ಬೆಂಗಳೂರು: ಗೂಗಲ್ ಪೇ (Google Pay) ಯಾರಿಗೆ ಗೊತ್ತಿಲ್ಲ ಹೇಳಿ? ಭಾರತದಲ್ಲಿ ಸದ್ಯ ಡಿಜಿಟಲ್ ಪೇಮೆಂಟ್ ಜನಪ್ರಿಯಾಗಿದ್ದು, ಗೂಗಲ್ ಪೇ ಬಳಕೆದಾರರ ಸಂಖ್ಯೆ ಹೆಚ್ಚಿದೆ. ನಗರ, ಗ್ರಾಮಾಂತರ ಪ್ರದೇಶ ಎನ್ನುವ ಬೇಧವಿಲ್ಲದೆ ಎಲ್ಲ ಕಡೆ ಏಕೀಕೃತ ಪಾವತಿ ಇಂಟರ್ಫೇಸ್ (UPI) ವ್ಯವಸ್ಥೆ ಜಾರಿಯಲ್ಲಿದೆ. ಹೀಗಾಗಿ ಗ್ರಾಹಕ ಸ್ನೇಹಿಯಾಗಿರುವ ಗೂಗಲ್ ಪೇಯ ಬಳಕೆಯೂ ವ್ಯಾಪಕವಾಗಿದೆ. ಈ ಮಧ್ಯೆ ಇದೀಗ ಗೂಗಲ್ ಭಾರತದಲ್ಲಿ ತನ್ನ ವ್ಯಾಲೆಟ್ ಸೇವೆಯನ್ನು ಪ್ರಾರಂಭಿಸಿದೆ. ಹಾಗಾದರೆ ಗೂಗಲ್ ವ್ಯಾಲೆಟ್ (Google Wallet) ಎಂದರೇನು? ಇದು ಗೂಗಲ್ ಪೇಗಿಂತ ಹೇಗೆ ಭಿನ್ನ? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ (Money Guide).
ಗೂಗಲ್ ಪೇ ಆ್ಯಪ್‌ಗಿಂತ ಗೂಗಲ್ ವ್ಯಾಲೆಟ್‌ನ ಕಾರ್ಯ ವೈಖರಿ ಭಿನ್ನ. ಗೂಗಲ್ ವಾಲೆಟ್ ಹೆಸರಿಗೆ ತಕ್ಕಂತೆ ನಮ್ಮ ವ್ಯಾಲೆಟ್ (ಪರ್ಸ್)ನಂತೆಯೇ ಕಾರ್ಯ ನಿರ್ವಹಿಸಲಿದೆ. ಈ ಆ್ಯಪ್‌ನ ಮೂಲಕ ಹಣ ಪಾವತಿ ಮಾಡಲು ಸಾಧ್ಯವಿಲ್ಲ. ಬದಲಾಗಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಲಾಯಲ್ಟಿ ಕಾರ್ಡ್, ಗಿಫ್ಟ್ ಕಾರ್ಡ್, ಬಸ್, ಮೆಟ್ರೋ ಟಿಕೆಟ್ ಸೇರಿದಂತೆ ಇತರ ಡಿಜಿಟಲ್ ಕಾರ್ಡ್‌ಗಳನ್ನು ಸ್ಟೋರ್ ಮಾಡಿ ಇಟ್ಟುಕೊಳ್ಳಬಹುದಾಗಿದೆ. ಸರಳವಾಗಿ ಹೇಳುವುದಾದರೆ ಗೂಗಲ್ ವ್ಯಾಲೆಟ್ ಭಾರತದಲ್ಲಿ ಈಗಾಗಲೇ ಲಭ್ಯವಿರುವ ಡಿಜಿಲಾಕರ್‌ನಂತೆಯೇ ಕಾರ್ಯ ನಿರ್ವಹಿಸಲಿದೆ.
ಸುರಕ್ಷಿತ ವಿಧಾನ
ಇದು ಅತ್ಯಂತ ಸುರಕ್ಷಿತ ಖಾಸಗಿ ಡಿಜಿಟಲ್ ವ್ಯಾಲೆಟ್ ಎಂದು ಕಂಪನಿ ಹೇಳಿದೆ. ಗೂಗಲ್ 2022ರಲ್ಲಿ ಅಮೇರಿಕಾದಲ್ಲಿ ಈ ಡಿಜಿಟಲ್ ವ್ಯಾಲೆಟ್ ಅಪ್ಲಿಕೇಶನ್ ಅನ್ನು ಆರಂಭಿಸಿತ್ತು. ಇದಾಗಿ ಸುಮಾರು 2 ವರ್ಷಗಳ ಬಳಿಕ ಭಾರತದಲ್ಲಿ ಕಾರ್ಯಾಚರಿಸುತ್ತಿದೆ. ಗೂಗಲ್ ವ್ಯಾಲೆಟ್ ಇದೀಗ ಡೌನ್‌ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯವಿದೆ. ಸದ್ಯಕ್ಕೆ ಗೂಗಲ್ ತನ್ನ ವ್ಯಾಲೆಟ್ ಅನ್ನು ಭಾರತದಲ್ಲಿನ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಬಿಡುಗಡೆ ಮಾಡಿದೆ.
ನೀವು ಗೂಗಲ್ ವ್ಯಾಲೆಟ್‌ನಲ್ಲಿ ಹಣಕಾಸಿನ ಡೇಟಾವನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಬಹುದು. ಉದಾಹರಣೆಗೆ ನಿಮ್ಮ ಚಲನಚಿತ್ರ ಟಿಕೆಟ್‌ಗಳು ಮತ್ತು ಈವೆಂಟ್ ಟಿಕೆಟ್‌ಗಳನ್ನು ಭೌತಿಕವಾಗಿ ಇಟ್ಟುಕೊಳ್ಳುವ ಬದಲು ಇದರಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದು. ದೇಶದ ದೊಡ್ಡ ಕಂಪನಿಗಳಾದ ಪಿವಿಪಿ ಮತ್ತು ಐನಾಕ್ಸ್‌ಗಳು ಈಗಾಗಲೇ ಗೂಗಲ್ ವ್ಯಾಲೆಟ್‌ನಲ್ಲಿ ಲಭ್ಯ.
ಬಳಸುವುದು ಹೇಗೆ?
- ಗೂಗಲ್ ಪ್ಲೇ ಸ್ಟೋರ್ (Play Store)ಗೆ ಹೋಗಿ ಗೂಗಲ್ ವ್ಯಾಲೆಟ್ (Google Wallet) ಅಪ್ಲಿಕೇಷನ್ ಡೌನ್‌ಲೋಡ್ ಮಾಡಿ.
- ಅಪ್ಲಿಕೇಷನ್ ಓಪನ್ ಮಾಡಿ ‘Add to Walletʼ ಆಯ್ಕೆನ್ನು ಸೆಲೆಕ್ಟ್ ಮಾಡಿ. ಈಗ ನೀವು ಫೋಟೊ, ಲಾಯಲ್ಟಿ, ಗಿಫ್ಟ್ ಕಾರ್ಡ್ ಮತ್ತು ಟ್ರಾನ್ಸ್ಪೋರ್ಟ್ ಪಾಸ್ ಎನ್ನುವ ನಾಲ್ಕು ಆಯ್ಕೆಯನ್ನು ಪಡೆಯುತ್ತೀರಿ.
- ಬಾರ್ ಕೋಡ್ ಅಥವಾ ಕ್ಯೂಆರ್ ಕೋಡ್ ಬಳಸಿ ಪಾಸ್ ರಚಿಸಲು ಫೋಟೊ ಆಯ್ಕೆ ಮಾಡಿ.
- ವಿವಿಧ ಬ್ರ್ಯಾಂಡ್ಗಳಿಂದ ನಿಮ್ಮ ಲಾಯಲ್ಟಿ ಪಾಯಿಂಟ್ಗಳನ್ನು ಸೇರಿಸಲು ಲಾಯಲ್ಟಿ ಆಯ್ಕೆ ಬಳಸಿ. ಅದೇ ರೀತಿ ಗಿಫ್ಟ್ ಕಾರ್ಡ್ ಮತ್ತು ಟ್ರಾನ್ಸ್ಪೋರ್ಟ್ ಪಾಸ್ ಅನ್ನು ನಿಮ್ಮ ವ್ಯಾಲೆಟ್ಗೆ ಸೇರಿಸಿ.
ಗಮನಿಸಿ ಈ ಆ್ಯಪ್‌ನಲ್ಲಿ ಮೊದಲೇ ಹೇಳಿದಂತೆ ನಗದು ಪಾವತಿ ಸಾಧ್ಯವಿಲ್ಲ. ಅದಕ್ಕಾಗಿ ಗೂಗಲ್ ಪೇಯನ್ನು ಬಳಸಿ.
ಇದನ್ನೂ ಓದಿ: Money Guide: ಈ ರಜೆಯಲ್ಲಿ ಮಕ್ಕಳಿಗೆ ಆರ್ಥಿಕತೆಯ ಪ್ರಾಕ್ಟಿಕಲ್ ಪಾಠ ಮಾಡಿ