Site icon Vistara News

Money Guide: ಎನ್‌ಪಿಎಸ್‌ನಿಂದ ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ವರೆಗೆ; ನಾಳೆಯಿಂದಲೇ ಬದಲಾಗುತ್ತವೆ ಈ ಎಲ್ಲ ನಿಯಮಗಳು

money guide

money guide

ಬೆಂಗಳೂರು: 2024-2025ರ ಹಣಕಾಸು ವರ್ಷವು (Financial Year) ನಾಳೆಯಿಂದ (ಏಪ್ರಿಲ್ 1) ಪ್ರಾರಂಭವಾಗಲಿದ್ದು, ಸಹಜವಾಗಿ ಹಣಕಾಸಿಗೆ ಸಂಬಂಧಿಸಿದ ನಿಯಮಗಳಲ್ಲಿ ಕೆಲವು ಬದಲಾವಣೆಗಳು ಜಾರಿಗೆ ಬರಲಿವೆ. ಈ ಬದಲಾವಣೆಗಳು ಹಣವನ್ನು ಖರ್ಚು ಮಾಡುವ ಅಥವಾ ಉಳಿಸುವ ವಿಧಾನದ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ ಈ ಬದಲಾವಣೆ ನಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದು ತಿಳಿದುಕೊಳ್ಳುವುದು ಮುಖ್ಯ. ಆ ಬಗೆಗಿನ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಎನ್​ಪಿಎಸ್  (NPS)

ಹೆಚ್ಚಿನ ಭದ್ರತೆ ಒದಗಿಸಲು ಮತ್ತು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಚಂದಾದಾರರ ಹಿತಾಸಕ್ತಿಗಳನ್ನು ಕಾಪಾಡಲು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA)ವು ಹೆಚ್ಚು ಸುರಕ್ಷಿತವಾದ ವಿಧಾನವನ್ನು ಘೋಷಿಸಿದೆ. ಇದಕ್ಕಾಗಿ ಎರಡು ಅಂಶಗಳ ಆಧಾರ್ ದೃಢೀಕರಣ(ಅಥೆಂಟಿಕೇಷನ್‌)ವನ್ನು ಪರಿಚಯಿಸಿದೆ. ಇನ್ನು ಮುಂದೆ ಪಾಸ್‌ವರ್ಡ್‌ನೊಂದಿಗೆ ಆಧಾರ್ ದೃಢೀಕರಣವನ್ನೂ ಪೂರ್ಣಗೊಳಿಸಬೇಕು. ಆಗ ಮಾತ್ರ ಲಾಗಿನ್ ಯಶಸ್ವಿಯಾಗುತ್ತದೆ. ಇದರಿಂದ ಅನಧಿಕೃತ ಎನ್‌ಪಿಎಸ್‌ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಈ ನಿಯಮ ಏಪ್ರಿಲ್‌ 1ರಿಂದಲೇ ಜಾರಿಗೆ ಬರಲಿದೆ.

ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ (SBI credit card)

ಎಸ್‌ಬಿಐ ತನ್ನ ಕ್ರೆಡಿಟ್ ಕಾರ್ಡ್‌ಗಳ ಲೆಕ್ಕಾಚಾರ ಪ್ರಕ್ರಿಯೆಯಲ್ಲಿ ಏಪ್ರಿಲ್‌ 1ರಿಂದ ಬದಲಾವಣೆಗಳನ್ನು ಘೋಷಿಸಿದೆ. ಅದರಂತೆ ಕೆಲವು ವಿಶೇಷ ಕ್ರೆಡಿಟ್ ಕಾರ್ಡ್ ಹೊಂದಿರುವವರು ಇನ್ನು ಮುಂದೆ ಕ್ರೆಡಿಟ್ ಕಾರ್ಡ್‌ಗಳ ಮೂಲಕ ದರ ಪಾವತಿಗಳನ್ನು ಮಾಡುವಾಗ ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯುವುದಿಲ್ಲ.  ಈ ಬದಲಾವಣೆಯು ಔರಮ್, ಎಸ್ಬಿಐ ಕಾರ್ಡ್ ಎಲೈಟ್, ಎಸ್ಬಿಐ ಕಾರ್ಡ್ ಎಲೈಟ್ ಅಡ್ವಾಂಟೇಜ್, ಎಸ್‌ಬಿಐ ಕಾರ್ಡ್ ಪಲ್ಸ್ ಮತ್ತು ಸಿಂಪ್ಲಿಕ್ಲಿಕ್ ಎಸ್‌ಬಿಐ ಕಾರ್ಡ್‌ಗಳಿಗೆ (AURUM, SBI Card Elite, SBI Card Elite Advantage, SBI Card Pulse, SimplyCLICK SBI Card) ಅನ್ವಯಿಸುತ್ತದೆ. ಇದುವರೆಗೆ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮೂಲಕ ದರ ಪಾವತಿ ಮಾಡುವವರಿಗೆ ರಿವಾರ್ಡ್ ಪಾಯಿಂಟ್ಸ್‌ ಸಿಗುತ್ತಿತ್ತು. ಇದುವರೆಗೆ ಗಳಿಸಿರುವ ರಿವಾರ್ಡ್ ಪಾಯಿಂಟ್‌ಗಳು 2024ರ ಏಪ್ರಿಲ್ 15ರ ನಂತರ ಮುಕ್ತಾಯಗೊಳ್ಳಲಿವೆ. ಅಂದರೆ ರಿವಾರ್ಡ್ ಪಾಯಿಂಟ್ಸ್‌ ಪಡೆದಿದ್ದರೆ ಈ ಅವಧಿಯೊಳಗೆ ಬಳಸಿಕೊಳ್ಳಬೇಕು. 

ಯೆಸ್‌ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ (YES Bank credit card)

ಹೊಸ ಹಣಕಾಸು ವರ್ಷದಲ್ಲಿ 10,000 ರೂ. ಅಥವಾ ಅದಕ್ಕಿಂತ ಹೆಚ್ಚು ಖರ್ಚು ಮಾಡುವ ಯೆಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ದಾರರು ಕಾಂಪ್ಲಿಮೆಂಟರಿಯಾಗಿ ದೇಶೀಯ ಲಾಂಜ್ (Domestic lounge) ಪ್ರವೇಶದ ಸೌಲಭ್ಯ ಪಡೆಯಲಿದ್ದಾರೆ.

ಐಸಿಐಸಿಐ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ (ICICI Bank credit card)

ಐಸಿಐಸಿಐ ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ನೆರವಾಗಲು ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಕೆಲವು ಬದಲಾವಣೆಗಳನ್ನು ಮಾಡಿದೆ. 35,000 ರೂ. ವ್ಯಯಿಸಿದರೆ ನೀವು ಒಂದು ಪೂರಕ ಏರ್‌ಪೋರ್ಟ್ ಲಾಂಜ್ ಪ್ರವೇಶ ಪಡೆಯಬಹುದು.

ಓಲಾ ಮನಿ ವ್ಯಾಲೆಟ್ (OLA Money wallet)

ಓಲಾ ಮನಿ ಕಿರು ಪಿಪಿಐ (Prepaid Payment Instrument) ವ್ಯಾಲೆಟ್ ಸೇವೆಗಳನ್ನು ಒದಗಿಸುವುದಾಗಿ ಈಗಾಗಲೇ ಘೋಷಿಸಿದೆ. ಇದು ಏಪ್ರಿಲ್‌ 1ರಿಂದ ಜಾರಿಗೆ ಬರಲಿದೆ. ಓಲಾ ಮನಿ ವ್ಯಾಲೆಟ್‌ಗೆ ತಿಂಗಳಿಗೆ 10,000 ರೂ. ಸೇರಿಸುವ ಮಿತಿ ಅನ್ವಯವಾಗಲಿದೆ. ಮಾರ್ಚ್ 22ರಂದು ಎಸ್ಎಂಎಸ್ ಮೂಲಕ ಗ್ರಾಹಕರಿಗೆ ಈ ಬದಲಾವಣೆಯ ಬಗ್ಗೆ ತಿಳಿಸಲಾಗಿದೆ.

ಇಪಿಎಫ್‌ಒ (EPFO)

ಹೊಸ ಹಣಕಾಸು ವರ್ಷದ ಆರಂಭದ ದಿನ ನೌಕರರ ಭವಿಷ್ಯ ನಿಧಿ ದೊಡ್ಡ ಬದಲಾವಣೆಗೆ ಸಾಕ್ಷಿಯಾಗಲಿದೆ. ಅಂದರೆ ಏಪ್ರಿಲ್ 1ರಿಂದ ನೌಕರರ ಭವಿಷ್ಯ ನಿಧಿ ಸಂಸ್ಥೆ ಹೊಸ ನಿಯಮಗಳನ್ನು ಜಾರಿಗೆ ತರಲಿದೆ. ಹೊಸ ನಿಯಮದ ಪ್ರಕಾರ ನೀವು ಉದ್ಯೋಗವನ್ನು ಬದಲಾಯಿಸಿದರೆ, ನಿಮ್ಮ ಹಳೆಯ ಪಿಎಫ್ ಅಕೌಂಟ್‌ ಅನ್ನು ಅನ್ನು ಆಟೋ ಮೋಡ್‌ಗೆ ವರ್ಗಾಯಿಸಲಾಗುತ್ತದೆ. ಇದರಿಂದ ಉದ್ಯೋಗವನ್ನು ಬದಲಾಯಿಸಿದಾಗ ಪಿಎಫ್ ಮೊತ್ತವನ್ನು ವರ್ಗಾಯಿಸಲು ನೀವು ವಿನಂತಿಸುವ ಅಗತ್ಯವಿಲ್ಲ.

ಎಸ್‌ಬಿಐ ಅಮೃತ್‌ ಕಲಶ್‌ ವಿಶೇಷ ಎಫ್‌ಡಿ (SBI Amrit Kalash Deposit)

ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್‌ ಎಸ್‌ಬಿಐಯ ವಿಶೇಷ ಯೋಜನೆ ಅಮೃತ್‌ ಕಲಶ್‌ ಎಫ್‌ಡಿ ಡೆಪಾಸಿಟ್‌ ಸ್ಕೀಮ್‌ನ ಅವಧಿ ಮಾರ್ಚ್‌ 31ಕ್ಕೆ ಮುಕ್ತಾಯವಾಗಲಿದೆ. 400 ದಿನಗಳ ಈ ಯೋಜನೆಯಲ್ಲಿ ಬಡ್ಡಿಯನ್ನು ಮಾಸಿಕ, ತ್ರೈಮಾಸಿಕ ಅಥವಾ ಅರ್ಧ ವಾರ್ಷಿಕ ಅವಧಿಗೆ ನೀಡುವ ವ್ಯವಸ್ಥೆ ಇದೆ.‌ ದೇಶೀಯ ಹಾಗೂ ಅನಿವಾಸಿ ಭಾರತೀಯರು ಈ ಯೋಜನೆಯಲ್ಲಿ ಠೇವಣಿ ಇಡಬಹುದು. ರೆಗ್ಯುಲರ್‌ ಗ್ರಾಹಕರಿಗೆ 7.1% ಮತ್ತು ಹಿರಿಯ ಗ್ರಾಹಕರಿಗೆ 7.6% ಬಡ್ಡಿ ಸಿಗುತ್ತದೆ.

ಇದನ್ನೂ ಓದಿ: Money Guide: ಮೊಬೈಲ್‌ನಲ್ಲಿಯೇ ಪಿಎಫ್‌ ಮೊತ್ತ ಪರಿಶೀಲಿಸಬೇಕೆ?; ಜಸ್ಟ್‌ ಹೀಗೆ ಮಾಡಿ ಸಾಕು

Exit mobile version