ಬೆಂಗಳೂರು: ಆರ್ಥಿಕವಾಗಿ ಸದೃಢವಾಗುವುದು, ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳುವುದು ಪ್ರತಿಯೊಬ್ಬನ ಕನಸು. ಇದಕ್ಕಾಗಿ ಸೂಕ್ತ ಹಣಕಾಸಿನ ಯೋಜನೆ ರೂಪಿಸಿಕೊಳ್ಳುವುದು ಅತ್ಯಗತ್ಯ. ಅಲ್ಲದೆ ನಿಮ್ಮ ಸ್ವತ್ತುಗಳನ್ನು ರಕ್ಷಿಸುವುದು ಮತ್ತು ಅಗತ್ಯವಿದ್ದಾಗ ನಿಮ್ಮ ಪ್ರೀತಿಪಾತ್ರರಿಗೆ ಆರ್ಥಿಕ ನೆರವು ಲಭಿಸುವುದನ್ನು ಖಚಿತಪಡಿಸಿಕೊಳ್ಳುವುದೂ ಬಹಳ ಮುಖ್ಯವಾಗುತ್ತದೆ. ಹಾಗಾದರೆ ಇದಕ್ಕೇನು ಮಾಡಬೇಕು ಎನ್ನುವ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಉತ್ತರ ಮತ್ತು ಸರಳ ಪರಿಹಾರ ಮಾರ್ಗವೆಂದರೆ ನಿಮ್ಮ ಬ್ಯಾಂಕ್ ಖಾತೆ ಮತ್ತು ಮ್ಯೂಚುವಲ್ ಫಂಡ್ ಖಾತೆಗೆ ನಾಮಿನಿಯನ್ನು ಹೆಸರಿಸುವುದು. ಹೌದು, ಈ ಕ್ರಮವು ಹಲವು ಪ್ರಯೋಜನಗಳನ್ನು ನೀಡುವ ಜತೆಗೆ ಸ್ವತ್ತಿಗೆ ಸೂಕ್ತ ರಕ್ಷಣೆಯನ್ನೂ ಒದಗಿಸುತ್ತದೆ. ಖಾತೆದಾರರ ಮರಣದ ನಂತರ ಸ್ವತ್ತುಗಳ ತಡೆರಹಿತ ವರ್ಗಾವಣೆ ಇದರಿಂದ ಸಾಧ್ಯವಾಗುತ್ತದೆ. ಇಂದಿನ ಮನಿಗೈಡ್ (Money Guide)ನಲ್ಲಿ ಈ ಕುರಿತಾದ ವಿವರಗಳಿವೆ.
ನಾಮಿನಿಯನ್ನು ಹೆಸರಿಸುವುದರಿಂದ ಲಭಿಸುವ ಪ್ರಯೋಜನಗಳು
ಗೊಂದಲ ರಹಿತವಾಗಿ ಸ್ವತ್ತುಗಳ ವರ್ಗಾವಣೆ
ಖಾತೆಗೆ ನಾಮಿನಿಯನ್ನು ಹೆಸರಿಸುವುದರಿಂದ ಲಭಿಸುವ ಅತಿ ಮುಖ್ಯ ಪ್ರಯೋಜನವಿದು. ಬ್ಯಾಂಕ್ ಖಾತೆಗೆ ನಾಮಿನಿ ಹೆಸರನ್ನು ನಿರ್ದೇಶಿಸುವುದರಿಂದ ಖಾತೆ ಹೊಂದಿರುವಾತ ಆಕಸ್ಮಿಕವಾಗಿ ಮರಣ ಹೊಂದಿದರೆ ದೀರ್ಘ ಕಾನೂನು ಪ್ರಕ್ರಿಯೆಯ ಅಗತ್ಯವಿಲ್ಲದೆ ಬ್ಯಾಂಕ್ ಖಾತೆಯ ಬಾಕಿಯನ್ನು ನಾಮನಿರ್ದೇಶಿತರಿಗೆ (ನಾಮಿನಿ) ವರ್ಗಾಯಿಸಬಹುದು. ಈ ಮೂಲಕ ನಾಮಿನಿಯು ಸರಳ ಮತ್ತು ವೇಗವಾಗಿ ಹಣವನ್ನು ಪಡೆಯಬಹುದು.
ಅದೇ ರೀತಿ ಮ್ಯೂಚುವಲ್ ಫಂಡ್‌ನಲ್ಲಿಯೂ ನಾಮಿನಿಯನ್ನು ಹೆಸರಿಸುವುದರಿಂದ ಖಾತೆಯಲ್ಲಿರುವ ಮೊತ್ತವನ್ನು ಖಾತೆದಾರನ ಮರಣದ ನಂತರ ನೇರವಾಗಿ ನಾಮಿನಿಗೆ ವರ್ಗಾಯಿಸಬಹುದು. ಹೀಗಾಗಿ ಇದು ಖಾತೆದಾರರ ಮರಣದ ಸಂದರ್ಭದಲ್ಲಿ ಅವರ ಪ್ರೀತಿಪಾತ್ರರಿಗೆ ನೀಡಬಹುದುದಾದ ಮೌಲ್ಯಯುತ ಉಡುಗೊರೆ ಎನಿಸಿಕೊಂಡಿದೆ.
ಕಾನೂನು ತೊಡಕು, ಗೊಂದಲಗಳ ನಿವಾರಣೆ
ನಾಮನಿರ್ದೇಶನವು ಸಂಭಾವ್ಯ ವಾರಸುದಾರರ ನಡುವಿನ ಕಾನೂನು ವಿವಾದಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಖಾತೆದಾರರು ಮುಂದೆ ತಮ್ಮ ಆಸ್ತಿಗಳನ್ನು ಯಾರಿಗೆ ನೀಡಲು ಉದ್ದೇಶಿಸಿದ್ದಾರೆ ಎನ್ನುವ ಅಂಶ ಇದರಿಂದ ಯಾವುದೇ ಗೊಂದಲಗಳಿಲ್ಲದೆ ತಿಳಿದು ಬರುತ್ತದೆ. ಈ ಮೂಲಕ ಕುಟುಂಬ ಸದಸ್ಯರ ನಡುವೆ ಸಂಭವಿಸಬಹುದಾದ ಸಂಘರ್ಷಗಳನ್ನು ಇದು ತಡೆಯುತ್ತದೆ. ಜತೆಗೆ ತಕ್ಷಣವೇ ಹಣವನ್ನು ಹಿಂಪಡೆಯಬಹುದಾದ ಕಾರಣ ಆರ್ಥಿಕ ಸಂಕಷ್ಟದ ಸಮಯದಲ್ಲಿ ಇದು ಕೈ ಹಿಡಿಯುತ್ತದೆ. ಕೋರ್ಟ್, ಕಚೇರಿ ಎಂದು ಅಲೆದಾಡುವ ಪ್ರಮೇಯವೇ ಕಂಡು ಬರುವುದಿಲ್ಲ.
ಅವಲಂಬಿತರಿಗೆ ಆರ್ಥಿಕ ಸುರಕ್ಷೆ
ನಾಮನಿರ್ದೇಶಿತರನ್ನು ಹೆಸರಿಸುವುದರಿಂದ ಅವಲಂಬಿತರು ಅಥವಾ ಉದ್ದೇಶಿತ ಫಲಾನುಭವಿಗಳು ತ್ವರಿತವಾಗಿ ಆರ್ಥಿಕ ಬೆಂಬಲವನ್ನು ಪಡೆಯುತ್ತಾರೆ. ಖಾತೆದಾರರ ನಿಧನದ ನಂತರ ತಕ್ಷಣದ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಇದು ನಿರ್ಣಾಯಕವಾಗಿದೆ. ಒಂದು ವೇಳೆ ನಾಮನಿರ್ದೇಶಿತರು ಅಪ್ರಾಪ್ತರಾಗಿದ್ದರೆ ಅವರು ಪ್ರಾಪ್ತ ವಯಸ್ಕರಾಗುವ ತನಕ ಅವರ ಪೋಷಕರು ಇದನ್ನು ನಿಭಾಯಿಸಬಹುದು. ಇದರಿಂದ ಹಣ ದುರುಪಯೋಗವಾಗುವುದನ್ನು ತಡೆಯಬಹುದು.
ಖರ್ಚು ಕಡಿತ
ನಾಮಿನಿಯನ್ನು ಹೆಸರಿಸುವುದರಿಂದ ಲಭಿಸುವ ಇನ್ನೊಂದು ಮುಖ್ಯ ಪ್ರಯೋಜನ ಎಂದರೆ ಖರ್ಚು ಕಡಿತ. ಸ್ಪಷ್ಟವಾಗಿ ಹಣ ಯಾರಿಗೆ ಸೇರಬೇಕೆಂದು ಉಲ್ಲೇಖಿಸುವುದರಿಂದ ಕೋರ್ಟ್ ಅಲೆದಾಟ ಇದರಿಂದ ತಪ್ಪುತ್ತದೆ. ಈ ಮೂಲಕ ವಕೀಲರ ಫೀಸ್ ಸೇರಿದಂತೆ ಅನೇಕ ಖರ್ಚುಗಳನ್ನು ಉಳಿಸಬಹುದು.
ಬದಲಾವಣೆಯನ್ನೂ ಮಾಡಬಹುದು
ಒಂದು ವೇಳೆ ನಾಮಿನಿಯ ಹೆಸರನ್ನು ಬದಲಾಯಿಸಬೇಕಂದು ಖಾತೆದಾರರಿಗೆ ಅನಿಸಿದರೆ ಅದಕ್ಕೆ ಬೇಕಾದ ಆಯ್ಕೆಯೂ ಲಭ್ಯ. ಕೆಲವು ಸ್ವತ್ತುಗಳನ್ನು ಉದ್ದೇಶಿತರಿಗೆ ಪರಿಣಾಮಕಾರಿಯಾಗಿ ವರ್ಗಾಯಿಸಲಾಗುತ್ತಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಇದು ವಿಲ್ ಮತ್ತು ಟ್ರಸ್ಟ್‌ನಂತೆ ಕಾರ್ಯ ನಿರ್ವಹಿಸುತ್ತದೆ.
ಇದನ್ನೂ ಓದಿ: Money Guide: 1 ಕೋಟಿ ರೂ. ದುಡಿಯಬೇಕೆ? ಈ ಅಪಾಯ ರಹಿತ ಯೋಜನೆಯಲ್ಲಿ ಹೂಡಿಕೆ ಮಾಡಿ
ಒಟ್ಟಿನಲ್ಲಿ ನಿಮ್ಮ ಬ್ಯಾಂಕ್ ಮತ್ತು ಮ್ಯೂಚುವಲ್ ಫಂಡ್ ಖಾತೆಗಳಿಗೆ ನಾಮಿನಿಯನ್ನು ಸೇರಿಸುವುದರಿಂದ ನಿಮ್ಮ ಸ್ವತ್ತುಗಳ ಸುಗಮ ಮತ್ತು ಪರಿಣಾಮಕಾರಿ ವರ್ಗಾವಣೆಯನ್ನು ಖಚಿತಪಡಿಸಿಕೊಳ್ಳಬಹುದು. ಮಾತ್ರವಲ್ಲ ಸಂಭಾವ್ಯ ಕಾನೂನು ತೊಡಕುಗಳನ್ನು ನಿವಾರಿಸಿ ಪ್ರೀತಿಪಾತ್ರರಿಗೆ ಆರ್ಥಿಕ ಭದ್ರತೆಯನ್ನು ಒದಗಿಸಬಹುದು ಎನ್ನುತ್ತಾರೆ ಆರ್ಥಿಕ ತಜ್ಞರು.