ಬೆಂಗಳೂರು: ಜೀವನದ ಇಳಿ ವಯಸ್ಸನ್ನು ನೆಮ್ಮದಿಯಿಂದ ಕಳೆಯಬೇಕು ಎನ್ನುವುದು ಬಹುತೇಕರ ಕನಸು. ದುಡಿಯಲು ಸಾಧ್ಯವಿಲ್ಲದಿದ್ದರೂ ಇತರರ ಮುಂದೆ ಕೈ ಚಾಚದೆ ಆರ್ಥಿಕವಾಗಿ ಸ್ವಾವಲಂಬಿಯಾಗಿರಬೇಕು ಎನ್ನುವುದನ್ನು ಪ್ರತಿಯೊಬ್ಬರೂ ಆಗ್ರಹಿಸುತ್ತಾರೆ. ಇದಕ್ಕಾಗಿ ಹಲವರು ಆರಂಭದಲ್ಲಿಯೇ ಒಂದಷ್ಟು ಮೊತ್ತವನ್ನು ಬ್ಯಾಂಕ್‌ನಲ್ಲಿ ಕೂಡಿಡುತ್ತಾರೆ. ಉತ್ತಮ ಸಂಬಳ ಇರುವವರು ಹೇಗೂ ಖರ್ಚು ನಿಭಾಯಿಸಿಕೊಂಡು ಇದನ್ನು ಸರಿತೂಗಿಸಿಕೊಂಡು ಹೋಗುತ್ತಾರೆ. ಆದರೆ ಅಸಂಘಟಿತ ವಲಯದ ಕಾರ್ಮಿಕರು, ದಿನಗೂಲಿ ಮಾಡುವವರು, ಕಡಿಮೆ ಸಂಬಳದ ಬರುವವರು ಏನು ಮಾಡಬೇಕು? ಬರುವ ಒಂದಷ್ಟು ಸಂಬಳದಲ್ಲಿ ಹೂಡಿಕೆ ಮಾಡುವುದಾದರೂ ಹೇಗೆ? ಎಂಬ ಪ್ರಶ್ನೆ ಕಾಡುವುದು ಸಹಜ. ಹೀಗಾಗಿ ಇಂತಹವರಿಗೆಂದೇ ಕೇಂದ್ರ ಸರ್ಕಾರ 2019ಯಲ್ಲಿ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ (Pradhan Mantri Minister Shram Yogi Mandhan (PM-SYM) ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯ ವಿವರ ಇಲ್ಲಿದೆ (Money Guide).
ಏನಿದು ಯೋಜನೆ?
ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದು ಅಸಂಘಟಿತ ವಲಯದ ಜನರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಗುರಿ ಹೊಂದಿದೆ. ನಿರ್ದಿಷ್ಟ ವಯಸ್ಸು ತಲುಪಿದ ನಂತರ (60 ವರ್ಷ) ಅಸಂಘಟಿತ ವಲಯದ ಕಾರ್ಮಿಕರಿಗೆ ಕೇಂದ್ರ ಸರಕಾರ ಪಿಂಚಣಿ ನೀಡುತ್ತದೆ. ಇದಕ್ಕಾಗಿ ಅವರು ಮಾಡಬೇಕಾದುದು ಇಷ್ಟೇ. ಪ್ರತಿ ತಿಂಗಳು ಒಂದಷ್ಟು ಮೊತ್ತ ಹೂಡಿಕೆ ಮಾಡಬೇಕು. ಸರ್ಕಾರವೂ ಅಷ್ಟೇ ಮೊತ್ತವನ್ನು ಭರಿಸುತ್ತದೆ. 60 ವರ್ಷ ಆದ ಬಳಿಕ ಪ್ರತಿ ತಿಂಗಳು ಪಿಂಚಣಿ ರೂಪದಲ್ಲಿ ಫಲಾನುಭವಿಗೆ 3,000 ರೂ. ಲಭಿಸುತ್ತದೆ. ಫಲಾನುಭವಿಯ ವಯಸ್ಸನ್ನು ಆಧರಿಸಿದ ಪ್ರತಿ ತಿಂಗಳ ಹೂಡಿಕೆಯ ಮೊತ್ತವನ್ನು ನಿರ್ಧರಿಸಲಾಗುತ್ತದೆ.
ಉದಾಹರಣೆ ಮೂಲಕ ನೋಡೋಣ
ಫಲಾನುಭವಿ ಈ ಯೋಜನೆಗೆ 18ನೇ ವಯಸ್ಸಿನಲ್ಲಿ ಹೂಡಿಕೆ ಮಾಡುತ್ತಾನೆ ಎಂದಿಟ್ಟುಕೊಳ್ಳೋಣ. ಆಗ ಆತ ಪ್ರತಿ ತಿಂಗಳು (60 ವರ್ಷದ ವರೆಗೆ) 55 ರೂ. ಹೂಡಿಕೆ ಮಾಡಬೇಕು. ಸರ್ಕಾರವೂ ಅಷ್ಟೇ ಮೊತ್ತವನ್ನು ಜಮೆ ಮಾಡುತ್ತದೆ. ಅಂದರೆ ಪ್ರತಿ ತಿಂಗಳು ಆತನ ಹೆಸರಿನಲ್ಲಿ 110 ರೂ. ಜಮೆ ಆಗುತ್ತದೆ. ಇನ್ನು 19ನೇ ವಯಸ್ಸಿನಲ್ಲಿ 58 ರೂ., 20ನೇ ವಯಸ್ಸಿನಲ್ಲಿ 61 ರೂ. ಹೀಗೆ ವಯಸ್ಸು ಹೆಚ್ಚದಂತೆಲ್ಲ ಪಾವತಿಸಬೇಕಾದ ಮೊತ್ತದ ಪ್ರಮಾಣ ಅಧಿಕವಾಗುತ್ತಲೇ ಹೋಗುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲಿರುವ ಗರಿಷ್ಠ ವಯಸ್ಸು 40 ವರ್ಷ. ಇನ್ನು 30 ವರ್ಷದ ಫಲಾನುಭವಿ 30 ವರ್ಷಗಳಲ್ಲಿ ಒಟ್ಟು 37,800 ರೂ. (105×12=1260, 1260×30=37,800) ಹಣ ಪಾವತಿಸಿದಂತಾಗುತ್ತದೆ. ಅಷ್ಟೇ ಮೊತ್ತವನ್ನು ಸರ್ಕಾರ ಭರಿಸುತ್ತದೆ. ಇದನ್ನು ಪಿಂಚಣಿ ರೂಪದಲ್ಲಿ ಪ್ರತಿ ತಿಂಗಳು 3,000 ರೂ.ನಂತೆ ವಿತರಿಸಲಾಗುತ್ತದೆ.
ಯಾರಿಗಾಗಿ ಈ ಯೋಜನೆ?
ಗೃಹಾಧಾರಿತ ಕಾರ್ಮಿಕರು, ಬೀದಿ ಮಾರಾಟಗಾರರು, ಮಿಡ್ ಡೇ ಮೀಲ್ ಕಾರ್ಮಿಕರು, ಹೆಡ್ ಲೋಡರ್, ಇಟ್ಟಿಗೆ ಕೆಲಸಗಾರರು, ಚಮ್ಮಾರರು, ಬಟ್ಟೆ ತೊಳೆಯುವವರು, ರಿಕ್ಷಾ ಚಾಲಕರು, ಭೂಮಿ ರಹಿತ ಕಾರ್ಮಿಕರು, ಕೃಷಿ ಕಾರ್ಮಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು, ಬೀಡಿ ಕಾರ್ಮಿಕರು, ಕೈಮಗ್ಗ ಕಾರ್ಮಿಕರು, ಚರ್ಮದ ಕೆಲಸಗಾರರು, ಆಡಿಯೋ-ದೃಶ್ಯ ಕೆಲಸಗಾರರು ಸೇರುದಂತೆ ಅಸಂಘಟಿತ ವಲಯದ ಕಾರ್ಮಿಕರು ಈ ಯೋಜನೆಗೆ ಅರ್ಹರು.
ಯೋಜನೆಗೆ ಯಾರು ಸೇರಬಹುದು?
- ಫಲಾನುಭವಿ 18ರಿಂದ 40 ವರ್ಷದೊಳಗಿರಬೇಕು
- ಮಾಸಿಕ ಆದಾಯ 15,000 ರೂ. ಅಥವಾ ಅದಕ್ಕಿಂತ ಕಡಿಮೆ ಇರಬೇಕು.
- ಆದಾಯ ತೆರಿಗೆ ಪಾವತಿಸುವವರಾಗಿರಬಾರದು.
- ಸಂಘಟಿತ ವಲಯದ ಕಾರ್ಮಿಕರಾಗಿರಬಾರದು ಹಾಗೂ ಇ.ಎಸ್.ಐ. / ಪಿ.ಎಫ್. / ಎನ್.ಪಿ.ಎಸ್. ಯೋಜನೆಗೆ ಒಳಪಟ್ಟಿರಬಾರದು.
- ಮಾಸಿಕ ಕೊಡುಗೆ ಮೊತ್ತವನ್ನು ವಯಸ್ಸಿನ ಆಧಾರದ ಮೇಲೆ 60 ವಯಸ್ಸಿನವರೆಗೆ ಪಾವತಿಸಬೇಕು.
- ಫಲಾನುಭವಿಯು ಮಾಸಿಕ ಕಂತನ್ನು ಸರಿಯಾಗಿ ಪಾವತಿಸಿದ್ದು, 60 ವರ್ಷದ ಒಳಗಾಗಿ ಮೃತಪಟ್ಟಲ್ಲಿ ಸಂಗಾತಿ ಮುಂದುವರಿಸಬಹುದು.
- ಚಂದಾದಾರರು ಯೋಜನೆಯಿಂದ 60 ವರ್ಷ ಪೂರ್ವದಲ್ಲೇ (ಮಧ್ಯದಿಂದಲೇ) ನಿರ್ಗಮಿಸಿದಲ್ಲಿ ಪಾವತಿಸಿರುವ ಮೊತ್ತಕ್ಕೆ ಮಾತ್ರ ಬಡ್ಡಿ ಲಭಿಸುತ್ತದೆ.
ಯೋಜನೆ ಆರಂಭಿಸಲು ಅಗತ್ಯವಾದ ದಾಖಲೆಗಳು
- ಮೊಬೈಲ್ ನಂಬರ್.
- ಬ್ಯಾಂಕ್ ಅಕೌಂಟ್ನ ಪಾಸ್ ಪುಸ್ತಕ, ಬಂಬರ್.
- ಆಧಾರ್ ನಂಬರ್.
ಎಲ್ಲಿ ಹೆಸರು ನೋಂದಾಯಿಸಬೇಕು?
ಈ ಯೋಜನೆಯನ್ನು ಸಾಮಾನ್ಯ ಸೇವಾ ಕೇಂದ್ರ (ಸಿ.ಎಸ್.ಸಿ.)ಗಳಲ್ಲಿ ಆರಂಭಿಸಬಹುದು ಅಥವಾ ಆನ್‌ಲೈನ್‌ನಲ್ಲಾದರೆ https://maandhan.in/maandhan/login ವೆಬ್‌ಸೈಟ್‌ಗೆ ತೆರಳಿ ಹೆಸರು ನೋಂದಾಯಿಸಬಹುದು.
ಇದನ್ನೂ ಓದಿ: Money Guide: ಅಸಂಘಟಿತ ವಲಯದ ಕಾರ್ಮಿಕರಿಗೆ ನೆರವಾಗುವ ಇ-ಶ್ರಮ ಯೋಜನೆ; ಹೀಗೆ ಹೆಸರು ನೋಂದಾಯಿಸಿ