ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಜನ ಧನ್ ಯೋಜನೆ (PMJDY) ದೇಶದಲ್ಲಿರುವ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಗುರಿ ಹೊಂದಿದೆ. 2014ರಲ್ಲಿ ಆರಂಭಿಸಲಾದ ಈ ಯೋಜನೆ ಮೂಲಕ ಇದುವರೆಗೆ ಸುಮಾರು 50 ಕೋಟಿ ಖಾತೆಗಳನ್ನು ತೆರೆಯಲಾಗಿದೆ. ಈ ಯೋಜನೆಯಿಂದ ಏನೇನು ಲಾಭಗಳಿಗೆ? ಯಾರೆಲ್ಲ ಖಾತೆ ತೆರೆಯಬಹುದು? ಮುಂತಾದ ಪ್ರಶ್ನೆಗಳಿಗೆ ಮನಿಗೈಡ್ (Money Guide) ಉತ್ತರಿಸಲಿದೆ.
9ನೇ ವರ್ಷಾಚರಣೆ
2014ರ ಆಗಸ್ಟ್ 28ರಂದು ಈ ಯೋಜನೆಗೆ ಚಾಲನೆ ನೀಡಲಾಗಿದ್ದು, ಇತ್ತೀಚೆಗೆ 9ನೇ ವಾರ್ಷಿಕೋತ್ಸವವನ್ನು ಆಚರಿಸಲಾಗಿದೆ. ಭಾರತದಲ್ಲಿರುವ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ಪಿಎಂಜೆಡಿವೈ ಒಂದು ಉತ್ತಮ ಪ್ರಯತ್ನ ಎಂದು ಬಣ್ಣಿಸಲಾಗುತ್ತಿದೆ. ಬ್ಯಾಂಕ್ ಖಾತೆ ಇಲ್ಲದವರನ್ನು ಗುರಿಯಾಗಿಸಿಕೊಂಡು ಈ ಯೋಜನೆ ಕಾರ್ಯ ನಿರ್ವಹಿಸುತ್ತಿದೆ. ಪಿಎಂಜೆಡಿವೈ ದೇಶದ ಮೇಲೆ ಗಣನೀಯ ಪ್ರಭಾವ ಬೀರಿದ್ದು, ಈ ವರ್ಷದ ಆಗಸ್ಟ್ 28ರ ವೇಳೆಗೆ ಇದರಲ್ಲಿ ಒಟ್ಟು 2.03 ಲಕ್ಷ ಕೋಟಿ ರೂ. ಠೇವಣಿ ಸಂಗ್ರಹವಾಗಿದೆ ಎಂದು ಮೂಲಗಳು ತಿಳಿಸಿವೆ.
ಯಾರೆಲ್ಲ ಅರ್ಹರು?
ಮುಕ್ತ ದಾಖಲಾತಿಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಪಿಎಂಜೆಡಿವೈ ಯೋಜನೆಯ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ಯಾವುದೇ ಭಾರತೀಯ ನಾಗರಿಕರು ವಯಸ್ಸಿನ ಬೇಧವಿಲ್ಲದೆ ಈ ಸರ್ಕಾರಿ ಯೋಜನೆಯಡಿ ಬ್ಯಾಂಕ್ ಖಾತೆಯನ್ನು ತೆರೆಯುವ ಹಕ್ಕು ಹೊಂದಿದ್ದಾರೆ. ಮುಖ್ಯವಾಗಿ ಸಮಾಜದಲ್ಲಿ ಆರ್ಥಿಕವಾಗಿ ಹೊರಗುಳಿದ ಕ್ಷೇತ್ರ, ಗ್ರಾಮೀಣ ಪ್ರದೇಶಗಳನ್ನು ಈ ಯೋಜನೆ ಗುರಿಯಾಗಿಸಿಕೊಂಡಿದೆ.
ಶೂನ್ಯ ಬ್ಯಾಲೆನ್ಸ್ ಖಾತೆ
ಪಿಎಂಜೆಡಿವೈ ಅಡಿಯಲ್ಲಿನ ಬ್ಯಾಂಕ್ ಖಾತೆಗಳು ಕನಿಷ್ಠ ಬ್ಯಾಲೆನ್ಸ್ ವಿಚಾರದಲ್ಲಿ ಸಾಂಪ್ರದಾಯಿಕ ಬ್ಯಾಂಕಿಂಗ್ ವ್ಯವಸ್ಥೆಗಳಿಗಿಂತ ಭಿನ್ನವಾಗಿ ಕಾರ್ಯನಿರ್ವಹಿಸುತ್ತವೆ. ಸಾಂಪ್ರದಾಯಿಕ ಬ್ಯಾಂಕ್ ಖಾತೆಗಳಲ್ಲಿ ಆರಂಭಿಕ ಠೇವಣಿಯಾಗಿ ದೊಡ್ಡ ಮೊತ್ತ ಹೂಡಿಕೆ ಮಾಡಬೇಕಾಗುತ್ತದೆ. ಅಲ್ಲದೆ ಕನಿಷ್ಠ ಮಾಸಿಕ ಬ್ಯಾಲೆನ್ಸ್ ಕಾಯ್ದುಕೊಳ್ಳುವುದು ಅಗತ್ಯ. ಪಿಎಂಜೆಡಿವೈ ಫಲಾನುಭವಿಗಳು ಶೂನ್ಯ ಬ್ಯಾಲೆನ್ಸ್ ಖಾತೆಯನ್ನು ತೆರೆಯಬಹುದು. ಬ್ಯಾಂಕ್ ಸೇವೆ ಪಡೆಯಲಾಗದ ಬಡ ಜನರಿಗೆ ಇದು ತುಂಬಾ ಅನುಕೂಲವಾಗುತ್ತದೆ.
ಪಿಎಂಜೆಡಿವೈಯ ಅನುಕೂಲಗಳೇನು?
ಪಿಎಂಜೆಡಿವೈ ಯೋಜನೆಯು ಬ್ಯಾಂಕಿಂಗ್ ಸೌಲಭ್ಯವಿಲ್ಲದ ವಲಯಗಳು ಮತ್ತು ಕಡಿಮೆ ಆದಾಯದ ಗುಂಪುಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಯೋಜನೆಯಡಿ ಖಾತೆ ತೆರೆದರೆ ಲಭಿಸುವ ಅನುಕೂಲಗಳು ಯಾವೆಲ್ಲ ಎನ್ನುವುದರ ಮಾಹಿತಿ ಇಲ್ಲಿದೆ.
ಆರ್ಥಿಕವಾಗಿ ಹಿಂದುಳಿದವರ ಸೇರ್ಪಡೆ
ಇದು ಆರ್ಥಿಕವಾಗಿ ತೀರಾ ಹಿಂದುಳಿದ ವರ್ಗಗಳಿಗೆ ಬ್ಯಾಂಕ್ ಖಾತೆ ತೆರೆಯುವ ಅವಕಾಶ ನೀಡಿ, ಸರ್ಕಾರದ ಸಬ್ಸಿಡಿಗಳು ಮತ್ತು ಪ್ರಯೋಜನಗಳನ್ನು ಸುಲಭವಾಗಿ ಪಡೆಯಲು ನೆರವಾಗುತ್ತದೆ. ಜತೆಗೆ ಅವರ ಉಳಿತಾಯಕ್ಕೂ ದಾರಿ ಮಾಡಿಕೊಡುತ್ತದೆ.
ವಿಮಾ ರಕ್ಷಣೆ
ಪಿಎಂಜೆಡಿವೈ ಖಾತೆಗಳು ದುರ್ಬಲ ವರ್ಗಗಳಿಗೆ ವಿಮೆಯ ಮೂಲಕ ರಕ್ಷಣೆ ಒದಗಿಸುತ್ತವೆ. ಅಪಘಾತಗಳಂತಹ ತುರ್ತು ಪರಿಸ್ಥಿತಿಗಳಿಗೆ ಆರ್ಥಿಕ ನೆರವು ಒದಗಿಸುತ್ತವೆ.
ಓವರ್ ಡ್ರಾಫ್ಟ್ ಸೌಲಭ್ಯ
ಸಾಂಪ್ರದಾಯಿಕ ಬ್ಯಾಂಕಿಂಗ್ ಸಾಮಾನ್ಯವಾಗಿ ಓವರ್ ಡ್ರಾಫ್ಟ್ ಸೌಲಭ್ಯ ನೀಡುತ್ತದೆ. ಆದರೆ ಎಲ್ಲರೂ ಅದನ್ನು ಪಡೆಯಲು ಸಾಧ್ಯವಿಲ್ಲ. ಹೀಗಿದ್ದೂ ಪಿಎಂಜೆಡಿವೈ ಕಡಿಮೆ ಆದಾಯದ ಗುಂಪುಗಳಿಗೆ ತುರ್ತು ಸಂದರ್ಭಗಳಲ್ಲಿ ಓವರ್ ಡ್ರಾಫ್ಟ್ ಸೌಲಭ್ಯಗಳನ್ನು ಪಡೆಯುವ ಅವಕಾಶವನ್ನು ಒದಗಿಸುತ್ತದೆ.
ಇದನ್ನೂ ಓದಿ: Money Guide: ಹಬ್ಬಕ್ಕೆ ಚಿನ್ನ ಖರೀದಿಸುತ್ತಿದ್ದೀರಾ? ಈ ಸಂಗತಿಗಳು ಗೊತ್ತಿರಲಿ