ಬೆಂಗಳೂರು: ನಿವೃತ್ತಿಯ ನಂತರದ ಜೀವನ ಚೆನ್ನಾಗಿರಬೇಕು ಎಂದರೆ ಆರ್ಥಿಕವಾಗಿ ಸದೃಢರಾಗಿರಬೇಕು. ಸಣ್ಣ ಪುಟ್ಟ ವಿಚಾರಕ್ಕೂ ಇತರರ ಮುಂದೆ ಕೈ ಚಾಚುವಂತೆ ಇರಬಾರದು. ಇದಕ್ಕಾಗಿಯೇ ಆರ್ಥಿಕ ತಜ್ಞರು ಉದ್ಯೋಗಕ್ಕೆ ಸೇರಿದ ಆರಂಭದ ದಿನದಿಂದಲೇ ನಿವೃತ್ತಿ ಜೀವನಕ್ಕಾಗಿ ಯೋಜನೆ ಹಾಕಿಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ. ಸರ್ಕಾರ ಕೂಡ ನಿವೃತ್ತಿ ಯೋಜನೆಗಳಿಗೆ ಉತ್ತೇಜನ ನೀಡುತ್ತದೆ. ಈ ಪೈಕಿ ನೌಕರರ ಭವಿಷ್ಯ ನಿಧಿ (Employee Provident Fund-EPF) ಮತ್ತು ಸಾರ್ವಜನಿಕ ಭವಿಷ್ಯ ನಿಧಿ (Public Provident Fund-PPF) ಯೋಜನೆ ಪ್ರಮುಖವಾದುದು. ಈ ಎರಡು ಯೋಜನೆಗಳ ವಿವರ ಇಂದಿನ ಮನಿಗೈಡ್ (Money Guide)ನಲ್ಲಿದೆ.
ಸರ್ಕಾರದಿಂದ ನಿರ್ವಹಣೆ
ಇಪಿಎಫ್ ಮತ್ತು ಪಿಪಿಎಫ್-ಇವೆರಡೂ ಸರ್ಕಾರ ನಿರ್ವಹಿಸುವ ಉಳಿತಾಯ ಯೋಜನೆಗಳಾಗಿವೆ. ಅದಾಗ್ಯೂ ಬಡ್ಡಿ ದರಗಳು, ಅವಧಿ, ತೆರಿಗೆ ಪ್ರಯೋಜನಗಳು ಮತ್ತು ಇತರ ಅಂಶಗಳಲ್ಲಿ ವ್ಯತ್ಯಾಸಗಳಿವೆ. ಇಪಿಎಫ್ ಖಾಸಗಿ ವಲಯದಲ್ಲಿ ಸಂಬಳ ಪಡೆಯುವ ಉದ್ಯೋಗಿಗಳಿಗೆ ಮಾತ್ರ ಲಭ್ಯವಿದ್ದರೆ ಪಿಪಿಎಫ್ ಸಂಘಟಿತ ಮತ್ತು ಅಸಂಘಟಿತ ವಲಯದ ನೌಕರರಿಗೆ ದೊರೆಯುತ್ತದೆ.
ಇಪಿಎಫ್
ಇಪಿಎಫ್ ಕಡ್ಡಾಯ ನಿವೃತ್ತಿ ಉಳಿತಾಯ ಯೋಜನೆಯಾಗಿದ್ದು, ಇದರಲ್ಲಿ ಉದ್ಯೋಗದಾತ ಮತ್ತು ಉದ್ಯೋಗಿ ಇಬ್ಬರೂ ಕೊಡುಗೆಗಳನ್ನು ನೀಡುತ್ತಾರೆ. ಈ ಕೊಡುಗೆಗಳನ್ನು ವೇತನದ ಆಧಾರದ ಮೇಲೆ ಮೊದಲೇ ನಿರ್ಧರಿಸಲಾಗುತ್ತದೆ. ಇದರಲ್ಲಿನ ಉಳಿತಾಯದ ಹಣದಿಂದ ಭಾಗಶಃ ಹಿಂಪಡೆಯಲು ಅನುಮತಿ ನೀಡಲಾಗಿದೆ. ಸಂಪೂರ್ಣ ಮೊತ್ತವನ್ನು ಕೆಲವೊಂದು ಅನಿವಾರ್ಯ ಸಂದರ್ಭ ಹೊರತುಪಡಿಸಿದರೆ ನಿವೃತ್ತಿ ವಯಸ್ಸನ್ನು ತಲುಪಿದ ನಂತರವೇ ಹಿಂಪಡೆಯಬಹುದು. ಈ ಯೋಜನೆಯು ತೆರಿಗೆ ಪ್ರಯೋಜನಗಳನ್ನು ಸಹ ನೀಡುತ್ತದೆ. ನಿವೃತ್ತಿ ಕೇಂದ್ರಿತ ಉಳಿತಾಯ ಮಾರ್ಗವನ್ನು ಬಯಸುವ, ಸಂಬಳ ಪಡೆಯುವ ವ್ಯಕ್ತಿಗಳಿಗೆ ಇಪಿಎಫ್ ಸೂಕ್ತ ಯೋಜನೆ ಎನ್ನುವುದರಲ್ಲಿ ಸಂಶಯವಿಲ್ಲ.
- ಸಂಬಳ ಪಡೆಯುವ ಉದ್ಯೋಗಿಗಳಿಗೆ ಕಡ್ಡಾಯ: ಉದ್ಯೋಗದಾತ ಮತ್ತು ಉದ್ಯೋಗಿ ಇಬ್ಬರೂ ಮೂಲ ವೇತನ + ತುಟ್ಟಿಭತ್ಯೆಯ 12% ಕೊಡುಗೆ ನೀಡುತ್ತಾರೆ.
- ಪ್ರಸ್ತುತ ಬಡ್ಡಿ ದರ: 8.25% ಆದರೆ ಬದಲಾಗಬಹುದು.
- ನಿವೃತ್ತಿಗೆ ಮುಂಚಿತವಾಗಿ ಸಂಪೂರ್ಣ ಹಣವನ್ನು ಹಿಂಪಡೆಯುವುದು ಕಷ್ಟ.
- ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಲಭ್ಯ.
- ಅನಿವಾರ್ಯ ಸಂದರ್ಭದಲ್ಲಿ ಒಂದಷ್ಟು ಮೊತ್ತ ಹಿಂಪಡೆಯಬಹುದು. ಇದಕ್ಕಾಗಿ ಆನ್ಲೈನ್ ಮೂಲ ಅರ್ಜಿ ಸಲ್ಲಿಸಿದರೆ ಸಾಕು.
ಪಿಪಿಎಫ್
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆಯು ಕೇಂದ್ರ ಸರ್ಕಾರ ಬೆಂಬಲಿತ ಪ್ಲಾನ್ ಆಗಿದ್ದು, ಸಣ್ಣ ಹೂಡಿಕೆದಾರರು ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಸರ್ಕಾರಿ ಬೆಂಬಲಿತ ಪ್ಲಾನ್ ಆದ ಕಾರಣ ಇಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿ ಅಲ್ಲ. ಪಿಪಿಎಫ್ ಖಾತೆ ತೆರೆಯುವವರಿಗೆ ವಾರ್ಷಿಕ ಶೇ. 7.1ರಷ್ಟು ಬಡ್ಡಿ ದೊರೆಯಲಿದೆ. ಆದರೆ ಈ ಯೋಜನೆಯು 15 ವರ್ಷ ಇರಲಿದೆ. ಮಗಳ ಮದುವೆ, ಮಕ್ಕಳ ಶಿಕ್ಷಣ ಸೇರಿ ಹಲವು ಮುಂದಾಲೋಚನೆ ಇರುವವರು 15 ವರ್ಷದ ಹೂಡಿಕೆ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು.
- ಸ್ವಯಂಪ್ರೇರಿತ ಯೋಜನೆ: ಎಲ್ಲ ಭಾರತೀಯ ನಾಗರಿಕರು ಮತ್ತು ಅನಿವಾಸಿ ಭಾರತೀಯರಿಗೆ ಮುಕ್ತವಾಗಿದ್ದು, ಬೇಕಿದ್ದರೆ ಮಾತ್ರ ಹೂಡಿಕೆ ಮಾಡಬಹುದು.
- ಪ್ರಸ್ತುತ ಬಡ್ಡಿದರ: 7.1% ಆದರೆ ಬದಲಾಗಬಹುದು.
- 5 ವರ್ಷಗಳ ನಂತರ ಒಂದಷ್ಟು ಮೊತ್ತ ಹಿಂಪಡೆಯಬಹುದು. ಮುಕ್ತಾಯದ ಸಮಯದಲ್ಲಿ ಪೂರ್ಣ ಹಿಂಪಡೆಯುವಿಕೆ (15 ವರ್ಷ).
- ತೆರಿಗೆ ಪ್ರಯೋಜನ ಲಭ್ಯ.
- ಸರ್ಕಾರದಿಂದ ನೇರವಾಗಿ ನಿರ್ವಹಿಸಲ್ಪಡುವುದರಿಂದ ಇಪಿಎಫ್ಗೆ ಹೋಲಿಸಿದರೆ ಹೆಚ್ಚು ಸುರಕ್ಷಿತ.
ಇಪಿಎಫ್ vs ಪಿಪಿಎಫ್
- ಹೂಡಿಕೆ ಮೊತ್ತ: ಪಿಪಿಎಫ್ನಲ್ಲಿ ಒಂದು ಹಣಕಾಸು ವರ್ಷದಲ್ಲಿ ಕನಿಷ್ಠ 500 ರೂ.ಗಳಿಂದ ಹೂಡಿಕೆ ಪ್ರಾರಂಭಿಸಬಹುದು ಮತ್ತು ಗರಿಷ್ಠ ಮೊತ್ತ 1,50,000 ರೂ. ಇಪಿಎಫ್ಗೆ ಸಂಬಳದ 12%ವನ್ನು ಕಡ್ಡಾಯವಾಗಿ ಕಡಿತ ಮಾಡಲಾಗುತ್ತದೆ. ಬೇಕಿದ್ದರೆ ಈ ಮೊತ್ತವನ್ನು ಹೆಚ್ಚಿಸಬಹುದು.
- ಅವಧಿ: ಪಿಪಿಎಫ್ 15 ವರ್ಷಗಳಾಗಿದ್ದು, ಅದರ ನಂತರ 5 ವರ್ಷಗಳ ಅವಧಿಗೆ ವಿಸ್ತರಿಸಬಹುದು. ಇಪಿಎಫ್ ಖಾತೆಯನ್ನು ನಿವೃತ್ತಿಯ ನಂತರ ಅಥವಾ ಚಂದಾದಾರರು ಎರಡು ತಿಂಗಳಿಗಿಂತ ಹೆಚ್ಚು ಕಾಲ ನಿರುದ್ಯೋಗಿಗಳಾಗಿದ್ದರೆ ಮಾತ್ರ ಎಲ್ಲ ಮೊತ್ತ ಹಿಂಪಡೆಯಬಹುದು.
- ತೆರಿಗೆ ಪ್ರಯೋಜನ: ಪಿಪಿಎಫ್ ಹೂಡಿಕೆಗಳಿಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಪ್ರಯೋಜನ ಲಭ್ಯವಿದೆ. ಮೆಚ್ಯೂರಿಟಿ ಮೊತ್ತವನ್ನು ಸಹ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ. ಇಪಿಎಫ್ಗೆ ನೀಡುವ ಕೊಡುಗೆಯು ತೆರಿಗೆ ಪ್ರಯೋಜನವನ್ನು ಆಕರ್ಷಿಸುತ್ತದೆ. ನಿವೃತ್ತಿಯ ನಂತರದ ಮೆಚ್ಯೂರಿಟಿ ಮೊತ್ತವು ತೆರಿಗೆ ಮುಕ್ತವಾಗಿರುತ್ತದೆ.
ಎರಡೂ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದೆ?
ಖಂಡಿತವಾಗಿಯೂ ನೀವು ಏಕಕಾಲಕ್ಕೆ ಪಿಪಿಎಫ್ ಮತ್ತು ಇಪಿಎಫ್ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ಎರಡರಲ್ಲೂ ಹೂಡಿಕೆ ಮಾಡಲು ಯಾವುದೇ ಮಿತಿಗಳಿಲ್ಲ. ಪ್ರತಿ ಯೋಜನೆಗೆ ಎಷ್ಟು ಕೊಡುಗೆ ನೀಡಬೇಕು ಎಂದು ನಿರ್ಧರಿಸುವಾಗ ನಿಮ್ಮ ಆದಾಯ ಮತ್ತು ಆರ್ಥಿಕ ಗುರಿಗಳನ್ನು ಪರಿಗಣಿಸಿ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಹಿಂತೆಗೆದುಕೊಳ್ಳುವ ನಿಯಮಗಳು ಮತ್ತು ತೆರಿಗೆ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ.
ಇದನ್ನೂ ಓದಿ: Money Guide : ನಿವೃತ್ತಿಯ ಹಣಕಾಸು ಭದ್ರತೆಗೆ ಪ್ಲಾನ್ ಮಾಡೋದು ಹೇಗೆ?