ಬೆಂಗಳೂರು: ನಿವೃತ್ತಿ ನಂತರ ಪಿಂಚಣಿ ಪಡೆಯಬೇಕು ಎಂದು ಬಯಸುವವರಿಗೆ ಅಟಲ್ ಪೆನ್ಶನ್ ಯೋಜನೆ (Atal Pension Yojana-APY) ಉತ್ತಮ ಆಯ್ಕೆ. ಕೇಂದ್ರ ಸರ್ಕಾರ ಪರಿಚಯಿಸಿರುವ ಈ ಯೋಜನೆ ಬಡವರು ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ನೆರವಾಗಲಿದೆ. ನಿವೃತ್ತಿ ಸಮಯದಲ್ಲಿ ಅಂದರೆ ಫಲಾನುಭವಿಗೆ 60 ವರ್ಷ ಆದ ಮೇಲೆ ಪ್ರತಿ ತಿಂಗಳು 1,000 ರೂ.ಯಿಂದ 5,000 ರೂ.ವರೆಗೆ ಪಿಂಚಣಿ ಪಡೆಯುವ ಯೋಜನೆ ಇದಾಗಿದೆ. ಈ ಅಟಲ್ ಪೆನ್ಶನ್ ಯೋಜನೆ ವಿವರ ಇಂದಿನ ಮನಿಗೈಡ್ (Money Guide)ನಲ್ಲಿದೆ.
ವಿವಿಧ ಮೊತ್ತ
ಎಪಿವೈ ಗ್ರಾಹಕರಿಗೆ ವೈವಿಧ್ಯಮಯ ಆಯ್ಕೆಯನ್ನು ಒದಗಿಸುತ್ತವೆ. ಪ್ರತಿ ತಿಂಗಳು 1,000 ರೂ., 2,000 ರೂ., 3,000 ರೂ., 4,000 ರೂ. ಅಥವಾ 5,000 ರೂ. ಪಡೆಯುವ ಆಯ್ಕೆ ಇದರಲ್ಲಿದೆ. ನೀವು ಇದನ್ನು ಆರಂಭದಲ್ಲೇ ನಿರ್ಧಿರಿಸಬೇಕಾಗುತ್ತದೆ. 2015-16ರ ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಿಸಲಾಗಿತ್ತು. ವೃದ್ಧಾಪ್ಯದಲ್ಲಿ ಆದಾಯ ಭದ್ರತೆಯನ್ನು ಖಾತರಿಪಡಿಸಲು ಇದನ್ನು ಜಾರಿಗೊಳಿಸಲಾಗಿದೆ ಎಂದು ಕೇಂದ್ರ ತಿಳಿಸಿದೆ. ಉದ್ಯೋಗ ನಿರ್ವಹಿಸಲು ಸಾಧ್ಯವಾಗದಿದ್ದಾಗ ಆದಾಯದ ಹರಿವು ನಿಂತು ಬಿಡುತ್ತದೆ. ದಿನದಿಂದ ದಿನಕ್ಕೆ ಜೀವನ ವೆಚ್ಚ ಏರಿಕೆಯಾಗುತ್ತದೆ. ಆರೋಗ್ಯಕ್ಕಾಗಿ ಹೆಚ್ಚಿನ ಖರ್ಚು ಮಾಡಬೇಕಾಗುತ್ತದೆ. ಎಲ್ಲ ವೆಚ್ಚಗಳಿಗೂ ಮನೆಯವರನ್ನು ಆಶ್ರಯಿಸಬೇಕಾಗುತ್ತದೆ. ಇದನ್ನು ತಪ್ಪಿಸಲು ಮಾಸಿಕ ಪಿಂಚಣಿ ನೆರವಾಗುತ್ತದೆ. ಹೀಗಾಗಿ ಅಟಲ್ ಪೆನ್ಶನ್ ಯೋಜನೆಯಲ್ಲಿ ಹೂಡಿಕೆ ಮಾಡುವುದು ಅತ್ಯುತ್ತಮ ಮಾರ್ಗ ಎಂದು ತಜ್ಞರು ಸಲಹೆ ನೀಡುತ್ತಾರೆ.
ಯಾರೆಲ್ಲ ಅರ್ಹರು?
18ರಿಂದ 40 ವರ್ಷದೊಳಗಿನ ಎಲ್ಲ ಭಾರತೀಯ ನಾಗರಿಕರು ಅಟಲ್ ಪಿಂಚಣಿ ಯೋಜನೆಯ ಫಲಾನುಭವಿಗಳಾಗಬಹುದು. ಇದಕ್ಕಾಗಿ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿ ಉಳಿತಾಯ ಬ್ಯಾಂಕ್ ಖಾತೆ ಹೊಂದಿರುವುದು ಕಡ್ಡಾಯ. ಗಮನಿಸಿ, ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ಆದಾಯ ತೆರಿಗೆ ಪಾವತಿಸುವವರು ಎಪಿವೈ ಖಾತೆಯನ್ನು ತೆರೆಯಲು ಅರ್ಹರಲ್ಲ.
ಯಾವೆಲ್ಲ ದಾಖಲೆ ಅಗತ್ಯ?
ಈ ಯೋಜನೆ ಆರಂಭಿಸಲು ಇಚ್ಚಿಸುವವರು ಉಳಿತಾಯ ಖಾತೆ ಇರುವ ಬ್ಯಾಂಕ್ / ಪೋಸ್ಟ್ ಆಫೀಸ್ ಅನ್ನು ಸಂಪರ್ಕಿಸಬಹುದು. ಇದಕ್ಕಾಗಿ ಮೊಬೈಲ್ ನಂಬರ್ ಮತ್ತು ಆಧಾರ್ ಸಂಖ್ಯೆ ಒದಗಿಸಬೇಕಾಗುತ್ತದೆ.
5 ಸಾವಿರ ರೂ. ಪಿಂಚಣಿ ಪಡೆಯುವುದು ಹೇಗೆ?
ವಯಸ್ಸಿಗನುಗುಣವಾಗಿ ಮಾಸಿಕ ಪಾವತಿಯಲ್ಲಿ ವ್ಯತ್ಯಾಸವಿರುತ್ತದೆ. ಉದಾಹರಣೆಗೆ 18ನೇ ವಯಸ್ಸಿನಲ್ಲಿ ಈ ಯೋಜನೆಗೆ ಸೇರುವ ಯಾರಾದರೂ ಮಾಸಿಕ 5,000 ರೂ.ಗಳ ಪಿಂಚಣಿ ಪಡೆಯಲು ತಿಂಗಳಿಗೆ ಕೇವಲ 210 ರೂ. ಪಾವತಿಸಿದರೆ ಸಾಕಾಗುತ್ತದೆ. 40 ವರ್ಷ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸುವವರು 60 ವರ್ಷದವರೆಗೆ ತಿಂಗಳಿಗೆ 1,454 ರೂ. ಹೂಡಿಕೆ ಮಾಡಬೇಕಾಗುತ್ತದೆ. ಇನ್ನು ತಿಂಗಳಿಗೆ 1,454 ರೂ.ಗಳನ್ನು ಹೂಡಿಕೆ ಮಾಡಲು ಸಾಧ್ಯವಾಗದಿದ್ದರೆ ಇತರ ಆಯ್ಕೆಗಳೂ ಇವೆ. 40ನೇ ವಯಸ್ಸಿನಲ್ಲಿ ತಿಂಗಳಿಗೆ 291 ರೂ.ಗಳ ಹೂಡಿಕೆ ಮಾಡಿದರೆ ತಿಂಗಳಿಗೆ 1,000 ರೂ.ಗಳ ಪಿಂಚಣಿ ಪಡೆಯಬಹುದು, 582 ರೂ.ಗಳ ಪಾವತಿ ಮೇಲೆ ಮಾಸಿಕ 2,000 ರೂ. ಪಿಂಚಣಿ ಪಡೆಯಬಹುದು. ಮಾತ್ರವಲ್ಲ 3,000 ರೂ.ಗಳ ಪಿಂಚಣಿ ಹೊಂದಬೇಕು ಎಂದುಕೊಂಡಿದ್ದರೆ ನೀವು 60 ವರ್ಷದವರೆಗೆ ತಿಂಗಳಿಗೆ 873 ರೂ. ಹೂಡಿಕೆ ಮಾಡಿದರೆ ಸಾಕು. ಮಾಸಿಕ 1,164 ರೂ.ಗಳ ಪಾವತಿಯ ಮೂಲಕ ನೀವು 20 ವರ್ಷಗಳ ಬಳಿಕ ತಿಂಗಳಿಗೆ 4,000 ರೂ. ಪಿಂಚಣಿ ಪಡೆಯಬಹುದು.
ಇದನ್ನೂ ಓದಿ: Money Guide : ಮಾರ್ಕೆಟ್ ಬಿದ್ದಾಗ ಮ್ಯೂಚುವಲ್ ಫಂಡ್ ಹೂಡಿಕೆ ಹೇಗೆ?
ವೈಶಿಷ್ಟ್ಯ
- ಚಂದಾದಾರರ ಮರಣದ ನಂತರ, ಚಂದಾದಾರರ ಸಂಗಾತಿಯು ಕೊನೆಯವರೆಗೆ ಪಿಂಚಣಿ ಮೊತ್ತವನ್ನು ಪಡೆಯಲು ಅರ್ಹರಾಗಿರುತ್ತಾರೆ.
- ಒಂದು ವೇಳೆ ಇಬ್ಬರೂ (ಚಂದಾದಾರರು ಮತ್ತು ಸಂಗಾತಿ) ಮರಣದ ಹೊಂದಿದರೆ ಪಿಂಚಣಿ ಹಣ ಅವರ ನಾಮಿನಿಗೆ ಹಿಂದಿರುಗಿಸಲಾಗುತ್ತದೆ.
- ಚಂದಾದಾರರು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಸಿಕ / ತ್ರೈಮಾಸಿಕ / ಅರ್ಧ ವಾರ್ಷಿಕದಂತೆ ಪಾವತಿಸಬಹುದು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ