Site icon Vistara News

Money Guide: ಗಮನಿಸಿ; ಏ. 1ರಿಂದ ಬದಲಾಗುತ್ತವೆ ಈ ಎಲ್ಲ ಹಣಕಾಸು ನಿಯಮಗಳು

money guide

money guide

ಬೆಂಗಳೂರು: ಹೊಸ ಹಣಕಾಸು ವರ್ಷ ಆರಂಭವಾಗಲು ಕೆಲವೇ ದಿನಗಳು ಬಾಕಿ. ಏಪ್ರಿಲ್‌ 1ರಿಂದ 2024-25ರ ಸಾಲಿನ ಹಣಕಾಸು ವರ್ಷ ನಡೆಯಲಿದೆ. ಅದರ ಜತೆಗೆ ಏಪ್ರಿಲ್‌ 1ರಿಂದ ಹಣಕಾಸಿಗೆ ಸಂಬಂಧಿಸಿದಂತೆ ಕೆಲವು ನಿಯಮಗಳಲ್ಲಿ ಬದಲಾವಣೆಯೂ ನಡೆಯಲಿದೆ. ವಿಶೇಷವಾಗಿ ಜನ ಸಾಮಾನ್ಯರ ಮೇಲೆ ಪರಿಣಾಮ ಬೀರುವಂತಹ ಬದಲಾವಣೆ ಕಂಡು ಬರಲಿದೆ. ಅವು ಯಾವುವು ಎನ್ನುವ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಫಾಸ್ಟ್‌ ಟ್ಯಾಗ್‌ (FASTag)

2021ರ ಫೆಬ್ರವರಿಯಿಂದ ದೇಶದಲ್ಲಿ ಫಾಸ್ಟ್‌ಟ್ಯಾಗ್‌ ಕಡ್ಡಾಯಗೊಳಿಸಲಾಗಿದೆ. ಇದೀಗ ಫಾಸ್ಟ್‌ಟ್ಯಾಗ್‌ನ ಕೆವೈಸಿಯನ್ನು ಅಪ್​ಡೇಟ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಇದಕ್ಕಾಗಿ ಮಾರ್ಚ್‌ 31 ಕೊನೆಯ ದಿನ. ಅಪ್‌ಡೇಟ್‌ ಆಗದಿದ್ದರೆ ಬ್ಯಾಂಕ್‌ಗಳು ನಿಮ್ಮ ಫಾಸ್ಟ್‌ಟ್ಯಾಗ್‌ ಅನ್ನು ಡೀ ಆ್ಯಕ್ಟಿವೇಟ್ ಮಾಡುವ ಸಾಧ್ಯತೆ ಇದೆ. ಹೀಗಾಗಿ ಕೆವೈಸಿ ಅಪ್​ಡೇಟ್ ಆಗದ ಫಾಸ್ಟ್‌ಟ್ಯಾಗ್‌ನ ಖಾತೆಯಲ್ಲಿ ಹಣ ಇದ್ದರೂ ಅದು ಕೆಲಸ ಮಾಡುವುದಿಲ್ಲ. ಆದ್ದರಿಂದ ಈಗಲೇ ಅಪ್‌ಡೇಟ್‌ ಮಾಡಿ.

ಕೆವೈಸಿ ಅಪ್‌ಡೇಟ್ ಮಾಡುವುದು ಹೇಗೆ?

ಎನ್​ಪಿಎಸ್  (NPS)

ಹೆಚ್ಚಿನ ಭದ್ರತೆ ಒದಗಿಸಲು ಮತ್ತು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಚಂದಾದಾರರ ಹಿತಾಸಕ್ತಿಗಳನ್ನು ಕಾಪಾಡಲು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಹೆಚ್ಚು ಸುರಕ್ಷಿತವಾದ ಈ ವಿಧಾನವನ್ನು ಘೋಷಿಸಿದೆ. ಇದಕ್ಕಾಗಿ ಎರಡು ಅಂಶಗಳ ಆಧಾರ್ ದೃಢೀಕರಣ(ಅಥೆಂಟಿಕೇಷನ್‌) ಅನ್ನು ಪರಿಚಯಿಸಿದೆ. ಇನ್ನು ಮುಂದೆ ಪಾಸ್‌ವರ್ಡ್‌ನೊಂದಿಗೆ ಆಧಾರ್ ದೃಢೀಕರಣವನ್ನೂ ಪೂರ್ಣಗೊಳಿಸಬೇಕು. ಆಗ ಮಾತ್ರ ಲಾಗಿನ್ ಯಶಸ್ವಿಯಾಗುತ್ತದೆ. ಇದರಿಂದ ಅನಧಿಕೃತ ಎನ್‌ಪಿಎಸ್‌ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಈ ನಿಯಮ ಏಪ್ರಿಲ್‌ 1ರಿಂದಲೇ ಜಾರಿಗೆ ಬರಲಿದೆ.

ಇಪಿಎಫ್‌ಒ (EPFO)

ಹೊಸ ಹಣಕಾಸು ವರ್ಷದ ಆರಂಭದ ದಿನ ನೌಕರರ ಭವಿಷ್ಯ ನಿಧಿ ದೊಡ್ಡ ಬದಲಾವಣೆಗೆ ಸಾಕ್ಷಿಯಾಗಲಿದೆ. ಅಂದರೆ ಏಪ್ರಿಲ್ 1ರಿಂದ ನೌಕರರ ಭವಿಷ್ಯ ನಿಧಿ ಸಂಸ್ಥೆ ಹೊಸ ನಿಯಮಗಳನ್ನು ಜಾರಿಗೆ ತರಲಿದೆ. ಹೊಸ ನಿಯಮದ ಪ್ರಕಾರ ನೀವು ಉದ್ಯೋಗವನ್ನು ಬದಲಾಯಿಸಿದರೆ, ನಿಮ್ಮ ಹಳೆಯ ಪಿಎಫ್ ಅಕೌಂಟ್‌ ಅನ್ನು ಅನ್ನು ಆಟೋ ಮೋಡ್‌ಗೆ ವರ್ಗಾಯಿಸಲಾಗುತ್ತದೆ. ಇದರಿಂದ ಉದ್ಯೋಗವನ್ನು ಬದಲಾಯಿಸಿದಾಗ ಪಿಎಫ್ ಮೊತ್ತವನ್ನು ವರ್ಗಾಯಿಸಲು ನೀವು ವಿನಂತಿಸುವ ಅಗತ್ಯವಿಲ್ಲ.

ಎಸ್‌ಬಿಐ ಕ್ರೆಡಿಟ್ ಕಾರ್ಡ್ (SBI Credit Card)

ನೀವು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ಈ ಅಂಶವನ್ನು ಗಮನಿಸಲೇಬೇಕು. ಏಪ್ರಿಲ್ 1ರಿಂದ ಎಸ್‌ಬಿಐ ತನ್ನ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ತರುತ್ತಿದೆ. ಏಪ್ರಿಲ್ 1ರಿಂದ ನೀವು ಬಾಡಿಗೆ ಪಾವತಿ ಮಾಡಿದರೆ ನಿಮಗೆ ಯಾವುದೇ ರಿವಾರ್ಡ್ ಪಾಯಿಂಟ್‌ ಲಭಿಸುವುದಿಲ್ಲ. ಕೆಲವು ಕ್ರೆಡಿಟ್ ಕಾರ್ಡ್‌ಗಳಿಗೆ ಈ ನಿಯಮ ಏಪ್ರಿಲ್ 15ರಿಂದ ಅನ್ವಯವಾಗುತ್ತದೆ.

ಎಸ್‌ಬಿಐ ಅಮೃತ್‌ ಕಲಶ್‌ ವಿಶೇಷ ಎಫ್‌ಡಿ (SBI Amrit Kalash Deposit)

ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್‌ ಎಸ್‌ಬಿಐಯ ವಿಶೇಷ ಯೋಜನೆ ಅಮೃತ್‌ ಕಲಶ್‌ ಎಫ್‌ಡಿ ಡೆಪಾಸಿಟ್‌ ಸ್ಕೀಮ್‌ನ ಅವಧಿ ಮಾರ್ಚ್‌ 31ಕ್ಕೆ ಮುಕ್ತಾಯವಾಗಲಿದೆ. 400 ದಿನಗಳ ಈ ಯೋಜನೆಯಲ್ಲಿ ಬಡ್ಡಿಯನ್ನು ಮಾಸಿಕ, ತ್ರೈಮಾಸಿಕ ಅಥವಾ ಅರ್ಧ ವಾರ್ಷಿಕ ಅವಧಿಗೆ ನೀಡುವ ವ್ಯವಸ್ಥೆ ಇದೆ.‌ ದೇಶೀಯ ಹಾಗೂ ಅನಿವಾಸಿ ಭಾರತೀಯರು ಈ ಯೋಜನೆಯಲ್ಲಿ ಠೇವಣಿ ಇಡಬಹುದು. ರೆಗ್ಯುಲರ್‌ ಗ್ರಾಹಕರಿಗೆ 7.1% ಮತ್ತು ಹಿರಿಯ ಗ್ರಾಹಕರಿಗೆ 7.6% ಬಡ್ಡಿ ಸಿಗುತ್ತದೆ.

ತೆರಿಗೆ ವ್ಯವಸ್ಥೆ (Income Tax)

2023-24ರ ಹಣಕಾಸು ವರ್ಷದಿಂದ ಸರ್ಕಾರ ಹಳೆಯ ತೆರಿಗೆ ಪದ್ಧತಿ ಜತೆಗೆ ಹೊಸ ಆದಾಯ ತೆರಿಗೆ ಪದ್ಧತಿಯನ್ನೂ ಸೇರಿಸಿದೆ. ಹೊಸ ಟ್ಯಾಕ್ಸ್ ರೆಜಿಮೆ ಡೀಫಾಲ್ಟ್ ಆಗಿರಲಿದೆ. ನೀವು ಈಗಾಗಲೇ ಓಲ್ಡ್ ಟ್ಯಾಕ್ಸ್ ರೆಜಿಮೆಯಲ್ಲಿಯೇ ಇದ್ದರೆ ಹೊಸ ಹಣಕಾಸು ವರ್ಷಕ್ಕೂ ಅದರಲ್ಲೇ ಮುಂದುವರಿಸಬಹುದು. ಒಂದು ವೇಳೆ ನೀವು ಓಲ್ಡ್ ಟ್ಯಾಕ್ಸ್ ರೆಜಿಮೆ ಆಯ್ಕೆ ಮಾಡಿಕೊಳ್ಳದೇ ಇದ್ದಲ್ಲಿ ಹೊಸ ತೆರಿಗೆ ಪದ್ಧತಿಯೇ ಡೀಫಾಲ್ಟ್ ಆಗಿರುತ್ತದೆ. ಒಮ್ಮೆ ನೀವು ಹೊಸ ತೆರಿಗೆ ಪದ್ಧತಿಯಲ್ಲಿ ರಿಟರ್ನ್ ಫೈಲ್ ಮಾಡಿದರೆ ಅದರಲ್ಲೇ ಮುಂದುವರಿಯಬೇಕು.

ಇದನ್ನೂ ಓದಿ: Money Guide: ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಲು ಎಷ್ಟು ಬಗೆಯ ಫಾರ್ಮ್‌ಗಳಿವೆ? ನಿಮಗೆ ಯಾವುದು ಸೂಕ್ತ? ಚೆಕ್‌ ಮಾಡಿ

Exit mobile version