ಬೆಂಗಳೂರು: ಯಾವುದೇ ಉದ್ಯೋಗವಿರಲಿ ಹೆಲ್ತ್ ಇನ್ಶೂರೆನ್ಸ್ (Health Insurance) ಮಾಡಿಸುವುದು ಅತ್ಯಗತ್ಯ. ಯಾವಾಗ, ಯಾವ ರೀತಿಯ ಆರೋಗ್ಯ ಸಮಸ್ಯೆ ಎದುರಾಗುತ್ತದೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಕಾಯಿಲೆ ಬಂದಾಗ ಔಷಧ ಹುಡುಕುವುದಕ್ಕಿಂತ ಕಾಯಿಲೆಯೇ ಬರದಂತೆ ಮುಂಜಾಗ್ರತೆ ಹೊಂದುವುದು ಜಾಣತನ. ಅದೇ ರೀತಿ ಕಾಯಿಲೆ ಬಂದಾಗ ಇನ್ಶೂರೆನ್ಸ್ ಮಾಡಿಸುವುದಕ್ಕಿಂತ ಮೊದಲೇ ಮಾಡಿಸುವುದು ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ವಿವಿಧ ಕಂಪನಿಗಳು ಹಲವಾರು ವಿಶೇಷತೆಗಳನ್ನು ಒಳಗೊಂಡ ಆರೋಗ್ಯ ವಿಮೆಯನ್ನು ಪರಿಚಯಿಸಿವೆ. ಒಂದುವೇಳೆ ನೀವು ಈಗಾಗಲೇ ಖರೀದಿಸಿದ ಪಾಲಿಸಿಯಲ್ಲಿ ತೃಪ್ತರಾಗದಿದ್ದರೆ ಅದನ್ನು ಬದಲಾಯಿಸುವ ಆಯ್ಕೆ ಇದೆ. ಅಂದರೆ ನೀವು ನಿಮ್ಮ ಮೊಬೈಲ್ ನಂಬರ್ ಅನ್ನು ಬದಲಾಯಿಸದೆ ಸಿಮ್ ಕಂಪನಿಯನ್ನು ಬದಲಾಯಿಸುವಂತೆ ಆರೋಗ್ಯ ವಿಮೆಯನ್ನೂ ಬದಲಾಯಿಸಬಹುದು. ಆ ಕುರಿತಾದ ವಿವರ ಇಲ್ಲಿದೆ (Money Guide).
ಹೆಲ್ತ್ ಇನ್ಶೂರೆನ್ಸ್ ಪೋರ್ಟೆಬಿಲಿಟಿ (Health Insurance Portability)
ನಿಮ್ಮ ಪ್ರಸ್ತುತ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ನಿಮ್ಮ ಆಯ್ಕೆಯ ಮತ್ತೊಂದು ಇನ್ಶೂರೆನ್ಸ್ ಕಂಪನಿಗೆ ವರ್ಗಾಯಿಸುವ ಪ್ರಕ್ರಿಯೆಯನ್ನು ಹೆಲ್ತ್ ಇನ್ಶೂರೆನ್ಸ್ ಪೋರ್ಟೆಬಿಲಿಟಿ ಎನ್ನಲಾಗುತ್ತದೆ. ಈ ಆಯ್ಕೆಯನ್ನು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (Insurance Regulatory and Development Authority of India) 2011ರಲ್ಲಿ ಪರಿಚಯಿಸಿದೆ. ನಿಮ್ಮ ಆರೋಗ್ಯ ವಿಮಾ ಪಾಲಿಸಿಯ ವೈಶಿಷ್ಟ್ಯಗಳು ಅಥವಾ ಪ್ರೀಮಿಯಂ ಬಗ್ಗೆ ನಿಮಗೆ ಸಮಾಧಾನ ಇಲ್ಲದಿದ್ದರೆ ಅಥವಾ ಇನ್ನೊಂದು ಕಂಪನಿ ಇನ್ನೂ ಹೆಚ್ಚಿನ ಆಯ್ಕೆಯನ್ನು ನೀಡುತ್ತಿದ್ದರೆ ಅದಕ್ಕೆ ಬದಲಾಯಿಸಬಹುದು.
ಅನುಕೂಲಗಳೇನು?
ಇದು ಇನ್ಶೂರೆನ್ಸ್ ಕಂಪನಿಗಳಲ್ಲಿನ ಬದಲಾವಣೆ ಮಾತ್ರವಲ್ಲ. ಇದರ ಜತೆಗೆ ಇನ್ನೂ ಅನೇಕ ಅನುಕೂಲಗಳು ಲಭಿಸುತ್ತವೆ. ನೀವು ಕಂಪನಿ ಬದಲಾಯಿಸುವಾಗ ಉತ್ತಮ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಹುದು. ಜತೆಗೆ ನಿಮ್ಮ ಕಾಯುವ ಅವಧಿ (Waiting Period) ಮತ್ತು ನೋ-ಕ್ಲೈಮ್ ಬೋನಸ್ ಅನ್ನು ಸಹ ವರ್ಗಾಯಿಸಬಹುದು. ಆದ್ದರಿಂದ ನೀವು ಮೊದಲಿನಿಂದಲೇ ಕಾಯುವ ಅವಧಿಯನ್ನು ಪ್ರಾರಂಭಿಸಬೇಕಾಗಿಲ್ಲ. ಜತೆಗೆ ನೀವು ಕ್ಯುಮುಲೇಟಿವ್ ಬೋನಸ್ (Cumulative bonus) ಅನ್ನು ಕಳೆದುಕೊಳ್ಳುವುದಿಲ್ಲ.
ವೈಶಿಷ್ಟ್ಯಗಳು
ಅಗತ್ಯ ಸೌಲಭ್ಯ ಪಡೆದುಕೊಳ್ಳಿ
ನಿಮ್ಮ ಅಗತ್ಯವನ್ನು ಈಗಿರುವ ಪಾಲಿಸಿ ಪೂರೈಸುವುದಿಲ್ಲ ಎಂದಾದರೆ ನೀವು ಇದನ್ನು ಒಳಗೊಳ್ಳುವ ಪಾಲಿಸಿಗೆ ಬದಲಾಯಿಸಬಹುದು. ಉದಾಹರಣೆಗೆ ಅಂಕಿತಾ ಪಾಲಿಸಿ ಖರೀದಿಸುವಾಗ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದ್ದರೂ ಅದು ಹೆರಿಗೆ ಪ್ರಯೋಜನ ಮತ್ತು ವ್ಯಾಪಕ ಆಸ್ಪತ್ರೆ ವ್ಯಾಪ್ತಿಯನ್ನು ಒಳಗೊಂಡಿರಲಿಲ್ಲ. ಈಗ ಅವರಿಗೆ ಈ ಸೌಲಭ್ಯದ ಅಗತ್ಯವಿದೆ. ಹೀಗಾಗಿ ಅವರು ಈ ಸೌಲಭ್ಯವನ್ನು ಹೊಂದಿರುವ ವಿಮಾ ಯೋಜನೆಗೆ ತಮ್ಮ ಪಾಲಿಸಿಯನ್ನು ಬದಲಾಯಿಸಬಹುದು. ಜತೆಗೆ ವಿಮೆಯ ಮೊತ್ತವನ್ನು ಹೆಚ್ಚಿಸುವ ಆಯ್ಕೆಯೂ ಇದೆ.
ವೆಚ್ಚ ಕಡಿತ
ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಕಡಿಮೆ ಪ್ರೀಮಿಯಂ ಹೊಂದಿರುವ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಉದಾಹರಣೆಗೆ ನೀವು ಭವಿಷ್ಯಕ್ಕೆ ಅಗತ್ಯವಾದ ಯೋಜನೆಗಳನ್ನು ಹುಡುಕುತ್ತಿದ್ದೀರಿ ಎಂದಿಟ್ಟುಕೊಳ್ಳೋಣ. ನೀವು ಪಾಲಿಸಿ ಹೊಂದಿರುವ ಕಂಪನಿಯಲ್ಲಿ ಇದು ದುಬಾರಿಯಾಗಿದ್ದು, ಮತ್ತೊಂದು ಕಂಪನಿಯಲ್ಲಿ ರಿಯಾಯಿತಿ ದರದಲ್ಲಿ ಲಭಿಸುತ್ತದೆ ಮತ್ತು ಹೆಚ್ಚಿನ ಪ್ರಯೋಜನ ಹೊಂದಿದೆ ಎಂದಾದರೆ ಅದರತ್ತ ನಿಮ್ಮ ಪಾಲಿಸಿಯನ್ನು ಬದಲಾಯಿಸಿ.
ಇದನ್ನು ಗಮನಿಸಿ
- ಅಸ್ತಿತ್ವದಲ್ಲಿರುವ ನಿಮ್ಮ ಪಾಲಿಸಿಯ ಅವಧಿ ಮುಗಿಯುವ ಕನಿಷ್ಠ 45 ದಿನಗಳ ಮೊದಲು ನೀವು ಪೋರ್ಟೆಬಿಲಿಟಿಗೆ ಅರ್ಜಿ ಸಲ್ಲಿಸಬೇಕು.
- ನಿಮ್ಮ ಹೊಸ ವಿಮಾದಾರರು ಪ್ರೀಮಿಯಂಗಳು, ನಿಯಮಗಳು ಮತ್ತು ಷರತ್ತುಗಳು ಸೇರಿದಂತೆ ಲಭ್ಯವಿರುವ ವಿವಿಧ ಆರೋಗ್ಯ ವಿಮಾ ಯೋಜನೆಗಳ ಪ್ರಯೋಜನವನ್ನು ಪಡೆಯಲು ವಿವಿಧ ನಮೂನೆಗಳನ್ನು ನಿಮಗೆ ಒದಗಿಸುತ್ತಾರೆ. ಅದನ್ನು ಗಮನವಿಟ್ಟು ಓದಿ.
- ನೀವು ಬಯಸುವ ಯೋಜನೆ ಮತ್ತು ವ್ಯಾಪ್ತಿಯನ್ನು ಆಯ್ಕೆ ಮಾಡಿ ಮತ್ತು ಎಲ್ಲ ದಾಖಲೆಗಳನ್ನು ಸಲ್ಲಿಸಿ.
- ಹೊಸ ವಿಮಾ ಕಂಪನಿ ಹಿಂದಿನ ವಿಮಾದಾರರಿಂದ ಮಾಹಿತಿಯನ್ನು ಪಡೆಯುವ ಮೂಲಕ ಹಿಂದಿನ ಕ್ಲೈಮ್ ಇತಿಹಾಸ, ವೈದ್ಯಕೀಯ ದಾಖಲೆಗಳು ಪರಿಶೀಲಿಸುತ್ತದೆ.
- ಹೊಸ ವಿಮಾದಾರರು ಪೋರ್ಟೆಬಿಲಿಟಿಗೆ ಅರ್ಹರೇ ಅಥವಾ ಇಲ್ಲವೇ ಎಂದು ನಿರ್ಧರಿಸಲು ಈ ಮಾಹಿತಿಯನ್ನು ಬಳಸುತ್ತಾರೆ. ಬಳಿಕ 15 ದಿನಗಳೊಳಗೆ ನಿಮ್ಮ ಅರ್ಜಿ ಸ್ವೀಕೃತವಾಗುತ್ತದೆ.
ಯಾವೆಲ್ಲ ಸೌಲಭ್ಯಗಳನ್ನು ಪೋರ್ಟ್ ಮಾಡಬಹುದು?
- ಪ್ರಸ್ತುತ ಇರುವ ಇನ್ಶೂರೆನ್ಸ್ ಮೊತ್ತ
ನಿಮ್ಮ ಸಂಗ್ರಹಿತ ಕ್ಯುಮುಲೇಟಿವ್ ಬೋನಸ್
ಮೊದಲೇ ಅಸ್ತಿತ್ವದಲ್ಲಿರುವ ಕಾಯುವ ಅವಧಿ
ನಿರ್ದಿಷ್ಟ ರೋಗ ನಿರೀಕ್ಷಣಾ ಅವಧಿ
ಹೆರಿಗೆ ಪ್ರಯೋಜನದ ಕಾಯುವ ಅವಧಿ (ಆಯ್ಕೆ ಮಾಡಿಕೊಂಡಿದ್ದರೆ)
ಅಗತ್ಯವಿರುವ ದಾಖಲೆಗಳು?
- ನಿಮ್ಮ ಪ್ರಸ್ತುತ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ವೇಳಾಪಟ್ಟಿ.
ಗುರುತಿನ ಪುರಾವೆ
ವೈದ್ಯಕೀಯ ವಿವರಗಳು
ಇದನ್ನೂ ಓದಿ: Money Guide: ಹೆಲ್ತ್ ಇನ್ಶೂರೆನ್ಸ್ ಕ್ಲೈಮ್ ಆಗುತ್ತಿಲ್ಲವೆ?; ಈ ಸಮಸ್ಯೆ ಇರಬಹುದು ಗಮನಿಸಿ