ಬೆಂಗಳೂರು: ಕೆಲವು ವರ್ಷಗಳಲ್ಲಿ ಆರ್ಥಿಕ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯೇ ನಡೆದಿದೆ. ಹಿಂದೆಲ್ಲ ಬ್ಯಾಂಕ್ ಅಕೌಂಟ್ ಹೊಂದಿದವರ ಸಂಖ್ಯೆ ಕಡಿಮೆ ಇತ್ತು. ಆದರೆ ಈಗ ಹಾಗಲ್ಲ ಪರಿಸ್ಥಿತಿ ಬದಲಾಗಿದೆ. ಅದರಲ್ಲೂ ಜನ ಧನ ಯೋಜನೆ ಬಂದ ಬಳಿಕ ಪ್ರತಿಯೊಬ್ಬರ ಬಳಿಯೂ ಬ್ಯಾಂಕ್ ಅಕೌಂಟ್ ಇದೆ. ಹಾಗಾದರೆ ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಅಕೌಂಟ್ ಹೊಂದಿರಬೇಕು? ಒಂದಕ್ಕಿಂತ ಹೆಚ್ಚು ಅಕೌಂಟ್ ಹೊಂದಿದರೆ ಇದರಿಂದಾಗುವ ಅನುಕೂಲಗಳೇನು, ಅನನುಕೂಲಗಳೇನು? ಮುಂತಾದ ಪ್ರಶ್ನೆಗಳಿಗೆ ವಿಸ್ತಾರ ನ್ಯೂಸ್‌ನ ಎಕ್ಸಿಕ್ಯುಟಿವ್ ಎಡಿಟರ್ ಶರತ್ ಎಂ.ಎಸ್. ಇಲ್ಲಿ ಉತ್ತರಿಸಿದ್ದಾರೆ. (Money Guide).
ಮೊದಲಿಗೆ ಹೇಗೆ ಬೇರೆ ಬೇರೆ ಅಕೌಂಟ್ ಕ್ರಿಯೇಟ್ ಆಗುತ್ತವೆ ಎನ್ನುವುದನ್ನು ನೋಡೋಣ. ಉದಾಹರಣೆಗೆ ಒಬ್ಬ ವ್ಯಕ್ತಿ XYZ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದಿಟ್ಟುಕೊಳ್ಳಿ. ಆ ಕಂಪನಿ A ಎನ್ನುವ ಬ್ಯಾಂಕ್ ಅಕೌಂಟ್ ಓಪನ್ ಮಾಡಿಸಿರುತ್ತದೆ. ಆತ ಕಂಪನಿಯಿಂದ ಕೆಲಸ ಬಿಟ್ಟಾಗ ಆ ಬ್ಯಾಂಕ್ ಅಕೌಂಟ್ ಹಾಗೇ ಇರುತ್ತದೆ. ಆತ ಇನ್ನೊಂದು ಕಂಪನಿಗೆ ಸೇರಿಕೊಳ್ಳುತ್ತಾನೆ. ಅಲ್ಲಿ B ಎನ್ನುವ ಬ್ಯಾಂಕ್‌ನ ಅಕೌಂಟ್ ಓಪನ್ ಮಾಡಿಸಲಾಗುತ್ತದೆ. ಮತ್ತೆ ಆತ ಕೆಲಸ ಮಾಡುವ ಕಂಪನಿ ಬದಲಾಯಿಸುತ್ತಾನೆ. ಅಲ್ಲಿ ಬೇರೊಂದು ಬ್ಯಾಂಕ್ ಅಕೌಂಟ್ ತೆರೆಯಲಾಗುತ್ತದೆ. ಇತ್ತ ಆತನಿಗೆ ಹೋಮ್ ಲೋನ್ ಬೇಕಾಗುತ್ತದೆ. ಆಗ ಆತ ಉತ್ತಮ ಬಡ್ಡಿದರದಲ್ಲಿ ಲೋನ್ ಸಿಗುವ ಬ್ಯಾಂಕ್‌ಗೆ ಹೋಗಿ ಮತ್ತೆ ಅಕೌಂಟ್ ಕ್ರಿಯೇಟ್ ಮಾಡುತ್ತಾನೆ. ಹೀಗೆ ಕೆಲವರು ಗೊತ್ತಿದ್ದು ಹಲವು ಅಕೌಂಟ್ ಹೊಂದಿದ್ದರೆ ಇನ್ನು ಕೆಲವರು ಗೊತ್ತಿಲ್ಲದೆ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಓಪನ್ ಮಾಡುತ್ತಾರೆ. ಎಷ್ಟು ಬ್ಯಾಂಕ್ ಅಕೌಂಟ್ ಇದ್ದರೂ ಸಮಸ್ಯೆ ಇಲ್ಲ. ಆದರೆ ಅದನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು ಎನ್ನುತ್ತಾರೆ ಶರತ್.
ಹಲವು ಅಕೌಂಟ್ ಇರುವುದರಿಂದಾಗುವ ಪ್ರಯೋಜನಗಳು
ನಾವು ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ 5 ಲಕ್ಷ ರೂ.ಗಿಂತ ಅಧಿಕ ಹಣ ಇಟ್ಟಿದ್ದು, ಬ್ಯಾಂಕ್ ದಿವಾಳಿಯಾದರೆ ನಮಗೆ ಸಿಗುವುದು ಕೇವಲ 5 ಲಕ್ಷ ರೂ. ಮಾತ್ರ. ಅಂದರೆ ನೀವು 20 ಲಕ್ಷ ರೂ. ಇಟ್ಟಿದ್ದರೂ ಸರ್ಕಾರ ಅಥವಾ ಆರ್‌ಬಿಐ ವಾಗ್ದಾನ ಮಾಡುವ ಮೊತ್ತ 5 ಲಕ್ಷ ರೂ. ಮಾತ್ರ. ಅಂದರೆ ಉಳಿದ 15 ಲಕ್ಷ ರೂ. ಅನ್ನು ಕಳೆದುಕೊಳ್ಳಬೇಕಾಗುತ್ತದೆ. ಒಂದು ವೇಳೆ 4 ಬ್ಯಾಂಕ್ ಅಕೌಂಟ್ ಕ್ರಿಯೇಟ್ ಮಾಡಿ ತಲಾ 5 ಲಕ್ಷ ರೂ.ನಂತೆ ಡೆಪಾಸಿಟ್ ಇಟ್ಟರೆ ಅಷ್ಟೂ ಹಣ ಸುರಕ್ಷಿತವಾಗಿರುತ್ತದೆ. ಇನ್ನೂ ಅಧಿಕ ಮೊತ್ತದ ಹಣ ಇದ್ದರೆ ಮನೆಯವರ ಹೆಸರಿನಲ್ಲಿ ಅಕೌಂಟ್ ಓಪನ್ ಮಾಡಿ ಅದರಲ್ಲಿ ಇಡಬಹುದು. ಹೀಗಾಗಿ ಒಂದಕ್ಕಿಂತ ಅಧಿಕ ಅಕೌಂಟ್ ಇದ್ದರೆ ಹಣಕ್ಕೆ ಸುರಕ್ಷತೆ ಹೆಚ್ಚು. ಒಂದೇ ಅಕೌಂಟ್ ಆದರೆ ಸ್ವಲ್ಪ ರಿಸ್ಕ್ ಜಾಸ್ತಿ ಎಂದು ಶರತ್ ತಿಳಿಸುತ್ತಾರೆ.
ಯುಪಿಐ ಪಾವತಿಗೆ ಅನುಕೂಲ
ಈಗ ಯುಪಿಐ ಪಾವತಿ ಎನ್ನುವುದು ಸಾಮಾನ್ಯವಾಗಿ ಬಿಟ್ಟಿದೆ. ನಾವು ಈಗ ಪ್ರತಿಯೊಂದಕ್ಕೂ ಯುಪಿಐ ಬಳಸುತ್ತೇವೆ. ಬೆಂಗಳೂರಿನಂತಹ ಮಹಾನಗರದಿಂದ ಹಿಡಿದು ಚಿಕ್ಕ ಪುಟ್ಟ ನಗರಗಳಲ್ಲೂ ಈ ಡಿಜಿಟಲ್ ಪಾವತಿ ವೇಗವಾಗಿ ಬೆಳೆಯುತ್ತಿದೆ. ನಮ್ಮ ಬಳಿ ಒಂದೇ ಬ್ಯಾಂಕ್ ಅಕೌಂಟ್ ಇದೆ ಅಂದುಕೊಳ್ಳೋಣ. ಒಂದು ವೇಳೆ ನಮ್ಮ ಬ್ಯಾಂಕ್ ಸರ್ವರ್ ಡೌನ್ ಅಥವಾ ಇನ್ಯಾವುದೋ ತಾಂತ್ರಿಕ ಸಮಸ್ಯೆಯಿಂದ ಯುಪಿಐ ಪಾವತಿ ಸಾಧ್ಯವಾಗದಿದ್ದರೆ ಸಮಸ್ಯೆಯಾಗುತ್ತದೆ. ಮೊದಲೇ ಜೇಬಲ್ಲಿ ದುಡ್ಡು ಬೇರೆ ಇರುವುದಿಲ್ಲ. ಆಗ ಬೇರೆ ಬ್ಯಾಂಕ್ ಅಕೌಂಟ್ ಹೊಂದಿರುವುದು ಉತ್ತಮ. ಸಮಸ್ಯೆ ಇರುವ ಬ್ಯಾಂಕ್ ಬಿಟ್ಟು ಇನ್ನೊಂದು ಬ್ಯಾಂಕ್‌ನಿಂದ ಹಣ ಪಾವತಿಸಬಹುದು. ಒಟ್ಟಿನಲ್ಲಿ ಹಲವು ಖಾತೆ ಹೊಂದಿದ್ದರೆ ನಮ್ಮ ಡಿಜಿಟಲ್ ಟ್ರಾನ್ಸಾಕ್ಷನ್ ಸುಲಭವಾಗುತ್ತದೆ ಎಂದು ಶರತ್ ವಿವರಿಸುತ್ತಾರೆ.
ಒಂದೇ ಅಕೌಂಟ್ ಹೊಂದಿದ್ದರೆ ಈ ಅನುಕೂಲವೂ ಇದೆ
ಒಂದು ಬ್ಯಾಂಕ್ ಅಕೌಂಟ್ ಇದ್ದಾಗ ಐಟಿ ರಿಟರ್ನ್ಸ್ ಫೈಲ್ ಮಾಡುವುದು ಸುಲಭ. ಎಷ್ಟು ಆದಾಯ ಬಂದಿದೆ? ಯಾವ ಮೂಲದಿಂದ ಬಂದಿದೆ? ಎನ್ನುವುದನ್ನು ನಾವು ಆದಾಯ ತೆರಿಗೆ ವಿವರ ಸಲ್ಲಿಸುವಾಗ ತಿಳಿಸಬೇಕಾಗುತ್ತದೆ. ಒಂದೇ ಬ್ಯಾಂಕ್ ಅಕೌಂಟ್ ಇದ್ದಾಗ ಈ ಎಲ್ಲ ಮಾಹಿತಿ ಸುಲಭವಾಗಿ ಲಭಿಸುತ್ತದೆ. ಬೇರೆ ಬೇರೆ ಅಕೌಂಟ್ ಇದ್ದಾಗ ಎಲ್ಲವನ್ನೂ ತೆಗೆದು, ಒಟ್ಟುಗೂಡಿಸಿ ಲೆಕ್ಕಾಚಾರ ಹಾಕಬೇಕಾಗುತ್ತದೆ. ಇದನ್ನು ಸುಲಭವಾಗಿ ನಿಭಾಯಿಸಬಹುದು ಎನ್ನುವವರು ಹೆಚ್ಚು ಅಕೌಂಟ್ ಓಪನ್ ಮಾಡಬಹುದು. ಇನ್ನು ಒಂದೊಂದು ಬ್ಯಾಂಕ್ ಡೆಬಿಟ್ ಕಾರ್ಡ್‌ನಲ್ಲಿ ಬೇರೆ ಬೇರೆ ಕ್ಯಾಶ್ ಬ್ಯಾಕ್, ಡಿಸ್ಕೌಂಟ್‌ನಂತಹ ಪ್ರಯೋಜನ ದೊರೆಯುತ್ತದೆ. ಹೀಗಾಗಿ ಹೆಚ್ಚಿನ ಬ್ಯಾಂಕ್ ಅಕೌಂಟ್ ಹೊಂದಿದ್ದರೆ ಈ ರೀತಿಯ ಅನುಕೂಲಗಳನ್ನೂ ಪಡೆದುಕೊಳ್ಳಬಹುದು. ಇನ್ನೊಂದು ಸಮಸ್ಯೆ ಎಂದರೆ ಕೆಲವೊಮ್ಮೆ ನಾವು ಗೋಲ್ಡ್ ಡೆಬಿಟ್ ಕಾರ್ಡ್ ಪಡೆದುಕೊಳ್ಳುತ್ತೇವೆ. ಅದಕ್ಕೆ 800-900 ರೂ. ವಾರ್ಷಿಕ ಶುಲ್ಕವಿರುತ್ತದೆ. 3-4 ಅಕೌಂಟ್ ಇದ್ದರೆ 3-4 ಸಾವಿರ ರೂ. ಶುಲ್ಕಕ್ಕೆ ಕಟ್ ಆಗುತ್ತದೆ. ಹೀಗಾಗಿ ಡೆಬಿಟ್ ಕಾರ್ಡ್‌ನಿಂದ ಹೆಚ್ಚಿನ ಅನುಕೂಲ ಪಡೆಯುವವರಿಗೆ ಮಾತ್ರ ಕಾರ್ಡ್ ಹೆಚ್ಚು ಪ್ರಯೋಜನಕಾರಿ ಎಂದು ಶರತ್ ಸಲಹೆ ನೀಡುತ್ತಾರೆ.
ಮಿನಿಮಮ್ ಬ್ಯಾಲೆನ್ಸ್
ಇನ್ನು ಒಂದೇ ಅಕೌಂಟ್ ಇದ್ದರೆ ಮಿನಿಮಮ್ ಬ್ಯಾಂಕ್ ಬ್ಯಾಲೆನ್ಸ್ ಹೊಂದಿಸಿಕೊಳ್ಳುವದು ಸುಲಭ. ಕೆಲವು ಬ್ಯಾಂಕ್‌ಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ 10 ಸಾವಿರ ರೂ. ಇರುತ್ತದೆ. ಹಾಗಿದ್ದಾಗ ಹಲವು ಅಕೌಂಟ್ ಹೊಂದಿರುವುದು ಕಷ್ಟ. ಈ ಮಿನಿಮಮ್ ಬ್ಯಾಲೆನ್ಸ್ ಕಾಪಾಡಿಕೊಳ್ಳುವುದು ದೊಡ್ಡ ಸವಾಲು. ಯಾಕೆಂದರೆ ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ದರೆ ಮತ್ತೆ ಅದಕ್ಕೆ ಶುಲ್ಕ ಕಟ್ಟಬೇಕಾಗುತ್ತದೆ ಎನ್ನುತ್ತಾರೆ ಶರತ್.
ಕೆಲವರು ಹಲವು ಬ್ಯಾಂಕ್ ಅಕೌಂಟ್ ಹೊಂದಿದ್ದರೂ ಅದರಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಟ್ಟಿರುವುದಿಲ್ಲ. ಇದ್ದಕ್ಕಿದ್ದಂತೆ ಆ ಅಕೌಂಟ್‌ಗೆ ಯಾರಾದರೂ ದುಡ್ಡು ಹಾಕಿದರೆ ಮತ್ತೆ ಚಾಲೂ ಆಗುತ್ತದೆ. ಆಗ ಬ್ಯಾಂಕ್ ಪ್ರತಿ ತಿಂಗಳು 300-350 ರೂ. ಶುಲ್ಕ ವಿಧಿಸುತ್ತದೆ. ಹೀಗಾಗಿ ಬಳಸದೆ ಇರುವ ಬ್ಯಾಂಕ್ ಅಕೌಂಟ್ ಅನ್ನು ಕ್ಲೋಸ್ ಮಾಡುವುದು ಉತ್ತಮ ಅಥವಾ ಮಿನಿಮಮ್ ಬ್ಯಾಲೆನ್ಸ್ ಇಡುವುದು ಮುಖ್ಯ. ಹಲವರು ಸ್ಟಾಕ್ ಮಾರ್ಕೆಟ್‌ಗೆ ಅಂತಾನೇ ಪ್ರತ್ಯೇಕ ಬ್ಯಾಂಕ್ ಅಕೌಂಟ್ ಇಟ್ಟಿರುತ್ತಾರೆ. ಇದರಿಂದ ಸುಲಭವಾಗಿ ವ್ಯವಹರಿಸಬಹುದು. ಇನ್ನು ಕೆಲವರು ಸ್ಯಾಲರಿಗಾಗಿ ಪ್ರತ್ಯೇಕ ಖಾತೆ ಹೊಂದಿರುತ್ತಾರೆ. ಅದರಿಂದ ಬೇರೆ ಯಾವುದೇ ವ್ಯವಹಾರ ನಡೆಸುವುದಿಲ್ಲ. ಈ ಅಕೌಂಟ್‌ನಿಂದ ಇನ್ನೊಂದು ಅಕೌಂಟ್‌ಗೆ ದುಡ್ಡು ವರ್ಗಾಯಿಸಿ ಅಲ್ಲಿಂದ ಬಳಸುತ್ತಾರೆ. ಇನ್ನೊಂದು ಅಕೌಂಟ್ ಅನ್ನು ಉಳಿತಾಯಕ್ಕೆಂದೇ ಕ್ರಿಯೇಟ್ ಮಾಡುತ್ತಾರೆ. ಹೀಗಾಗಿ ಇಂತಿಷ್ಟೇ ಅಕೌಂಟ್ ಹೊಂದಿರಬೇಕು ಎನ್ನುವ ನಿಯಮಗಳೇನೂ ಇಲ್ಲ. ಆದರೆ ಅಕೌಂಟ್‌ನಲ್ಲಿ ಮಿನಿಮಮ್ ಬ್ಯಾಲೆನ್ಸ್ ಹೊಂದಿರುವುದು ಕಡ್ಡಾಯ ಎಂದು ಶರತ್ ವಿವರಿಸುತ್ತಾರೆ.
ಇದನ್ನೂ ಓದಿ: Money Guide: ಪಿಪಿಎಫ್, ಅಂಚೆ ಕಚೇರಿ; ಮಧ್ಯಮ ವರ್ಗದವರ ಹೂಡಿಕೆಗೆ ಇವು ಬೆಸ್ಟ್ ಪ್ಲಾನ್‌ಗಳು!