Site icon Vistara News

Money Guide: ಪರ್ಸನಲ್‌ ಲೋನ್‌ಗೆ ಅರ್ಜಿ ಸಲ್ಲಿಸುತ್ತಿದ್ದೀರಾ? ಈ ಅಂಶ ಗಮನದಲ್ಲಿರಲಿ

loan

loan

ಬೆಂಗಳೂರು: ಪ್ರಸ್ತುತ ದಿನಗಳಲ್ಲಿ ಪರ್ಸನಲ್‌ ಲೋನ್‌ (Personal loans) ಪ್ರತಿಯೊಬ್ಬರಿಗೂ ಅನಿವಾರ್ಯ ಎನಿಸಿಕೊಂಡಿದೆ. ಬದಲಾದ ಜೀವನ ಶೈಲಿ, ಬೆಲೆ ಏರಿಕೆಯಿಂದಾಗಿ ಎಲ್ಲರೂ ಸಾಲ ಮಾಡಲೇಬೇಕಾಗಿದೆ. ಇದೇ ಕಾರಣಕ್ಕೆ ದೇಶದಲ್ಲಿ ಗೃಹ ಸಾಲಗಳ ನಂತರ ಪರ್ಸನಲ್ ಲೋನ್ ಪಡೆಯುವವರ ಸಂಖ್ಯೆ ಹೆಚ್ಚಿದೆ. ಬ್ಯಾಂಕ್‌ಗಳು ಸುಲಭವಾಗಿ ವೈಯಕ್ತಿಕ ಸಾಲಗಳನ್ನು ನೀಡುವುದು ಕೂಡ ಇದಕ್ಕೆ ಮತ್ತೊಂದು ಕಾರಣ. ಆದಾಗ್ಯೂ ವೈಯಕ್ತಿಕ ಸಾಲವನ್ನು ಪಡೆಯುವ ಮೊದಲು ಕೆಲವು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಆ ಮೂಲಕ ಬ್ಯಾಂಕ್‌ಗಳು ಹೆಚ್ಚಿನ ಬಡ್ಡಿದರಗಳನ್ನು ವಿಧಿಸುವುದನ್ನು ತಡೆಯಬಹುದು. ಮಾತ್ರವಲ್ಲ ಇಎಂಐ ಹೊರೆಯನ್ನು ಕಡಿಮೆ ಮಾಡಬಹುದು. ಈ ಕುರಿತಾದ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಸಾಲ ಪಡೆಯುವ ವಿಧಾನವೂ ಸರಳ

ಇನ್ನೊಂದು ಮುಖ್ಯ ವಿಚಾರ ಎಂದರೆ ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ಸಾಲ ಪಡೆಯುವ ವಿಧಾನ ಕೂಡ ಸರಳವಾಗಿದೆ. ಹಿಂದಿನಂತೆ ಅರ್ಜಿ ಸಲ್ಲಿಸಿ ತಿಂಗಳುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಈಗಿಲ್ಲ. ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ ಕೆಲವೇ ಗಂಟೆಗಳಲ್ಲಿ ಹಣವನ್ನು ಪಡೆಯುವ ಆಯ್ಕೆ ಈಗ ಲಭ್ಯ. ಸುಲಭವಾಗಿ ಸಿಗುತ್ತದೆ ಎನ್ನುವ ಕಾರಣಕ್ಕೆ ಅನಗತ್ಯವಾಗಿ ಸಾಲ ಪಡೆಯಬೇಡಿ ಎಂದು ತಜ್ಞರು ಎಚ್ಚರಿಸುತ್ತಾರೆ.

ಸ್ಥಿರವಾದ ಆದಾಯ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ

ವೈಯಕ್ತಿಕ ಸಾಲವನ್ನು ಪಡೆಯಲು ಸ್ಥಿರವಾದ ಆದಾಯದ ಮೂಲವು ನಿರ್ಣಾಯಕ ಘಟಕ. ಸಾಮಾನ್ಯವಾಗಿ ವೈಯಕ್ತಿಕ ಸಾಲವನ್ನು ಮಂಜೂರು ಮಾಡಲು ಬ್ಯಾಂಕ್‌ಗಳು ಅರ್ಜಿದಾರರು ಕನಿಷ್ಠ 30,000 ರೂ.ಗಳ ಮಾಸಿಕ ವೇತನ ಹೊಂದಿದ್ದಾರೆಯೇ ಎನ್ನುವುದನ್ನು ಗಮನಿಸುತ್ತದೆ. ಇದೊಂದೇ ಅಲ್ಲ ನಿಮ್ಮಿಂದ ಸಾಲ ಮರುಪಾವತಿಸಲು ಸಾಧ್ಯವೇ ಎನ್ನುವುದನ್ನು ಸಾಕಷ್ಟು ಬಾರಿ ಲೆಕ್ಕಾಚಾರ ಹಾಕಿಯೇ ಮುಂದುವರಿಯಿರಿ. ಇಲ್ಲದಿದ್ದರೆ ಇದು ದೊಡ್ಡ ತಲೆನೋವಾಗಿ ಬದಲಾಗಬಹುದು.

ಸ್ಪಷ್ಟ ಉದೇಶ ಇರಲಿ

ಪರ್ಸನಲ್ ಲೋನ್ ಪಡೆಯುವ ಮೊದಲು, ಆತ್ಮಾವಲೋಕನ ಮಾಡಿಕೊಳ್ಳುವುದು ಮತ್ತು ಅದರ ಹಿಂದಿನ ಉದ್ದೇಶವನ್ನು ಪ್ರಶ್ನಿಸುವುದು ಅತ್ಯಗತ್ಯ. ಸಾಲದ ನಿಜವಾದ ಅಗತ್ಯವನ್ನು ನಿರ್ಣಯಿಸಿ. ಅಂದರೆ ಸಾಲ ನಿಜವಾಗಿಯೂ ನಿಮ್ಮ ಅಗತ್ಯಗಳನ್ನು ಪೂರೈಸುತ್ತದೆಯೇ? ಅನಿವಾರ್ಯವೇ? ಎನ್ನುವುದನ್ನು ಪರಿಶೀಲಿಸಿ. ಬ್ಯಾಂಕ್‌ನಿಂದ ಸಾಲ ಪಡೆಯುವ ಮುನ್ನ ಸ್ನೇಹಿತರು ಅಥವಾ ಸಂಬಂಧಿಕರಿಂದ ಹಣಕಾಸಿನ ನೆರವು ಲಭಿಸಬಹುದೇ ಎನ್ನುವುದನ್ನು ಪರಿಶೀಲಿಸಿ. ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಮುನ್ನ ಅಗತ್ಯವಾದ ಮೊತ್ತದ ನಿಖರ ಲೆಕ್ಕಚಾರ ನಿಮ್ಮಲ್ಲಿರಲಿ.

ಅವಧಿ ಬಗ್ಗೆ ಮಾಹಿತಿ ಇರಲಿ

ವೈಯಕ್ತಿಕ ಸಾಲದ ಬಗ್ಗೆ ಯೋಚಿಸುವಾಗ ಸಾಲದ ಅವಧಿಯನ್ನು ಅರ್ಥಮಾಡಿಕೊಳ್ಳುವುದು ಕೂಡ ಬಹಳ ಮುಖ್ಯ. ಸಾಮಾನ್ಯವಾಗಿ ಈ ಸಾಲದ ಅವಧಿ 12ರಿಂದ 60 ತಿಂಗಳವರೆಗೆ ಇರುತ್ತದೆ. ಕೆಲವೊಮ್ಮೆ 96 ತಿಂಗಳವರೆಗೆ ಅವಧಿಯನ್ನು ವಿಸ್ತರಿಸುವ ಸಾಧ್ಯತೆಯೂ ಇರುತ್ತದೆ. ನಿಮ್ಮ ಮರುಪಾವತಿ ಸಾಮರ್ಥ್ಯ ನೋಡಿಕೊಂಡು ಸೂಕ್ತ ಅವಧಿಯನ್ನು ಆಯ್ಕೆ ಮಾಡಿಕೊಳ್ಳುವುದು ಜಾಣತನ. ದೀರ್ಘಾವಧಿಯ ಸಾಲವನ್ನು ಆರಿಸಿಕೊಳ್ಳುವುದು ಇಎಂಐ ಹೊರೆಯನ್ನು ಕಡಿಮೆ ಮಾಡುತ್ತದೆ. ಆದಾಗ್ಯೂ ಅಲ್ಪಾವಧಿಯ ಸಾಲಗಳು ಸಾಮಾನ್ಯವಾಗಿ ಕಡಿಮೆ ಬಡ್ಡಿದರಗಳನ್ನು ಹೊಂದಿರುತ್ತವೆ. ಹೀಗಾಗಿ ಈ ಎಲ್ಲ ಅಂಶಗಳು ನಿಮ್ಮ ಗಮನದಲ್ಲಿರಲಿ.

ಅಗತ್ಯ ದಾಖಲೆಗಳನ್ನು ಮುಂಚಿತವಾಗಿ ಸಿದ್ಧಪಡಿಸಿ

ತ್ವರಿತ ಪರ್ಸನಲ್ ಲೋನ್ ಮಂಜೂರಾತಿಗಾಗಿ ಮುಂಚಿತವಾಗಿ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸುವುದು ಅತ್ಯಗತ್ಯ. ಸಾಮಾನ್ಯವಾಗಿ ಆಧಾರ್ ಕಾರ್ಡ್, ಪಾಸ್‌ಪೋರ್ಟ್‌, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಗುರುತಿನ ಚೀಟಿ ಮತ್ತು ಎರಡು ವರ್ಷಗಳ ಆದಾಯ ತೆರಿಗೆ ರಿಟರ್ನ್ (ಐಟಿಆರ್)ನಂತಹ ಗುರುತಿನ ಪುರಾವೆಗಳನ್ನು ಬ್ಯಾಂಕ್‌ಗಳು ಕೇಳುತ್ತವೆ. ಈ ದಾಖಲೆಗಳನ್ನು ಎಷ್ಟು ಬೇಗ ಸಲ್ಲಿಸುತ್ತೀರೋ ಅಷ್ಟು ಬೇಗ ಸಾಲ ಮಂಜೂರಾಗುತ್ತದೆ.

ಇದನ್ನೂ ಓದಿ: Money Guide: ನಿವೃತ್ತಿಯ ನಂತರವೂ ಆರ್ಥಿಕವಾಗಿ ಸದೃಢರಾಗಬೇಕೆ?; ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ

Exit mobile version