ಬೆಂಗಳೂರು: ದಿನ ಕಳೆದಂತೆ ಜೀವನ ವೆಚ್ಚವೂ ಅಧಿಕವಾಗುತ್ತಿದೆ. ಮಾಸಿಕ ಸಂಬಳವೊಂದನ್ನೇ ಆಶ್ರಯಿಸಿರುವ ಮಧ್ಯಮ ವರ್ಗದ ಜನರಿಗೆ ಅನಾರೋಗ್ಯ, ಅಪಘಾತದಂತಹ ಅನಿರೀಕ್ಷಿತ ಆಘಾತ ಮಾನಸಿಕ ಒತ್ತಡಕ್ಕೆ ಕಾರಣವಾಗಬಲ್ಲದು. ಹೀಗಾಗಿ ಇಂತಹ ಪರಿಸ್ಥಿತಿಯನ್ನು ಯಾವುದೇ ಗೊಂದಲಗಳಿಲ್ಲದೆ ದಾಟಬೇಕು ಎಂದಾದರೆ ಮಾಸಿಕ ವೇತನದ ಜತೆಗೆ ಇನ್ನೊಂದಷ್ಟು ಆದಾಯವೂ ಇರಬೇಕಾಗುತ್ತದೆ. ಇದಕ್ಕಾಗಿ ಎಲ್ಲರಿಗೂ ಪಾರ್ಟ್ ಟೈಂ ಜಾಬ್ ಮಾಡಲು ಸಾಧ್ಯವಿಲ್ಲ. ಇಂತಹವರಿಗಾಗಿ ನೆರವಾಗುವ ಯೋಜನೆಯೇ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (Post Office Monthly Income Scheme). ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ? ಇದಕ್ಕೆ ಯಾರೆಲ್ಲ ಅರ್ಹರು? ನೀವು ಇದರಲ್ಲಿ ಖಾತೆ ತೆರೆಯಬೇಕಾದರೆ ಏನು ಮಾಡಬೇಕು? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ (Money Guide).
ಏನಿದು ಯೋಜನೆ?
ಇದರಲ್ಲಿ ಏಕಾಂಗಿಯಾಗಿ ಅಥವಾ ತಮ್ಮ ಸಂಗಾತಿಯೊಂದಿಗೆ ಜಂಟಿಯಾಗಿ ಖಾತೆಗಳನ್ನು ತೆರೆಯಬಹುದು. ವೈಯಕ್ತಿಕ ಖಾತೆಯಲ್ಲಿ ಗರಿಷ್ಠ 9 ಲಕ್ಷ ರೂ. ಮತ್ತು ಜಂಟಿ ಖಾತೆಯಲ್ಲಿ 15 ಲಕ್ಷ ರೂ.ವರೆಗೆ ಠೇವಣಿ ಇಡಬಹುದು. ಕನಿಷ್ಠ ಠೇವಣಿ ಅವಧಿ ಐದು ವರ್ಷ. ಈ ಠೇವಣಿಯ ಮೇಲೆ ಗಳಿಸಿದ ಬಡ್ಡಿಯು ಮಾಸಿಕ ಆದಾಯದ ರೂಪದಲ್ಲಿ ನಿಮಗೆ ಲಭಿಸುತ್ತದೆ. ಜಂಟಿ ಖಾತೆದಾರರು 15 ಲಕ್ಷ ರೂ.ಗಳನ್ನು ಠೇವಣಿ ಮಾಡುವ ಮೂಲಕ ಮಾಸಿಕ 9,250 ರೂ.ಗಳವರೆಗೆ ಗಳಿಸಬಹುದು. ಇನ್ನು 9 ಲಕ್ಷ ರೂ.ಗಳ ಠೇವಣಿ ಹೂಡುವವರು ಮಾಸಿಕ 5,500 ರೂ. ಪಡೆದುಕೊಳ್ಳಲಿದ್ದಾರೆ. ಸರ್ಕಾರಿ ಬೆಂಬಲಿತ ಯೋಜನೆ ಇದಾಗಿರುವುದರಿಂದ ಇದರಲ್ಲಿನ ಹೂಡಿಕೆ ಸುರಕ್ಷಿತ.
ಪಿಒಎಂಐಎಸ್ ವೈಶಿಷ್ಟ್ಯ
- ಕನಿಷ್ಠ 1,000 ರೂ. ಹೂಡಿಕೆ ಮೂಲಕ ಖಾತೆ ತೆರೆಯಬಹುದು.
- ಗರಿಷ್ಠ ಹೂಡಿಕೆ ಸಿಂಗಲ್ ಅಕೌಂಟ್ಗೆ 9 ಲಕ್ಷ ರೂ. ಮತ್ತು ಜಾಯಿಂಟ್ ಅಕೌಂಟ್ಗೆ 15 ಲಕ್ಷ ರೂ.
- ಠೇವಣಿಯ ಅವಧಿ 5 ವರ್ಷ.
- ಗರಿಷ್ಠ ಮೊತ್ತದ ಮಿತಿಗೆ ಒಳಪಟ್ಟು ಈ ಯೋಜನೆಯಡಿ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ನಿರ್ವಹಿಸಬಹುದು.
- ಒಂದು ವರ್ಷದ ನಂತರ ಖಾತೆಯನ್ನು ಅಕಾಲಿಕವಾಗಿ ಮುಚ್ಚಬಹುದು. 3 ವರ್ಷಗಳ ಅವಧಿ ಮುಗಿದ ನಂತರ ಖಾತೆಯನ್ನು ಮುಚ್ಚಿದರೆ ಠೇವಣಿಯ ಮೊತ್ತದಿಂದ ಶೇ. 1ರಷ್ಟು ಕಡಿತಗೊಳಿಸಲಾಗುತ್ತದೆ.
- ಸದ್ಯ ಈ ಯೋಜನೆಯಲ್ಲಿ 7.4% ಬಡ್ಡಿ ರ ಲಭ್ಯ.
ಯಾರೆಲ್ಲ ತೆರೆಯಬಹುದು?
- ವಯಸ್ಕರು (ಸಿಂಗಲ್ ಅಥವಾ ಜಾಯಿಂಟ್ ಅಕೌಂಟ್).
- ಗರಿಷ್ಠ ಮೂರು ವ್ಯಕ್ತಿಗಳೊಂದಿಗೆ ಜಂಟಿಯಾಗಿ ಖಾತೆ ಹೊಂದಬಹುದು.
- ಅಪ್ರಾಪ್ತ ವಯಸ್ಕ / ಮಾನಸಿಕ ಅಸ್ವಸ್ಥರ ಪರವಾಗಿ ಪೋಷಕರು ಖಾತೆ ತೆರೆಯಬಹುದು.
- ಜಂಟಿ ಖಾತೆಯಲ್ಲಿನ ಎಲ್ಲರಿಗೂ ಹಣವನ್ನು ಸಮಾನವಾಗಿ ಹಂಚಲಾಗುತ್ತದೆ.
ಇದನ್ನು ಗಮನಿಸಿ
- ಖಾತೆ ತೆರೆದ ದಿನಾಂಕದಿಂದ ಒಂದು ತಿಂಗಳು ಪೂರ್ಣಗೊಂಡ ನಂತರ ಮತ್ತು ಅವಧಿ ಮುಗಿಯುವ (Maturity) ತನಕ ಬಡ್ಡಿಯನ್ನು ಪಾವತಿಸಲಾಗುತ್ತದೆ.
- ಠೇವಣಿ ಇಟ್ಟ 1 ವರ್ಷದೊಳಗೆ ಹಿಂಪಡೆಯಲು ಸಾಧ್ಯವಿಲ್ಲ.
- ಸಂಬಂಧಪಟ್ಟ ಅಂಚೆ ಕಚೇರಿಯಲ್ಲಿ ಪಾಸ್ಬುಕ್ನೊಂದಿಗೆ ನಿಗದಿತ ಅರ್ಜಿ ನಮೂನೆಯನ್ನು ಸಲ್ಲಿಸುವ ಮೂಲಕ ಖಾತೆ ತೆರೆದ ದಿನಾಂಕದಿಂದ 5 ವರ್ಷಗಳ ನಂತರ ಕ್ಲೋಸ್ ಮಾಡಬಹುದು.
- ಒಂದು ವೇಳೆ ಖಾತೆದಾರನು ಅವಧಿ ಮುಕ್ತಾಯದ ಮುನ್ನವೇ ಮರಣ ಹೊಂದಿದರೆ, ಖಾತೆಯನ್ನು ಮುಚ್ಚಬಹುದು ಮತ್ತು ಮೊತ್ತವನ್ನು ನಾಮಿನಿಗೆ ಮರುಪಾವತಿಸಲಾಗುತ್ತದೆ.
ಯಾವೆಲ್ಲ ದಾಖಲೆಗಳು ಬೇಕು?
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಗೆ ನೋಂದಾಯಿಸಲು ವಿಳಾಸದ ಪುರಾವೆ, ಫೋಟೊ ಇರುವ ಗುರುತಿನ ಚೀಟಿ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಎರಡು ಪಾಸ್‌ಪೋರ್ಟ್ ಗಾತ್ರದ ಫೋಟೊಗಳೊಂದಿಗೆ ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ.
ಇದನ್ನೂ ಓದಿ: EPF Death Claim: ಆಧಾರ್ ದೃಢೀಕರಣ ಇಲ್ಲದೇ ಇದ್ದರೂ ಇಪಿಎಫ್‌ಒ ಡೆತ್ ಕ್ಲೈಮ್ ಸಾಧ್ಯವೆ? ಇಲ್ಲಿದೆ ಮಾಹಿತಿ