ಬೆಂಗಳೂರು: ಯಾವುದೇ ಬ್ಯಾಂಕ್ನಿಂದ ಸಾಲ ಪಡೆಯಲು ಸಿಬಿಲ್ ಸ್ಕೋರ್ (ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ (ಇಂಡಿಯಾ) ಲಿಮಿಟೆಡ್-CIBIL) ಮುಖ್ಯವಾಗುತ್ತದೆ. ಅಂದರೆ ಉತ್ತಮ ಸಿಬಿಲ್ ಸ್ಕೋರ್ ಅನ್ನು ನೀವು ಹೊಂದಿದ್ದರೆ ಸುಲಭವಾಗಿ ಸಾಲ ಪಡೆಯಬಹುದು. ಹೀಗಾಗಿ ಸಿಬಿಲ್ ಸ್ಕೋರ್ ಅನ್ನು 750ಕ್ಕಿಂತ ಹೆಚ್ಚು ಕಾಯ್ದುಕೊಳ್ಳುವುದು ಅನಿವಾರ್ಯ. ಸಿಬಿಲ್ ಸ್ಕೋರ್ ಇಲ್ಲದಿದ್ದರೆ ನಿಮ್ಮ ಸಾಲದ ಅರ್ಜಿ ತಿರಸ್ಕೃತಗೊಳ್ಳುವ ಸಾಧ್ಯತೆಯೂ ಇದೆ. 300ರಿಂದ 900ರ ನಡುವೆ ಇರುವ ಸಿಬಿಲ್ ಸ್ಕೋರ್ ಹೆಚ್ಚಾದಷ್ಟೂ ಒಳ್ಳೆಯದು. ಹಾಗಾದರೆ ಸಿಬಿಲ್ ಸ್ಕೋರ್ ಪರಿಶೀಲಿಸುವುದು ಹೇಗೆ? ಸಿಬಿಲ್ ಸ್ಕೋರ್ ವಿಚಾರದಲ್ಲಿ ಯಾವೆಲ್ಲ ಅಂಶಗಳನ್ನು ಗಮನಿಸಬೇಕು? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ (Money Guide).
ನಿಮ್ಮ ಬಳಿ ಪ್ಯಾನ್ ಕಾರ್ಡ್ ಲಭ್ಯವಿಲ್ಲದಿದ್ದರೆ ಸಿಬಿಲ್ ಸ್ಕೋರ್ ಪಡೆಯುವುದು ಬಹುದೊಡ್ಡ ಸವಾಲು. ಹೀಗಾಗಿ ಸುಲಭವಾಗಿ, ಪ್ಯಾನ್ ಕಾರ್ಡ್ ಇಲ್ಲದೆ ನಿಮ್ಮ ಸಿಬಿಲ್ ಸ್ಕೋರ್ ಅನ್ನು ಹೇಗೆ ಪರಿಶೀಲಿಸಬಹುದು ಎನ್ನುವುದರ ಹಂತ ಹಂತದ ಮಾಹಿತಿ ಇಲ್ಲಿದೆ.
- ಅಧಿಕೃತ ಸಿಬಿಲ್ ವೆಬ್ಸೈಟ್ https://www.cibil.com/ಗೆ ಭೇಟಿ ನೀಡಿ.
- ‘Personal CIBIL Score’ ಆಯ್ಕೆಯನ್ನು ಕ್ಲಿಕ್ ಮಾಡಿ.
- ಬಳಿಕ ‘Get Your Free CIBIL Score’ ಆಪ್ಶನ್ ಆಯ್ಕೆ ಮಾಡಿ ಸೂಚನೆಗಳನ್ನು ಅನುಸರಿಸಿ ಕೇಳಿದ ಮಾಹಿತಿಗಳನ್ನು ಭರ್ತಿ ಮಾಡಿ.
- ಒಂದು ವೇಳೆ ನಿಮ್ಮ ಬಳಿ ಪ್ಯಾನ್ ಕಾರ್ಡ್ ಇಲ್ಲ ಎಂದಾದರೆ ಪರ್ಯಾಯ ಡಾಕ್ಯುಮೆಂಟ್ಗಳಾದ ಪಾಸ್ಪೋರ್ಟ್, ವೋಟರ್ ಐಡಿ, ಡ್ರೈವಿಂಗ್ ಲೈಸನ್ಸ್ ಅಥವಾ ರೇಷನ್ ಕಾರ್ಡ್ ಅನ್ನು ಆಯ್ಕೆ ಮಾಡಬಹುದು. ನೀವು ಆಯ್ಕೆ ಮಾಡಿಕೊಂಡ ಡಾಕ್ಯುಮೆಂಟ್ನ ನಂಬರ್ ಅನ್ನು ಇಲ್ಲಿ ನಮೂದಿಸಿ.
- ಈಗ ನಿಮ್ಮ ಡೇಟ್ ಆಫ್ ಬರ್ತ್, ಪಿನ್ ಕೋಡ್ ಮತ್ತು ರಾಜ್ಯವನ್ನು ನಮೂದಿಸಿ. ಜತೆಗೆ ಮೊಬೈಲ್ ನಂಬರ್ ಎಂಟ್ರಿ ಮಾಡಿ ‘Accept and Continueʼ ಆಯ್ಕೆಯನ್ನು ಕ್ಲಿಕ್ ಮಾಡಿ.
- ಮೊಬೈಲ್ಗೆ ಬಂದ ಒಟಿಪಿಯನ್ನು ನಮೂದಿಸಿ ‘Continueʼ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
- ‘Yes’ ಅಥವಾ ‘No’ ಆಪ್ಶನ್ ಸೆಲೆಕ್ಟ್ ಮಾಡಿ.
- ಈಗ ನಿಮ್ಮ ಹೆಸರು ಯಶಸ್ವಿಯಾಗಿ ನೋಂದಣಿಯಾಗಿರುವ ಸಂದೇಶ ಪರದೆ ಮೇಲೆ ಮೂಡುತ್ತದೆ.
- ಈಗ ‘Go to Dashboard’ ಆಯ್ಕೆಯನ್ನು ಕ್ಲಿಕ್ ಮಾಡಿದರೆ ನಿಮ್ಮ ಸಿಬಿಲ್ ಸ್ಕೋರ್ ಅನ್ನು ವೀಕ್ಷಿಸಬಹುದು.
ಗೂಗಲ್ ಪೇಯಲ್ಲಿ ಹೀಗೆ ಚೆಕ್ ಮಾಡಿ
- ಮೊಬೈಲ್ ಫೋನ್ನಲ್ಲಿ ಗೂಗಲ್ ಪೇ ಅಪ್ಲಿಕೇಷನ್ ಓಪನ್ ಮಾಡಿ.
- Manage your money ಆಯ್ಕೆಯನ್ನು ಕೆಳಗಡೆ ಕಾಣಿಸುವ ʼCheck your CIBIL score for freeʼ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
- ಪ್ಯಾನ್ ಕಾರ್ಡ್ನಲ್ಲಿ ಇರುವಂತೆ ನಿಮ್ಮ ಹೆಸರು ನಮೂದಿಸಿ.
- ನಿಮ್ಮ ಗುರುತನ್ನು ಅಂಗಿಕರಿಸಿದರೆ ಪರದೆ ಮೇಲೆ ಸಿಬಿಲ್ ಸ್ಕೋರ್ ಕಂಡು ಬರುತ್ತದೆ.
ಫೋನ್ ಪೇ, ಪೇಟಿಎಂ ಅಪ್ಲಿಕೇಷನ್ನಲ್ಲಿಯೂ ಇದೇ ರೀತಿ ವೀಕ್ಷಿಸಬಹುದು.
ಸ್ಕೋರ್ ಹೆಚ್ಚಿಸುವುದು ಹೇಗೆ?
- ನಿಮ್ಮ ಸಿಬಿಲ್ ಸ್ಕೋರ್ ಅನ್ನು ಆಗಾಗ ಪರಿಶೀಲಿಸಿ. ಇದರಿಂದ ನೀವು ಯಾವ ಮಟ್ಟದಲ್ಲಿದ್ದೀರಿ ಎಂಬುದು ತಿಳಿಯುತ್ತದೆ.
- ನಿಮ್ಮ ಇಎಂಐಗಳು ಮತ್ತು ಕ್ರೆಡಿಟ್ ಕಾರ್ಡ್ ಬಿಲ್ಗಳನ್ನು ನಿಯಮಿತವಾಗಿ ಪಾವತಿಸಿ; ಯಾವುದೇ ಕಾರಣಕ್ಕೂ ತಪ್ಪಿಸಬೇಡಿ ಮತ್ತು ವಿಳಂಬ ಮಾಡಬೇಡಿ.
- ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೆಚ್ಚು ಬಳಸಬೇಡಿ ಮತ್ತು ನಿಮ್ಮ ಕ್ರೆಡಿಟ್ ಬಳಕೆಯ ಅನುಪಾತವನ್ನು (ಸಿಯುಆರ್ ) 30% ಒಳಗೆ ಇರಿಸಿಕೊಳ್ಳಲು ಪ್ರಯತ್ನಿಸಿ.
- ಕಡಿಮೆ ಅವಧಿಯಲ್ಲಿ ಬೇರೆ ಬೇರೆ ಸಾಲಗಳು ಅಥವಾ ಕ್ರೆಡಿಟ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಬೇಡಿ
- ಅನಿವಾರ್ಯ ಆಗಿರದಿದ್ದರೆ, ನಿಮ್ಮ ಹಳೆಯ ಕ್ರೆಡಿಟ್ ಕಾರ್ಡ್ಗಳನ್ನು ರದ್ದುಗೊಳಿಸಬೇಡಿ
- ಚೆಕ್ ಬೌನ್ಸ್ ಆಗದಂತೆ ನೋಡಿಕೊಳ್ಳಿ
ಪ್ರಯೋಜನಗಳೇನು?
ಹೆಚ್ಚಿನ ಸಿಬಿಲ್ ಸ್ಕೋರ್ ಇದ್ದರೆ ಪಡೆಯಬಹುದಾದ ಪ್ರಯೋಜನಗಳು:
- ಸಾಲಗಳ ಮೇಲಿನ ಕಡಿಮೆ ಬಡ್ಡಿ ದರಗಳು
- ಹೆಚ್ಚಿನ ಸಾಲದ ಮೊತ್ತಗಳು
- ದೀರ್ಘ ಅಥವಾ ಹೆಚ್ಚು ಹೊಂದಿಕೊಳ್ಳುವ ಮರುಪಾವತಿ ಅವಧಿಯಂತಹ ನಿಯಮಗಳು
- ತ್ವರಿತ ಸಾಲ ಮಂಜೂರಾತಿ ಪ್ರಕ್ರಿಯೆ
- ಸಾಲ ನೀಡುವ ಸಂಸ್ಥೆಗಳ ಹೆಚ್ಚಿನ ಆಯ್ಕೆ
ಇದನ್ನೂ ಓದಿ: Money Guide: ಸಿಬಿಲ್ ಸ್ಕೋರ್ ಕಡಿಮೆ ಇದ್ದರೆ ಚಿಂತೆ ಬೇಡ; ಈ ಟಿಪ್ಸ್ ಫಾಲೋ ಮಾಡಿ ಹೆಚ್ಚಿಸಿಕೊಳ್ಳಿ