ಬೆಂಗಳೂರು: ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಆದಾಯ ಹೊಂದಿರುವವರು ಭಾರತದಲ್ಲಿ ತೆರಿಗೆ ಪಾವತಿಸಬೇಕಾದುದು ಕಡ್ಡಾಯ. ಅದಾಗ್ಯೂ ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ತೆರಿಗೆ ಉಳಿತಾಯ ಮಾಡಲು ಕೂಡ ಕೆಲವು ಮಾರ್ಗಗಳಿವೆ. ಅವುಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (PPF)ಯಲ್ಲಿ ಹೂಡಿಕೆ ಮಾಡುವುದು ಪ್ರಮುಖವಾದುದು. ಒಂದು ವೇಳೆ ನೀವು ಪಿಪಿಎಫ್‌ನಲ್ಲಿ ಹೂಡಿಕೆ ಮಾಡುವ ಬಗ್ಗೆ ಯೋಜನೆ ರೂಪಿಸಿದ್ದರೆ ಕೂಡಲೇ ಕಾರ್ಯ ಪ್ರವೃತ್ತರಾಗಿ. ಯಾಕೆಂದರೆ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಲು ಈ ಹಣಕಾಸು ವರ್ಷದಲ್ಲಿ ಇನ್ನು ಬೆರಳೆಣಿಕೆಯಷ್ಟೇ ದಿನಗಳು ಬಾಕಿ ಉಳಿದಿವೆ. ಅಂದರೆ ಮಾರ್ಚ್ 31ರ ಒಳಗೆ ನೀವು ಪಿಪಿಎಫ್‌ನಲ್ಲಿ ಹೂಡಿಕೆ ಮಾಡಬೇಕು. ಈ ಬಗ್ಗೆ ವಿವರ ಇಂದಿನ ಮನಿಗೈಡ್ (Money Guide)ನಲ್ಲಿದೆ.
ಸರ್ಕಾರಿ ಬೆಂಬಲಿತ ಪ್ಲಾನ್
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಯೋಜನೆಯು ಕೇಂದ್ರ ಸರ್ಕಾರ ಬೆಂಬಲಿತ ಪ್ಲಾನ್ ಆಗಿದ್ದು, ಸಣ್ಣ ಹೂಡಿಕೆದಾರರು ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಸರ್ಕಾರಿ ಬೆಂಬಲಿತ ಪ್ಲಾನ್ ಆದ ಕಾರಣ ಇಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿ ಅಲ್ಲ. ಪಿಪಿಎಫ್ ಖಾತೆ ತೆರೆಯುವವರಿಗೆ ವಾರ್ಷಿಕ ಶೇ. 7.1ರಷ್ಟು ಬಡ್ಡಿ ದೊರೆಯಲಿದೆ. ಅಲ್ಲದೆ ಈ ಹೂಡಿಕೆಯ ಮೂಲಕ ಸಾಲವನ್ನೂ ಪಡೆಯಬಹುದು. ಆದರೆ ಈ ಯೋಜನೆಯು 15 ವರ್ಷ ಇರಲಿದೆ. ಮಗಳ ಮದುವೆ, ಮಕ್ಕಳ ಶಿಕ್ಷಣ ಸೇರಿ ಹಲವು ಮುಂದಾಲೋಚನೆ ಇರುವವರು 15 ವರ್ಷದ ಹೂಡಿಕೆ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು.
ತೆರಿಗೆ ವಿನಾಯಿತಿ
ಸೆಕ್ಷನ್ 80 ಸಿ ಅಡಿಯಲ್ಲಿ 1.5 ಲಕ್ಷ ರೂ. ತನಕ ತೆರಿಗೆ ವಿನಾಯಿತಿ ಸಿಗಲಿದೆ. ಅಂದರೆ ಯೋಜನೆಯಲ್ಲಿ ಮಾಡಿದ ಸಂಪೂರ್ಣ ಹೂಡಿಕೆಯ ಮೇಲೆ ತೆರಿಗೆ ವಿನಾಯಿತಿಯ ಪ್ರಯೋಜನವನ್ನು ನೀವು ಪಡೆಯುತ್ತೀರಿ. ಇದಲ್ಲದೆ, ಹೂಡಿಕೆಯಿಂದ ಪಡೆದ ಬಡ್ಡಿಗೂ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ಅಲ್ಲದೆ ಯೋಜನೆ ಮುಕ್ತಾಯವಾದ ಬಳಿಕ ಪಡೆದಯುವ ಮೊತ್ತವೂ ತೆರಿಗೆಮುಕ್ತವಾಗಿರುತ್ತದೆ.
ಸಾಲ ಪಡೆಯಲಿರುವ ಅರ್ಹತೆ
ಪಬ್ಲಿಕ್ ಪ್ರಾವಿಡೆಂಟ್ ಫಂಡ್‌ನಲ್ಲಿ ನೀವು ಮಾಡುವ ಇನ್ವೆಸ್ಟ್‌ಮೆಂಟ್ ಮೇಲೆ ಸಾಲ ಪಡೆಯಬಹುದು. ಖಾತೆ ತೆರೆದ 3-6ನೇ ವರ್ಷದಲ್ಲಿ ಸಾಲ ಪಡೆಯಲು ನೀವು ಅರ್ಹರಾಗಿರುತ್ತೀರಿ. ಇಂಥ ಸಾಲದ ಗರಿಷ್ಠ ಅವಧಿ 36 ತಿಂಗಳು. ಅಕೌಂಟ್‌ನಲ್ಲಿರುವ ಮೊತ್ತದ 25% ಅಥವಾ ಕಡಿಮೆ ಮೊತ್ತವನ್ನು ಮಾತ್ರ ಸಾಲಕ್ಕಾಗಿ ಕ್ಲೇಮ್ ಮಾಡಿಕೊಳ್ಳಬಹುದು.
ಯಾರೆಲ್ಲ ತೆರೆಯಬಹುದು?
ಭಾರತೀಯ ನಾಗರಿಕರು ಪಿಪಿಎಫ್ ಖಾತೆಯನ್ನು ತೆರೆಯಬಹುದು. ಅಪ್ರಾಪ್ತ ವಯಸ್ಕರ ಹೆಸರಿನಲ್ಲಿಯೂ ಖಾತೆ ತೆರೆಯುವ ಸೌಕರ್ಯವಿದೆ. ಅನಿವಾಸಿ ಭಾರತೀಯರು ಹೊಸ ಪಿಪಿಎಫ್ ಅಕೌಂಟ್ ತೆರೆಯುವಂತಿಲ್ಲ. ಹೀಗಿದ್ದರೂ ಈಗಾಗಲೇ ಇದ್ದರೆ ಅದು ಪೂರ್ಣವಾಗುವ ತನಕ ಸಕ್ರಿಯವಾಗಿರುತ್ತದೆ. ಆದರೆ 5 ವರ್ಷಗಳ ಹೆಚ್ಚುವರಿ ಅವಧಿ ಇರುವುದಿಲ್ಲ. ಈ ಯೋಜನೆಯಲ್ಲಿ ನೀವು ವರ್ಷಕ್ಕೆ ಕನಿಷ್ಠ 500 ರೂ ಮತ್ತು ಗರಿಷ್ಠ 1.5 ಲಕ್ಷ ರೂ.ಗಳನ್ನು ಹೂಡಿಕೆ ಮಾಡಬಹುದು. ಒಂದು ಹಣಕಾಸು ವರ್ಷದಲ್ಲಿ ನೀವು ಗರಿಷ್ಠ 12 ಕಂತುಗಳಲ್ಲಿ ಹಣವನ್ನು ಠೇವಣಿ ಇಡುವ ಸೌಲಭ್ಯವೂ ಇದೆ. ಆಫ್‌ಲೈನ್ ಹಾಗೂ ಆನ್‌ಲೈನ್ ವಿಧಾನದಲ್ಲಿ ಪಿಪಿಎಫ್ ಖಾತೆಯನ್ನು ತೆರೆಯಬಹುದು.
ಇದನ್ನೂ ಓದಿ: PPF Investment : ಪಿಪಿಎಫ್ ಮೊತ್ತದ ಆಧಾರದಲ್ಲಿ ಸಾಲ ಪಡೆಯುವುದು ಹೇಗೆ?