲಕ ಆನ್‌ಲೈನ್‌ ಶಾಪಿಂಗ್ ಸೇವೆ ಒದಗಿಸಲು ಚಿಂತನೆ ನಡೆಸಲಾಗಿದೆ.

ಅದಾನಿ ಒನ್ ಅಪ್ಲಿಕೇಷನ್‌ ಮೂಲಕ ಸೇವೆ

ಒಂದು ವೇಳೆ ಅನುಮತಿ ದೊರೆತರೆ ಕಂಪನಿಯ ಅದಾನಿ ಒನ್‌ (Adani One) ಅಪ್ಲಿಕೇಷನ್‌ ಮೂಲಕ ಸೇವೆ ಲಭಿಸಲಿದೆ. ಅದಾನಿ ಒನ್ ಅಪ್ಲಿಕೇಶನ್ ಅನ್ನು 2022ರಲ್ಲಿ ಪ್ರಾರಂಭಿಸಲಾಗಿದ್ದು, ಇದು ಪ್ರಸ್ತುತ ಹೋಟೆಲ್ ಮತ್ತು ಫ್ಲೈಟ್ ಬುಕಿಂಗ್‌ನಂತಹ ಪ್ರವಾಸೋದ್ಯಮ ಸೇವೆಗಳನ್ನು ಒದಗಿಸುತ್ತದೆ. ಈಗಾಗಲೇ ಅದಾನಿ ಗ್ರೂಪ್ ಬಂದರು, ವಿಮಾನ ನಿಲ್ದಾಣಗಳು ಮತ್ತು ವಿದ್ಯುತ್ ಸ್ಥಾವರಗಳನ್ನು ಹೊಂದಿದ್ದು, ಇದರಲ್ಲಿನ ಗ್ರಾಹಕರನ್ನು ಸುಲಭವಾಗಿ ಸೆಳೆಯಬಹುದು ಎನ್ನುವ ಲೆಕ್ಕಾಚಾರವಿದೆ. ʼʼಸದ್ಯ ಏಷ್ಯಾದ ಎರಡನೇ ಶ್ರೀಮಂತ ವ್ಯಕ್ತಿಯಾಗಿರುವ ಅದಾನಿ ಗ್ರೂಪ್‌ನ ಸ್ಥಾಪಕ ಗೌತಮ್ ಅದಾನಿ ಅವರು ಶೀಘ್ರದಲ್ಲಿಯೇ ಡಿಜಿಟಲ್‌ ಪಾವತಿ ರಂಗಕ್ಕೆ ಪ್ರವೇಶಿಸಲು ಯೋಜನೆ ಹಾಕಿಕೊಂಡಿದ್ದಾರೆʼʼ ಎಂದು ಮೂಲಗಳು ಮಾಹಿತಿ ನೀಡಿವೆ.

ತೀವ್ರ ಸ್ಪರ್ಧೆ

ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಸದ್ಯ ಡಿಜಿಟಲ್‌ ಪಾವತಿ ಕ್ಷೇತ್ರದಲ್ಲಿ ಗೂಗಲ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ ಪ್ರಬಲ ಶಕ್ತಿಯಾಗಿ ಗುರುತಿಸಿಕೊಂಡಿವೆ. ಇದೀಗ ಯುಪಿಐ, ಕ್ರೆಡಿಟ್ ಕಾರ್ಡ್ ಸೇವೆ ಆರಂಭಿಸುವ ಮೂಲಕ ಅದಾನಿ ಗ್ರೂಪ್‌ ಇ-ಕಾಮರ್ಸ್ ಮತ್ತು ಪಾವತಿ ಕ್ಷೇತ್ರದಲ್ಲಿ ಪ್ರಬಲ ಸ್ಪರ್ಧೆ ಒಡ್ಡುವ ಸಾಧ್ಯತೆ ಇದೆ. ಯಾವ ರೀತಿ ಕಾರ್ಯ ನಿರ್ವಹಿಸಲಿದೆ ಎನ್ನುವ ಬಗ್ಗೆ ಶೀಘ್ರದಲ್ಲೇ ಮಾಹಿತಿ ಹೊರ ಬೀಳಲಿದೆ. ಒಟ್ಟಿನಲ್ಲಿ ಈ ಸುದ್ದಿ ತೀವ್ರ ಸಂಚಲನ ಮೂಡಿಸಿದೆ.

ಇದನ್ನೂ ಓದಿ: Money Guide: ಭಾರತದಲ್ಲಿಯೂ ಆರಂಭವಾಯ್ತು ಬಹು ನಿರೀಕ್ಷಿತ ಗೂಗಲ್ ವ್ಯಾಲೆಟ್‌; ಇದು ಗೂಗಲ್‌ ಪೇಗಿಂತ ಹೇಗೆ ಭಿನ್ನ?

Exit mobile version