ಬೆಂಗಳೂರು: ವೈದ್ಯಕೀಯ ತುರ್ತು ಪರಿಸ್ಥಿತಿ ಇದ್ದಕ್ಕಿದ್ದಂತೆ ಮತ್ತು ಅನಿರೀಕ್ಷಿತವಾಗಿ ಅಪ್ಪಳಿಸಬಹುದು. ಇದು ಅಪಾರ ಒತ್ತಡ ಮತ್ತು ಅನಿಶ್ಚಿತತೆಯನ್ನು ಉಂಟು ಮಾಡುತ್ತದೆ. ಈ ಸಂದರ್ಭದಲ್ಲಿ ಆರೋಗ್ಯದ ಚಿಂತೆ ಕಾಡುವ ಜತೆಗೆ ಆರ್ಥಿಕ ವಿಚಾರವೂ ನಿಮ್ಮನ್ನು ಕುಗ್ಗುವಂತೆ ಮಾಡುತ್ತದೆ. ಅಂತಹ ಸವಾಲಿನ ಸಮಯದಲ್ಲಿ ಹಣದ ಲಭ್ಯತೆಯು ಅತ್ಯಂತ ಮಹತ್ವದ್ದಾಗಿರುತ್ತದೆ. ಯಾವಾಗಲೂ ಅನಿರೀಕ್ಷಿತ ಆಸ್ಪತ್ರೆ ಬಿಲ್, ಶಸ್ತ್ರಚಿಕಿತ್ಸೆಯ ವೆಚ್ಚಗಳಿಗೆ ಆರ್ಥಿಕವಾಗಿ ಸಿದ್ಧರಾಗಿರುವುದು ಅಗತ್ಯ. ಇದಕ್ಕಾಗಿ ಅಮೂಲ್ಯವಾದ ಉಳಿತಾಯವನ್ನು ಖರ್ಚು ಮಾಡುವ ಬದಲು ಪರ್ಯಾಯ ಹಣಕಾಸು ಮಾರ್ಗಗಳತ್ತ ಗಮನ ಹರಿಸಬಹುದಾಗಿದೆ. ಅದು ಹೇಗೆ ಎನ್ನುವ ವಿವರ ಇಲ್ಲಿದೆ (Money Guide).
ಆರೋಗ್ಯ ವಿಮೆ (Health Insurance)
ಸಮಗ್ರ ಆರೋಗ್ಯ ವಿಮಾ ರಕ್ಷಣೆಯನ್ನು ಹೊಂದಿರುವುದು ವೈದ್ಯಕೀಯ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಿಂದ ಪಾರಾಗುವ ಅತ್ಯಂತ ಪರಿಣಾಮಕಾರಿ ಮಾರ್ಗಗಳ ಪೈಕಿ ಪ್ರಮುಖವಾದುದು. ನಿಮ್ಮ ಕುಟುಂಬದ ಸದಸ್ಯರ ಆರೋಗ್ಯವನ್ನು ಸಂರಕ್ಷಿಸಲು ಮತ್ತು ನಿಮ್ಮ ಉಳಿತಾಯದ ಹಣವನ್ನು ರಕ್ಷಿಸಲು, ಉತ್ತಮ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಇಡೀ ಕುಟುಂಬಕ್ಕೆ ಆರೋಗ್ಯ ವಿಮೆಯ ಕವರೇಜ್ ಅಗತ್ಯ. ಕುಟುಂಬದ ಪ್ರತಿ ಸದಸ್ಯರಿಗೂ ಸಮಗ್ರ ಆರೋಗ್ಯ ವಿಮೆ ಮಾಡಿಸಿಕೊಳ್ಳುವುದು ಮುಖ್ಯ. ವೈದ್ಯಕೀಯ ಸೌಲಭ್ಯಗಳು ಹೆಚ್ಚಾದಂತೆ ಹೆಲ್ತ್ ಕೇರ್ ಕುರಿತ ವೆಚ್ಚಗಳೂ ಹೆಚ್ಚುತ್ತವೆ. ಅಂಥ ಸಂದರ್ಭದಲ್ಲಿ ಹೆಲ್ತ್ ಇನ್ಶೂರೆನ್ಸ್ ಕೈ ಹಿಡಿಯುತ್ತದೆ.
ಆರೋಗ್ಯ ವಿಮೆಯನ್ನು ಖರೀದಿಸಲು ಬಯಸುವವರು ಮೊದಲ ಹೆಜ್ಜೆಯಾಗಿ ತಮ್ಮ ಅಗತ್ಯಗಳನ್ನು ಅರಿತುಕೊಳ್ಳಬೇಕು. ಆರೋಗ್ಯ ವಿಮೆ ಬಗ್ಗೆ ಒಂದು ಸೂಕ್ತವಾದ ಪ್ಲಾನ್ ಮಾಡಿಕೊಳ್ಳಬೇಕು. ವ್ಯಕ್ತಿಗತವಾಗಿ ನಿಮಗೊಬ್ಬರಿಗೆ ಅಗತ್ಯವಿದೆಯೇ, ಇಡೀ ಕುಟುಂಬಕ್ಕೆ ಅಗತ್ಯ ಇದೆಯೇ ಎಂಬುದನ್ನು ತಿಳಿದುಕೊಳ್ಳಬೇಕು. ಹಾಗೂ ಎರಡೂ ಪರಿಸ್ಥಿತಿಗಳಲ್ಲಿ ಅದಕ್ಕೆ ತಗಲುವ ವೆಚ್ಚ, ನಿಯಮಗಳು ಮತ್ತು ಷರತ್ತುಗಳನ್ನು ತಿಳಿದುಕೊಳ್ಳಬೇಕು.
ಆರೋಗ್ಯ ವಿಮಾ ಪಾಲಿಸಿ ನಿಮ್ಮ ಎಲ್ಲ ಅಗತ್ಯಗಳನ್ನು ಒಳಗೊಂಡಿದೆ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯ. ಅಂದರೆ ನೀವು ಖರೀದಿಸಲು ಉದ್ದೇಶಿಸಿರುವ ಪಾಲಿಸಿ ಆಸ್ಪತ್ರೆ ವೆಚ್ಚಗಳು, ಹೊರರೋಗಿ ವೆಚ್ಚಗಳು ಮತ್ತು ರೋಗನಿರ್ಣಯ ಪರೀಕ್ಷೆಗಳಂತಹ ವಿಷಯಗಳನ್ನು ಒಳಗೊಂಡಿದೆಯೇ ಎನ್ನುವುದನ್ನು ಪರಿಶೀಲಿಸಿ. ನೀವು ಯಾವುದೇ ನಿರ್ದಿಷ್ಟ ವೈದ್ಯಕೀಯ ಅಗತ್ಯಗಳನ್ನು ಹೊಂದಿದ್ದರೆ ಅವುಗಳನ್ನು ಒಳಗೊಂಡಿರುವ ಪಾಲಿಸಿಯನ್ನು ಆಯ್ಕೆ ಮಾಡಿ.
ತುರ್ತು ಹೂಡಿಕೆ (Emergency Savings)
ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಆರ್ಥಿಕವಾಗಿ ಸಿದ್ಧರಾಗಿರುವುದು ಅತ್ಯಗತ್ಯ. ಉದ್ಯೋಗ ನಷ್ಟ ಅಥವಾ ವೈದ್ಯಕೀಯ ತುರ್ತು ಪರಿಸ್ಥಿತಿಗಳಂತಹ ಅನಿರೀಕ್ಷಿತ ಘಟನೆಗಳು ನಿಮ್ಮ ಹಣಕಾಸಿನ ಮೇಲೆ ಪ್ರಭಾವ ಬೀರಬಹುದು. ಹೀಗಾಗಿ ನಿಮ್ಮ ತುರ್ತು ನಿಧಿಯ ಮೇಲೆ ಹೂಡಿಕೆ ಮಾಡಿ. ಅಂದರೆ ಕನಿಷ್ಠ ಮೂರರಿಂದ ಆರು ತಿಂಗಳ ಜೀವನ ವೆಚ್ಚಗಳನ್ನು ಭರಿಸಬಹುದಾದಷ್ಟು ಮೊತ್ತ ನಿಮ್ಮ ಅಕೌಂಟ್‌ನಲ್ಲಿರಲಿ. ಈ ಆರ್ಥಿಕ ಭದ್ರತೆ ಮನಸ್ಸಿನ ಶಾಂತಿಯನ್ನು ಒದಗಿಸುತ್ತದೆ ಮತ್ತು ಅನಿರೀಕ್ಷಿತ ಸವಾಲುಗಳಿಂದ ನಿಮ್ಮನ್ನು ರಕ್ಷಿಸುತ್ತದೆ ಎನ್ನುತ್ತಾರೆ ತಜ್ಞರು. ಗಮನಿಸಿ ಈ ಮೊತ್ತವನ್ನು ತುರ್ತು ಪರಿಸ್ಥಿಯಲ್ಲಿ ಮಾತ್ರವೇ ಬಳಸಿ.
ಸಮೀಕ್ಷೆ ಏನು ಹೇಳುತ್ತದೆ?
ಸಮೀಕ್ಷೆಯೊಂದರ ಪ್ರಕಾರ, ಶೇ. 28ರಷ್ಟು ವೈಯಕ್ತಿಕ ಸಾಲ (Personal loans)ಗಳನ್ನು ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗಾಗಿ ತೆಗೆದುಕೊಳ್ಳಲಾಗುತ್ತದೆ. ಇದೇ ಕಾರಣಕ್ಕೆ ಡಿಜಿಟಲ್ ಸಾಲ ನೀಡುವ ಅಪ್ಲಿಕೇಶನ್‌ಗಳು ಜನಪ್ರಿಯತೆ ಗಳಿಸಿವೆ. ಕಡಿಮೆ ಅವಧಿಯಲ್ಲಿ ಸಾಲ ನೀಡಿವುದರಿಂದ ಇವುಗಳತ್ತ ಜನ ಸಾಮಾನ್ಯರು ವಾಲುತ್ತಿದ್ದಾರೆ. ಸಾಲ ನೀಡುವಾಗ ಪ್ರಮುಖ ಬ್ಯಾಂಕ್‌ಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳಿಗೆ ಕಾರ್ಯ ನಿರ್ವಹಿಸುವ ರೀತಿಗೆ ಹೋಲಿಸಿದರೆ ಇವುಗಳು ವಿಧಿಸುವ ಷರತ್ತುಗಳು ಸರಳ. ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆಯ ವೆಚ್ಚಗಳು, ಔಷಧಗಳು ಅಥವಾ ಇತರ ಆರೋಗ್ಯ ಸಂಬಂಧಿತ ವೆಚ್ಚಗಳನ್ನು ಭರಿಸಲು ತಕ್ಷಣದ ಹಣವನ್ನು ಪಡೆಯಲು ಈ ಅಪ್ಲಿಕೇಶನ್ ಆಧಾರಿತ ಸಾಲಗಳು ನೆರವಾಗುತ್ತವೆ.
ಆದಾಗ್ಯೂ ಈ ಅಪ್ಲಿಕೇಶನ್‌ಗಳ ಮೂಲಕ ಸಾಲ ಪಡೆಯುವಾಗ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಅಗತ್ಯದ ಸಮಯದಲ್ಲಿ ಅವು ನೆರವಾಗುತ್ತಾದರೂ ಮುಂದೊಂದು ದಿನ ಕೊರಳಿಗೆ ಉರುಳಾಗಿ ಪರಿಣಮಿಸದಂತೆ ನೋಡಿಕೊಳ್ಳಬೇಕಾಗುತ್ತದೆ ಎಂದು ತಜ್ಞರು ಕಿವಿ ಮಾತು ಹೇಳುತ್ತಾರೆ.
ಸಾಲ ಪಡೆಯುವ ಮುನ್ನ…
ಕೆಲವೊಂದು ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಸಾಲ ಪಡೆಯುವುದು ಅನಿವಾರ್ಯವಾಗುತ್ತದೆ. ಸಾಲ ಪಡೆಯುವ ಮುನ್ನ ಈ ವಿಚಾರಗಳತ್ತ ನಿಮ್ಮ ಗಮನವಿರಲಿ.
ಆರ್ಥಿಕ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಿ: ಸಾಲ ಪಡೆಯುವ ಮೊದಲು ಉಳಿತಾಯ, ವಿಮಾ ರಕ್ಷಣೆ ಮತ್ತು ಖರ್ಚು ಮಾಡಬಹುದಾದ ಆದಾಯ ಸೇರಿದಂತೆ ನಿಮ್ಮ ಆರ್ಥಿಕ ಸಂಪನ್ಮೂಲಗಳನ್ನು ಮೌಲ್ಯಮಾಪನ ಮಾಡಿ.
ಸಾಲದ ನಿಯಮಗಳನ್ನು ಅರ್ಥ ಮಾಡಿಕೊಳ್ಳಿ: ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಬಡ್ಡಿ ದರಗಳು, ಶುಲ್ಕಗಳು ಮತ್ತು ಮರು ಪಾವತಿ ಅವಧಿ ಸೇರಿದಂತೆ ಸಂಪೂರ್ಣ ನಿಯಮಗಳು ಮತ್ತು ಷರತ್ತುಗಳನ್ನು ಕೂಲಂಕುಷವಾಗಿ ಪರಿಶೀಲಿಸಿ.
ಬೇಕಾದಷ್ಟು ಮೊತ್ತ ಮಾತ್ರ ಪಡೆಯಿರಿ: ವೈದ್ಯಕೀಯ ವೆಚ್ಚಗಳನ್ನು ಸರಿದೂಗಿಸಲು ಅಗತ್ಯವಿರುವಷ್ಟು ಮೊತ್ತವನ್ನು ಮಾತ್ರ ಪಡೆದುಕೊಳ್ಳಿ. ಯಾವುದೇ ಕಾರಣಕ್ಕೂ ಅಗತ್ಯಕ್ಕಿಂತ ಹೆಚ್ಚು ಮೊತ್ತ ಪಡೆಯಬೇಡಿ. ಅತಿಯಾಗಿ ಸಾಲ ಪಡೆಯುವುದು ದೀರ್ಘಾವಧಿಯಲ್ಲಿ ಆರ್ಥಿಕ ಒತ್ತಡಕ್ಕೆ ಕಾರಣವಾಗಬಹುದು.
ಇದನ್ನೂ ಓದಿ: Money Guide: ಪಿಪಿಎಫ್, ಎನ್‌ಎಸ್‌ಸಿ, ಎಸ್‌ಸಿಎಸ್‌ಎಸ್ ಖಾತೆ ಸ್ಥಗಿತವಾಗದಂತೆ ನೋಡಿಕೊಳ್ಳಿ
ಮರುಪಾವತಿ ಸಮರ್ಪಕವಾಗಿರಲಿ: ಸಾಲ ಪಡೆಯುವುದರ ಜತೆಗೆ ಅದನ್ನು ಮರು ಪಾವತಿ ಮಾಡುವುದು ಕೂಡ ಅಷ್ಟೇ ಮುಖ್ಯ. ಸಾಲ ಪಡೆಯುವ ಮೊದಲೇ ಅದನ್ನು ಮರು ಪಾವತಿ ಮಾಡುವ ಬಗ್ಗೆ ಯೋಜನೆ ರೂಪಿಸಿ. ನಿಮ್ಮ ಬಜೆಟ್‌ಗೆ ಸರಿಹೊಂದುವಂತಹ ವಾಸ್ತವಿಕ ಮರುಪಾವತಿ ಯೋಜನೆಯನ್ನು ಕೈಗೊಳ್ಳಿ. ಸರ್ಕಾರದ ರಿಯಾಯಿತಿಯಂತಹ ಸೌಲಭ್ಯ ಅನ್ವಯವಾಗುತ್ತದೆಯೇ ಎನ್ನುವುದನ್ನು ಪರಿಶೀಲಿಸಿ.