ಬೆಂಗಳೂರು: ಕೇಂದ್ರ ಸರ್ಕಾರವು ನಾಗರಿಕರಿಗೆ ಹಲವು ರೀತಿಯ ದಾಖಲೆಗಳನ್ನು ನೀಡಿದೆ. ಇವುಗಳಲ್ಲಿ ಆಧಾರ್ ಕಾರ್ಡ್, ವೋಟರ್ ಐಡಿ ಹಾಗೂ ಪ್ಯಾನ್ ಕಾರ್ಡ್ ಮುಖ್ಯವಾದುದು. ಹಣ ವರ್ಗಾವಣೆಯಿಂದ ಹಿಡಿದು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಈ ದಾಖಲೆಗಳು ಅಗತ್ಯ. ಅದರಲ್ಲೂ ನಮ್ಮ ಆರ್ಥಿಕ ಚಟುವಟಿಕೆಗೆ ಪ್ಯಾನ್ ನಂಬರ್ (Permanent Account Number) ಕಡ್ಡಾಯಗೊಳಿಸಲಾಗಿದೆ. ಅಂದರೆ ಪ್ಯಾನ್ ಕಾರ್ಡ್ ಇಲ್ಲದೆ ಇನ್‌ಕಮ್ ಟ್ಯಾಕ್ಸ್, ಬ್ಯಾಂಕಿನ ವಹಿವಾಟನ್ನು ನಡೆಸಲು ಸಾಧ್ಯವಾಗುವುದಿಲ್ಲ. ಹಾಗಾದರೆ ಆಕಸ್ಮಿಕವಾಗಿ ಪ್ಯಾನ್ ಕಾರ್ಡ್ ಕಳೆದು ಹೋದರೆ ಏನು ಮಾಡಬೇಕು? ಮರಳಿ ಪಡೆಯುವುದು ಹೇಗೆ? ಡುಬ್ಲಿಕೇಟ್ ಕಾರ್ಡ್‌ಗೆ ಆನ್‌ಲೈನ್‌ನಲ್ಲೇ ಹೇಗೆ ಅಪ್ಲೈ ಮಾಡಬಹುದು? ಮುಂತಾದ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ (Money Guide).
ಮೊದಲು ಏನು ಮಾಡಬೇಕು?
ನಿಮ್ಮ ಪ್ಯಾನ್ ಕಾರ್ಡ್ ಕಳೆದುಹೋಗಿದ್ದರೆ ಅಥವಾ ಕಳವಾಗಿದ್ದರೆ ಮೊದಲು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು. ಇದರಿಂದ ಬೇರೆಯವರು ನಿಮ್ಮ ಪ್ಯಾನ್ ಕಾರ್ಡ್ ದುರ್ಬಳಕೆ ಮಾಡದಂತೆ ತಡೆಯಲು ಸಾಧ್ಯವಾಗುತ್ತದೆ. ಇತ್ತೀಚೆಗೆ ಪ್ಯಾನ್ ಕಾರ್ಡ್ ದುರ್ಬಳಕೆ ಪ್ರಕರಣಗಳು ಹೆಚ್ಚುತ್ತಿರುವುದುರಿಂದ ಈ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕು ಎಂದು ಆದಾಯ ತೆರಿಗೆ ಇಲಾಖೆ ಸೂಚಿಸಿದೆ. ಬಳಿಕ ನಕಲಿ ಪ್ಯಾನ್ ಕಾರ್ಡ್‌ಗೆ ಅಪ್ಲೈ ಮಾಡಬಹುದು. ನಕಲಿ ಪ್ಯಾನ್ ಕಾರ್ಡ್‌ನ ಅನುಕೂಲವೆಂದರೆ ನಿಮಗೆ ಹಳೆ ನಂಬರ್ ಸಿಗಲಿದೆ. ಅದು ನಿಮ್ಮ ಕಳೆದು ಹೋದ ಪಾನ್ ಕಾರ್ಡ್‌ನ ನಕಲಿಯಾಗಿರುತ್ತದೆ.
ಆನ್‌ಲೈನ್‌ನಲ್ಲಿ ಡುಬ್ಲಿಕೇಟ್ ಪ್ಯಾನ್ ಕಾರ್ಡ್ ಪಡೆಯುವ ರೀತಿ
- ಡುಬ್ಲಿಕೇಟ್ ಪ್ಯಾನ್ ಕಾರ್ಡ್ ಅಪ್ಲಿಕೇಷನ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
- ನಿಮ್ಮ ಪ್ಯಾನ್ ನಂಬರ್, ಆಧಾರ್ ನಂಬರ್ ಮತ್ತು ಡೇಟ್ ಆಫ್ ಬರ್ತ್ ಕಾಲಂ ಭರ್ತಿ ಮಾಡಿ.
- ಗಮನವಿಟ್ಟು ಷರತ್ತುಗಳನ್ನು ಓದಿ ಮನನ ಮಾಡಿಕೊಳ್ಳಿ.
- ಕ್ಯಾಪ್ಚಾ ಕೋಡ್ ಭರ್ತಿ ಮಾಡಿ.
- Submit ಬಟನ್ ಕ್ಲಿಕ್ ಮಾಡಿ.
- ಈಗ ಹೊಸ ಪುಟ ತೆರೆದುಕೊಳ್ಳಲಿದ್ದು, ಅದರಲ್ಲಿ ನಿಮ್ಮ ಪ್ಯಾನ್ ಕಾರ್ಡ್‌ನ ವಿವರ ಕಂಡು ಬರುತ್ತದೆ.
- ಪುಟದ ಕೆಳಗೆ ಕಂಡು ಬರುವ OTP on Email ID, Mobile Number ಆಯ್ಕೆಯನ್ನು ಸೆಲೆಕ್ಟ್ ಮಾಡಿ.
- Generate OTP ಆಪ್ಶನ್ ಕ್ಲಿಕ್ ಮಾಡಿ.
- ಒಟಿಪಿ ನಮೂದಿಸಿ Validate ಬಟನ್ ಆಯ್ಕೆ ಮಾಡಿ.
ಆಫ್‌ಲೈನ್‌ನಲ್ಲಿ ಡುಬ್ಲಿಕೇಟ್ ಪ್ಯಾನ್ ಕಾರ್ಡ್ ಪಡೆಯುವ ರೀತಿ
- ಪ್ಯಾನ್ ಸೆಂಟರ್, ಐಟಿ ಪ್ಯಾನ್ ಸೇವಾ ಕೇಂದ್ರಕ್ಕೆ ತೆರಳಿ.
- ‘Request for New PAN Changes or Correction in PAN Data’ ಅರ್ಜಿ ಪಡೆದು ಭರ್ತಿ ಮಾಡಿ.
- ಗಮನಿಸಿ ಬ್ಲಾಕ್ ಲೆಟರ್ನಲ್ಲಿ, ಕಪ್ಪು ಶಾಹಿಯಲ್ಲಿ, ಆಂಗ್ಲ ಭಾಷೆಯಲ್ಲೇ ಫಾರ್ಮ್ ಭರ್ತಿ ಮಾಡಬೇಕು.
- ಪ್ಯಾನ್ ಸಂಖ್ಯೆ ನಮೂದಿಸಿ. ಜತೆಗೆ ಇತ್ತೀಚಿನ ಛಾಯಾಚಿತ್ರ, ಸಹಿ ಅಗತ್ಯ.
- ಬಳಿಕ ಅರ್ಜಿ ಸಲ್ಲಿಸಿ.
ಯಾವೆಲ್ಲ ದಾಖಲೆ ಅಗತ್ಯ?
- ಐಡಿ ಪುರಾವೆ: ಆಧಾರ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಪಾಸ್ಪೋರ್ಟ್, ರೇಷನ್ ಕಾರ್ಡ್
- ವಯಸ್ಸು ಪುರಾವೆ: ಜನನ ಪ್ರಮಾಣ ಪತ್ರ, ಪಿಂಚಣಿ ಪತ್ರ, ವಿವಾಹ ಪ್ರಮಾಣ ಪತ್ರ, ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್
- ಅಫಿಡವೀತ್ ವಿಳಾಸ ಪುರಾವೆ: ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಪಾಸ್ಪೋರ್ಟ್, ರೇಷನ್ ಕಾರ್ಡ್, ಪಿಂಚಣಿ ಪತ್ರ
ಇದನ್ನೂ ಓದಿ: Money Guide: ನಿಮ್ಮ ಎನ್‌ಪಿಎಸ್ ಖಾತೆ ಸ್ಥಗಿತಗೊಂಡಿದ್ದರೆ ಚಿಂತಿಸಬೇಡಿ; ಮನೆಯಲ್ಲೇ ಕೂತು ಸಕ್ರಿಯಗೊಳಿಸುವ ವಿಧಾನ ಇಲ್ಲಿದೆ