Site icon Vistara News

Money Guide: ಆಧಾರ್‌ ಅಪ್‌ಡೇಟ್‌ನಿಂದ ಎಫ್‌ಡಿ ಹೂಡಿಕೆವರೆಗೆ; ತಿಂಗಳಾಂತ್ಯಕ್ಕೆ ಮುಗಿಸಲೇಬೇಕಾದ ಕೆಲಸಗಳಿವು

december

december

ಬೆಂಗಳೂರು: ವರ್ಷಾಂತ್ಯದ ಡಿಸೆಂಬರ್‌ ಮಾಸಕ್ಕೆ ಕಾಲಿಟ್ಟಿದ್ದೇವೆ. ಕೇಂದ್ರ ಸರ್ಕಾರ ಸೂಚಿಸಿದ ಒಂದಷ್ಟು ಕೆಲಸಗಳನ್ನು ಈ ತಿಂಗಳಾಂತ್ಯಕ್ಕೆ ಮಾಡಿ ಮುಗಿಸಲೇಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದರೆ ದಂಡ ಬೀಳಲಿದೆ. ಆಧಾರ್‌ ಕಾರ್ಡ್‌ ಅಪ್‌ಡೇಟ್‌ನಿಂದ ಹಿಡಿದು ಬ್ಯಾಂಕ್‌ ಲಾಕರ್‌ ಒಪ್ಪಂದ ನವೀಕರಣದವರೆಗೆ ಹಲವು ವಿಚಾರಗಳಿಗೆ ಕೇಂದ್ರ ಡಿಸೆಂಬರ್‌ 31ರ ವರೆಗೆ ಗಡುವು ನೀಡಿದೆ. ಅವಧಿ ಮೀರಿದರೆ ನಿಮ್ಮ ಜೇಬಿಗೆ ಕತ್ತರಿ ಬೀಳುವ ಜತೆಗೆ ಬಳಿಕ ಅದಕ್ಕಾಗಿ ಓಡಾಡುವ ಸಂಧಿಗ್ಥತೆಯೂ ಎದುರಾಗಬಹುದು. ಹೀಗಾಗಿ ಯಾವೆಲ್ಲ ಕರ್ತವ್ಯಗಳನ್ನು ಶೀಘ್ರ ಮುಗಿಸಬೇಕು ಎನ್ನುವುದನ್ನು ಮನಿಗೈಡ್‌ (Money Guide) ವಿವರಿಸಲಿದೆ.

ಆಧಾರ್‌ ಕಾರ್ಡ್‌ ನವೀಕರಣ

ಪ್ರಸ್ತುತ ಆಧಾರ್‌ ಕಾರ್ಡ್‌ ಪ್ರಮುಖ ದಾಖಲೆಯಾಗಿ ಬದಲಾಗಿದೆ. ಸರ್ಕಾರದ ಯಾವುದೇ ಯೋಜನೆಯ ಪ್ರಯೋಜನ ಪಡೆಯುವುದರಿಂದ ಹಿಡಿದು ಉದ್ಯೋಗಕ್ಕೆ ಅರ್ಜಿ ಸಲ್ಲಿಸುವವರೆಗೆ ಆಧಾರ್‌ ಕಾರ್ಡ್‌ ಬೇಕೇ ಬೇಕು. ಈ ಹಿಂದೆ ಸರ್ಕಾರ ಆಧಾರ್‌ ಕಾರ್ಡ್‌ ಮಾಡಿಸಿ 10 ವರ್ಷ ಪೂರೈಸಿದವರು ನವೀಕರಣ ಮಾಡಿಸಬೇಕು ಎಂದು ಸೂಚಿಸಿತ್ತು. ಯೂನಿಕ್‌ ಐಡೆಂಟಿಫಿಕೇಷನ್‌ ಅಥಾರಟಿ ಆಫ್‌ ಇಂಡಿಯಾ (Unique Identification Authority of India-UIDAI) ಉಚಿತವಾಗಿ ಆಧಾರ್‌ ಕಾರ್ಡ್‌ ನವೀಕರಿಸುವ ದಿನಾಂಕವನ್ನು 2023ರ ಡಿಸೆಂಬರ್‌ 31ರ ವರೆಗೂ ವಿಸ್ತರಿಸಿದೆ. ಈ ಅವಧಿಯಲ್ಲಿ ವಿಳಾಸ, ಫೋನ್ ಸಂಖ್ಯೆ, ಇಮೇಲ್ ವಿವರಗಳನ್ನು ಉಚಿತವಾಗಿ ನವೀಕರಿಸಬಹುದು ಎಂದು ಸೂಚಿಸಿತ್ತು. 2023ರ ಡಿಸೆಂಬರ್ 31ರ ನಂತರ ನೀವು ನವೀಕರಣಕ್ಕಾಗಿ ಶುಲ್ಕ ಪಾವತಿಸಬೇಕಾಗುತ್ತದೆ.

ಬ್ಯಾಂಕ್‌ ಲಾಕರ್‌ ಒಪ್ಪಂದದ ನವೀಕರಣ

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಈಗಿನ ಸೇಫ್‌ ಡಿಪಾಸಿಟ್‌ ಲಾಕರ್‌ಗಳ ಒಪ್ಪಂದಗಳನ್ನು ನವೀಕರಿಸಿಕೊಳ್ಳಲು ಬ್ಯಾಂಕ್‌ಗಳಿಗೆ (Bank locker agreement) ನೀಡಿದ್ದ ಗಡುವನ್ನು 2023ರ ಡಿಸೆಂಬರ್‌ 31ರ ತನಕ ವಿಸ್ತರಿಸಿತ್ತು. ಆರ್‌ಬಿಐ ಈ ಹಿಂದೆ 2021ರ ಆಗಸ್ಟ್‌ 18ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ, 2023ರ ಜನವರಿ 1ರೊಳಗೆ ಈಗಿನ ಸೇಫ್‌ ಡಿಪಾಸಿಟ್‌ ಲಾಕರ್‌ಗಳ ಒಪ್ಪಂದಗಳನ್ನು ನವೀಕರಿಸಬೇಕು ಎಂದು ಬ್ಯಾಂಕ್‌ಗಳಿಗೆ ಸೂಚಿಸಿತ್ತು. ಬಳಿಕ ಡಿಸೆಂಬರ್‌ 31ರ ತನಕ ನವೀಕರಿಸಿಕೊಳ್ಳಲು ಕಾಲಾವಕಾಶ ವಿಸ್ತರಿಸಿತ್ತು. ಹೊಸ ಲಾಕರ್ ಒಪ್ಪಂದಗಳು ಕೆಲವು ಪ್ರಮುಖ ಬದಲಾವಣೆಗಳನ್ನು ಹೊಂದಿದೆ. ಉದಾಹರಣೆಗೆ ಲಾಕರ್‌ ನಷ್ಟ ಅಥವಾ ಹಾನಿಯ ಸಂದರ್ಭದಲ್ಲಿ ಬ್ಯಾಂಕ್‌ಗಳು ಪಾವತಿಸಬೇಕಾದ ಪರಿಹಾರದ ಮೊತ್ತ ಹೆಚ್ಚಳ ಇತ್ಯಾದಿ.

ಡಿಮ್ಯಾಟ್ ಖಾತೆಗಳಿಗೆ ನಾಮನಿರ್ದೇಶನ ಸಲ್ಲಿಕೆ

ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್‌ ಬೋರ್ಡ್ ಆಫ್ ಇಂಡಿಯಾ (SEBI) ಡಿಮ್ಯಾಟ್ ಖಾತೆಗಳಿಗೆ ನಾಮನಿರ್ದೇಶನ ಅರ್ಜಿಗಳನ್ನು ಸಲ್ಲಿಸುವ ಗಡುವನ್ನು ಡಿಸೆಂಬರ್ 31, 2023ರ ವರೆಗೆ ವಿಸ್ತರಿಸಿದೆ. ನಾಮನಿರ್ದೇಶನ ಅರ್ಜಿಯು ಮರಣದ ನಂತರ ಡಿಮ್ಯಾಟ್ ಸೆಕ್ಯುರಿಟಿಗಳನ್ನು ಯಾರು ಪಡೆಯಬೇಕು ಎಂಬುದನ್ನು ನಿರ್ಧರಿಸಲು ನೆರವಾಗುತ್ತದೆ.

ಇದನ್ನೂ ಓದಿ: Money Guide: 1.5 ಲಕ್ಷ ರೂ. ಹೂಡಿಕೆ ಮಾಡಿ 2.27 ಕೋಟಿ ರೂ. ಗಳಿಸಿ! ಯಾವುದು ಈ ಸ್ಕೀಂ?

ವಿಶೇಷ ಸ್ಥಿರ ಠೇವಣಿ(ಫಿಕ್ಸ್‌ಡ್‌ ಡೆಪಾಸಿಟ್‌)ಗಳಲ್ಲಿ ಹೂಡಿಕೆ

ಕೆಲವು ಬ್ಯಾಂಕ್‌ಗಳು 2023ರ ಡಿಸೆಂಬರ್‌ವರೆಗೆ ಹೆಚ್ಚಿನ ಬಡ್ಡಿದರಗಳೊಂದಿಗೆ ವಿಶೇಷ ಸ್ಥಿರ ಠೇವಣಿಗಳನ್ನು ನೀಡುತ್ತಿವೆ. ಅದಾಗ್ಯೂ ಈ ಠೇವಣಿಗಳಲ್ಲಿ ಹೂಡಿಕೆ ಮಾಡಲು ಗಡುವು ಇದೆ. ಉದಾಹರಣೆಗೆ ಇಂಡಿಯನ್ ಬ್ಯಾಂಕ್‌ನ ʼಇಂಡ್ ಸೂಪರ್ 400ʼ ಮತ್ತು ʼಇಂಡ್ ಸುಪ್ರೀಂ 300 ಡೇಸ್ʼ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡಲು ಕೊನೆಯ ದಿನಾಂಕ ಡಿಸೆಂಬರ್ 31, 2023. ಜತೆಗೆ ಎಸ್‌ಬಿಐಯ ಅಮೃತ್ ಕಲಾಶ್ ಯೋಜನೆ ಕೂಡ ಡಿಸೆಂಬರ್ ಕೊನೆಯ ದಿನಕ್ಕೆ ಕೊನೆಯಾಗಲಿದೆ. ಈ ವರ್ಷದ ಫೆಬ್ರವರಿಯಲ್ಲಿ ಎಸ್‌ಬಿಐ ಪರಿಚಯಿಸಿದ್ದ ಅಮೃತ್‌ ಕಲಾಶ್‌ ಯೋಜನೆ ಆಗಸ್ಟ್‌ನಲ್ಲಿ ಮುಕ್ತಾಯವಾಗಲಿದೆ ಎಂದು ಈ ಹಿಂದೆ ಘೋಷಿಸಲಾಗಿತ್ತು. ಬಳಿಕ ದಿನಾಂಕವನ್ನು ಬ್ಯಾಂಕ್‌ ವಿಸ್ತರಿಸಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version