Site icon Vistara News

ಮನಿ ಕಹಾನಿ ಅಂಕಣ | ನಮಗೆ ದುಡ್ಡು ಕೊಡೋ ಕಾನ್ಫಿಡೆನ್ಸೇ ಬೇರೆ!

ನಾನಿದ್ದೀನಿ

Happy indian son saving money in piggy bank with father. Lovely ethnic father teaching to little boy importance of saving money for future. Smiling middle eastern kid adding coin in piggybank while lying on couch with dad at home.

‘ಚಿಂತೆ ಮಾಡಬೇಡ ನಾನಿದ್ದೀನಿ’ ಅನ್ನೋ ಮಾತು ಅತೀ ಅಮೂಲ್ಯವಾದುದು. ಅದರಲ್ಲೂ ಅತ್ಯಂತ ಕಷ್ಟದ ಸಂದರ್ಭದಲ್ಲಿ, ಅಸಹಾಯಕರಾಗಿದ್ದಾಗ, ಒಂಟಿಯಾಗಿ ಈ ಸಂದರ್ಭವನ್ನು ಎದುರಿಸಲಾಗಲ್ಲ ಎನಿಸಿದಾಗ ಯಾರಾದರೂ ಒಬ್ಬರು ಹಾಗನ್ನೋದಿದೆಯಲ್ಲಾ, ಅದಕ್ಕಿಂತ ಹೆಚ್ಚಿನದು ಇನ್ನೇನು ಬೇಕು?

ಆದರೆ ಒಂದು ಸಲ ಯೋಚನೆ ಮಾಡಿನೋಡಿ. ನೀವು ‘ನಾನಿದ್ದೀನಿ’ ಅನ್ನೋ ಪದವನ್ನು ಯಾರಿಂದ ಬಯಸುತ್ತೀರಿ? ನಿಮ್ಮ ಕಷ್ಟವನ್ನು ಬಗೆಹರಿಸಬಲ್ಲ ವ್ಯಕ್ತಿಯಿಂದ ತಾನೆ? ಆ ಸಾಮರ್ಥ್ಯ ಆ ವ್ಯಕ್ತಿಗೆ ಬರೋದು ಕೂಡ ದುಡ್ಡು ಕೊಡೋ ಕಾನ್ಫಿಡೆನ್ಸಿನಿಂದ.

ಈಗ ಅಂಥ ಕೆಲವು ಸಂದರ್ಭಗಳನ್ನು ನೋಡೋಣ. ತುರ್ತಾಗಿ ಆತ್ಮೀಯರ‍್ಯಾರನ್ನೋ ಆಸ್ಪತ್ರೆಗೆ ಸೇರಿಸಬೇಕಿದೆ, ಅವರ ಆರೋಗ್ಯ ಕ್ಷಣ ಕ್ಷಣಕ್ಕೂ ಕ್ಷೀಣಿಸುತ್ತಿದೆ. ಈಗ ‘ನಾನಿದ್ದೀನಿ’ ಅಂತ ಯಾರಾದರೂ ಹೇಳಬೇಕು ಅಂದ್ರೆ ನಾವು ಬಯಸೋದು ‘ಅವರ ಜೇಬಲ್ಲಿ ದುಡ್ಡಿರಬೇಕು’ ಅಂತ. ಇಲ್ಲದಿದ್ರೆ ಬರುವ ವ್ಯಕ್ತಿ ನಮ್ಮ ಕಷ್ಟಕ್ಕೆ ಪರಿಹಾರವಾಗಿರುವುದಿಲ್ಲ. ಬದಲಾಗಿ ನಮ್ಮ ಕಷ್ಟದಲ್ಲಿ ಅವರೂ ಒಂದು ಭಾಗವಾಗಬಹುದಷ್ಟೆ. ಇನ್ನೂ ಕೆಲವು ಸಂದರ್ಭದಲ್ಲಿ ಯಾರಿಗೋ ಹಣ ಕೊಡುವುದಾಗಿ ಕಮಿಟ್ಮೆಂಟ್ ನೀಡಿರುತ್ತೇವೆ, ಅವರಿಗೂ ತುರ್ತಾಗಿ ಹಣ ಬೇಕಿರುತ್ತದೆ. ಇಂಥಾ ಸಂದರ್ಭಗಳಲ್ಲಿ ನಮಗೆ ಬರಬೇಕಾದ ಹಣ ಕಾರಣಾಂತರಗಳಿಂದ ತಡವಾದರೆ ಆಗ ಆಗುವ ಒದ್ದಾಟವಿದೆಯಲ್ಲ, ಆಗ ಹೆಗಲಮೇಲೆ ಕೈಯಿಟ್ಟು ‘ನಾನಿದ್ದೀನಿ’ ಅನ್ನೋ ಗೆಳೆಯನಿದ್ರೆ ಅದಕ್ಕಿಂತ ಇನ್ನೇನು ಬೇಕು? ಆದರೆ ಹಾಗೆ ನಾನಿದ್ದೀನಿ ಅಂತ ಹೇಳುವ ಗೆಳೆಯ ಸುಮ್ಮನೇ ಜೊತೆಗಿರುವ ಮನಸಿನವನಾದರೆ ಸಾಲದು. ನಾವು ಕಮಿಟ್ಮೆಂಟ್ ನೀಡಿರುವಷ್ಟು ಹಣವನ್ನು ಅಡ್ಜೆಸ್ಟ್ ಮಾಡಿಕೊಡುವಷ್ಟು ಸಾಮರ್ಥ್ಯ ಇರುವವನೂ ಆಗಿರಬೇಕು.

ಹಾಗಾದರೆ ‘ನಾನಿದ್ದೀನಿ’ ಅಂತ ಹೇಳೋಕೆ ಏನು ಅರ್ಹತೆಯಿರಬೇಕು? ಮೊದಲನೆಯದಾಗಿ ಒಳ್ಳೆಯ ಮನಸ್ಸಿರಬೇಕು, ಜೊತೆಗೆ ಇನ್ನೊಬ್ಬರ ಕಷ್ಟಕ್ಕಾಗುವ ಗುಣವಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಅವರ ಕಷ್ಟ ಪರಿಹರಿಸುವ ಸಾಮರ್ಥ್ಯವಿರಬೇಕು. ಸಾಮರ್ಥ್ಯ ಎಂದರೆ? ಕಲಿಯುಗದಲ್ಲಿ ಸಾಮರ್ಥ್ಯವನ್ನು ಬಹುತೇಕ ಬಾರಿ ಹಣವೆಂದೇ ಪರಿಗಣಿಸಲಾಗುತ್ತದೆ. ಕಷ್ಟದಲ್ಲಿರುವ ವ್ಯಕ್ತಿಗೆ ನಾನಿದ್ದೀನಿ ಅಂತ ನಾವು ಹೇಳಬೇಕಾದರೆ ಅವನ ಕಷ್ಟ ಬಗೆಹರಿಸಲು ಆರ್ಥಿಕವಾಗಿ ನಾವು ಗಟ್ಟಿಯಿರಬೇಕು. ಜೇಬಲ್ಲಿ ದುಡ್ಡಿದ್ರೆ ಆ ಮಾತು ಹೇಳಲು ನಮಗೂ ಧೈರ್ಯವಿರುತ್ತದೆ. ಅದನ್ನೇ ಹೇಳಿದ್ದು ‘ದುಡ್ಡು ಕೊಡೋ ಕಾನ್ಫಿಡೆನ್ಸು’ ಅಂತ.

ಈ ಕಾನ್ಫಿಡೆನ್ಸನ್ನ ನಾವೆಲ್ರೂ ಒಂದಲ್ಲಾ ಒಂದು ಬಾರಿ ಅನುಭವಿಸಿಯೇ ಇರುತ್ತೇವೆ. ಮನುಷ್ಯನ ಮನಸ್ಸು ಅದನ್ನ ಅನುಭವಿಸೋಕೆ ಆಗಾಗ ಹಾತೊರೆಯುತ್ತಲೂ ಇರುತ್ತದೆ. ಮತ್ತೊಬ್ಬರ ಕಷ್ಟಕ್ಕೆ ಸಹಾಯ ಮಾಡೋಕೆ, ದಾನ ಮಾಡೋಕೆ, ಊರು ಉದ್ಧಾರ ಮಾಡೋಕೆ, ಸಾಮಾಜಿಕ ಕಾರ್ಯ ಮಾಡೋಕೆ ಆಗರ್ಭ ಶ್ರೀಮಂತರೇ ಆಗಿರಬೇತು ಅಂತೇನಿಲ್ಲ. ಹಾಗಂತ ನಾವು ಖಾಲಿ ಜೇಬಿನಲ್ಲಿದ್ದರೂ ಅದು ಸಾಧ್ಯವಿಲ್ಲ.

ನೀವು ಎಷ್ಟೇ ಅದ್ಭುತ ಮನುಷ್ಯರಾಗಿದ್ದರೂ ನಿಮ್ಮ ಬಳಿ ಹಣವಿಲ್ಲದಿದ್ದರೆ ಕಷ್ಟದಲ್ಲಿರುವ ನಿಮ್ಮ ಗೆಳೆಯ ಮೊದಲು ಕರೆ ಮಾಡುವುದು ಹಣವಿರುವ ಬೇರೊಬ್ಬ ಮನುಷ್ಯನಿಗೇ ಹೊರತು ಹಣವಿಲ್ಲದ ಅದ್ಭುತ ಮನುಷ್ಯನಿಗಲ್ಲ. ಈ ಸತ್ಯ ಒಪ್ಪಿಕೊಳ್ಳಲು ಮನಸಿಗೆ ಸ್ವಲ್ಪ ಕಷ್ಟವಾಗಬಹುದು ಆದರೆ ಅದೇ ಸತ್ಯ. ಹೀಗಾಗಿಯೇ ಹಣ ಗಳಿಸಿ ಹೆಚ್ಚೆಚ್ಚು ಹೆಸರು ಮಾಡಿದವರಿಗೆ ಊರತುಂಬಾ ನೆಂಟರಿರುತ್ತಾರೆ. ಒಮ್ಮೆ ಇವರು ಉದ್ಧಾರ ಆದರು ಅಂತ ಗೊತ್ತಾದರೆ ಸಾಕು, ದೂರದ ಸಂಬಂಧಿಕರೆಲ್ಲಾ ತೀರಾ ಹತ್ತಿರದವರಾಗುತ್ತಾರೆ. ಉತ್ತಮ ದುಡಿಮೆಯಿರುವವನು ಬಂದರೆ ಎಲ್ಲರ ಮಧ್ಯದಲ್ಲಿ ಕುರ್ಚಿ ಹಾಕಿ ಕೂರಿಸುತ್ತಾರೆ. ಅಷ್ಟೇ ಯಾಕೆ? ನೀವು ಜೀವನದಲ್ಲಿ ಸಕ್ಸಸ್ ಆದಾಗ ಬರುವ ಬರ್ತ್ ಡೇ ವಿಶ್ ಗಳಷ್ಟು, ಹಣವಿಲ್ಲದಾಗ ನಿಮ್ಮ ಫೋನ್ ನಂಬರ್ ಲಿಸ್ಟ್ ಕೂಡ ಇರಲ್ಲ.

ಜೀವನದ ಬಹುತೇಕ ಸಂದರ್ಭಗಳಲ್ಲಿ ನಾವು ಬಯಸೋದು ಹಣವನ್ನೇ ಆದರೆ ಅದನ್ನೇ ಸ್ವಲ್ಪ ಬದಲಾಯಿಸಿ ಒಳ್ಳೆ ಮನಸಿರುವವರನ್ನ ಎಂದು ಹೇಳಲಾಗುತ್ತದೆ. ಒಳ್ಳೆಯ ಮನಸ್ಸು ಅಂದರೆ? ಸಹಾಯ ಮಾಡುವ ಮನಸ್ಸಿರುವವರು, ಸಹಾಯ ಮಾಡುವುದೆಂದರೆ ಹಣ ಕೊಡೋದು, ಅದಕ್ಕೆ ಮೂಲಭೂತವಾಗಿ ಬೇಕಿರೋದು ಹಣ.

ಹಾಗಂತ ಜೀವನದಲ್ಲಿ ಕೇವಲ ಹಣಕ್ಕೆ ಮಾತ್ರ ಬೆಲೆ, ಉಳಿದೆಲ್ಲವೂ ಕಾಲ ಕಸ ಎಂದೂ ಅಲ್ಲ. ಹಣ ಕೂಡ ಈಗ ಮೂಲಭೂತ ಅವಶ್ಯಕತೆ ಎಂದು ಹೇಳುವುದಷ್ಟೇ ನಮ್ಮ ಉದ್ದೇಶ. ಏನಾದರೂ ಆಗಲಿ ಕೈಲಿ ನಾಲ್ಕು ಕಾಸಿರಲಿ ಎಂಬ ಹಾಗೆ ನಾವು ಮೊದಲು ಮಾಡಬೇಕಿರೋದು ಹಣ ಸಂಪಾದನೆ. ಅದಿದ್ದಾಗ ಮಾತ್ರ ನಾಲ್ಕು ಜನರಿಗೆ ನೆರವಾಗಬಹುದು. ಎಷ್ಟೇ ಉತ್ತಮ ಮನಸಿದ್ದರೂ ಹಣವಿಲ್ಲದಿದ್ದರೆ ಅಲ್ಲಿ ನಮ್ಮ ಇರುವಿಕೆಯೂ ವ್ಯರ್ಥವಾಗಬಹುದು. ಬಹುತೇಕ ರಾಜಕಾರಣಿಗಳು ತುಂಬಾ ಶಕ್ತಿವಂತರು ಎಂಬುದನ್ನು ಕೇಳಿದ್ದೇವೆ. ಆ ಶಕ್ತಿ ಮತ್ತೇನೂ ಅಲ್ಲ. ಅದು “ಹಣ”. ಬಹಳಷ್ಟು ಜನ ‘ಇವರು ಮನೆಕಡೆ ತುಂಬಾ ಚೆನ್ನಾಗಿದ್ದಾರೆ’ ಎನ್ನುತ್ತಾರೆ. ಮನೆಕಡೆ ಚೆನ್ನಾಗಿರೋದು ಅಂದ್ರೆ ಮತ್ತದೇ ಹಣ. ಹುಡುಗ ಕಷ್ಟಪಟ್ಟು ‘ಸೆಟಲ್ ಆಗಿದ್ದಾನೆ’ ಎನ್ನುತ್ತಾರೆ, ಸೆಟಲ್ ಅಂದ್ರೆ ಅದೇ ಹಣ, ಬಹಳಷ್ಟು ಜನ ಮಾತಿನ ವರಸೆಗೆ ‘ನಾನು ಹೈಕೋರ್ಟ್, ಸುಪ್ರೀಂ ಕೋರ್ಟ್ ವರೆಗೂ ಹೋಗಿ ಗೆದ್ದುಕೊಂಡು ಬರೋ ತಾಕತ್ತಿರೋನು’ ಅಂತಾರೆ, ಅಲ್ಲಿ ಆ ತಾಕತ್ತು ಅನ್ನೋ ಪದದ ಅರ್ಥವೇ ‘ಹಣ’. ಈ ಎಲ್ಲಾ ಮಾತಿನ ಹಿಂದಿರೋದು ಅದೇ ದುಡ್ಡು ಕೊಡೋ ಕಾನ್ಫಿಡೆನ್ಸು. ಹಾಗಂತ ಹಣವೇ ಸರ್ವ ಶ್ರೇಷ್ಠ ಅಂತಲೂ ಅಲ್ಲ ಎಲ್ಲಕ್ಕಿಂತ ಉತ್ತಮ ವ್ಯಕ್ತಿತ್ವ ಮುಖ್ಯ. ಅದರೊಟ್ಟಿಗೆ ಹಣವಿದ್ದರೆ ರಾಜನ ತಲೆಯಲ್ಲಿ ಕಿರೀಟವಿದ್ದಂತೆ. ಹೀಗಾಗಿ ಹಣದ ಮಹತ್ವವನ್ನು ನಾವೆಲ್ಲರೂ ಅರಿಯಲೇಬೇಕು.

(ಲೇಖಕರು ಫಿನ್‌ಪ್ಲಸ್.ಕಾಮ್‌ ಮುಖ್ಯಸ್ಥರು)

Exit mobile version