ಬೆಂಗಳೂರು: ಪ್ರತಿಯೊಬ್ಬರೂ ವಿಮೆ (Insurance) ಮಾಡಿಸಬೇಕು ಎನ್ನುತ್ತಾರೆ ಆರ್ಥಿಕ ತಜ್ಞರು. ಅದರಲ್ಲಿಯೂ ಅನಿಶ್ಚತೆಯಿಂದ ಕೂಡಿದ ಈ ಆಧುನಿಕ ಕಾಲಘಟ್ಟದಲ್ಲಿ ವಿಮೆ ಮಾಡಿಸುವುದು ಪ್ರತಿಯೊಬ್ಬರಿಗೂ ಅನಿವಾರ್ಯ ಎನಿಸಿಕೊಂಡಿದೆ. ಹೀಗಾಗಿ ಇಂದು ಅನೇಕ ಇನ್ಶೂರೆನ್ಸ್ ಕಂಪನಿಗಳು ಹುಟ್ಟಿಕೊಂಡಿವೆ. ಅದರಲ್ಲಿಯೂ ಭಾರತದ ಅತೀ ದೊಡ್ಡ ವಿಮಾ ಕಂಪನಿ ಎನಿಸಿಕೊಂಡಿರುವ ಭಾರತೀಯ ಜೀವ ವಿಮಾ ನಿಗಮ (Life Insurance Corporation of India-LIC) ವಿವಿಧ ಕೊಡುಗೆಗಳ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತದೆ. ಇದು ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾದ ಕಾರಣ ಬಹುತೇಕರ ಮೊದಲ ಆಯ್ಕೆ ಎಲ್‌ಐಸಿಯೇ ಆಗಿರುತ್ತದೆ. ನೀವು ಎಲ್‌ಐಸಿ ಗ್ರಾಹಕರಾಗಿದ್ದು, ಅನಿವಾರ್ಯ ಕಾರಣದಿಂದ ಪಾಲಿಸಿಯ ಕಂತು ಕಟ್ಟದೆ ಅದು ಮಧ್ಯದಲ್ಲೇ ಲ್ಯಾಪ್ಸ್ ಆಗಿದ್ದರೆ ಅದನ್ನು ಹೇಗೆ ನವೀಕರಿಸಬಹುದು ಎನ್ನುವ ವಿವರ ಇಂದಿನ ಮನಿಗೈಡ್ (Money Guide)ನಲ್ಲಿದೆ.
ಹೇಗೆ ಲ್ಯಾಪ್ಸ್ ಆಗುತ್ತದೆ?
ಎಲ್‌ಐಸಿ ಪಾಲಿಸಿ ಹೇಗೆ ಲ್ಯಾಪ್ಸ್ ಆಗುತ್ತದೆ ಎನ್ನುವುದನ್ನು ಮೊದಲು ನೋಡೋಣ. ಸತತವಾಗಿ ಮೂರು ಪ್ರೀಮಿಯಂಗಳನ್ನು ಪಾವತಿಸದಿದ್ದ ಸಂದರ್ಭದಲ್ಲಿ ನಿಮ್ಮ ಪಾಲಿಸಿ ಲ್ಯಾಪ್ಸ್ ಆಗುತ್ತದೆ. ಸಾಮಾನ್ಯವಾಗಿ ಪಾಲಿಸಿದಾರರಿಗೆ 15 ಮತ್ತು 30 ದಿನಗಳ ನಡುವಿನ ಗ್ರೇಸ್ ಅವಧಿಯನ್ನು ನೀಡಲಾಗಿರುತ್ತದೆ. ಗ್ರೇಸ್ ಅವಧಿಯಲ್ಲಿಯೂ ನೀವು ಪ್ರೀಮಿಯಂ ಪಾವತಿಸಲು ವಿಫಲರಾದಾಗ ಲ್ಯಾಪ್ಸ್ ಮಾಡಲಾಗುತ್ತದೆ. ಒಂದುವೇಳೆ ಪಾಲಿಸಿ ಲ್ಯಾಪ್ ಆದರೆ ಯಾವ ಅನುಕೂಲವೂ ಲಭಿಸುವುದಿಲ್ಲ. ಅನಾರೋಗ್ಯ ಅಥವಾ ಅಂಗವೈಕಲ್ಯದ ಕಾರಣದಿಂದ ಪ್ರೀಮಿಯಂ ಪಾವತಿಸಲು ಸಾಧ್ಯವಾಗದಿದ್ದರೆ ಪಾಲಿಸಿ ಲ್ಯಾಪ್ಸ್ ಆಗುವುದಿಲ್ಲ. ಆದರೆ ಈ ಬಗ್ಗೆ ನೀವು ಎಲ್ಐಸಿಗೆ ವೈದ್ಯರ ಪ್ರಮಾಣ ಪತ್ರ ಸಲ್ಲಿಸಬೇಕಾಗುತ್ತದೆ.
ನವೀಕರಣ / ಪುನಶ್ಚೇತನ ಹೇಗೆ?
ಲ್ಯಾಪ್ಸ್ ಆದ ಪಾಲಿಸಿಗಳನ್ನು ನವೀಕರಿಸಲು ನೀವು ಮೊದಲ ಬಾರಿಗೆ ಪ್ರೀಮಿಯಂ ಮಿಸ್ ಮಾಡಿದ ದಿನಾಂಕದಿಂದ 2 ವರ್ಷಗಳವರೆಗೆ ಅವಕಾಶವಿದೆ. ಈ ಅವಧಿಯಲ್ಲಿ ನೀವು ಬಡ್ಡಿಯನ್ನು ಪಾವತಿಸಿ ನವೀಕರಿಸಬಹುದು. ಹೇಗೆ ನವೀಕರಿಸಬಹುದು ಎನ್ನುವುದರ ಹಂತ ಹಂತದ ಮಾಹಿತಿ ಇಲ್ಲಿದೆ.
- ಎಲ್ಐಸಿಯನ್ನು ಸಂಪರ್ಕಿಸಿ: ಕಸ್ಟಮರ್ ಕೇರ್ ಸಂಖ್ಯೆ, ಇ-ಮೇಲ್ ಮೂಲಕ ಎಲ್ಐಸಿಯನ್ನು ಸಂಪರ್ಕಿಸಿ. ಇಲ್ಲದಿದ್ದರೆ ನಿಮ್ಮ ಸಮೀಪದ ಎಲ್‌ಐಸಿ ಶಾಖೆಗೆ ಭೇಟಿ ನೀಡಿ.
- ಪುನಶ್ಚೇತನ ಅರ್ಜಿ (Revival form) ಸಲ್ಲಿಸಿ: ಲ್ಯಾಪ್ಸ್ ಆದ ಪಾಲಿಸಿಯನ್ನು ಮತ್ತೆ ಸಕ್ರಿಯಗೊಳಿಸಲು ಪುನಶ್ಚೇತನ ಅರ್ಜಿ (Revival form) ನಮೂನೆಯನ್ನು ಭರ್ತಿಗೊಳಿಸಿ ಎಲ್ಐಸಿಗೆ ಸಲ್ಲಿಸಿ.
- ಬಾಕಿ ಪ್ರೀಮಿಯಂ ಮತ್ತು ಬಡ್ಡಿಯನ್ನು ಪಾವತಿಸಿ: ನೀವು ಮಿಸ್ ಮಾಡಿದ ಎಲ್ಲ ಪ್ರೀಮಿಯಂಗಳನ್ನು ಮತ್ತು ಆ ಪ್ರೀಮಿಯಂಗಳ ಮೇಲಿನ ಬಡ್ಡಿಯನ್ನು ಪಾವತಿಸಿ.
- ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಿ: ದೀರ್ಘ ಸಮಯದಿಂದ ನಿಮ್ಮ ಎಲ್‌ಐಸಿ ಪಾಲಿಸಿ ಲ್ಯಾಪ್ಸ್ ಆಗಿದ್ದರೆ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸುವುದು ಅಗತ್ಯ.
- ಮನವಿ ಪರಿಶೀಲನೆ: ನೀವು ಸಲ್ಲಿಸಿರುವ ಎಲ್ಲ ದಾಖಲೆಗಳು ಹಾಗೂ ಪಾವತಿಗಳನ್ನು ಎಲ್‌ಐಸಿ ಪರಿಶೀಲಿಸುತ್ತದೆ. ಒಂದು ವೇಳೆ ನಿಮ್ಮ ಮನವಿ ಅನುಮೋದನೆಗೊಂಡರೆ ಎಲ್‌ಐಸಿ ನಿಮ್ಮ ಪಾಲಿಸಿಯನ್ನು ಪುನಶ್ಚೇತನಗೊಳಿಸಿ, ಹೊಸ ಪಾಲಿಸಿ ದಾಖಲೆಯನ್ನು ನೀಡುತ್ತದೆ.
- ಗಮನಿಸಿ ಪಾಲಿಸಿಯ ನವೀಕರಣ ಉದ್ದೇಶಕ್ಕಾಗಿ ಅಗತ್ಯವಿರುವ ವೈದ್ಯಕೀಯ ವರದಿಗಳು ಹಾಗೂ ವಿಶೇಷ ರಿಪೋರ್ಟ್ಸ್ಗಳ ವೆಚ್ಚವನ್ನು ವಿಮಾದಾರರೇ ಭರಿಸಬೇಕಾಗುತ್ತದೆ.
ನಿಮ್ಮ ಪಾಲಿಸಿಯನ್ನು ಪುನರುಜ್ಜೀವನಗೊಳಿಸಿದ ನಂತರ ನಿಯಮಿತವಾಗಿ ನಿಮ್ಮ ಪ್ರೀಮಿಯಂಗಳನ್ನು ಪಾವತಿಸುವುದನ್ನು ಮರೆಯಬೇಡಿ.
ವ್ಯಾಟ್ಸ್‌ಆ್ಯಪ್ ಮೂಲಕ ಎಲ್‌ಐಸಿ ಸೇವೆ
ಈಗ ಎಲ್‌ಐಸಿಯ ಕೆಲವು ಸೇವೆ ವ್ಯಾಟ್ಸ್‌ಆ್ಯಪ್‌ನಲ್ಲಿಯೂ ಲಭ್ಯ. ಅದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟೇ. Hi ಎಂದು ವ್ಯಾಟ್ಸ್‌ಆ್ಯಪ್‌ನಲ್ಲಿ ಟೈಪ್ ಮಾಡಿ 8976862090 ನಂಬರ್‌ಗೆ ಮೆಸೇಜ್ ಕಳಿಸಿ. ಆಗ 11 ಆಯ್ಕೆಗಳನ್ನು ನಿಮ್ಮ ಮುಂದಿರುತ್ತದೆ. ಉದಾಹರಣೆಗೆ ಚಾಟ್ ಬಾಕ್ಸ್‌ನಲ್ಲಿ ಆಪ್ಷನ್ ನಂಬರ್ ನಮೂದಿಸಿ. ಉದಾಹರಣೆಗೆ 1 ಎಂದು ಟೈಪ್ ಮಾಡಿದರೆ ನಿಮ್ಮ ಮುಂದಿನ ಎಲ್‌ಐಸಿ ಪ್ರೀಮಿಯಂ ಕಟ್ಟುವ ದಿನಾಂಕ ತಿಳಿಯಬಹುದು. ಎಷ್ಟು ಮೊತ್ತ ಎಂಬುದನ್ನೂ ತಿಳಿದುಕೊಳ್ಳಬಹುದು.
ಇದನ್ನೂ ಓದಿ: Retirement Planning: ನಿವೃತ್ತಿ ಬಳಿಕ 1 ಲಕ್ಷ ರೂ. ಪಿಂಚಣಿ ಗಳಿಸೋದು ಹೇಗೆ? ಸುಲಭ ಯೋಜನೆಯ ಮಾಹಿತಿ ಇಲ್ಲಿದೆ