ಬೆಂಗಳೂರು: ಆಧಾರ್ ಕಾರ್ಡ್ (Aadhaar Card) ಸದ್ಯ ದೇಶದ ಅತ್ಯಂತ ಮಹತ್ವದ ಗುರುತಿನ ಚೀಟಿ ಎನಿಸಿಕೊಂಡಿದೆ. ಸರ್ಕಾರದ ಸೌಲಭ್ಯ ಪಡೆದುಕೊಳ್ಳುವುದರಿಂದ ಹಿಡಿದು ಉದ್ಯೋಗಕ್ಕೆ ಅರ್ಜಿ ಸಲ್ಲಿಕೆ, ಬ್ಯಾಂಕ್ ಖಾತೆ ತೆರೆಯುವುದು, ಸಿಮ್ ಪಡೆಯುವುದು ಸೇರಿದಂತೆ ಎಲ್ಲ ಕಡೆ ಇದರ ಕಡ್ಡಾಯವಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಈ 12 ಅಂಕಿಗಳ ಗುರುತಿನ ಸಂಖ್ಯೆಯನ್ನು ನೀಡುತ್ತದೆ. ಇನ್ನು ವಿವಿಧ ಪ್ರಕಾರಗಳಲ್ಲಿ ಈ ಆಧಾರ್ ನಂಬರ್ ಲಭ್ಯ. ಆಧಾರ್ ಪತ್ರ (Aadhaar Letter), ಆಧಾರ್ ಪಿವಿಸಿ ಕಾರ್ಡ್ (Aadhaar PVC card), ಇಆಧಾರ್ (eAadhaar) ಮತ್ತು ಎಂಆಧಾರ್ (mAadhaar) ಚಾಲ್ತಿಯಲ್ಲಿವೆ. ಇವೆಲ್ಲವೂ ಸಮಾನ ಸಿಂಧುತ್ವ ಮತ್ತು ಸ್ವೀಕಾರಾರ್ಹತೆಯನ್ನು ಹೊಂದಿವೆ. ಆಧಾರ್ ಕಾರ್ಡ್ ಮಹತ್ವದ ದಾಖಲೆಯಾಗಿರುವುದರಿಂದ ಅದನ್ನು ಜತನದಿಂದ ಕಾಪಾಡುವುದು ಅಗತ್ಯ. ಇದೇ ಕಾರಣಕ್ಕೆ ಯುಐಡಿಅಐ ಆಧಾರ್ ಕಾರ್ಡ್ ಅನ್ನು ಪಿವಿಸಿ ಮಾದರಿಯಲ್ಲಿ ಒದಗಿಸುತ್ತದೆ. ಪಿವಿಸಿ ಮಾದರಿ ಎಂದರೇನು? ಇದರ ಪ್ರಯೋಜನವೇನು? ಪಡೆದುಕೊಳ್ಳುವುದು ಹೇಗೆ? ಮುಂತಾದ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ (Money Guide).
ಏನಿದು ಆಧಾರ್ ಪಿವಿಸಿ ಕಾರ್ಡ್ ?
ಸುರಕ್ಷತೆಯ ದೃಷ್ಟಿಯಿಂದ ಆಧಾರ್ ಅನ್ನು ಪಾಲಿವಿನೈಲ್ ಕ್ಲೋರೈಡ್ ಕಾರ್ಡ್ (PVC) ಆಗಿ ಮರುಮುದ್ರಣ ಮಾಡಲಾಗುತ್ತದೆ. ಇದರಿಂದ ಆಧಾರ್ ಕಾರ್ಡ್ ಎಟಿಎಂ ಅಥವಾ ಡೆಬಿಟ್ ಕಾರ್ಡ್‌ನಂತಾಗುತ್ತದೆ. ಇದನ್ನು ಸುಲಭವಾಗಿ ಸಾಗಿಸಬಹುದು. ಈ ಆಧಾರ್ ಪಿವಿಸಿ ಕಾರ್ಡ್ ತುಲನಾತ್ಮಕವಾಗಿ ಬಾಳಿಕೆ ಬರುವಂತಹದ್ದಾಗಿದೆ. ಉತ್ತಮ ಮುದ್ರಣ ಗುಣಮಟ್ಟ ಮತ್ತು ಲ್ಯಾಮಿನೇಶನ್ ಹೊಂದಿದೆ. ಪರ್ಸ್‌ಗಳಲ್ಲಿ ಆರಾಮವಾಗಿ ಇಡಬಹುದು. ಮಾತ್ರವಲ್ಲ ಕ್ಯುಆರ್ ಕೋಡ್ ಮೂಲಕ ಸುಲಭವಾಗಿ ಪರಿಶೀಲಿಸಬಹುದು.
ಈ ಕಾರ್ಡ್ ಸುರಕ್ಷಿತ ಕ್ಯುಆರ್ ಕೋಡ್, ಹೊಲೊಗ್ರಾಮ್, ಮೈಕೋ ಟೆಕ್ಸ್ಟ್, ವಿತರಣೆ ದಿನಾಂಕ ಮತ್ತು ಕಾರ್ಡ್‌ನ ಮುದ್ರಣ ಮತ್ತಿತರ ಮಾಹಿತಿಯನ್ನು ಒಳಗೊಂಡಿದೆ. ಕೇವಲ 50 ರೂ. ಪಾವತಿಸಿದರೆ ಇದು ನಿಮ್ಮ ಮನೆ ಬಾಗಿಲಿಗೆ ತಲುಪುತ್ತದೆ. ಇದನ್ನು ಆರ್ಡರ್ ಮಾಡುವ ಸುಲಭ ವಿಧಾನ ಇಲ್ಲಿದೆ.
ಆನ್‌ಲೈನ್‌ನಲ್ಲಿ ಹೀಗೆ ಆರ್ಡರ್ ಮಾಡಿ
- ನೀವು ಯುಐಡಿಎಐ ವೆಬ್ಸೈಟ್ಗೆ ತೆರಳಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.
- ಇದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.
- My Aadhar ಆಯ್ಕೆಯನ್ನು ಕ್ಲಿಕ್ ಮಾಡಿ Order Aadhar PVC Card ಆಪ್ಶನ್ ಸೆಲೆಕ್ಟ್ ಮಾಡಿ.
- ನಿಮ್ಮ 12 ಅಂಕಿಯ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ.
- ನೀವು ಭದ್ರತಾ ಕೋಡ್ ಅಥವಾ ಕ್ಯಾಪ್ಚಾ ನಮೂದಿಸಿ.
- ನಿಮ್ ಮೊಬೈಲ್ ನಂಬರ್ ನಮೂದಿಸಿ.
- ಸೆಂಡ್ ಒಟಿಪಿ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
- ಒಟಿಪಿ ಕಳುಹಿಸಿ ಪಿವಿಸಿ ಕಾರ್ಡ್ ಆರ್ಡರ್ ಮಾಡಿ.
- ಮುಂದಿನ ಆಯ್ಕೆಯನ್ನು ಕ್ಲಿಕ್ ಮಾಡಿ.
- ಶುಲ್ಕ ಪಾವತಿಗಾಗಿ ಪಾವತಿ ಆಯ್ಕೆಗಳ ಮೇಲೆ ಕ್ಲಿಕ್ ಮಾಡಿ.
- ಕ್ರೆಡಿಟ್ / ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಹಾಗೂ ಯುಪಿಐ ಆಯ್ಕೆಯ ಪೈಕಿ ಯಾವದನ್ನು ಬೇಕಾದರೂ ಸೆಲೆಕ್ಟ್ ಮಾಡಬಹುದು.
- 50 ರೂ. ಶುಲ್ಕವನ್ನು ಪಾವತಿಸಿ.
- ನಂತರ ನಿಮ್ಮ ಆಧಾರ್ ಪಿವಿಸಿ ಕಾರ್ಡ್ಗಾಗಿ ಆರ್ಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
- ಮುಂದೆ ಐದು ದಿನದೊಳಗೆ ಕಾರ್ಡ್ ನಿಮ್ಮ ಕೈಗೆ ತಲುಪುತ್ತದೆ.
mAadhaar ಆ್ಯಪ್‌ನಲ್ಲಿ ಹೀಗೆ ಆರ್ಡರ್ ಮಾಡುವ ವಿಧಾನ
- mAadhaar ಆ್ಯಪ್ ಡೌನ್ಲೋಡ್ ಮಾಡಿ.
- ಆಧಾರ್ ನಂಬರ್ ಮತ್ತು ಒಟಿಪಿ ಬಳಸಿ ಲಾಗಿನ್ ಆಗಿ.
- ಲಾಗಿನ್ ಆದ ಬಳಿಕ ಕಾಣಿಸುವ Order PVC Aadhaar Card ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಹೆಸರು ಮತ್ತು ವಿಳಾಸವನ್ನು ಎಚ್ಚರಿಕೆಯಿಂದ ಪರಿಶೀಲಿಸಿ.
- ಅಲ್ಲಿ ಕಾಣಿಸುವ ಆಧಾರ್ ಕಾರ್ಡ್‌ನ ವಿವರಗಳನ್ನೂ ಗಮನಿಸಿ.
- ನಿಮಗೆ ಬೇಕಾದ ಪಾವತಿ ವಿಧಾನವನ್ನು ಆಯ್ಕೆ ಮಾಡಿ 50 ರೂ. ಪಾವತಿಸಿ.
- ನಿಮ್ಮ ಆರ್ಡರ್ ಯಶಸ್ವಿಯಾದ ಬಳಿಕ ಆ ಬಗ್ಗೆ ಮೆಸೇಜ್ ಬರುತ್ತದೆ. ಜತೆಗೆ ಸರ್ವಿಸ್ ರಿಕ್ವೆಸ್ಟ್ ನಂಬರ್ (SRN) ರವಾನೆಯಾಗುತ್ತದೆ. ಅದನ್ನು ತೆಗೆದಿಡಿ.
ಆಫ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು. ಅದಕ್ಕಾಗಿ ನೀವು ಸಮೀಪದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಯನ್ನು ಭರ್ತಿ ಮಾಡಿ 50 ರೂ. ಶುಲ್ಕ ಪಾವತಿಸಿದರೆ ಸಾಕು. 5ರಿಂದ 6 ದಿನಗಳೊಳಗೆ ಕಾರ್ಡ್ ನಿಮ್ಮ ವಿಳಾಸಕ್ಕೆ ತಲುಪುತ್ತದೆ.
ಇದನ್ನೂ ಓದಿ: Money Guide: ಎನ್‌ಪಿಎಸ್‌ನಿಂದ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ವರೆಗೆ; ಇಂದಿನಿಂದ ಬದಲಾಗುತ್ತವೆ ಈ ಎಲ್ಲ ನಿಯಮಗಳು