ಬೆಂಗಳೂರು: ʼಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡುʼ ಎನ್ನುವ ಮಾತಿದೆ. ಅಂದರೆ ಈ ಎರಡೂ ಕೆಲಸ ಮಾಡುವುದು ಎಷ್ಟು ಕಷ್ಟ ಎನ್ನುವುದನ್ನು ಈ ಮಾತು ಸೂಚ್ಯವಾಗಿ ತಿಳಿಸುತ್ತದೆ. ಪ್ರಸ್ತುತ ಮನೆ ಕಟ್ಟಬೇಕಾದರೆ ಬ್ಯಾಂಕ್‌ನಲ್ಲಿ ಸಾಲ ಮಾಡಲೇಬೇಕು ಎನ್ನುವ ಅನಿವಾರ್ಯ ಪರಿಸ್ಥಿತಿಗೆ ಬಂದಿದ್ದೇವೆ. ಹಾಗಾದರೆ ಮನೆಸಾಲವನ್ನು ಬೇಗ ಮುಗಿಸುವುದು ಹೇಗೆ? ಎನ್ನುವುದನ್ನು ಮನಿಗೈಡ್ (Money Guide) ತಿಳಿಸಲಿದೆ. ನೀವು ಮನೆ ಕಟ್ಟಲು ಬ್ಯಾಂಕ್‌ನಿಂದ 20 ವರ್ಷಕ್ಕೆ 50 ಲಕ್ಷ ರೂ. ಸಾಲ ಪಡೆದಿದ್ದೀರಿ ಎಂದಿಟ್ಟುಕೊಳ್ಳೋಣ. ಅದನ್ನು 10 ವರ್ಷಗಳಲ್ಲೇ ಮುಗಿಸುವುದು ಹೇಗೆ? ಬಡ್ಡಿಯಲ್ಲಿ ಸುಮಾರು 30 ಲಕ್ಷ ರೂ. ಉಳಿಸಿಕೊಳ್ಳುವುದು ಹೇಗೆ? ಎನ್ನುವುದನ್ನು ವಿಸ್ತಾರ ನ್ಯೂಸ್‌ನ ಎಕ್ಸಿಕ್ಯುಟಿವ್ ಎಡಿಟರ್ ಶರತ್ ಎಂ.ಎಸ್. ವಿವರಿಸುತ್ತಾರೆ.
ಹೋಮ್ ಲೋನ್ ಹೇಗೆ ಕೆಲಸ ಮಾಡುತ್ತದೆ?
ಆರಂಭಿಕ ದಿನಗಳಲ್ಲಿ ಹೋಮ್ ಲೋನ್‌ಗೆ ಬಡ್ಡಿ ಅತ್ಯಧಿಕ ವಿಧಿಸಲಾಗುತ್ತದೆ. ನಾವು ಪ್ರತಿ ತಿಂಗಳು ಕಟ್ಟುವ ದುಡ್ಡಿನಲ್ಲಿ ಶೇ. 90ರಿಂದ 95ರಷ್ಟು ಬಡ್ಡಿಗೇ ಹೋಗುತ್ತದೆ. ಸಾಮಾನ್ಯವಾಗಿ ಮೊದಲ 10 ವರ್ಷಗಳ ಕಾಲ ನಮ್ಮ ಶೇ. 75-95ರಷ್ಟು ಹಣ ಬಡ್ಡಿಗೆಂದು ಹೋಗುತ್ತದೆ. ಆದ್ದರಿಂದ ಗೃಹಸಾಲವನ್ನು ಆದಷ್ಟು ಬೇಗ ಮುಗಿಸಲು ಯೋಜನೆ ರೂಪಿಸಬೇಕು. ಕೋವಿಡ್ ಮೊದಲು ದೇಶದಲ್ಲಿ ಗೃಹಸಾಲದ ಬಡ್ಡಿ ದರ ಸುಮಾರು 6.7% ಆಸುಪಾಸಿನಲ್ಲಿತ್ತು. ಇದೀಗ ಅದು 9-9.5%ಕ್ಕೆ ಬಂದು ನಿಂತಿದೆ. ಉಹಾಹರಣೆಗೆ 2020ರಲ್ಲಿ ನೀವು 6.7% ಬಡ್ಡಿದರದಲ್ಲಿ 20 ವರ್ಷಕ್ಕೆ 50 ಲಕ್ಷ ರೂ. ಸಾಲ ತೆಗೆದುಕೊಂಡಿದ್ದರೆ ಮಾಸಿಕ 37,870 ರೂ. ಪಾವತಿಸಬೇಕಾಗಿತ್ತು. ಈಗ ಅದೇ ಸಾಲಕ್ಕೆ ಮಾಸಿಕ ಕಂತು 44,976 ರೂ. ಆಗುತ್ತದೆ. ಇಎಂಐ ಲೆಕ್ಕದಲ್ಲಿ 7,000 ರೂ. ಜಾಸ್ತಿಯಾಗಿದೆ. ಅಂದರೆ ವರ್ಷಕ್ಕೆ 84,000 ರೂ., 20 ವರ್ಷಕ್ಕೆ 16 ಲಕ್ಷ ರೂ. ಅಧಿಕವಾದಂತಾಯ್ತು ಎಂದು ಶರತ್ ಹೇಳುತ್ತಾರೆ.
50 ಲಕ್ಷ ರೂ. ಗೃಹಸಾಲದ ಬಡ್ಡಿ ಲೆಕ್ಕಾಚಾರ
ಸಾಲದ ಮೊತ್ತ-50 ಲಕ್ಷ ರೂ., ಬಡ್ಡಿ ದರ-9%, ಸಾಲದ ಅವಧಿ-20 ವರ್ಷ, ಮಾಸಿಕ ಕಂತು-44,986 ರೂ., ಪಾವತಿಸುವ ಒಟ್ಟು ಬಡ್ಡಿ-57,96,711 ರೂ., ಪಾವತಿಸುವ ಅಸಲು-50 ಲಕ್ಷ ರೂ., ಅಸಲು ಮತ್ತು ಬಡ್ಡಿ ಸೇರಿ ಒಟ್ಟು ಪಾವತಿ-1,07,96,711 ರೂ. ಹೀಗಾಗಿ ಗೃಹಸಾಲ ನಾವು ಬೇಗ ಮುಗಿಸಿದರೆ ಲಾಭ ಅಧಿಕ. ಸಾಲ ಪಡೆದು 6 ತಿಂಗಳ ಬಳಿಕ ಹೋಮ್‌ಲೋನ್ ಪ್ರೀ ಪೇಮೆಂಟ್ ಮಾಡಬಹುದು. ಅಂದರೆ 7 ತಿಂಗಳು ಸಾಧ್ಯವಾದರೆ ನೀವು ಸಾಲದ ಎಲ್ಲ ಮೊತ್ತವನ್ನು ಒಮ್ಮಲೇ ಬೇಕಾದರೂ ತೀರಿಸಬಹುದು ಎಂದು ಶರತ್ ವಿವರಿಸುತ್ತಾರೆ.
1ನೇ ವರ್ಷ ಸಾಲದ ಅಸಲಿನ ಪಾಲು-93,636 ರೂ., ಸಾಲದ ಮೇಲಿನ ಬಡ್ಡಿಯ ಪಾಲು-4,46,200 ರೂ., ಒಟ್ಟು ಪಾವತಿ-5,39,836 ರೂ., ಬಾಕಿ ಇರುವ ಸಾಲದ ಮೊತ್ತ 49,06,364 ರೂ., ಪಾವತಿಯಾಗಿರುವ ಸಾಲ-1.87%
2ನೇ ವರ್ಷ ಸಾಲದ ಅಸಲಿನ ಪಾಲು-1,02,419 ರೂ., ಸಾಲದ ಮೇಲಿನ ಬಡ್ಡಿಯ ಪಾಲು-4,37,416 ರೂ., ಒಟ್ಟು ಪಾವತಿ-5,39,836 ರೂ., ಬಾಕಿ ಇರುವ ಸಾಲದ ಮೊತ್ತ 48,03,364 ರೂ., ಪಾವತಿಯಾಗಿರುವ ಸಾಲ-3.92%
2ನೇ ವರ್ಷ ಸಾಲದ ಅಸಲಿನ ಪಾಲು-1,02,419 ರೂ., ಸಾಲದ ಮೇಲಿನ ಬಡ್ಡಿಯ ಪಾಲು-4,37,416 ರೂ., ಒಟ್ಟು ಪಾವತಿ-5,39,836 ರೂ., ಬಾಕಿ ಇರುವ ಸಾಲದ ಮೊತ್ತ 48,03,364 ರೂ., ಪಾವತಿಯಾಗಿರುವ ಸಾಲ-3.92%
3ನೇ ವರ್ಷ ಸಾಲದ ಅಸಲಿನ ಪಾಲು-1,12,027 ರೂ., ಸಾಲದ ಮೇಲಿನ ಬಡ್ಡಿಯ ಪಾಲು-4,27,809 ರೂ., ಒಟ್ಟು ಪಾವತಿ-5,39,836 ರೂ., ಬಾಕಿ ಇರುವ ಸಾಲದ ಮೊತ್ತ 46,91,919 ರೂ., ಪಾವತಿಯಾಗಿರುವ ಸಾಲ-6.16%
20ನೇ ವರ್ಷ ಸಾಲದ ಅಸಲಿನ ಪಾಲು-5,14,414 ರೂ., ಸಾಲದ ಮೇಲಿನ ಬಡ್ಡಿಯ ಪಾಲು-25,421 ರೂ., ಒಟ್ಟು ಪಾವತಿ-5,39,836 ರೂ., ಬಾಕಿ ಇರುವ ಸಾಲದ ಮೊತ್ತ 0, ಪಾವತಿಯಾಗಿರುವ ಸಾಲ-100%
ಹೀಗಾಗಿ ನಿಮ್ಮ ಕೈಯಲ್ಲಿ ಯಾವಾಗೆಲ್ಲ ಹೆಚ್ಚುವರಿ ಹಣ ಇರುತ್ತೊ ಆಗೆಲ್ಲ ಸಾಲದ ಹೆಚ್ಚುವರಿ ಪಾವತಿ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಶರತ್ ಸಲಹೆ ನೀಡುತ್ತಾರೆ.
ಅವಧಿ ಕಡಿಮೆ ಮಾಡುವುದು ಹೇಗೆ?
ಬರುವ ಆದಾಯದಲ್ಲಿ ಸಾಲದ ಅವಧಿಯನ್ನು ಹೇಗೆ ಕಡಿಮೆ ಮಾಡಬಹುದು ಎನ್ನುವುದನ್ನು ನೋಡೋಣ. ಮೊದಲೇ ಹೇಳಿದಂತೆ ಆದಾಯ ಹೆಚ್ಚು ಬಂದಾಗ (ಬೋನಸ್, ಹೈಕ್ ಇತ್ಯಾದಿ ಕಾರಣಗಳಿಂದ) ಸಾಲ ಕಟ್ಟುವ ಮೊತ್ತವನ್ನು ಹೆಚ್ಚಿಸಿ. ಉದಾಹರಣೆಗೆ-ಸಾಲದ ಮೊತ್ತ 50 ಲಕ್ಷ ರೂ., ಸಾಲ ಪಡೆದಿರುವ ಅವಧಿ 20 ವರ್ಷ, ಮಾಸಿಕ ಕಂತು 44,986 ರೂ., ನೀವು ವಾರ್ಷಿಕವಾಗಿ 1 ಹೆಚ್ಚುವರಿ ಕಂತು ಕಟ್ಟಿದಾಗ ತಗ್ಗುವ ಬಡ್ಡಿ ದರ 13 ಲಕ್ಷ ರೂ., ಇಳಿಕೆಯಾಗುವ ಮರುಪಾವತಿ ವರ್ಷ 3 ವರ್ಷ. 2 ಕಂತು ಕಟ್ಟಿದಾಗ 21 ಲಕ್ಷ ರೂ. ಮತ್ತು 5 ವರ್ಷ ಉಳಿತಾಯವಾಗುತ್ತದೆ. ಹೀಗೆ ಹೆಚ್ಚುವರಿಯಾಗಿ ವರ್ಷಕ್ಕೆ 4 ಕಂತು ಕಟ್ಟಿದರೆ 30 ಲಕ್ಷದ 50 ಸಾವಿರ ರೂ. ಮತ್ತು 10 ವರ್ಷ ಉಳಿತಾಯವಾಗಲಿದೆ. ಅಂದರೆ 20 ವರ್ಷಗಳ ಸಾಲ 10 ವರ್ಷಗಳಲ್ಲೇ ತೀರಿದಂತಾಗುತ್ತದೆ ಎಂದು ಶರತ್ ತಿಳಿಸುತ್ತಾರೆ.
ಇದನ್ನೂ ಓದಿ: Money Guide: ಹೆಲ್ತ್ ಇನ್ಶೂರೆನ್ಸ್ ಕೊಳ್ಳುವಾಗ ಈ ತಪ್ಪುಗಳನ್ನು ಮಾಡಬೇಡಿ