ಬೆಂಗಳೂರು: ಆರ್ಥಿಕ ಸದೃಢತೆಗೆ ವಿಮೆ (Insurance) ಎನ್ನುವುದು ಬಹು ಮುಖ್ಯ. ಇದು ನಿಮ್ಮ ಮತ್ತು ನಿಮ್ಮ ಕುಟುಂಬಕ್ಕೆ ಆರ್ಥಿಕ ದೃಢತೆ ಮಾತ್ರವಲ್ಲದೆ ಮಾನಸಿಕ ನೆಮ್ಮದಿ ನೀಡುತ್ತದೆ, ಅನಿರೀಕ್ಷಿತ ಆರ್ಥಿಕ ಹೊರೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ ಮತ್ತು ನಿಮ್ಮ ದೀರ್ಘ ಕಾಲೀನ ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸುತ್ತದೆ ಎನ್ನುತ್ತಾರೆ ಆರ್ಥಿಕ ತಜ್ಞರು. ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವು ರೀತಿಯ ವಿಮೆ ಲಭ್ಯವಿದೆ. ಇವು ಪ್ರತಿಯೊಂದು ವ್ಯಕ್ತಿಯ ವಿಭಿನ್ನ ಆವಶ್ಯಕತೆಗಳು ಮತ್ತು ಅಗತ್ಯಗಳನ್ನು ಪೂರೈಸುತ್ತವೆ. ಇನ್ಶೂರೆನ್ಸ್ ಅನ್ನು ಸಾಮಾನ್ಯ ವಿಮೆ (General Insurance) ಮತ್ತು ಜೀವ ವಿಮೆ (Life Insurance) ಎಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಈ ಎರಡು ವರ್ಗಗಳ ವಿಶೇಷತೆ, ಇವು ಹೇಗೆ ಪರಸ್ಪರ ಭಿನ್ನ ಮುಂತಾದ ವಿವರ ಇಂದಿನ ಮನಿಗೈಡ್ (Money Guide)ನಲ್ಲಿದೆ.
ಸಾಮಾನ್ಯ ವಿಮೆ (General Insurance)
- ಸಾಮಾನ್ಯ ವಿಮೆಯು ನಮ್ಮ ಸ್ವತ್ತುಗಳಿಗೆ ರಕ್ಷಣೆಯನ್ನು ಒದಗಿಸುತ್ತದೆ. ಇದರಲ್ಲಿ ಆರೋಗ್ಯ ವಿಮೆ, ಮೋಟಾರು ವಿಮೆ, ಗೃಹ ವಿಮೆ, ಪ್ರಯಾಣ ವಿಮೆಯಂತಹ ವಿವಿಧ ರೀತಿಗಳಿವೆ.
- ಸಾಮಾನ್ಯ ವಿಮಾ ಪಾಲಿಸಿಗಳು ಅಪಘಾತಗಳು, ನೈಸರ್ಗಿಕ ವಿಪತ್ತುಗಳು, ಕಳವು ಮತ್ತು ಚಿಕಿತ್ಸೆಯಂತಹ ಅನಿರೀಕ್ಷಿತ ವೆಚ್ಚಗಳಿಗೆ ಆರ್ಥಿಕ ರಕ್ಷಣೆಯನ್ನು ಒದಗಿಸುತ್ತದೆ.
- ಸಾಮಾನ್ಯ ವಿಮೆಯ ಅಡಿಯಲ್ಲಿ ಕವರೇಜ್ ಸಾಮಾನ್ಯವಾಗಿ ಒಂದು ನಿರ್ದಿಷ್ಟ ಅವಧಿಗೆ ಇರುತ್ತದೆ ಮತ್ತು ಪಾಲಿಸಿದಾರರು ನಿಯಮಿತ ಪ್ರೀಮಿಯಂಗಳನ್ನು ಪಾವತಿಸಬೇಕಾಗುತ್ತದೆ.
- ಈ ವಿಮಾ ಪಾಲಿಸಿ ಯಾವುದೇ ಆದಾಯ ಅಥವಾ ಉಳಿತಾಯ ಪ್ರಯೋಜನಗಳನ್ನು ನೀಡುವುದಿಲ್ಲ. ಅಪಾಯ ಸಂಭವಿಸಿದಾಗ ಆರ್ಥಿಕ ರಕ್ಷಣೆಯನ್ನು ಒದಗಿಸುತ್ತದೆ.
ಜನರಲ್ ಇನ್ಶೂರೆನ್ಸ್‌ನ ವಿಧಗಳು
- ಆರೋಗ್ಯ ವಿಮೆ (Health Insurance): ವೈದ್ಯಕೀಯ ವೆಚ್ಚಗಳಾದ ಕಾಯಿಲೆಗಳಿಗೆ ಚಿಕಿತ್ಸೆ, ಅಡ್ಮಿಟ್ ವೆಚ್ಚ ಮತ್ತು ಅಪಘಾತ ಮುಂತಾದ ಸಂದರ್ಭದಲ್ಲಿ ಆರೋಗ್ಯ ವಿಮೆ ನೆರವಾಗುತ್ತದೆ.
- ಮೋಟಾರು ವಿಮೆ (Motor Insurance): ಇದು ನಿಮ್ಮ ವಾಹನಕ್ಕೆ ಆಗುವ ಹಾನಿ, ಅಪಘಾತಗಳ ಸಂದರ್ಭದಲ್ಲಿ ಮೂರನೇ ವ್ಯಕ್ತಿಗಳಿಗೆ ನೀಡಬೇಕಾದ ಪರಿಹಾರಗಳನ್ನು ಒಳಗೊಂಡಿದೆ. ಮಾತ್ರವಲ್ಲ ವಾಹನ ಕಳವಾದಾಗ ನೆರವಿಗೆ ಬರುತ್ತದೆ. ಭಾರತದಲ್ಲಿ ಮೋಟಾರು ವಿಮೆ ಕಡ್ಡಾಯ.
- ಪ್ರಯಾಣ ವಿಮೆ (Travel Insurance): ಈ ವಿಮೆ ನಿಮ್ಮ ಪ್ರಯಾಣದ ಸಮಯದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿಗಳು, ಕಳೆದುಹೋದ ಬ್ಯಾಗ್, ಪ್ರವಾಸ ವಿಳಂಬ ಇತ್ಯಾದಿಗಳನ್ನು ಒಳಗೊಂಡಿದೆ.
- ಗೃಹ ವಿಮೆ (Home Insurance): ಇದು ಬೆಂಕಿ, ನೈಸರ್ಗಿಕ ವಿಪತ್ತು, ಕಳವು ಇತ್ಯಾದಿಗಳಿಂದ ನಿಮ್ಮ ಮನೆಯನ್ನು ರಕ್ಷಿಸುತ್ತದೆ.
ಜೀವ ವಿಮೆ (Life Insurance)
- ಜೀವ ವಿಮೆಯು ಪಾಲಿಸಿದಾರನ ಮರಣದ ನಂತರ ಕುಟುಂಬ ಅಥವಾ ಅವಲಂಬಿತರಿಗೆ ಆರ್ಥಿಕ ರಕ್ಷಣೆಯನ್ನು ಒದಗಿಸುತ್ತದೆ.
- ಜೀವ ವಿಮಾ ಪಾಲಿಸಿಗಳು ಜೀವ ವಿಮೆಯ ಜತೆಗೆ ಉಳಿತಾಯ ಮತ್ತು ಹೂಡಿಕೆ ಪ್ರಯೋಜನಗಳನ್ನು ಸಹ ನೀಡುತ್ತವೆ. ಈ ಪಾಲಿಸಿಗಳಲ್ಲಿ ಎಂಡೋಮೆಂಟ್ ಯೋಜನೆಗಳು, ಸಂಪೂರ್ಣ ಜೀವ ಯೋಜನೆಗಳು, ಟರ್ಮ್ ಇನ್ಶೂರೆನ್ಸ್ ಯೋಜನೆಗಳು ಮತ್ತು ಯುನಿಟ್-ಲಿಂಕ್ಡ್ ಇನ್ಶೂರೆನ್ಸ್ ಯೋಜನೆಗಳು (ಯುಲಿಪ್) ಸೇರಿವೆ.
- ಜೀವ ವಿಮಾ ಪಾಲಿಸಿಯ ಪ್ರಕಾರವನ್ನು ಅವಲಂಬಿಸಿ ಇದು ಡೆತ್ ಬೆನಿಫಿಟ್ ಜತೆಗೆ ಮೆಚ್ಯೂರಿಟಿ ಪ್ರಯೋಜನ ಮತ್ತು ಬೋನಸ್ಗಳನ್ನು ನೀಡಡುತ್ತದೆ.
- ಜೀವ ವಿಮಾ ಪಾಲಿಸಿಯ ನಿರ್ದಿಷ್ಟ ಅವಧಿಯವರೆಗೆ ಪಾಲಿಸಿದಾರರು ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಾಗುತ್ತದೆ.
ಲೈಫ್ ಇನ್ಶೂರೆನ್ಸ್‌ನ ವಿಧಗಳು
- ಟರ್ಮ್ ಇನ್ಶೂರೆನ್ಸ್ (Term Insurance): ಇದು ಒಂದು ನಿರ್ದಿಷ್ಟ ಅವಧಿಗೆ (ಉದಾಹರಣೆ 20 ವರ್ಷಗಳು) ರಿಸ್ಕ್ ಕವರ್ ಅನ್ನು ಒಳಗೊಂಡಿದೆ.
- ಎಂಡೋಮೆಂಟ್ ಪ್ಲ್ಯಾನ್ಸ್ (Endowment Plans): ವಿಮೆಯನ್ನು ಉಳಿತಾಯದೊಂದಿಗೆ ಸಂಯೋಜಿಸುತ್ತದೆ. ಪಾಲಿಸಿದಾರ ಪಾಲಿಸಿಯ ಅಂತ್ಯದವರೆಗೆ ಬದುಕುಳಿದರೆ ಅಥವಾ ಪಾಲಿಸಿ ಅವಧಿಯಲ್ಲಿ ಮರಣ ಹೊಂದಿದರೆ ಪಾವತಿಯನ್ನು ದೊರೆಯುತ್ತದೆ.
- ಯುಲಿಪ್ (ULIPs): ಇವು ಕೂಡ ಇವು ಎಂಡೋಮೆಂಟ್ ಯೋಜನೆಗಳ ರೀತಿಯೇ ಕಾರ್ಯ ನಿರ್ವಹಿಸುತ್ತದೆ. ಆದರೆ ನಿಮ್ಮ ಹಣದ ಒಂದು ಭಾಗವನ್ನು ಮಾರುಕಟ್ಟೆ-ಲಿಂಕ್ಡ್ ಫಂಡ್ಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.
ಯಾವುದು ಉತ್ತಮ?
ಸಾಮಾನ್ಯ ವಿಮೆ: ನಿಮ್ಮ ಸ್ವತ್ತುಗಳನ್ನು ರಕ್ಷಿಸಲು ಮತ್ತು ಅನಿರೀಕ್ಷಿತ ಘಟನೆಗಳಿಗೆ ಸಂಬಂಧಿಸಿದ ಆರ್ಥಿಕ ಅಪಾಯಗಳನ್ನು ತಗ್ಗಿಸಲು ಸಾಮಾನ್ಯ ವಿಮೆಯನ್ನು ಹೊಂದಿರುವುದು ಅತ್ಯಗತ್ಯ. ಉದಾಹರಣೆಗೆ: ಆರೋಗ್ಯ ವಿಮೆಯು ವೈದ್ಯಕೀಯ ವೆಚ್ಚಗಳ ಸಂದರ್ಭದಲ್ಲಿ ನೆರವಾಗುತ್ತದೆ, ಮೋಟಾರು ವಿಮೆಯು ನಿಮ್ಮ ವಾಹನವನ್ನು ರಕ್ಷಿಸುತ್ತದೆ ಮತ್ತು ಗೃಹ ವಿಮೆಯು ನೈಸರ್ಗಿಕ ವಿಪತ್ತುಗಳು ಅಥವಾ ಇತರ ಅಪಾಯಗಳಿಂದ ಉಂಟಾಗುವ ಹಾನಿಗಳ ವಿರುದ್ಧ ನಿಮ್ಮ ಮನೆಯನ್ನು ರಕ್ಷಿಸುತ್ತದೆ.
ಜೀವ ವಿಮೆ: ಪಾಲಿಸಿದಾರನ ಆದಾಯವನ್ನು ಅವಲಂಬಿಸಿರುವ ಕುಟುಂಬ ಸದಸ್ಯರಿಗೆ ಪಾಲಿಸಿದಾರನ ಅಕಾಲಿಕ ಮರಣದ ನಂತರವೂ ನೆರವಾಗಬೇಕು ಎಂದಿದ್ದರೆ ಜೀವ ವಿಮೆ ಉತ್ತಮ ಆಯ್ಕೆ. ಜೀವ ವಿಮೆಯು ನಿಮ್ಮ ಕುಟುಂಬಕ್ಕೆ ದೊಡ್ಡ ಮೊತ್ತವನ್ನು ಒದಗಿಸುತ್ತದೆ. ಇದು ಅವರ ಜೀವನ ಮಟ್ಟವನ್ನು ಕಾಪಾಡಿಕೊಳ್ಳಲು, ಸಾಲಗಳನ್ನು ತೀರಿಸಲು ಅಥವಾ ಶಿಕ್ಷಣ ಮತ್ತು ಮದುವೆಯಂತಹ ಭವಿಷ್ಯದ ವೆಚ್ಚಗಳನ್ನು ಭರಿಸಲು ಅನುವು ಮಾಡಿಕೊಡುತ್ತದೆ.
ಒಟ್ಟಿನಲ್ಲಿ ಎರಡು ವಿಮೆಗಳೂ ಮುಖ್ಯ. ಸಾಮಾನ್ಯ ವಿಮೆ ಮತ್ತು ಜೀವ ವಿಮೆ ವಿಭಿನ್ನ ಉದ್ದೇಶಗಳನ್ನು ಪೂರೈಸುತ್ತವೆ. ಹೀಗಾಗಿ ಎರಡೂ ರೀತಿಯ ವಿಮೆಯನ್ನು ಹೊಂದಿರುವುದು ಉತ್ತಮ. ಇದು ಸಮಗ್ರ ಆರ್ಥಿಕ ರಕ್ಷಣೆ ಮತ್ತು ಮಾನಸಿಕ ನೆಮ್ಮದಿಯನ್ನು ಒದಗಿಸುತ್ತದೆ ಎನ್ನುತ್ತಾರೆ ತಜ್ಞರು.
ಇದನ್ನೂ ಓದಿ: Money Guide: ಗುಡ್‌ನ್ಯೂಸ್: ಕಿಸಾನ್ ಸಮ್ಮಾನ್ ನಿಧಿಯ 16ನೇ ಕಂತು ಬಿಡುಗಡೆಗೆ ದಿನಗಣನೆ; ನಗದು ಯಾವಾಗ ಸಿಗಲಿದೆ?