ಬೆಂಗಳೂರು: ʼಸಾಲ ಮಾಡಿಯಾದ್ರೂ ತುಪ್ಪ ತಿನ್ನುʼ ಎನ್ನುವ ಗಾದೆ ಮಾತಿದೆ. ಅಂದರೆ ಐಷಾರಾಮಿ ಬುದುಕು ಬೇಕೆಂದಿದ್ದರೆ ಸಾಲ ಮಾಡಬೇಕಾಗುತ್ತದೆ ಎನ್ನುವ ಅರ್ಥದಲ್ಲಿ ಹಿರಿಯರು ಈ ಮಾತನ್ನು ಹೇಳಿದ್ದರು. ಆದರೆ ಈ ದುಬಾರಿ ದುನಿಯಾದಲ್ಲಿ, ಬೆಲೆ ಏರಿಕೆಯ ಈ ದಿನಗಳಲ್ಲಿ ಐಷಾರಾಮಿ ಬಿಡಿ ತೀರಾ ಅಗತ್ಯ ವಸ್ತುಗಳನ್ನು ಕೊಳ್ಳಲೂ ಸಾಲ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಅದಕ್ಕೆ ತಕ್ಕಂತೆ ವಿವಿಧ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಸರಳ ವಿಧಾನಗಳ ಮೂಲ ಲೋನ್ ನೀಡಲು ಮುಂದೆ ಬರುತ್ತಿವೆ. ನೆನಪಿಡಿ ತೀರಾ ಅನಿವಾರ್ಯವಲ್ಲದ ಹೊರತು ಸಾಲಕ್ಕೆ ಮುಂದಾಗಬೇಡಿ. ಇಂದಿನ ಮನಿಗೈಡ್ (Money Guide)ನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಯಾವೆಲ್ಲ ಅಂಶಗಳನ್ನು ಗಮನಿಸಬೇಕು ಎನ್ನುವುದನ್ನು ನೋಡೋಣ.
ಅಗತ್ಯ ನೋಡಿಕೊಳ್ಳಿ
ಮೊದಲಿನಂತೆ ಈಗ ಸಾಲ ಪಡೆದುಕೊಳ್ಳಲು ಅನೇಕ ಬಾರಿ ಬ್ಯಾಂಕ್ ಬಾಗಿಲಿಗೆ ಓಡಾಡಬೇಕಿಲ್ಲ, ದಿನಗಟ್ಟಲೆ ಕಾಯಬೇಕಾಗಿಲ್ಲ. ಅಗತ್ಯ ಡಾಕ್ಯುಮೆಂಟ್ ಹಾಜರುಪಡಿಸಿ ಆನ್‌ಲೈನ್‌ನಲ್ಲೇ, ಮನೆಯಲ್ಲಿ ಕುಳಿತು ಲೋನ್‌ಗೆ ಅಪ್ಲೈ ಮಾಡಬಹುದು. ಹಾಗಂತ ಸುಲಭವಾಗಿ ದೊರೆಯುತ್ತದೆ ಎನ್ನುವ ಕಾರಣಕ್ಕ ತೀರಾ ಸಣ್ಣ ಪುಟ್ಟ ವಿಚಾರಕ್ಕೂ ಸಾಲ ಮಾಡಬೇಡಿ. ತೀರಾ ಅನಿವಾರ್ಯವಲ್ಲದೆ ಹೊರತು ಲೋನ್ ತೆರೆಗೆದುಕೊಳ್ಳಲೇಬೇಡಿ. ಸಾಲ ಮಾಡಬೇಕಾ ಎನ್ನುವ ಬಗ್ಗೆ ಒಂದಲ್ಲ ನೂರಾರು ಬಾರಿ ಆಲೋಚಿಸಿ. ಮನೆಯ ಇತರ ಸದಸ್ಯರು, ಸ್ನೇಹಿತರ ಜತೆ ಚರ್ಚಿಸಿ. ಬೇಕೇ ಬೇಕೆ ಎಂದಾದರೆ ಮಾತ್ರ ಸಾಲಕ್ಕೆ ಅರ್ಜಿ ಸಲ್ಲಿಸಿ. ಸಾಧ್ಯವಾದಷ್ಟು ಹಾಸಿಗೆ ಇದ್ದಷ್ಟೇ ಕಾಲು ಚಾಚು ಪಾಲಿಸಿ ಫಾಲೋ ಮಾಡಿ.
ಕಡಿಮೆ ಅವಧಿಯನ್ನು ಆಯ್ದುಕೊಳ್ಳಿ
ಸರಿ, ನೀವು ಸಾಲ ಪಡೆದುಕೊಳ್ಳಲೇ ಬೇಕು ಎನ್ನುವ ತೀರ್ಮಾನಕ್ಕೆ ಬಂದಿದ್ದೀರಿ ಎಂದಿಟ್ಟುಕೊಳ್ಳೋಣ. ಈಗ ನೀವು ಗಮನಿಸಬೇಕಾದ ಇನ್ನೊಂದು ಮುಖ್ಯ ಅಂಶ ಎಂದರೆ ಸಾಲದ ಅವಧಿ. ಅಂದರೆ ನೀವು ಸಾಲ ತೀರಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತೀರಿ ಎನ್ನುವುದು ಕೂಡ ನಿಮ್ಮ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಅಂದರೆ ಅವಧಿ ದೀರ್ಘವಾಗದ್ದಷ್ಟು ಬಡ್ಡಿ ಹೆಚ್ಚಾಗುತ್ತದೆ. ಆದ್ದರಿಂದ ಕಡಿಮೆ ಅವಧಿಯ ಸಾಲ ಮರುಪಾವತಿ ಆಯ್ಕೆಯನ್ನು ಆಯ್ದುಕೊಳ್ಳಿ. ಉದಾಹರಣೆಗೆ: ಹೋಮ್ ಲೋನ್‌ನ ಅವಧಿ ಗರಿಷ್ಠ 30 ವರ್ಷ ತನಕ ಇರುತ್ತದೆ. ಸಹಜವಾಗಿ ದೀರ್ಘ ಅವಧಿ ಹೊಂದಿದ್ದರೆ ಇಎಂಐ ಪಾವತಿಸಬೇಕಾದ ಮೊತ್ತವೂ ಕಡಿಮೆ ಇರುತ್ತದೆ. ಆದರೆ ನೀವು ಪಾವತಿಸಬೇಕಾದ ಬಡ್ಡಿಯ ಮೊತ್ತ ಹೆಚ್ಚಿರುತ್ತದೆ. 10 ವರ್ಷಗಳ ಸಾಲಕ್ಕೆ ನೀವು ಪಡೆದ ಮೊತ್ತದ ಜತೆಗೆ ಅದರ ಶೇ. 57ರಷ್ಟು ಬಡ್ಡಿ ಪಾವತಿಸಬೇಕು. ಇನ್ನು 20 ವರ್ಷಕ್ಕೆ ಇದೇ ಮೊತ್ತ ಶೇ. 128. ಒಂದುವೇಳೆ ನೀವು 50 ಲಕ್ಷ ರೂ. ಸಾಲವನ್ನು 25 ವರ್ಷಗಳ ಅವಧಿಗೆ ಪಡೆದುಕೊಂಡರೆ ನೀವು ಸುಮಾರು 83.5 ಲಕ್ಷ ರೂ. (ಶೇ. 167) ಪಾವತಿಸಬೇಕಾಗುತ್ತದೆ.
ಕೆಲವು ಸಂದರ್ಭದಲ್ಲಿ ಕಡಿಮೆ ಆದಾಯ ಹೊಂದಿದ್ದರೆ ದೀರ್ಘ ಅವಧಿಯ ಮರುಪಾವತಿಯನ್ನು ಆಯ್ದುಕೊಳ್ಳುವುದು ಅನಿವಾರ್ಯವಾಗುತ್ತದೆ. ಇದನ್ನು ಆಯ್ದುಕೊಂಡಿದ್ದರೂ ಪ್ರತಿವರ್ಷ ಸಾಲ ಮರುಪಾವತಿಸುವ ಆಯ್ಕೆಯನ್ನು ಹೆಚ್ಚಿಸಬೇಕು. ಆದಾಯ ಹೆಚ್ಚುತ್ತಿದ್ದಂತೆ ಇಎಂಐ ಮೊತ್ತವನ್ನೂ ಜಾಸ್ತಿ ಮಾಡಬೇಕು.
ನಿಯಮಿತ ಪಾವತಿ
ಇಎಂಐಯನ್ನು ನಿಯಮಿತವಾಗಿ ಪಾವತಿಸಿ. ಯಾವುದೇ ಕಾರಣಕ್ಕೂ ಇದನ್ನು ತಪ್ಪಿಸಬೇಡಿ. ಮರುಪಾವತಿ ಕಂತು ಸೂಕ್ತವಾಗಿ ಪಾವತಿಸದಿದ್ದರೆ ಅದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಲ್ಲದೆ ಇದು ಭಾರೀ ದಂಡಕ್ಕೂ ಕಾರಣವಾಗಬಹುದು.
ಹೂಡಿಕೆಗಾಗಿ ಸಾಲ ಮಾಡಬೇಡಿ
ಸಾಲ ಪಡೆದ ಹಣವನ್ನು ಹೂಡಿಕೆ ಮಾಡಲು ಎಂದಿಗೂ ಬಳಸಬೇಡಿ. ಈಕ್ವಿಟಿಗಳಂತಹ ಹೆಚ್ಚಿನ ಆದಾಯವನ್ನು ನೀಡುವ ಹೂಡಿಕೆಗಳು ತುಂಬಾ ಅಸ್ಥಿರವಾಗಿರುತ್ತವೆ. ಮಾರುಕಟ್ಟೆಗಳು ಕುಸಿದರೆ, ನೀವು ನಷ್ಟವನ್ನು ಅನುಭವಿಸಬೇಕಾಗುತ್ತದೆ.
ದೊಡ್ಡ ಮೊತ್ತದ ಸಾಲಕ್ಕೆ ವಿಮೆ ಮಾಡಿಸಿ
ಹೋಮ್ ಲೋನ್ ಮತ್ತು ವೆಹಿಕಲ್ ಲೋನ್‌ನಂತಹ ದೊಡ್ಡ ಮೊತ್ತದ ಸಾಲ ಪಡೆಯುವಾಗ ಅಷ್ಟೂ ಮೊತ್ತಕ್ಕೆ ವಿಮೆ ಮಾಡಿಸಿ. ಇದಕ್ಕಾಗಿ ಟರ್ಮ್ ಇನ್ಶೂರೆನ್ಸ್ ಉತ್ತಮ. ಇದರಿಂದ ಒಂದು ವೇಳೆ ನಿಮಗೆ ಏನಾದರೂ ಸಂಭವಿಸಿದರೆ ಸಾಲವು ನಿಮ್ಮ ಕುಟುಂಬ ಹೊರೆ ಆಗುವುದಿಲ್ಲ. ಇಎಂಐ ಪಾವತಿಸಲು ಸಾಧ್ಯವಾಗದಿದ್ದರೆ ಬ್ಯಾಂಕ್‌ನವರು ಮನೆ ಅಥವಾ ಕಾರು ಸ್ವಾಧೀನಪಡಿಸಿಕೊಳ್ಳುತ್ತಾರೆ. ಹೀಗಾಗಿ 50 ಲಕ್ಷ ರೂ.ಗಳ ಟರ್ಮ್ ಇನ್ಶೂರೆನ್ಸ್ ಯೋಜನೆ ಮಾಡಿಸುವುದು ಉತ್ತಮ ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ.
ಬಡ್ಡಿ ಮೊತ್ತ ಲೆಕ್ಕ ಹಾಕಿ
ಸಾಲ ಪಡೆದುಕೊಳ್ಳಲು ನಿರ್ಧರಿಸಿದ ಬಳಿಕ ಬಡ್ಡಿದರವನ್ನು ಹೋಲಿಸಿ ನೋಡಿ. ವಿವಿಧ ಬ್ಯಾಂಕ್, ಸಾಲದಾತ ಸಂಸ್ಥೆಗಳ ಬಡ್ಡಿದರವನ್ನು ಗಮನಿಸಿ. ಜತೆಗೆ ಪ್ರತಿಯೊಂದು ಬ್ಯಾಂಕ್ ಕೂಡ ತನ್ನದೇ ಆದ ನಿಯಮಗಳನ್ನು ಹೊಂದಿರುತ್ತದೆ. ಆದ್ದರಿಂದ ಷರತ್ತುಗಳನ್ನು ಗಮನವಿಟ್ಟು ಓದಿ. ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಕೇಳಿ ತಿಳಿದುಕೊಳ್ಳಿ.
ಅಗತ್ಯ ದಾಖಲೆಗಳನ್ನು ಮುಂಚಿತವಾಗಿ ಸಿದ್ಧಪಡಿಸಿ
ತ್ವರಿತ ಲೋನ್ ಮಂಜೂರಾತಿಗಾಗಿ ಮುಂಚಿತವಾಗಿ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸುವುದು ಅತ್ಯಗತ್ಯ. ಸಾಮಾನ್ಯವಾಗಿ ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಗುರುತಿನ ಚೀಟಿ ಮತ್ತು ಎರಡು ವರ್ಷಗಳ ಆದಾಯ ತೆರಿಗೆ ರಿಟರ್ನ್ (ಐಟಿಆರ್)ನಂತಹ ಗುರುತಿನ ಪುರಾವೆಗಳನ್ನು ಬ್ಯಾಂಕ್‌ಗಳು ಕೇಳುತ್ತವೆ. ಈ ದಾಖಲೆಗಳನ್ನು ಎಷ್ಟು ಬೇಗ ಸಲ್ಲಿಸುತ್ತೀರೋ ಅಷ್ಟು ಬೇಗ ಸಾಲ ಮಂಜೂರಾಗುತ್ತದೆ. ಜತೆಗೆ ಆದಾಯದ ಮೂಲ (ಸ್ಯಾಲರಿ ಸ್ಲಿಪ್ ಅಥವಾ ಬ್ಯಾಂಕ್ ಸ್ಟೇಟ್‌ಮೆಂಟ್) ಸಿದ್ಧವಾಗಿಟ್ಟುಕೊಳ್ಳಿ.
ಅರ್ಜಿ ಸಲ್ಲಿಸುವ ಮುನ್ನ ಮತ್ತೊಮ್ಮೆ ಗಮನಿಸಿ
ಭರ್ತಿ ಮಾಡಿದ ನಿಮ್ಮ ಪರ್ಸನಲ್ ಲೋನ್ ಅಪ್ಲಿಕೇಷನ್ ಫಾರಂ ಅನ್ನು ಕೂಡಲೇ ಸಲ್ಲಿಸಬೇಡಿ. ಮತ್ತೊಮ್ಮೆ ವಿವರಗಳನ್ನು ಕಣ್ಣಾಡಿಸಿ ಮಾಹಿತಿ ಸರಿಯಾಗಿದೆ ಎನ್ನುವುದು ಖಚಿತಪಡಿಸಿಕೊಳ್ಳಿ. ಕೆಲವೊಂದು ಬ್ಯಾಂಕ್‌ಗಳು ಡಾಕ್ಯಮೆಂಟ್ ಅಪ್‌ಲೋಡ್ ಮಾಡಲು ಕೇಳುತ್ತವೆ. ಇದನ್ನೂ ಗಮನಿಸಿ. ಪೂರ್ಣವಾಗದ ಅರ್ಜಿ ತಿರಸ್ಕೃತವಾಗುವ ಸಾಧ್ಯತೆ ಇದೆ. ಹೀಗಾಗಿ ಷರತ್ತುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ.
ಇದನ್ನೂ ಓದಿ: Money Guide: 30 ಸಾವಿರ ಸಂಬಳ ಪಡೆಯುವವರೂ ಕೆಲವೇ ವರ್ಷಗಳಲ್ಲಿ ಕೋಟ್ಯಧಿಪತಿ ಆಗಲು ಸಾಧ್ಯ!