ಬೆಂಗಳೂರು: ಜೀವನದಲ್ಲಿ ಒಮ್ಮೆಯಾದರೂ ವಿದೇಶ ಪ್ರವಾಸ ಕೈಗೊಳ್ಳಬೇಕು ಎಂದು ಬಹುತೇಕರು ಅಂದುಕೊಳ್ಳುತ್ತಾರೆ. ಅಲ್ಲಿನ ಪ್ರಕೃತಿ, ಆಹಾರ ಪದ್ಧತಿ, ಜನ ಜೀವನ ಹೀಗೆ ಪ್ರತಿಯೊಂದದನ್ನು ಹತ್ತಿರದಿಂದಲೇ ನೋಡಬೇಕು, ನಮ್ಮ ದೇಶಕ್ಕಿಂತ ಅಲ್ಲಿ ಜೀವನ ವಿಧಾನ ಹೇಗೆ ಭಿನ್ನ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಬಯಸುತ್ತಾರೆ. ಆದರೆ ವಿದೇಶ ಪ್ರವಾಸ ಅಂದುಕೊಂಡಷ್ಟು ಸುಲಭವಲ್ಲ. ಪಾಸ್‌ಪೋರ್ಟ್, ವೀಸಾ ಹೊಂದಿಸುವುದರಿಂದ ಹಿಡಿದು ಟಿಕೆಟ್ ಬುಕ್ ಮಾಡುವುದು, ಅಲ್ಲಿನ ಪ್ರವಾಸ ತಾಣಗಳ ಬಗ್ಗೆ ಮಾಹಿತಿ ಕಲೆ ಹಾಕುವುದು, ಉಳಿದುಕೊಳ್ಳುವ ವ್ಯವಸ್ಥೆ, ಶಾಪಿಂಗ್ ಮಾಡುವ ರೀತಿ ಹೀಗೆ ಎಲ್ಲ ವಿಚಾರದ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ. ಸೂಕ್ತ ಪ್ಲ್ಯಾನ್ ಮಾಡಬೇಕಾಗುತ್ತದೆ. ಜತೆಗೆ ಅಲ್ಲಿ ನಿಮ್ಮ ಹಣವನ್ನು ಹೇಗೆ ಖರ್ಚು ಮಾಡುವುದು ಎನ್ನುವ ವಿಚಾರವೂ ಮುಖ್ಯವಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಒದಗಿಸಲು ಬ್ಯಾಂಕ್‌ಗಳು ಕ್ರೆಡಿಟ್ ಕಾರ್ಡ್‌ಗಳಂತೆ ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್ (International Travel Debit Card)ಗಳನ್ನೂ ಪರಿಚಯಿಸಿವೆ. ಅಂತಹ ಕೆಲವು ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್‌ಗಳ ವಿವರ ಇಂದಿನ ಮನಿಗೈಡ್ (Money Guide)ನಲ್ಲಿದೆ.
ಈ ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್‌ಗಳು ಪ್ರಯಾಣ ರಿಯಾಯಿತಿಗಳು, ಲಾಂಜ್ ಪ್ರವೇಶ, ವಿದೇಶಿ ಖರೀದಿಗಳ ಮೇಲೆ ಹೆಚ್ಚಿದ ರಿವಾರ್ಡ್ ಪಾಯಿಂಟ್‌ಗಳು ಮತ್ತಿತರ ಕೊಡುಗೆಗಳನ್ನು ನೀಡುತ್ತವೆ.
ಐಸಿಐಸಿಐ ಮಾಸ್ಟರ್‌ಕಾರ್ಡ್ ವರ್ಲ್ಡ್ ಡೆಬಿಟ್ ಕಾರ್ಡ್
ಈ ಕಾರ್ಡ್ ಪ್ರತಿ ಖರೀದಿಯ ಮೇಲೆ ವಿಶಿಷ್ಟ ರಿಯಾಯಿತಿಗಳು ಮತ್ತು ಪ್ರಯೋಜನಗಳನ್ನು ಒದಗಿಸುತ್ತದೆ. ಕಾರ್ಡ್ ಹೊಂದಿರುವವರು ಆಯ್ದ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಾಂಜ್‌ಗಳಿಗೆ ಪ್ರತಿ ತ್ರೈಮಾಸಿಕದಲ್ಲಿ ಗರಿಷ್ಠ ಎರಡು ಕಾಂಪ್ಲಿಮೆಂಟರಿ ಭೇಟಿಗಳಿಗೆ ಅರ್ಹರಾಗಿರುತ್ತಾರೆ. ಬಳಕೆದಾರರಿಗೆ ಉಚಿತ ವೈಯಕ್ತಿಕ ಅಪಘಾತ ವಿಮೆ ಮತ್ತು ವಿಮಾನ ಅಪಘಾತ ರಕ್ಷಣೆಯನ್ನು ಸಹ ಒದಗಿಸಲಾಗುತ್ತದೆ.
ಎಸ್‌ಬಿಐ ಇಂಟರ್‌ನ್ಯಾಷನಲ್ ಡೆಬಿಟ್ ಕಾರ್ಡ್
ಎಸ್‌ಬಿಐಯ ಗ್ಲೋಬಲ್ ಇಂಟರ್‌ನ್ಯಾಷನಲ್ ಕಾಂಟ್ಯಾಕ್ಟ್‌ಲೆಸ್ ಡೆಬಿಟ್ ಕಾರ್ಡ್ ವಿಶ್ವದ ಯಾವುದೇ ಭಾಗದಿಂದ ಹಣವನ್ನು ಹಿಂಪಡೆಯಲು ನಿಮಗೆ ಅವಕಾಶ ನೀಡುತ್ತದೆ. ಈ ಡೆಬಿಟ್ ಕಾರ್ಡ್ ಅನ್ನು ವಸ್ತುಗಳನ್ನು ಖರೀದಿಸಲು ಮತ್ತು ಎಸ್‌ಬಿಐ ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಲು ಬಳಸಬಹುದು. ಗ್ರಾಹಕರು ಆಹಾರ ಸೇವನೆ, ಶಾಪಿಂಗ್, ಪೆಟ್ರೋಲ್ ಖರೀದಿ, ಆನ್‌ಲೈನ್ ಪಾವತಿಗಳು ಅಥವಾ ಪ್ರಯಾಣದ ಬುಕ್ಕಿಂಗ್‌ಗಾಗಿ ಖರ್ಚು ಮಾಡಿದ ಪ್ರತಿ 200 ರೂ.ಗೆ ಎರಡು ಎಸ್‌ಬಿಐ ರಿವಾರ್ಡ್ ಪಾಯಿಂಟ್ ಪಡೆಯುತ್ತಾರೆ. ಅಲ್ಲದೆ ಜನ್ಮದಿನದಂದು ಖರೀದಿಸಿದರೆ ಬಹುಮಾನಗಳು ದ್ವಿಗುಣಗೊಳ್ಳುತ್ತವೆ. ಈ ಡೆಬಿಟ್ ಅನ್ನು ಭಾರತದಲ್ಲಿ 52 ಲಕ್ಷಕ್ಕೂ ಹೆಚ್ಚು ವ್ಯಾಪಾರಿ ಮಳಿಗೆ ಮತ್ತು ವಿಶ್ವಾದ್ಯಂತ 30 ದಶಲಕ್ಷಕ್ಕೂ ಹೆಚ್ಚು ವ್ಯಾಪಾರಿ ಮಳಿಗೆಗಳಲ್ಲಿ ಬಳಸಬಹುದು.
ಇಂಡಸ್‌ಲ್ಯಾಂಡ್ ವರ್ಲ್ಡ್ ಎಕ್ಸ್‌ಕ್ಯೂಸಿವ್ ಡೆಬಿಟ್ ಕಾರ್ಡ್
ಕಾರ್ಡ್ ಹೊಂದಿರುವವರು ಆಯ್ದ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಾಂಜ್‌ಗಳಿಗೆ ಪ್ರತಿ ತ್ರೈಮಾಸಿಕದಲ್ಲಿ ಗರಿಷ್ಠ ಎರಡು ಕಾಂಪ್ಲಿಮೆಂಟರಿ ಭೇಟಿಗಳಿಗೆ ಅರ್ಹರಾಗಿರುತ್ತಾರೆ. ಜತೆಗೆ ಬುಕ್‌ಮೈ ಶೋ ಅಪ್ಲಿಕೇಷನ್ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಸಿನಿಮಾ ಟಿಕೆಟ್ ಖರೀದಿಗೆ ಕೊಡುಗೆ ನೀಡುತ್ತದೆ. ಈ ಡೆಬಿಟ್ ಕಾರ್ಡ್ ಯಾವುದೇ ಕ್ರಾಸ್-ಕಂಟ್ರಿ ಮಾರ್ಕ್ಅಪ್ ಶುಲ್ಕವನ್ನು ವಿಧಿಸುವುದಿಲ್ಲ.
ಕೆನರಾ ಬ್ಯಾಂಕ್ ಪ್ಲಾಟಿನಂ ಡೆಬಿಟ್ ಕಾರ್ಡ್
ಕಾರ್ಡ್ ಹೊಂದಿರುವವರು ಆಯ್ದ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಾಂಜ್‌ಗಳಿಗೆ ಪ್ರತಿ ತ್ರೈಮಾಸಿಕದಲ್ಲಿ ಗರಿಷ್ಠ ಎರಡು ಕಾಂಪ್ಲಿಮೆಂಟರಿ ಭೇಟಿಗಳಿಗೆ ಅರ್ಹರಾಗಿರುತ್ತಾರೆ. ಇದು 8 ಲಕ್ಷ ರೂ.ಗಳ ವಿಮಾನ ಅಪಘಾತ ವಿಮೆ ಮತ್ತು ಲಗೇಜ್ ವಿಮೆಯನ್ನು ಸಹ ಒದಗಿಸುತ್ತದೆ. ವ್ಯಾಪಾರಿ ಮಳಿಗೆಗಳ ಪಾಯಿಂಟ್-ಆಫ್-ಸೇಲ್ (ಪಿಒಎಸ್) ವಹಿವಾಟಿನ ಮಿತಿ 5 ಲಕ್ಷ ರೂ., ಪ್ರತಿದಿನ 1 ಲಕ್ಷ ರೂ. ವಿತ್‌ಡ್ರಾ ಮಾಡಬಹುದು.
ಇದನ್ನೂ ಓದಿ: Money Guide: ಫೊರೆಕ್ಸ್ ಕಾರ್ಡ್ V/S ಕ್ರೆಡಿಟ್ ಕಾರ್ಡ್: ವಿದೇಶ ಪ್ರವಾಸಕ್ಕೆ ಯಾವುದು ಸೂಕ್ತ?