ಬೆಂಗಳೂರು: ಮನೆ ಹೊಂದಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಆದರೆ ಈ ದುಬಾರಿ ಕಾಲಘಟ್ಟದಲ್ಲಿ ಇದು ಸುಲಭವಲ್ಲ. ಕಷ್ಟುಪಟ್ಟು ದುಡಿದು ಉಳಿತಾಯ ಮಾಡಿದ ಮೊತ್ತವೆಲ್ಲವನ್ನೂ ಇದಕ್ಕಾಗಿ ವಿನಿಯೋಗಿಸಬೇಕಾಗುತ್ತದೆ. ಅಲ್ಲದೆ ದುಬಾರಿ ಬಡ್ಡಿ ದರದ ಗೃಹ ಸಾಲ ಪಡೆದುಕೊಳ್ಳಬೇಕಾಗುತ್ತದೆ. ಇಷ್ಟಲ್ಲ ರಿಸ್ಕ್ ತೆಗೆದುಕೊಂಡು ನಿರ್ಮಿಸುವ ಮನೆಗೆ ಯಾವುದೇ ಅಪಾಯವಾಗದಂತೆ ರಕ್ಷಿಸುವುದು ಕೂಡ ಅಗತ್ಯ. ನಮಗೆ ಜೀವ ವಿಮೆ, ಆರೋಗ್ಯ ವಿಮೆ ಇರುವಂತೆ ಹೋಮ್‌ಲೋನ್‌ಗೂ ಇನ್ಶೂರೆನ್ಸ್ (Home Loan Insurance) ಇದೆ. ಅದು ಯಾಕೆ ಆವಶ್ಯಕ? ಮನೆ ಯಜಮಾನನಿಗೆ ಯಾವ ರೀತಿಯಲ್ಲಿ ನೆರವಾಗುತ್ತದೆ? ಇಂದಿನ ಮನಿಗೈಡ್ (Money Guide)ನಲ್ಲಿದೆ ವಿವರ.
ಹೋಮ್‌ಲೋನ್ ಇನ್ಶೂರೆನ್ಸ್‌ನ ಪ್ರಾಧಾನ್ಯತೆ
ಹೋಮ್ ಲೋನ್ ಪ್ರೊಟೆಕ್ಷನ್ ಪ್ಲಾನ್ (Home Loan Protection Plan-HLPP) ಎಂದೂ ಕರೆಯಲ್ಪಡುವ ಹೋಮ್ ಲೋನ್ ಇನ್ಶೂರೆನ್ಸ್ ಒಂದು ವಿಮಾ ಪಾಲಿಸಿಯಾಗಿದ್ದು, ಸಾಲ ಹೊಂದಿದಾತ ಆಕಸ್ಮಿಕವಾಗಿ ಮರಣ ಹೊಂದಿದರೆ ಗೃಹ ಸಾಲವನ್ನು ಮರುಪಾವತಿಸಲು ಆತನ ಕುಟುಂಬಕ್ಕೆ ಸಹಾಯ ಮಾಡುತ್ತದೆ. ʼʼಗೃಹ ಸಾಲವನ್ನು ಪಾವತಿಸುವ ವ್ಯಕ್ತಿಯು ದುರದೃಷ್ಟವಶಾತ್ ಮೃತಪಟ್ಟರೆ ಬಾಕಿ ಇರುವ ಇಎಂಐಯನ್ನು ವಿಮೆ ನೋಡಿಕೊಳ್ಳುತ್ತದೆ. ಇದರಿಂದ ಮನೆ ಸುರಕ್ಷಿತವಾಗಿರುತ್ತದೆʼʼ ಎಂದು ತಜ್ಞರು ಇದರ ಪ್ರಾಧಾನ್ಯತೆಯನ್ನು ವಿವರಿಸುತ್ತಾರೆ.
ಖರೀದಿ ಯಾವಾಗ?
ಈ ವಿಮೆಯನ್ನು ಗೃಹ ಸಾಲ ತೆಗೆದುಕೊಳ್ಳುವ ಸಮಯದಲ್ಲಿ ಅಥವಾ ಸಾಲದ ಅವಧಿಯಲ್ಲಿ ಯಾವುದೇ ಸಮಯದಲ್ಲಿ ಖರೀದಿಸಬಹುದು. ಸಾಲದ ಮೊತ್ತ, ಸಾಲದ ಅವಧಿ, ಸಾಲಗಾರನ ವಯಸ್ಸು, ಆರೋಗ್ಯ ಮತ್ತು ಆಯ್ಕೆ ಮಾಡಿದ ಕವರೇಜ್ ಸೇರಿದಂತೆ ಹಲವಾರು ಅಂಶಗಳನ್ನು ಅವಲಂಬಿಸಿ ವಿಮೆಯ ವೆಚ್ಚವು ಬದಲಾಗುತ್ತದೆ.
ಕಡ್ಡಾಯವಲ್ಲ
ಹೋಮ್ ಲೋನ್ ಇನ್ಶೂರೆನ್ಸ್ ಕಡ್ಡಾಯವಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಸಾಲ ನೀಡುವ ಬ್ಯಾಂಕ್ ಹೋಮ್ ಲೋನ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ಸಾಲಗಾರರನ್ನು ಒತ್ತಾಯಿಸುವಂತಿಲ್ಲ ಎಂದು ಆರ್‌ಬಿಐ ಸೂಚಿಸಿದೆ.
ಬೇರೆ ಬೇರೆ
ಇನ್ನೊಂದು ಮುಖ್ಯ ವಿಚಾರ ಎಂದರೆ ಗೃಹ ವಿಮೆ ಮತ್ತು ಗೃಹ ಸಾಲ ವಿಮೆ ಎರಡು ಬೇರೆ ಬೇರೆ. ಗೃಹ ವಿಮೆ ಪ್ರತಿಕೂಲ ಪರಿಸ್ಥಿತಿಯ ಸಂದರ್ಭದಲ್ಲಿ ನಿಮ್ಮ ಮನೆಯನ್ನು ರಕ್ಷಿಸಿದರೆ, ಕೆಲವು ಆಕಸ್ಮಿಕ ಘಟನೆಗಳಿಂದ ಮರುಪಾವತಿ ಸಾಧ್ಯವಾಗದಿದ್ದರೆ ಅದರ ಜವಾಬ್ದಾರಿಯನ್ನು ಗೃಹ ಸಾಲ ವಿಮೆ ನೋಡಿಕೊಳ್ಳುತ್ತದೆ.
ಎಚ್ಎಲ್‌ಪಿಪಿಯನ್ನು ನಿರ್ದಿಷ್ಟವಾಗಿ ಗೃಹ ವಿಮಾ ರಕ್ಷಣೆಗಾಗಿ ವಿನ್ಯಾಸಗೊಳಿಸಲಾಗಿದ್ದರೂ ಅದನ್ನು ಟರ್ಮ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿಯೂ ಕೊಂಡುಕೊಳ್ಳಬಹುದು. ಟರ್ಮ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ ಹೆಚ್ಚುವರಿ ಪ್ರೀಮಿಯಂಗಳನ್ನು ಪಾವತಿಸುವ ಮೂಲಕ ಗೃಹ ವಿಮೆಯನ್ನು ಸಹ ಕವರ್ ಮಾಡಬಹುದು. ಅದಾಗ್ಯೂ ಹೋಮ್‌ಲೋನ್ ಇನ್ಶೂರೆನ್ಸ್‌ನ ನಿಯಮಗಳು ಮತ್ತು ಷರತ್ತುಗಳು ನೀವು ತೆಗೆದುಕೊಂಡ ಪಾಲಿಸಿಯನ್ನು ಅವಲಂಬಿಸಿರುತ್ತದೆ. ಆಸ್ತಿ ಮಾಲಕರು ಗೃಹ ಸಾಲದ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ಅರ್ಹರು. ಎಚ್ಎಲ್‌ಪಿಪಿಯಲ್ಲಿ ಹೆಚ್ಚುವರಿ ಪ್ಲ್ಯಾನ್ ಖರೀದಿಸಿದರೆ ಅಂಗವೈಕಲ್ಯಗಳು, ಮಾರಣಾಂತಿಕ ಕಾಯಿಲೆಗಳು, ಬೆಂಕಿ ಅಪಘಾತಗಳು ಮತ್ತು ಮಾನವ ನಿರ್ಮಿತ ಅಪಾಯಗಳನ್ನು ಸಹ ಕವರ್ ಮಾಡಬಹುದು.
ಇದನ್ನೂ ಓದಿ: Money Guide: ಮಾಸಿಕ ಸಂಬಳದ ಜತೆಗೆ ಪೂರಕ ಆದಾಯ ಬೇಕೆ? ಈ ಯೋಜನೆಯಲ್ಲಿ ಹೂಡಿಕೆ ಮಾಡಿ