ಬೆಂಗಳೂರು: ಪಡಿತರ ಚೀಟಿ (Ration Card) ಪ್ರಮುಖ ಗುರುತಿನ ದಾಖಲೆಗಳ ಪೈಕಿ ಒಂದು ಎನಿಸಿಕೊಂಡಿದೆ. ಸರ್ಕಾರದ ವಿವಿಧ ಸೌಲಭ್ಯ, ಸಬ್ಸಿಡಿ ದರದಲ್ಲಿ ಆಹಾರ ಧಾನ್ಯ (ಪಡಿತರ) ಪಡೆಯಲು ರೇಷನ್ ಕಾರ್ಡ್ ಹೊಂದಿರುವುದು ಕಡ್ಡಾಯ. ಜತೆಗೆ ವಾಸಸ್ಥಳ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಪ್ಯಾನ್ ಕಾರ್ಡ್, ಚಾಲಕರ ಪರವಾನಗಿ ಇತ್ಯಾದಿಗೆ ಅರ್ಜಿ ಸಲ್ಲಿಸುವಾಗ ಪಡಿತರ ಚೀಟಿಯನ್ನು ಗುರುತಿನ ಪುರಾವೆಯಾಗಿ ಬಳಸಲಾಗುತ್ತದೆ. ಇದನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವಿತರಿಸುತ್ತದೆ. ಕಾರಣಾಂತರಗಳಿಂದ ಕೆಲವು ತಿಂಗಳಿಂದ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಮುಂದಿನ ತಿಂಗಳು ಇದು ಪುನರಾಂಭಗೊಳ್ಳಲಿದ್ದು, ಗ್ರಾಹಕರು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಈ ಬಗ್ಗೆ ವಿವರ ಇಲ್ಲಿದೆ (Money Guide).
ಅಗತ್ಯ ದಾಖಲೆಗಳು
ಗ್ರಾಮಾಂತರ ಪ್ರದೇಶ
- ನಿಮ್ಮ ಗ್ರಾಮ ಪಂಚಾಯಿತಿಯ ಹೆಸರು
- ಈಗ ವಾಸ ಮಾಡುತ್ತಿರುವ ಮನೆ ವಿಳಾಸ
- ಮನೆಯ ಆಸ್ತಿ ಸಂಖ್ಯೆ ವಿವರ
- ಮನೆಯ ವಿದ್ಯುತ್ ಸಂಪರ್ಕದ ಬಿಲ್ ಪ್ರತಿ
- ಕುಟುಂಬದ ಎಲ್ಲ ಸದಸ್ಯರ ಹೆಸರು, ಸದಸ್ಯರು, ಮುಖ್ಯಸ್ಥರು/ಅರ್ಜಿದಾರರೊಂದಿಗೆ ಹೊಂದಿರುವ ಸಂಬಂಧ, ಕುಟುಂಬ ಸದಸ್ಯರೆಲ್ಲರ ಹುಟ್ಟಿದ ದಿನಾಂಕ, ವೃತ್ತಿ ಮತ್ತು ಅವರ ವಾರ್ಷಿಕ ವರಮಾನ.
- ಈಗಿರುವ ಮನೆಯಲ್ಲಿ ಎಷ್ಟು ಸಮಯದಿಂದ ವಾಸವಾಗಿದ್ದಾರೆಂಬ ಮಾಹಿತಿ.
- ನಿಮ್ಮ ಕುಟುಂಬಕ್ಕಿರುವ ಅಡುಗೆ ಅನಿಲದ ಸರಬರಾಜಿನ ಇತ್ತಿಚಿನ ಬಿಲ್/ರಶೀದಿ.
ನಗರ / ಪಟ್ಟಣ ಪ್ರದೇಶ
- ನೀವು ವಾಸವಿರುವ ನಗರಸಭೆ / ಪುರಸಭೆ / ನಗರ ಪಾಲಿಕೆಯ ವಾರ್ಡ್ ಸಂಖ್ಯೆ
- ಬೆಂಗಳೂರು ಅನೌಪಚಾರಿಕ ಪಡಿತರ ಪ್ರದೇಶದವರಾಗಿದ್ದಲ್ಲಿ (ಬಿಬಿಎಂಪಿ ಪ್ರದೇಶ) ನೀವು ಆಹಾರ ಇಲಾಖೆಯ ಯಾವ ವಲಯ ವ್ಯಾಪ್ತಿಯಲ್ಲಿದ್ದೀರಿ ಎಂಬ ಬಗ್ಗೆ ಮಾಹಿತಿ (ಇದನ್ನು ಸುಲಭವಾಗಿ ತಿಳಿಯಲು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಯವರನ್ನು ಸಂಪರ್ಕಿಸಿ, ಇಲ್ಲವೇ ನಿಮ್ಮ ನೆರೆಹೊರೆಯವರಲ್ಲಿ ಈಗಾಗಲೇ ಲಭ್ಯವಿರುವ ಪಡಿತರ ಚೀಟಿಯನ್ನು ನೋಡಿ ತಿಳಿಯಿರಿ)
- ನಿಮ್ಮ ಮನೆಯ ವಿದ್ಯುತ್ ಬಿಲ್
- ನಿಮ್ಮ ನಿವಾಸದ ಪೂರ್ಣ ವಿಳಾಸ (ಅಂಚೆ ಪಿನ್ ಕೋಡ್ ಕಡ್ಡಾಯ). ಸ್ವಂತ ಮನೆಯಾಗಿದ್ದಲ್ಲಿ
- ಮನೆಯ ಆಸ್ತಿ ಸಂಖ್ಯೆ ವಿವರ, ನಿಮ್ಮ ಮನೆ ವಿಳಾಸ ಹುಡುಕಲು ಸುಲಭವಾಗುವ ಹತ್ತಿರದ ಸ್ಥಳದ ಗುರುತು
- ಕುಟುಂಬದ ಸದಸ್ಯರ ಹೆಸರು, ಸದಸ್ಯರು, ಮುಖ್ಯಸ್ಥರು/ಅರ್ಜಿದಾರರೊಂದಿಗೆ ಹೊಂದಿರುವ ಸಂಬಂಧ, ಕುಟುಂಬ ಸದಸ್ಯರೆಲ್ಲರ ಹುಟ್ಟಿದ ದಿನಾಂಕ, ವೃತ್ತಿ ಮತ್ತು ಅವರ ವಾರ್ಷಿಕ ವರಮಾನ.
- ಈಗಿರುವ ಮನೆಯಲ್ಲಿ ಎಷ್ಟು ಸಮಯದಿಂದ ವಾಸವಾಗಿದ್ದಾರೆಂಬ ಮಾಹಿತಿ.
- ನಿಮ್ಮ ಸಂಪರ್ಕದ ಮೊಬೈಲ್ ನಂಬರ್ (ಕಡ್ಡಾಯ), ಸ್ವಂತ ಮೊಬೈಲ್ ಇಲ್ಲದಿದ್ದರೂ ನಿಮ್ಮನ್ನು ಸಂಪರ್ಕಿಸಬಹುದಾದ ಯಾವುದಾದರೂ ಮೊಬೈಲ್ ಸಂಖ್ಯೆಯನ್ನು ನೀಡುವುದು.
- ಅರ್ಜಿದಾರರು ಅವಿವಾಹಿತರಾಗಿದ್ದಲ್ಲಿ ಅವರ ಪೋಷಕರಿರುವ ಪೂರ್ಣ ವಿಳಾಸ
- ನಿಮ್ಮ ಕುಟುಂಬದ ಅಡುಗೆ ಅನಿಲ ಸಂಪರ್ಕದ ವಿವರ/ಇತ್ತೀಚಿನ ಎಲ್.ಪಿ.ಜಿ. ಬಿಲ್ ಪ್ರತಿ
ಅರ್ಜಿ ಸಲ್ಲಿಸುವುದು ಹೇಗೆ?
ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬೇಕಿದ್ದರೆ ನೀವು ಆಹಾರ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಲ್ಲಿ ಇ-ಸರ್ವಿಸ್ (ಇ-ಸೇವೆ) ಮೇಲೆ ಕ್ಲಿಕ್ ಮಾಡಬೇಕು. ಇದರಲ್ಲಿ ಕೆಳಗಡೆ ನಿಮಗೆ ಇ-ಪಡಿತರ ಚೀಟಿ ಆಯ್ಕೆ ಕಾಣುತ್ತದೆ. ಅದರಲ್ಲಿ ಕೆಳಗಿನ ಬಾಣದ ಗುರುತಿನ ಮೇಲೆ ಕ್ಲಿಕ್ ಮಾಡಿದರೆ ಹೊಸ ಪಡಿತರ ಚೀಟಿ ಎಂಬ ಆಯ್ಕೆ ತೋರಿಸುತ್ತದೆ. ಅಲ್ಲಿ ಎಪಿಎಲ್ ಹಾಗೂ ಬಿಪಿಎಲ್ ಆಯ್ಕೆ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದ ಬಳಿಕ ಅಗತ್ಯ ದಾಖಲೆಗಳನ್ನು ನೀವು ಸಲ್ಲಿಸಬೇಕಾಗುತ್ತದೆ.
ಇದನ್ನೂ ಓದಿ: Bal Jeevan Bima: ಮಕ್ಕಳ ಹೆಸರಲ್ಲಿ ನಿತ್ಯ 6 ರೂ.ನಂತೆ ಕಟ್ಟಿದರೆ 1 ಲಕ್ಷ ರೂ. ವಿಮೆಯ ರಕ್ಷಣೆ