ಬೆಂಗಳೂರು: ಟೈಮ್ ಡೆಪಾಸಿಟ್ ಅಥವಾ ಟರ್ಮ್ ಡೆಪಾಸಿಟ್ ಎಂದೂ ಕರೆಯಲ್ಪಡುವ ನಿಶ್ಚಿತ ಠೇವಣಿ (Fixed Deposit) ಭಾರತೀಯರ ನೆಚ್ಚಿನ ಹೂಡಿಕೆಯ ಆಯ್ಕೆ ಎನಿಸಿಕೊಂಡಿದೆ. ಯಾವುದೇ ರಿಸ್ಕ್‌ಗಳನ್ನು ತೆಗೆದುಕೊಳ್ಳದೆ ಇರುವ ಹೂಡಿಕೆದಾರರಿಗೆ ಇದು ಉತ್ತಮ. ಈ ಯೋಜನೆ ಮುಖಾಂತರ ಹೂಡಿಕೆದಾರರು ತಮ್ಮ ಹೆಚ್ಚುವರಿ ಹಣವನ್ನು ನಿಗದಿತ ಅವಧಿಗೆ ಠೇವಣಿ ಇರಿಸಿಕೊಳ್ಳಬಹುದು. ಆಯ್ಕೆ ಮಾಡಿದ ಅವಧಿಗೆ ಸ್ಥಿರ ಬಡ್ಡಿಯನ್ನೂ ಪಡೆಯಬಹುದು ಎನ್ನುವ ಕಾರಣಕ್ಕೆ ಇದು ಅನೇಕರ ಗಮನ ಸೆಳೆಯುತ್ತದೆ. ಹೂಡಿಕೆಯ ಅವಧಿಯನ್ನು ಅವಲಂಬಿಸಿ ವಿವಿಧ ಬ್ಯಾಂಕ್‌ಗಳು ಶೇ. 3ರಿಂದ 7.50 ರವರೆಗೆ ಬಡ್ಡಿದರಗಳನ್ನು ನೀಡುತ್ತವೆ. ಹಿರಿಯ ನಾಗರಿಕರು ಹೆಚ್ಚುವರಿ ಶೇ. 0.5 ಬಡ್ಡಿಯೂ ಲಭ್ಯ. ಇಂದಿನ ಮನಿಗೈಡ್ (Money Guide)ನಲ್ಲಿ ಫಿಕ್ಸೆಡ್ ಡೆಪಾಸಿಟ್‌ಗೆ ವಿವಿಧ ಬ್ಯಾಂಕ್‌ಗಳು ಎಷ್ಟು ಬಡ್ಡಿದರ ನೀಡುತ್ತವೆ ಎನ್ನುವುದನ್ನು ಗಮನಿಸೋಣ.
ನಿಶ್ಚಿತ ಠೇವಣಿಯಲ್ಲಿ ಹೂಡಿಕೆಯ ಅವಧಿ ಮತ್ತು ಬಡ್ಡಿದರವನ್ನು ಮೊದಲೇ ನಿಗದಿಪಡಿಸಲಾಗಿರುತ್ತದೆ. ಸಾಮಾನ್ಯವಾಗಿ 7 ದಿನಗಳಿಂದ 10 ವರ್ಷಗಳವರೆಗಿನ ಅವಧಿಯಲ್ಲಿ ನೀವು ಒಂದು ಬಾರಿ ಹೂಡಿಕೆ ಮಾಡಬಹುದು. ಇದರ ಮೇಲಿನ ಬಡ್ಡಿಯನ್ನು ನಿಯಮಿತ ಮಧ್ಯಂತರಗಳಲ್ಲಿ ಪಡೆಯಬಹುದು ಅಥವಾ ನೀವು ಮುಕ್ತಾಯದ ಸಮಯದಲ್ಲಿ ಅದನ್ನು ಸ್ವೀಕರಿಸುವ ಆಯ್ಕೆಯನ್ನು ಆಯ್ದುಕೊಳ್ಳಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (2 ಕೋಟಿ ರೂ.ಗಿಂತ ಕಡಿಮೆ ಠೇವಣಿಗಳ ಮೇಲಿನ ಬಡ್ಡಿದರ)
ಎಸ್‌ಬಿಐಯ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡುವ ಗ್ರಾಹಕರಿಗೆ ಶೇ. 3ರಿಂದ 7ರವರೆಗೆ ಬಡ್ಡಿ ಲಭಿಸುತ್ತದೆ. ಜತೆಗೆ ಹಿರಿಯ ನಾಗರಿಕರು ಹೆಚ್ಚುವರಿ 50 ಬೇಸಿಸ್ ಪಾಯಿಂಟ್ (ಬಿಪಿಎಸ್) ಪಡೆಯಲಿದ್ದಾರೆ. ನಿರ್ದಿಷ್ಟವಾಗಿ ಒಂದು ವರ್ಷದಲ್ಲಿ ಮುಕ್ತಾಯಗೊಳ್ಳುವ ಎಫ್‌ಡಿಗೆ ಬ್ಯಾಂಕ್ ಶೇ. 6.80ರಷ್ಟು ಬಡ್ಡಿದರವನ್ನು ಒದಗಿಸುತ್ತದೆ. ಇದಲ್ಲದೆ, ಎರಡರಿಂದ ಮೂರು ವರ್ಷಗಳ ಅವಧಿಗೆ ಬ್ಯಾಂಕ್ ಶೇ. 7ರಷ್ಟು ಬಡ್ಡಿದರವನ್ನು ನೀಡುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ (2 ಕೋಟಿ ರೂ.ಗಿಂತ ಕಡಿಮೆ ಠೇವಣಿಗಳ ಮೇಲಿನ ಬಡ್ಡಿದರ)
ಪಿಎನ್‌ಬಿ ಸ್ಥಿರ ಠೇವಣಿಗೆ ಶೇ. 3.50ರಿಂದ 7.50ರವರೆಗೆ ಬಡ್ಡಿದರ ಒದಗಿಸುತ್ತದೆ. ನಿರ್ದಿಷ್ಟವಾಗಿ ಒಂದು ವರ್ಷದಲ್ಲಿ ಮುಕ್ತಾಯಗೊಳ್ಳುವ ಸ್ಥಿರ ಠೇವಣಿಗಳಿಗೆ ಸಾಮಾನ್ಯ ಹೂಡಿಕೆದಾರರಿಗೆ ಬಡ್ಡಿದರವು ಶೇಕಡಾ 6.75ರಷ್ಟಿದ್ದರೆ, ಹಿರಿಯ ನಾಗರಿಕರು ಶೇ. 7.25ರಷ್ಟು ಪಡೆಯಲಿದ್ದಾರೆ.
ಎಚ್‌ಡಿಎಫ್‌ಸಿ ಬ್ಯಾಂಕ್ (2 ಕೋಟಿ ರೂ.ಗಿಂತ ಕಡಿಮೆ ಠೇವಣಿಗಳ ಮೇಲಿನ ಬಡ್ಡಿದರ)
ಎಚ್‌ಡಫ್‌ಸಿ ಬ್ಯಾಂಕ್ ಒಂದು ವರ್ಷದ ಸ್ಥಿರ ಠೇವಣಿಗಳಿಗೆ ಆಕರ್ಷಕ ಬಡ್ಡಿ ದರವನ್ನು ನೀಡುತ್ತದೆ. ನಿಯಮಿತ ಹೂಡಿಕೆದಾರರು ಶೇಕಡಾ 6.60ರಷ್ಟು ಬಡ್ಡಿದರವನ್ನು ಪಡೆಯಬಹುದು. ಮಾತ್ರವಲ್ಲ ಹಿರಿಯ ನಾಗರಿಕರು ಅಂತಹ ಠೇವಣಿಗಳ ಮೇಲೆ ಶೇಕಡಾ 7.10ರಷ್ಟು ಬಡ್ಡಿದರ ಹೊಂದಬಹುದು.
ಐಸಿಐಸಿಐ ಬ್ಯಾಂಕ್ (5 ಕೋಟಿ ರೂ.ಗಿಂತ ಕಡಿಮೆ ಠೇವಣಿಗಳ ಮೇಲಿನ ಬಡ್ಡಿದರ)
ಐಸಿಐಸಿಐ ಬ್ಯಾಂಕ್ ತನ್ನ ಎಫ್‌ಡಿ ಖಾತೆಗಳಿಗೆ ಬಡ್ಡಿದರಗಳನ್ನು ಶೇ. 3ರಿಂದ 7.50ರವರೆಗೆ ನೀಡುತ್ತದೆ. ಮಾತ್ರವಲ್ಲ ಹಿರಿಯ ನಾಗರಿಕರು ಹೆಚ್ಚುವರಿ ಶೇ. 0.5ರಷ್ಟು ಬಡ್ಡಿ ಪಡೆಯಲಿದ್ದಾರೆ. ನಿರ್ದಿಷ್ಟವಾಗಿ ಒಂದು ವರ್ಷದಲ್ಲಿ ಮುಕ್ತಾಯಗೊಳ್ಳುವ ಸ್ಥಿರ ಠೇವಣಿಗಳಿಗೆ ಸಾಮಾನ್ಯ ಗ್ರಾಹಕರಿಗೆ ಶೇ. 6.70ರಷ್ಟು ಬಡ್ಡಿ ಇದೆ.
ಇದನ್ನೂ ಓದಿ: Money Guide: ಭಾರತದಲ್ಲಿಯೂ ಆರಂಭವಾಯ್ತು ಬಹು ನಿರೀಕ್ಷಿತ ಗೂಗಲ್ ವ್ಯಾಲೆಟ್; ಇದು ಗೂಗಲ್ ಪೇಗಿಂತ ಹೇಗೆ ಭಿನ್ನ?