ಬೆಂಗಳೂರು: ಉತ್ತಮ ಜೀವನಕ್ಕೆ ಆರ್ಥಿಕ ಶಿಸ್ತು ಬಹಳ ಮುಖ್ಯ. ಅನಿರೀಕ್ಷಿತ ಆಘಾತ, ಅನಾರೋಗ್ಯದಂತಹ ಸಂದರ್ಭದಲ್ಲಿ ಪರದಾಡುವುದುನ್ನು ಇದು ತಪ್ಪಿಸುತ್ತದೆ. ಉತ್ತಮ ಉಳಿತಾಯ ಮತ್ತು ಹೂಡಿಕೆಯ ಮೂಲಕ ಆರ್ಥಿಕವಾಗಿ ಸಬಲರಾಗಬಹುದು. ಆದರೆ ಹಲವರು ಕೆಲವೊಂದು ತಪ್ಪು ಹೆಜ್ಜೆ ಇಡುವ ಮೂಲಕ ಆರ್ಥಿಕವಾಗಿ ದುರ್ಬಲರಾಗುತ್ತಾರೆ. ಹಾಗಾದರೆ ಸಾಮಾನ್ಯವಾಗಿ ನಾವು ಮಾಡುವ ತಪ್ಪುಗಳೇನು? ಇದರಿಂದ ಹೊರ ಬರುವ ಮಾರ್ಗ ಯಾವುದು? ಎನ್ನುವ ವಿವರ ಇಂದಿನ ಮನಿಗೈಡ್ (Money Guide)ನಲ್ಲಿದೆ.
ನಿಯಮಿತವಾಗಿ ಉಳಿತಾಯ ಮಾಡಿ
ಆರ್ಥಿಕ ಸಮಸ್ಯೆಗೆ ಬಹು ಮುಖ್ಯ ಕಾರಣ ನಿಯಮಿತವಾಗಿ ಉಳಿತಾಯ ಮಾಡದಿರುವುದು. ಉದ್ಯೋಗಕ್ಕೆ ಸೇರಿದ ಆರಂಭದಿಂದಲೇ ಉಳಿತಾಯ ಮಾಡುವ ಹವ್ಯಾಸ ರೂಢಿಸಿಕೊಳ್ಳಬೇಕು. ನಿಯಮಿತ ಉಳಿತಾಯವು ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತದೆ. ಅಲ್ಲದೆ ಅನಿರೀಕ್ಷಿತ ಸನ್ನಿವೇಶಗಳನ್ನು ಧೈರ್ಯದಿಂದ ಎದುರಿಸಲು ಸಹಾಯ ಮಾಡುತ್ತದೆ. ಪ್ರತಿ ತಿಂಗಳು ಕನಿಷ್ಠ ಪಕ್ಷ ಸಂಬಳದ ಶೇ. 20ರಷ್ಟನ್ನಾದರೂ ಉಳಿತಾಯ ಮಾಡುವತ್ತ ಗಮನ ಹರಿಸಿ. ಉಳಿತಾಯಕ್ಕಾಗಿ ಬೇಕಿದ್ದರೆ ನೀವು ಇನ್ನೊಂದು ಬ್ಯಾಂಕ್ ಅಕೌಂಟ್ ತೆರೆಯಬಹುದು.
ಬಿಲ್‌ಗಳನ್ನು ನಿಯಮಿತವಾಗಿ ಪಾವತಿಸಿ
ಸಮಯಕ್ಕೆ ಸರಿಯಾಗಿ ಬಿಲ್‌ಗಳನ್ನು ಪಾವತಿಸದಿರುವುದು ಕೂಡ ಮುಂದೊಂದು ದಿನ ಸಮಸ್ಯೆಗೆ ಕಾರಣವಾಗಬಲ್ಲದು. ಅದು ಚಿಕ್ಕ ಮೊತ್ತದ ಬಿಲ್ ಆಗಿರಲಿ ಅಥವಾ ದೊಡ್ಡದಾಗಿರಲಿ, ಸೂಕ್ತ ಸಮಯಕ್ಕೆ ಪಾವತಿಸುವುದನ್ನು ರೂಢಿಸಿಕೊಳ್ಳಿ. ಇತ್ತೀಚೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಕ್ರೆಡಿಟ್ ಕಾರ್ಡ್ ಬಳಸುವುದು ಸಾಮಾನ್ಯವಾಗಿದೆ. 40-50 ದಿನಗಳ ಬಡ್ಡಿರಹಿತ ಕ್ರೆಡಿಟ್, ರಿವಾರ್ಡ್ ಮತ್ತು ಕ್ಯಾಶ್ ಬ್ಯಾಕ್‌ನಂತಹ ಪ್ರಯೋಜನಗಳನ್ನು ಇದು ನೀಡುತ್ತದೆ. ಆದಾಗ್ಯೂ ಕ್ರೆಡಿಟ್ ಕಾರ್ಡ್‌ಗಳು ಕೆಲವೊಮ್ಮೆ ದುಬಾರಿಯಾಗುತ್ತವೆ. ಬಿಲ್ ಸರಿಯಾಗಿ ಪಾವತಿಸದಿದ್ದರೆ ಅದರ ಮೇಲಿನ ಬಡ್ಡಿದರಗಳು ತುಂಬಾ ಹೆಚ್ಚಾಗಿರುತ್ತವೆ. ಹೀಗಾಗಿ ಈ ಅಂಶದತ್ತ ಗಮನ ಹರಿಸಿ.
ವಿಮೆ ಮಾಡಿಸಿ
ನಾವು ಅಂದುಕೊಂಡಂತೆಯೇ ಜೀವನ ಸಾಗಬೇಕು ಎಂದಿಲ್ಲ. ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳು ಜೀವನದ ದಿಕ್ಕನ್ನೇ ಬದಲಾಯಿಸಿ ಬಿಡಬಹುದು. ಹೀಗಾಗಿ ಪ್ರತಿಯೊಬ್ಬರೂ ಜೀವ ವಿಮೆ ಮಾಡಿಸುವುದು ಮುಖ್ಯ. ಆರೋಗ್ಯ, ಜನರಲ್ ಇನ್ಶೂರೆನ್ಸ್ ಮುಂತಾದವು ನಿಮ್ಮ ಜೀವನಕ್ಕೆ ರಕ್ಷಣೆ ನೀಡುತ್ತವೆ. ಹಣವನ್ನು ಉಳಿಸುವ ಸಲುವಾಗಿ ವಿಮೆ ಪಡೆಯದಿರಲು ಹಲವರು ನಿರ್ಧರಿಸುತ್ತಾರೆ. ಆದರೆ ಇದು ಸರಿಯಾದ ಕ್ರಮವಲ್ಲ ಎಂದು ತಜ್ಞರು ಎಚ್ಚರಿಸುತ್ತಾರೆ. ಒಟ್ಟಿನಲ್ಲಿ ವಿಮೆ ಆಯ್ಕೆಯಲ್ಲ; ಅದು ಒಂದು ಆವಶ್ಯಕತೆ ಎನ್ನುವುದು ನಿಮ್ಮ ಗಮನದಲ್ಲಿರಲಿ.
ಬಜೆಟ್/ಪ್ಲ್ಯಾನ್ ಮಾಡಿ
ಆರ್ಥಿಕ ಶಿಸ್ತು ಬೆಳೆಸಿಕೊಳ್ಳಲು ಬಜೆಟ್ ಅತೀ ಮುಖ್ಯ. ಬಜೆಟ್ ತಯಾರಿಕೆಯಿಂದ ನೀವು ಸಾಕಷ್ಟು ಹಣವನ್ನು ಉಳಿಸಬಹುದು. ಅದರಲ್ಲೂ ಮುಖ್ಯವಾಗಿ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಬಹುದು. ಆದಾಯದೊಳಗೆ ಬದುಕುವುದು, ನಿವೃತ್ತಿಗಾಗಿ ಉಳಿತಾಯ ಮಾಡುವುದು, ತುರ್ತು ನಿಧಿಯನ್ನು ರಚಿಸುವುದು ಮತ್ತು ನಿಮ್ಮ ಖರ್ಚು ಮಾದರಿಗಳನ್ನು ಟ್ರ್ಯಾಕ್ ಮಾಡುವುದು ಮುಂತಾದ ಇತರ ಹಣಕಾಸಿನ ಉದ್ದೇಶಗಳನ್ನು ತಲುಪಲು ಬಜೆಟ್ ಸಹಾಯ ಮಾಡುತ್ತದೆ. ಕೊಡುಗೆ ಇದೆ ಎನ್ನುವ ಕಾರಣದಿಂದ ಅನಗತ್ಯ ವಸ್ತುಗಳನ್ನು ಖರೀದಿಸಿ ಗುಡ್ಡೆ ಹಾಕುವುದನ್ನು ತಪ್ಪಿಸಿ.
ಇದನ್ನೂ ಓದಿ: Money Guide: ಪಿಎಫ್ ಮೊತ್ತವನ್ನು ಹಿಂಪಡೆಯಬೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ
ನಿವೃತ್ತಿ ಜೀವನದ ಯೋಜನೆ ರೂಪಿಸಿ
ಈಗಿನಿಂದಲೇ ನಿವೃತ್ತಿ ನಂತರದ ಜೀವನಕ್ಕಾಗಿ ತಯಾರಾಗುವುದು ಮುಖ್ಯ. ಯಾವುದೇ ಆದಾಯ ಮಾರ್ಗ ಇಲ್ಲದಾಗ ಒತ್ತಡ ರಹಿತವಾಗಿ ಬದುಕಲು ಮತ್ತು ಅಗತ್ಯಗಳನ್ನು ಪೂರೈಸಲು ಇದು ನೆರವಾಗುತ್ತದೆ. ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ನಿವೃತ್ತಿ ಖಾತೆಗಳಿಗೆ ಜಮೆ ಮಾಡಿ. ಸ್ವಯಂಪ್ರೇರಿತ ನಿವೃತ್ತಿ ನಿಧಿ ಎಂದೂ ಕರೆಯಲ್ಪಡುವ ಸ್ವಯಂಪ್ರೇರಿತ ಭವಿಷ್ಯ ನಿಧಿ (VPF) ಮೂಲಕ ELSS ಅಥವಾ PFನಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಿ. ಒಟ್ಟಿನಲ್ಲಿ ನಿಮ್ಮ ಇಂದಿನ ಸ್ಥಿತಿಗೆ ಅನುಗುಣವಾಗಿ ನಿಮ್ಮ ಆರ್ಥಿಕ ಭವಿಷ್ಯ ಇರುತ್ತದೆ ಎನ್ನುವುದನ್ನು ಮರೆಯಬೇಡಿ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ