ಬೆಂಗಳೂರು: ನೌಕರರ ಭವಿಷ್ಯ ನಿಧಿ (Employees’ Provident Fund) ಅತ್ಯುತ್ತಮ ನಿವೃತ್ತಿ ಉಳಿತಾಯ ಆಯ್ಕೆ ಎನಿಸಿಕೊಂಡಿದೆ. ಈ ಯೋಜನೆಯಲ್ಲಿ ಉದ್ಯೋಗಿಗಳು ಮತ್ತು ಉದ್ಯೋಗದಾತರಿಂದ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ಉಳಿತಾಯವನ್ನು ಉತ್ತೇಜಿಸಲಾಗುತ್ತದೆ. ನಿವೃತ್ತಿಗಾಗಿ ಉಳಿತಾಯ ಮಾಡಲು ಇಪಿಎಫ್ ಒಂದು ಸುಲಭ ಮಾರ್ಗ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಇದು ನಿಮ್ಮ ಸಂಬಳದಿಂದ ಸ್ವಯಂಚಾಲಿತವಾಗಿ ಕಡಿತಗೊಳ್ಳುವುದರಿಂದ ಪ್ರತ್ಯೇಕವಾಗಿ ಹೂಡಿಕೆ ಮಾಡಬೇಕಾಗಿಲ್ಲ. ಇನ್ನೊಂದು ಮುಖ್ಯ ಅನುಕೂಲ ಎಂದರೆ ತುರ್ತು ಪರಿಸ್ಥಿತಿಯಲ್ಲಿ ಈ ಅಕೌಂಟ್‌ನಿಂದ ಒಂದಷ್ಟು ಹಣವನ್ನು ಹಿಂಪಡೆಯಬಹುದು. ಇದಕ್ಕಾಗಿ ನಿವೃತ್ತಿವರೆಗೆ ಕಾಯಬೇಕಾಗಿಲ್ಲ. ಇಂದಿನ ಮನಿಗೈಡ್ (Money Guide)ನಲ್ಲಿ ನಿಮ್ಮ ಇಪಿಎಫ್ ಬ್ಯಾಲನ್ಸ್ ಅನ್ನು ಮೊಬೈಲ್‌ನಲ್ಲೇ ಹೇಗೆ ನೋಡಬಹುದು ಎನ್ನುವ ವಿವರವಿದೆ.
ಇಪಿಎಫ್ ಖಾತೆಯ ವೈಶಿಷ್ಟ್ಯ
- ಉದ್ಯೋಗಿಗಳ ಕೊಡುಗೆ ಸಾಮಾನ್ಯವಾಗಿ ಮೂಲ ವೇತನದ ಶೇ. 12ರಷ್ಟಿರುತ್ತದೆ.
- ಉದ್ಯೋಗದಾತರ ಕೊಡುಗೆ ನಿಮ್ಮ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇ. 12ಕ್ಕೆ ಸಮನಾಗಿರುತ್ತದೆ. ಉದ್ಯೋಗದಾತರ ಕೊಡುಗೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ: ಅವೆಂದರೆ- ಇಪಿಎಫ್ ಮತ್ತು ನೌಕರರ ಪಿಂಚಣಿ ಯೋಜನೆ(ಇಪಿಎಸ್).
- ಹೀಗೆ ನಿಮ್ಮ ಮತ್ತು ಉದ್ಯೋಗದಾತರ ಕೊಡುಗೆಗಳೊಂದಿಗೆ ಪ್ರತಿ ತಿಂಗಳು ನಿವೃತ್ತಿಗಾಗಿ ಗಣನೀಯ ಮೊತ್ತವನ್ನು ಮೀಸಲಿಡಲಾಗುತ್ತದೆ. ಇದು ಭಾರತದಲ್ಲಿ ಕಡ್ಡಾಯ.
ಬ್ಯಾಲನ್ಸ್ ಪರಿಶೀಲಿಸುವುದು ಹೇಗೆ?
ವೆಬ್‌ಸೈಟ್
- ಇಪಿಎಫ್ಒ ವೆಬ್‌ಸೈಟ್ www.epfindia.gov.in ವೆಬ್ಸೈಟ್ಗೆ ಭೇಟಿ ನೀಡಿ.
- ಬಳಿಕ ‘Our Services’ ಆಯ್ಕೆಯ ಒಳಗೆ ಬರುವ ‘For Employees’ ಅನ್ನು ಸೆಲೆಕ್ಟ್ ಮಾಡಿ.
- ನಂತರ ‘Services’ ಆಯ್ಕೆ ಕ್ಲಿಕ್ ಮಾಡಿ
- ‘Member Passbook’ ಸೆಲೆಕ್ಟ್ ಮಾಡಿ.
- ಈಗ ಯುಎಎನ್ ನಂಬರ್, ಪಾಸ್ವರ್ಡ್, ಕ್ಯಾಪ್ಚಾ ನಮೂದಿಸಿದರೆ ವಿವರ ಲಭ್ಯವಾಗುತ್ತದೆ.
ಉಮಾಂಗ್ ಆ್ಯಪ್
ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಆ್ಯಪ್ ಸ್ಟೋರ್‌ನಲ್ಲಿ ‘UMANG’ ಆ್ಯಪ್ ಡೌನ್‌ಲೋಡ್ ಮಾಡಿ. ಬಳಿಕ ನಿಮ್ಮ ಹೆಸರು ನೋಂದಾಯಿಸಿ. ‘Service’ ಆಯ್ಕೆ ಕ್ಲಿಕ್ ಮಾಡಿ. ನಂತರ ‘View Passbook’ ಕ್ಲಿಕ್ ಮಾಡಿ. ಅದಾದ ಬಳಿಕ ‘Employee-centric service’ ಆಪ್ಶನ್ ಆಯ್ಕೆ ಮಾಡಿ. ಮುಂದಿನ ಹಂತದಲ್ಲಿ ಮತ್ತೊಂದು ಹೊಸ ಪುಟ ತೆರೆಯುತ್ತದೆ. ಇಪಿಎಫ್ಒನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗಿದೆ ಎಂಬ ಸಂದೇಶ ಇದರಲ್ಲಿ ಮೂಡುತ್ತದೆ. ಒಮ್ಮೆ ನೀವು ಒಟಿಪಿಯನ್ನು ನಮೂದಿಸಿ ಮತ್ತು ‘OK’ ಬಟನ್ ಕ್ಲಿಕ್ ಮಾಡಿದ ನಂತರ, ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಇಪಿಎಫ್ ಪಾಸ್‌ಬುಕ್ ಅನ್ನು ನೋಡಬಹುದು ಮತ್ತು ನಿಮ್ಮ ಇಪಿಎಫ್ ಬ್ಯಾಲೆನ್ಸ್ ಪರಿಶೀಲಿಸಬಹುದು.
ಎಸ್‌ಎಂಎಸ್
ನಿಮ್ಮ ಮೊಬೈಲ್ ನಂಬರ್ ಯುಎಎನ್ ಇಪಿಎಫ್ಒನಲ್ಲಿ ನೋಂದಾಯಿಸಲ್ಪಟ್ಟಿದ್ದರೆ, 7738299899 ಎಸ್ಎಂಎಸ್ ಕಳುಹಿಸುವ ಮೂಲಕ ಪಿಎಫ್ ಬ್ಯಾಲೆನ್ಸ್ ವಿವರಗಳನ್ನು ನೀವು ಪಡೆಯಬಹುದು. 7738299899 ನಂಬರ್‌ಗೆ EPFOHO UAN ENG ಎಂದು ಸಂದೇಶ ಕಳುಹಿಸಿ.
ಮಿಸ್ಡ್ ಕಾಲ್
ಮಿಸ್ಡ್ ಕಾಲ್ ಕೊಡುವ ಮೂಲಕವೂ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಬಹುದು. ಅದಕ್ಕಾಗಿ ನೀವು 011-22901406 ನಂಬರ್‌ಗೆ ನೋಂದಾಯಿಸಿದ ಮೊಬೈಲ್ ನಂಬರ್‌ನಿಂದ ಮಿಸ್ಡ್ ಕಾಲ್ ಕೊಡಿ.
ಇದನ್ನೂ ಓದಿ: Money Guide: ಎನ್‌ಪಿಎಸ್‌ನಲ್ಲಿ ಸಿಪ್; ನಿವೃತ್ತಿ ಜೀವನಕ್ಕೆ ಉತ್ತಮ ಕೊಡುಗೆ; ನೋಂದಣಿಯ ಸಂಪೂರ್ಣ ವಿವರ ಇಲ್ಲಿದೆ