ಬೆಂಗಳೂರು: ನಿವೃತ್ತಿಯ ನಂತರ ಹಾಯಾಗಿ, ಯಾವುದೇ ಚಿಂತೆ ಇಲ್ಲದೆ ಜೀವನ ಕಳೆಯಬೇಕು ಎನ್ನುವುದು ಬಹುತೇಕರ ಕನಸು. ಈ ರೀತಿಯ ನೆಮ್ಮದಿಯ ಜೀವನಕ್ಕೆ ಆರ್ಥಿಕವಾಗಿ ಸ್ವಾವಲಂಬಿಯಾಗಿರುವುದು ಮುಖ್ಯ. ಮಾಸಿಕ ಪಿಂಚಣಿ ಇಲ್ಲದಿದ್ದರೂ ಚಿಂತೆ ಬೇಡ. ಈ ವಿಶೇಷ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ನಿರ್ದಿಷ್ಟ ಆದಾಯ ಗಳಿಬಹುದು. ಆ ಯೋಜನೆಯೇ ಸೀನಿಯರ್ ಸಿಟಿಜನ್ಸ್ ಸೇವಿಂಗ್ ಸ್ಕೀಮ್ (Senior Citizens Savings Scheme-SCSS). 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಇದು ಉತ್ತಮ ಹೂಡಿಕೆಯ ಆಯ್ಕೆ. ಈ ಬಗ್ಗೆ ವಿವರ ಮನಿಗೈಡ್ (Money Guide)ನಲ್ಲಿದೆ.
ಏನಿದು ಯೋಜನೆ?
ಸೀನಿಯರ್ ಸಿಟಿಜನ್ಸ್ ಸೇವಿಂಗ್ ಸ್ಕೀಮ್ ವಿಶೇಷವಾಗಿ ಹಿರಿಯ ನಾಗರಿಕರಿಗೆಂದೇ ರೂಪಿಸಲಾಗಿದೆ. ಇತ್ತೀಚೆಗೆ ಬಡ್ಡಿ ದರವೂ ಏರಿಕೆಯಾಗಿದೆ. ಈ ಯೋಜನೆಯಲ್ಲಿ 50,000 ರೂ. ತನಕದ ಬಡ್ಡಿ ಆದಾಯ ತೆರಿಗೆ ಮುಕ್ತ. ಪಿಪಿಎಫ್‌ಗಿಂತ ಹೆಚ್ಚಿನ ಆದಾಯವನ್ನು ನೀಡುತ್ತದೆ. ಹೀಗಿದ್ದರೂ ಇದರಲ್ಲಿ ವೈಯಕ್ತಿಕವಾಗಿ ಗರಿಷ್ಠ 15 ಲಕ್ಷ ರೂ. ಹೂಡಿಕೆ ಮಾಡಬಹುದು. ಈ ಯೋಜನೆಯು ಐದು ವರ್ಷಗಳ ಅವಧಿಯನ್ನು ಹೊಂದಿದೆ. ಇನ್ನೂ ಮೂರು ವರ್ಷಗಳವರೆಗೆ ವಿಸ್ತರಿಸಬಹುದು. ಎಸ್‌ಸಿಎಸ್‌ಎಸ್ ಯೋಜನೆಯಲ್ಲಿ ಸರ್ಕಾರ ಇತ್ತೀಚೆಗೆ ಹಲವು ಬದಲಾವಣೆಗಳನ್ನು ತಂದಿದೆ. ಒಬ್ಬ ವ್ಯಕ್ತಿಯು ನಿವೃತ್ತಿ ಹೊಂದಿದ ದಿನಾಂಕದಿಂದ ಮೂರು ತಿಂಗಳೊಳಗೆ ಹಿರಿಯ ನಾಗರಿಕರ ಉಳಿತಾಯ ಯೋಜನೆಯಡಿ ಖಾತೆಯನ್ನು ತೆರೆಯಬಹುದು. ಅಲ್ಲದೆ ಹೊಸ ಅಧಿಸೂಚನೆಯು, ಸರ್ಕಾರಿ ಉದ್ಯೋಗಿಯ ಸಂಗಾತಿಯೂ ಯೋಜನೆಯಲ್ಲಿ ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ.
ಮೊದಲೇ ಹೇಳಿದಂತೆ ಈ ಯೋಜನೆಯನ್ನು ಹಿರಿಯ ನಾಗರಿಕರಿಗೆಂದೇ ರೂಪಿಸಲಾಗಿದೆ. ಸರ್ಕಾರಿ ಬೆಂಬಲಿತ ಯೋಜನೆ ಇದಾಗಿರುವುದರಿಂದ ಹೂಡಿಕೆ ಮಾಡುವುದರಿಂದ ಅಪಾಯವೂ ಕಡಿಮೆ. ಒಟ್ಟಿನಲ್ಲಿ ಸುರಕ್ಷಿತ ಹೂಡಿಕೆಗೆ ಆದ್ಯತೆ ನೀಡುವವರಿಗೆ ಇದು ಉತ್ತಮ ಆಯ್ಕೆ ಎನಿಸಿಕೊಂಡಿದೆ.
ಯಾರೆಲ್ಲ ಹೂಡಿಕೆ ಮಾಡಬಹುದು?
ಸರ್ಕಾರದಿಂದಲೇ ನಡೆಸಲಾಗುವ ಸಣ್ಣ ಉಳಿತಾಯ ಯೋಜನೆ ಇದಾಗಿದ್ದು, 60 ವರ್ಷ ಮೇಲ್ಪಟ್ಟು ವಯಸ್ಸಿನವರು ಅಥವಾ ವಿಆರ್‌ಎಸ್ ನಿವೃತ್ತಿ ಪಡೆದ 55 ವರ್ಷ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅರ್ಹರು. ವೈಯಕ್ತಿಕವಾಗಿ ಅಥವಾ ಸಂಗಾತಿಯೊಂದಿಗೆ ಜಂಟಿಯಾಗಿ ಖಾತೆಯನ್ನು ತೆರೆಯಬಹುದು.
ಬಡ್ಡಿ ದರ
ಅಂಚೆ ಕಚೇರಿ ಅಥವಾ ಬ್ಯಾಂಕ್‌ನಲ್ಲಿ ಎಸ್‌ಸಿಎಸ್‌ಎಸ್ ಖಾತೆ ತೆರೆಯಬಹುದು. ಸದ್ಯ ಈ ಯೋಜನೆಗೆ ವಾರ್ಷಿಕ ಶೇ. 8.2ರಷ್ಟು ಬಡ್ಡಿ ಇದೆ. ಕನಿಷ್ಠ ಹೂಡಿಕೆ 1,000 ರೂ. ಮತ್ತು ಗರಿಷ್ಠ ಹೂಡಿಕೆ 30 ಲಕ್ಷ ರೂ. ವಿಶೇಷ ಎಂದರೆ ತೆರಿಗೆ ಸೆಕ್ಷನ್ 80 ಸಿ ಅಡಿಯಲ್ಲಿ ಟ್ಯಾಕ್ಸ್ ಡಿಡಕ್ಷನ್‌ಗೂ ಅವಕಾಶ ಇದೆ.
ಮಾಸಿಕ 20 ಸಾವಿರ ರೂ. ಪಡೆಯುವುದು ಹೇಗೆ?
ಈ ಯೋಜನೆ ಮೂಲಕ ಮಾಸಿಕ 20 ಸಾವಿರ ರೂ. ಪಡೆಯುವುದು ಹೇಗೆ ಎನ್ನುವುದನ್ನು ಉದಾಹರಣೆ ಮೂಲಕ ನೋಡೋಣ. ಸದ್ಯ ಎಸ್‌ಸಿಎಸ್‌ಎಸ್ ಯೋಜನೆಗೆ 8.2 ಬಡ್ಡಿ ಲಭಿಸುವ ಹಿನ್ನೆಲೆಯಲ್ಲಿ ನೀವು 30 ಲಕ್ಷ ರೂ. ಹೂಡಿಕೆ ಮಾಡಿದರೆ ಪ್ರತಿ ವರ್ಷ 2.46 ಲಕ್ಷ ರೂ. ಬಡ್ಡಿ ಲಭಿಸುತ್ತದೆ. ಅಂದರೆ ಪ್ರತಿ ತಿಂಗಳು 20,000 ರೂ. ಸಿಕ್ಕಂತಾಗುತ್ತದೆ. ಒಟ್ಟಿನಲ್ಲಿ ಇದು ಹಿರಿಯ ನಾಗರಿಕರಿಗೆ ಉತತ್ಮ ಯೋಜನೆ ಎನಿಸಿಕೊಂಡಿದೆ.
ಇದನ್ನೂ ಓದಿ: Money Guide: ನಿವೃತ್ತಿಯ ನಂತರವೂ ಆರ್ಥಿಕವಾಗಿ ಸದೃಢರಾಗಬೇಕೆ?; ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ