ಬೆಂಗಳೂರು: ಯಾವುದೇ ಉದ್ಯೋಗವಿರಲಿ ಪ್ರಸ್ತುತ ಹೆಲ್ತ್ ಇನ್ಶೂರೆನ್ಸ್ (Health Insurance) ಅತ್ಯಗತ್ಯ. ಯಾವಾಗ, ಯಾವ ರೀತಿಯ ತುರ್ತು ಪರಿಸ್ಥಿತಿ ಎದುರಾಗುತ್ತದೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಹೆಲ್ತ್ ಇನ್ಶೂರೆನ್ಸ್ ಹೊಂದುವುದು ಅನಿವಾರ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ತಜ್ಞರು. ಆದರೆ ಕೆಲವೊಮ್ಮೆ ಹೆಲ್ತ್ ಇನ್ಶೂರೆನ್ಸ್ ಕೊಳ್ಳುವಾಗ ಕೆಲವೊಂದು ತಪ್ಪು ಹೆಜ್ಜೆ ಇಡುತ್ತೇವೆ. ಇದರಿಂದ ಭವಿಷ್ಯದಲ್ಲಿ ಗೊಂದಲ, ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆ ಅಗತ್ಯ. ಸಾಮಾನ್ಯವಾಗಿ ಯಾವೆಲ್ಲ ರೀತಿಯಲ್ಲಿ ತಪ್ಪುಗಳಾಗುತ್ತವೆ, ಅವನ್ನು ಹೇಗೆ ನಿವಾರಿಸಬಹುದು ಎನ್ನುವುದರ ಮಾಹಿತಿ ಇಂದಿನ ಮನಿಗೈಡ್‌ನಲ್ಲಿ (Money Guide).
ಮಾಹಿತಿ ಕೊರತೆ
ಯಾವುದೇ ಕೆಲಸ ಮಾಡುವ ಮುನ್ನ, ನಿರ್ಧಾರ ತೆಗೆದುಕೊಳ್ಳುವ ಮೊದಲು ಅದರ ಬಗ್ಗೆ ಸರಿಯಾದ ಮಾಹಿತಿ ಕಲೆ ಹಾಕಬೇಕು. ಹೆಲ್ತ್ ಇನ್ಶೂರೆನ್ಸ್ ಕೊಳ್ಳುವ ವಿಚಾರದಲ್ಲೂ ಇದು ಬಹು ಮುಖ್ಯ. ನೀವು ಪಾಲಿಸಿಯನ್ನು ಖರೀದಿಸುವ ಮೊದಲು ಸಂಪೂರ್ಣ ಮಾಹಿತಿ ಕಲೆ ಹಾಕಿ ವಿವಿಧ ಯೋಜನೆಗಳೊಂದಿಗೆ ಹೋಲಿಸುವುದು ಮುಖ್ಯ. ನಿಮ್ಮ ಅಗತ್ಯಗಳಿಗೆ ಬೇಕಾದ ಪಾಲಿಸಿ ಕಂಡುಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ. ನೀವು ಆನ್‌ಲೈನ್ ಮೂಲಕ ಹೋಲಿಸಬಹುದು ಅಥವಾ ವಿಮಾ ಏಜೆಂಟರೊಂದಿಗೆ ಸಮಾಲೋಚನೆ ನಡೆಸಬಹುದು.
ದರ ನೋಡಿ ಖರೀದಿ
ಕೆಲವರು ಕಡಿಮೆ ಬೆಲೆಯ ಪಾಲಿಸಿ ಖರೀದಿಸುತ್ತಾರೆ. ಬೆಲೆ ಮಾತ್ರ ನೋಡಿ ಖರೀದಿಸುವುದು ಮುಂದೊಂದು ದಿನ ಸಮಸ್ಯೆ ತಂದೊಡ್ಡಲಿದೆ. ಬೆಲೆಯೊಂದೇ ಪರಿಗಣಿಸಬೇಕಾದ ಏಕೈಕ ಅಂಶವಲ್ಲ. ಪಾಲಿಸಿಯು ನಿಮ್ಮ ಎಲ್ಲ ಅಗತ್ಯಗಳನ್ನು ಪೂರೈಸುತ್ತದೆ ಮತ್ತು ನಿಮ್ಮ ಏಜೆಂಟ್ ಸೂಕ್ತವಾಗಿ ಸ್ಪಂದಿಸುತ್ತಾರೆ, ಸರಿಯಾಗಿ ಕ್ಲೈಮ್ ಇತ್ಯರ್ಥಪಡಿಸುತ್ತಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
ಸಾಕಷ್ಟು ಕವರೇಜ್ ಇಲ್ಲದ ಪಾಲಿಸಿ ಖರೀದಿ
ಮಾಹಿತಿ ಕೊರತೆಯಿಂದ ಇದು ಸಂಭವಿಸುತ್ತದೆ. ಆರೋಗ್ಯ ವಿಮಾ ಪಾಲಿಸಿ ನಿಮ್ಮ ಎಲ್ಲ ಅಗತ್ಯಗಳನ್ನು ಒಳಗೊಂಡಿದೆ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯ. ಅಂದರೆ ನೀವು ಖರೀದಿಸಲು ಉದ್ದೇಶಿಸಿರುವ ಪಾಲಿಸಿ ಆಸ್ಪತ್ರೆ ವೆಚ್ಚಗಳು, ಹೊರರೋಗಿ ವೆಚ್ಚಗಳು ಮತ್ತು ರೋಗನಿರ್ಣಯ ಪರೀಕ್ಷೆಗಳಂತಹ ವಿಷಯಗಳನ್ನು ಒಳಗೊಂಡಿದೆಯೇ ಎನ್ನುವುದನ್ನು ಪರಿಶೀಲಿಸಿ. ನೀವು ಯಾವುದೇ ನಿರ್ದಿಷ್ಟ ವೈದ್ಯಕೀಯ ಅಗತ್ಯಗಳನ್ನು ಹೊಂದಿದ್ದರೆ ಅವುಗಳನ್ನು ಒಳಗೊಂಡಿರುವ ಪಾಲಿಸಿಯನ್ನು ಆಯ್ಕೆ ಮಾಡಿ.
ಅನಾರೋಗ್ಯದ ಮಾಹಿತಿ ಹಂಚಿಕೊಳ್ಳದೇ ಇರುವುದು
ಆರೋಗ್ಯ ವಿಮೆಗೆ ಅರ್ಜಿ ಸಲ್ಲಿಸುವಾಗ ನಿಮ್ಮ ಸಂಪೂರ್ಣ ವೈದ್ಯಕೀಯ ಇತಿಹಾಸವನ್ನು ಬಹಿರಂಗಪಡಿಸುವುದು ಮುಖ್ಯ. ವೈದ್ಯಕೀಯ ಇತಿಹಾಸವನ್ನು ಬಹಿರಂಗಪಡಿಸದಿದ್ದರೆ ನಂತರ ನಿಮ್ಮ ಹಕ್ಕು ಸಿಗದಿರುವ ಅಪಾಯವಿದೆ.
ಸರಿಯಾಗಿ ಓದದೇ ಸಹಿ ಮಾಡುವುದು
ಯಾವುದೇ ಪಾಲಿಸಿಗೆ ಸಹಿ ಹಾಕುವ ಮುನ್ನ ಷರತ್ತ ಮತ್ತು ನಿಬಂಧನೆಗಳನ್ನು ಸರಿಯಾಗಿ ಓದಬೇಕು. ಪ್ರತಿ ಆರೋಗ್ಯ ವಿಮಾ ಪಾಲಿಸಿಯು ಎಲ್ಲ ವ್ಯಾಪ್ತಿಯನ್ನು ಒಳಗೊಳ್ಳುವುದಿಲ್ಲ. ಪಾಲಿಸಿಯನ್ನು ಖರೀದಿಸುವ ಮೊದಲು ವಿನಾಯಿತಿಗಳನ್ನು ಅರ್ಥಮಾಡಿಕೊಳ್ಳಲು ಪಾಲಿಸಿ ಡಾಕ್ಯುಮೆಂಟ್ ಅನ್ನು ಎಚ್ಚರಿಕೆಯಿಂದ ಓದಿ.
ಪಾಲಿಸಿಯನ್ನು ಸಮಯಕ್ಕೆ ಸರಿಯಾಗಿ ನವೀಕರಿಸದಿರುವುದು
ಇನ್ಶೂರೆನ್ಸ್ ಪಾಲಿಸಿಯನ್ನು ಸಮಯಕ್ಕೆ ಸರಿಯಾಗಿ ನವೀಕರಿಸುವುದು ಮುಖ್ಯ. ಒಂದು ವೇಳೆ ನವೀಕರಣದ ಸಮಯ ಮುಗಿದರೆ ಮತ್ತೆ ಆರಂಭಿಸಲು ನಿರ್ಧಿಷ್ಟ ಅವಧಿಯವರೆಗೆ ಕಾಯಬೇಕಾಗಬಹುದು.
ಹೆಲ್ಸ್ ಇನ್ಶೂರೆನ್ಸ್ ಖರೀದಿಸುವಾಗ ಪಾಲಿಸಬೇಕಾದ ಅಂಶಗಳು
ನಿಮ್ಮ ಅಗತ್ಯದ ಬಗ್ಗೆ ತಿಳಿಯಿರಿ
ಹೆಲ್ಸ್ ಇನ್ಶೂರೆನ್ಸ್ ಮುಖ್ಯವಾಗಿ ನಿಮಗೆ ಯಾಕೆ ಬೇಕು ಎನ್ನುವುದರ ಬಗ್ಗೆ ಸ್ಪಷ್ಟ ನಿಲುವು ಹೊಂದಿರುವುದು ಮುಖ್ಯ. ನಿರ್ಧಿಷ್ಟವಾಗಿ ಇಂತಹದ್ದೇ ಆರೋಗ್ಯ ಸಮಸ್ಯೆಗೆ ಪಾಲಿಸಿ ಹೊಂದಲು ಯೋಜಿಸಿದ್ದೀರಾ? ಅಥವಾ ನಿಮ್ಮ ಕುಟುಂಬಕ್ಕೆ ಪಾಲಿಸಿ ಅಗತ್ಯವಿದೆಯೇ? ಎನ್ನುವುದನ್ನು ನೋಡಿಕೊಂಡು ಪಾಲಿಸಿ ಬಗ್ಗೆ ನಿರ್ಧರಿಸಿ.
ಹೋಲಿಕೆ ಮಾಡಿ
ನೀವು ಗಮನಿಸಿದ ಮೊದಲ ಪಾಲಿಸಿಯನ್ನೇ ಖರೀದಿಸಬೇಡಿ. ಮೊದಲೇ ಹೇಳಿದಂತೆ ಸಾಕಷ್ಟು ಸಮಯ ತೆಗೆದುಕೊಂಡು ವಿವಿಧ ಕಂಪೆನಿಗಳ ಪಾಲಿಸಿ ಜತೆಗೆ ಹೋಲಿಕೆ ಮಾಡಿ. ಕಡಿಮೆ ಬೆಲೆಗೆ, ಹೆಚ್ಚು ಕವರೇಜ್ ಇರುವ ಪಾಲಿಸಿಯನ್ನು ಖರೀದಿಸಿ.
ಸಂದೇಹಗಳನ್ನು ನಿವಾರಿಸಿಕೊಳ್ಳಿ
ನಾವು ಮಾಡುವ ಪಾಲಿಸಿ ಕಷ್ಟ ಕಾಲದಲ್ಲಿ ನಮ್ಮ ಕೈ ಹಿಡಿಯುವಂತಿರಬೇಕು. ಹೀಗಾಗಿ ಯಾವುದೇ ಅನುಮಾನ ಬಂದರೆ ಏಜೆಂಟ್ ಜತೆ ಕೇಳಿ ಪರಿಹರಿಸಿಕೊಳ್ಳಿ. ಹಣ ಕಟ್ಟಿ ಮುಂದೆ ಪ್ರಯೋಜನಕ್ಕೆ ಬಂದಿಲ್ಲ ಎಂದರೆ ಕಷ್ಟ. ಹೀಗಾಗಿ ಯಾವುದೇ ಸಂಕೋಚ ಇಲ್ಲದೆ ಪ್ರಶ್ನೆಗಳನ್ನು ಕೇಳಿ. ಏಜೆಂಟ್‌ಗಳಿರುವುದು ನಮ್ಮ ಸಹಾಯಕ್ಕೆ ಎನ್ನುವುದನ್ನು ಮರೆಯದಿರಿ. ಅಗತ್ಯಗಳಿಗೆ ಅನುಗುಣವಾದ ಪಾಲಿಸಿ ಕೇಳಿ ಪಡೆದುಕೊಳ್ಳಿ.
ಇದನ್ನೂ ಓದಿ: Money Guide: ಕೇವಲ 299 ರೂ.ಗೆ 10 ಲಕ್ಷ ರೂ. ಇನ್ಶೂರೆನ್ಸ್; ಯಾವುದು ಈ ಪಾಲಿಸಿ? ಇಲ್ಲಿದೆ ಮಾಹಿತಿ