ಬೆಂಗಳೂರು: ಬಿಎನ್‌ಪಿಎಲ್ (BNPL) ಬಗ್ಗೆ ನಿಮಗೆ ಗೊತ್ತೆ? ಬಿಎಸ್‌ಎಸ್‌ಎಲ್ ಗೊತ್ತು. ಇದೇನಿದು ಬಿಎನ್‌ಪಿಎಲ್ ಎಂದು ಎಂದು ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ. ʼಈಗ ಖರೀದಿಸಿ, ನಂತರ ಪಾವತಿಸಿʼ (Buy Now, Pay Later)ಯ ಸಂಕ್ಷಿಪ್ತ ರೂಪವೇ ಬಿಎನ್‌ಪಿಎಲ್. ಯಾವುದೇ ಒಂದು ವಸ್ತು ಖರೀದಿಸಲು ತಕ್ಷಣಕ್ಕೆ ನಿಮ್ಮ ಬಳಿ ಹಣ ಇಲ್ಲದಿದ್ದರೆ ಹೆಸರೇ ಹೇಳುವಂತೆ ಈಗ ಖರೀದಿಸಿ ನಂತರ ಪಾವತಿಸಬಹುದು ಆಯ್ಕೆಯನ್ನು ಬಳಸಿಕೊಳ್ಳಬಹುದು. ಇ-ಕಾಮರ್ಸ್ ತಾಣಗಳು ಈ ವಿಧಾನದ ಮೂಲಕ ಗ್ರಾಹಕರಿಗೆ ವಸ್ತುಗಳ ಖರೀದಿಗೆ ಬಡ್ಡಿರಹಿತ ಕಿರು ಅವಧಿಯ ಸಾಲಗಳನ್ನು ಒದಗಿಸುತ್ತಿವೆ. ಅಂದರೆ ನೀವು ವಸ್ತು ಖರೀದಿಸಿದ ಬಳಿಕ ಹಂತ ಹಂತವಾಗಿ ಕಂತುಗಳಲ್ಲಿ ದುಡ್ಡು ಪಾವತಿಸದರಾಯ್ತು. ಅಂದರೆ ಈ ಸಾಲ ಬಳಸಿಕೊಂಡು ಗ್ರಾಹಕರು ವಸ್ತುಗಳನ್ನು ಖರೀದಿಸಿ, ಆ ಬಳಿಕ ಬಡ್ಡಿರಹಿತ ಇಎಂಐಗಳ ಮೂಲಕ ಪಾವತಿ ಮಾಡಬಹುದು. ಸದ್ಯ ಇದು ಭಾರತೀಯ ಮಧ್ಯಮ ವರ್ಗದ ಜನರ ನೆಚ್ಚಿನ ಆಯ್ಕೆ ಎನಿಸಿಕೊಂಡಿದೆ. ಈ ಬಗೆಗಿನ ವಿವರ ಇಲ್ಲಿದೆ (Money Guide).
ಗಮನ ಸೆಳೆಯುತ್ತಿದೆ
ಈ ಬಿಎನ್‌ಪಿಎಲ್ ಸಾಂಪ್ರದಾಯಿಕ ಕ್ರೆಡಿಟ್ ಕಾರ್ಡ್ ಮತ್ತು ಸಾಲಗಳಿಗೆ ಪರ್ಯಾಯವಾಗಿ ಗುರುತಿಸಿಕೊಂಡಿದೆ. ಬಡ್ಡಿ ಪಾವತಿಸಬೇಕಾಗಿಲ್ಲ ಎನ್ನುವ ಅಂಶವೇ ಈ ಪಾವತಿ ವಿಧಾನದ ಬಹುದೊಡ್ಡ ಪ್ಲಸ್ ಪಾಯಿಂಟ್. ಅಲ್ಲದೆ ಬಿಎನ್‌ಪಿಎಲ್ ಸೇವೆ ಸಾಮಾನ್ಯವಾಗಿ ತ್ವರಿತ ಮತ್ತು ಸುಲಭವಾಗಿ ಮಂಜೂರಾಗುತ್ತದೆ. ಇದಕ್ಕೆ ಕನಿಷ್ಠ ಕ್ರೆಡಿಟ್ ಚೆಕ್ ಗಳ ಅಗತ್ಯವಿರುತ್ತದೆ. ಆದರೆ ಗಮನಿಸಿ ಬಿಎನ್‌ಪಿಎಲ್ ತಿಂಗಳ ಮರುಪಾವತಿಯನ್ನು ಮಿಸ್ ಮಾಡಿದರೆ ಅದು ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ಸೂಕ್ತ ಸಮಯದಲ್ಲಿ ಮರು ಪಾವತಿಗೆ ಗಮನ ಹರಿಸಿ. ಅಲ್ಲದೆ ಕ್ರೆಡಿಟ್ ಕಾರ್ಡ್‌ಗೆ ಹೋಲಿಸಿದರೆ ಬಿಎನ್‌ಪಿಎಲ್ ಕಾರ್ಡ್‌ಗಳಿಗೆ ಆರಂಭದಲ್ಲಿ ಅಲ್ಪ ಮೊತ್ತವಷ್ಟೇ ಲಭಿಸುತ್ತದೆ.
ಗಮನಿಸಬೇಕಾದ ಅಂಶ
ಬಿಎನ್‌ಪಿಎಲ್ ಕಾರ್ಡ್ ಪಡೆಯುವ ಮುನ್ನ ಈ ಅಂಶಗಳನ್ನು ಗಮನಿಸಿ.
- ಬಜೆಟ್ ಮುಖ್ಯ: ಬಿಎನ್‌ಪಿಎಲ್ ಮೇಲ್ನೋಟಕ್ಕೆ ಅನುಕೂಲಕವೆಂದು ತೋರಬಹುದು. ಆದರೆ ನಿಮ್ಮ ಸಾಲ ಹೆಚ್ಚಾಗಲು ಇದು ಕಾರಣವಾಗಬಹುದು. ಬಿಎನ್‌ಪಿಎಲ್ ಕಾರ್ಡ್ ಪಡೆಯುವ ಮುನ್ನ ಅಸ್ತಿತ್ವದಲ್ಲಿರುವ ಸಾಲ ಮತ್ತು ಬಾಧ್ಯತೆಗಳನ್ನು ಪರಿಗಣಿಸಿ.
- ಷರತ್ತುಗಳನ್ನು ಗಮನಿಸಿ: ಬಡ್ಡಿ-ಮುಕ್ತ ಎಂದು ಜಾಹೀರಾತು ನೀಡಲಾಗಿದ್ದರೂ ಪಾವತಿಯ ವಿಳಂಬಕ್ಕೆ ಹೆಚ್ಚಿನ ದಂಡ ಪಾವತಿಸಬೇಕಾಗುತ್ತದೆ. ಈ ದಂಡಗಳು ಮತ್ತು ಯಾವುದೇ ಪೂರ್ವಪಾವತಿ ನಿರ್ಬಂಧಗಳನ್ನು ಅರ್ಥ ಮಾಡಿಕೊಳ್ಳಲು ನಿಯಮಗಳು ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಓದಿ.
- ಸಿಬಿಲ್ ಸ್ಕೋರ್ ಮೇಲೆ ಪರಿಣಾಮ: ವಿಳಂಬ ಪಾವತಿ ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಈ ಬಗ್ಗೆ ಎಚ್ಚರ ವಹಿಸಿ.
- ಎಲ್ಲ ಶುಲ್ಕಗಳನ್ನು ಅರ್ಥ ಮಾಡಿಕೊಳ್ಳಿ: ಕೆಲವು ಬಿಎನ್‌ಪಿಎಲ್ ಸೇವೆಗಳು ಸಂಸ್ಕರಣಾ ಶುಲ್ಕಗಳನ್ನು ಹೊಂದಿರುತ್ತವೆ. ಇದರಲ್ಲಿ ಒಳಗೊಂಡಿರುವ ಎಲ್ಲ ವೆಚ್ಚಗಳನ್ನು ಅರ್ಥಮಾಡಿಕೊಳ್ಳಿ. ವಿಳಂಬ ಪಾವತಿ ಶುಲ್ಕಗಳು, ಸಂಸ್ಕರಣಾ ಶುಲ್ಕಗಳು ಅಥವಾ ದಂಡಗಳಂತಹ ಗುಪ್ತ ಶುಲ್ಕಗಳನ್ನು ಗಮನಿಸಿ.
- ಸೀಮಿತ ಬಳಕೆ: ಬಿಎನ್‌ಪಿಎಲ್ ಎಲ್ಲೆಡೆ ಇಲ್ಲದಿರಬಹುದು. ಕ್ರೆಡಿಟ್ ಕಾರ್ಡ್ಗಳಿಗಿಂತ ಭಿನ್ನವಾಗಿ, ಬಿಎನ್‌ಪಿಎಲ್ ಕಾರ್ಡ್ ಅನ್ನು ನಿರ್ದಿಷ್ಟ ವ್ಯಾಪಾರಿಗಳು ಅಥವಾ ಪ್ಲಾಟ್ಫಾರ್ಮ್ಗಳು ಮಾತ್ರವೇ ಬಳಸುತ್ತವೆ. ನಿಮ್ಮ ನೆಚ್ಚಿನ ಅಂಗಡಿಗಳು ಮತ್ತು ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳು ಬಿಎನ್‌ಪಿಎಲ್ ಆಯ್ಕೆಯನ್ನು ಸ್ವೀಕರಿಸುತ್ತವೆಯೇ ಎಂದು ಪರಿಶೀಲಿಸಿ. ಅಲ್ಲದೆ ಇದು ವಿದೇಶದಲ್ಲಿ ಉಪಯೋಗಕ್ಕೆ ಬರುವುದಿಲ್ಲ.
ಪ್ರಮುಖ ಬ್ರ್ಯಾಂಡ್‌ಗಳು
ಭಾರತದಲ್ಲಿ ಲೇಜಿ ಪೇ, ಸಿಂಪ್ಲ, ಅಮೆಜಾನ್ ಪೇ ಲೇಟರ್, ಫ್ಲಿಪ್ ಕಾರ್ಟ್ ಪೇ ಲೇಟರ್ ಹಾಗೂ ಝೆಸ್ಟ್ ಮನಿ ಪ್ರಮುಖ ಬಿಎನ್‌ಪಿಎಲ್ ಬ್ರ್ಯಾಂಡ್ ಎನಿಸಿಕೊಂಡಿವೆ. ಈ ಎಲ್ಲ ಬ್ರ್ಯಾಂಡ್‌ಗಳು ಕಾರ್ಯವೈಖರಿ ಸಾಮಾನ್ಯವಾಗಿ ಒಂದೇ ರೀತಿಯಲ್ಲಿ ಇರುತ್ತದೆ. ನಿರ್ದಿಷ್ಟ ಇ-ಕಾಮರ್ಸ್ ತಾಣದಿಂದ ಖರೀದಿಸುವಾಗ ನೀವು ‘Buy now, pay later’ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಒಟ್ಟು ಮೊತ್ತದಲ್ಲಿ ಸಣ್ಣ ಮೊತ್ತವನ್ನು ಆರಂಭದಲ್ಲಿ ಡೌನ್ ಪೇಮೆಂಟ್ ಮಾಡಬೇಕು. ಉಳಿದ ಮೊತ್ತವನ್ನು ಬಡ್ಡಿರಹಿತ ಇಎಂಐ ಮೂಲಕ ನಿರ್ದಿಷ್ಟ ಅವಧಿಯೊಳಗೆ ಪಾವತಿಸಬೇಕು.
ಯಾರು ಖರೀದಿಸಬಹುದು?
ಬಿಎನ್‌ಪಿಎಲ್ ಕಾರ್ಡ್ ಅನ್ನು ಖರೀದಿಸಲು ಬೇಕಾದ ಅರ್ಹತೆಗಳು: ಭಾರತದ ಟೈರ್ 1 ಅಥವಾ ಟೈರ್ 2 ನಗರದ ನಿವಾಸಿಯಾಗಿರಬೇಕು, ಕನಿಷ್ಠ 18 ವರ್ಷ ವಯಸ್ಸಾಗಿರಬೇಕು, ವೇತನ ಪಡೆಯುತ್ತಿರಬೇಕು, ನಿಮ್ಮ ಬ್ಯಾಂಕ್ ಖಾತೆ ಹಾಗೂ ಇತರ ಕೆವೈಸಿ ದಾಖಲೆಗಳನ್ನು ಹೊಂದಿರಬೇಕು.
ಇದನ್ನೂ ಓದಿ: Money Guide: ಮನೆಯಲಿ ಇದ್ದರೆ ಚಿನ್ನ ಈ ನಿಯಮ ಅರಿತಿರುವುದು ಚೆನ್ನ: ಗೋಲ್ಡ್ ಟ್ಯಾಕ್ಸ್ ಏನು ಹೇಳುತ್ತದೆ?