Site icon Vistara News

Money Guide: ನೆರೆ, ಭೂಕುಸಿತದಿಂದ ನಿಮ್ಮ ಮನೆಯನ್ನು ರಕ್ಷಿಸಲು ಜಸ್ಟ್‌ ಹೀಗೆ ಮಾಡಿ ಸಾಕು

Money Guide

ಬೆಂಗಳೂರು: ಸ್ವಂತ ಮನೆ ಹೊಂದಬೇಕು ಎನ್ನುವುದು ಬಹುತೇಕ ಎಲ್ಲರ ಕನಸು. ಆದರೆ ಈ ದುಬಾರಿ ಜಗತ್ತಿನಲ್ಲಿ ಇದು ಸುಲಭ ಅಲ್ಲವೇ ಅಲ್ಲ. ಇದಕ್ಕಾಗಿಯೇ ʼಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡುʼ ಎನ್ನುವ ಮಾತು ಪ್ರಚಲಿತದಲ್ಲಿದೆ. ಅಂದರೆ ಈ ಎರಡು ಕೆಲಸ ಬಹಳ ಶ್ರಮದಾಯಕವಾದುದು. ಅದಾಗ್ಯೂ ಸಾಲ ಮಾಡಿ, ಇದ್ದ ಉಳಿತಾಯವನ್ನೆಲ್ಲ ಒಟ್ಟುಗೂಡಿಸಿ ಮನೆ ನಿರ್ಮಾಣ ಮಾಡಿ ನಿಟ್ಟುಸಿರು ಬಿಡುವಷ್ಟರಲ್ಲಿ ಅಗ್ನಿ ಆಕಸ್ಮಿಕ, ನೆರೆ ಅಥವಾ ಭೂಕುಸಿತದಂತಹ ಅವಘಡ ಎದುರಾದರೆ? ಇತ್ತೀಚಿನ ದಿನಗಳಲ್ಲಿ ಇಂತಹ ಅಪಾಯವನ್ನು ತಳ್ಳಿ ಹಾಕುವಂತಿಲ್ಲ. ಪ್ರಕೃತಿಯ ಅಸಮತೋಲನದಿಂದಾಗಿ ಯಾವಾಗ, ಎಲ್ಲಿ ದುರಂತ ಎದುರಾಗುತ್ತದೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ಗೃಹ ವಿಮೆ (Home Insurance) ರಕ್ಷಾ ಕವಚದಂತೆ ನಮ್ಮನ್ನು ಕಾಪಾಡುತ್ತದೆ. ಮನೆ ಕಳೆದುಕೊಂಡರೂ ಬೀದಿಗೆ ಬೀಳದಂತೆ ನೋಡಿಕೊಳ್ಳುತ್ತದೆ. ಹಾಗಾದರೆ ಗೃಹ ವಿಮೆಯನ್ನು ಯಾರೆಲ್ಲ ಮಾಡಿಸಬಹುದು? ಯಾವೆಲ್ಲ ಕಾರಣಗಳಿಗೆ ಪರಿಹಾರ ದೊರೆಯುತ್ತದೆ? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ (Money Guide).

ವರದಿಗಳ ಪ್ರಕಾರ ಭಾರತವು ಯಾವಾಗ ಬೇಕಾದರೂ ಪ್ರಾಕೃತಿಕ ದುರಂತ ಸಂಭವಿಸಬಹುದಾದ ದೇಶಗಳ ಪೈಕಿ ಒಂದು ಎನಿಸಿಕೊಂಡಿದೆ. 27 ರಾಜ್ಯಗಳು ವಿಪತ್ತು ಪೀಡಿತವಾಗಿವೆ. ಶೇ. 58.6ರಷ್ಟು ಭೂಪ್ರದೇಶವು ಮಧ್ಯಮದಿಂದ ಹೆಚ್ಚಿನ ತೀವ್ರತೆಯ ಭೂಕಂಪಗಳಿಗೆ ಗುರಿಯಾಗುವ ಮತ್ತು ಶೇ. 12ರಷ್ಟು ಭೂಮಿ ಪ್ರವಾಹ ಮತ್ತು ನದಿ ಸವೆತಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ.

ಇನ್ನು 7,516 ಕಿ.ಮೀ. ವ್ಯಾಪ್ತಿಯ ಕರಾವಳಿಯಲ್ಲಿ ಪೈಕಿ 5,700 ಕಿ.ಮೀ.ಯಷ್ಟು ಚಂಡಮಾರುತ ಮತ್ತು ಸುನಾಮಿಗಳಿಗೆ ಗುರಿಯಾಗುತ್ತದೆ. ಕೃಷಿಯೋಗ್ಯ ಭೂಮಿಯ ಪೈಕಿ ಶೇ. 68ರಷ್ಟು ಬರಕ್ಕೆ ತುತ್ತಾಗಬಹುದು. ಶೇ. 15ರಷ್ಟು ಭೂ ಪ್ರದೇಶವು ಭೂ ಕುಸಿತಕ್ಕೆ ಗುರಿಯಾಗುವ ಅಪಾಯ ಎದುರಿಸುತ್ತಿದೆ. ವಿಶೇಷವಾಗಿ ಮಳೆಗಾಲದಲ್ಲಿ ಚಂಡಮಾರುತಗಳು, ಭೂಕುಸಿತಗಳು ಮತ್ತು ಮಿಂಚಿನಿಂದ ಉಂಟಾಗುವ ಅಪಾಯ ಹೆಚ್ಚು. ಇಷ್ಟೆಲ್ಲ ಅಪಾಯವಿದ್ದರೂ ನಾವು ಮನೆಗೆ ವಿಮೆ ಮಾಡಿಸಲು ಮುಂದಾಗುವುದಿಲ್ಲ ಎನ್ನುವುದು ವಿಪರ್ಯಾಸ. ಅತ್ಯಂತ ಅಮೂಲ್ಯ ಮತ್ತು ಬೆಲೆ ಬಾಳುವ ಆಸ್ತಿಯಾದ ಮನೆಗೆ ವಿಮೆ ಮಾಡಿಸಲೇಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಅಂಕಿ-ಅಂಶ ಏನು ಹೇಳುತ್ತದೆ?

ನೈಸರ್ಗಿಕ ವಿಕೋಪಕ್ಕೆ ತುತ್ತಾಗಿ ಮನೆ, ಆಸ್ತಿ ಕಳೆದುಕೊಳ್ಳುವವರ ಪೈಕಿ ಕೇವಲ ಶೇ. 8ರಷ್ಟು ಜನ ವಿಮೆ ಮಾಡಿಸಿಕೊಂಡಿರುತ್ತಾರೆ ಎನ್ನುತ್ತದೆ ಅಂಕಿ-ಅಂಶ. ಗೃಹ ವಿಮೆ ಕೇವಲ ರಕ್ಷಣೆಯಲ್ಲ; ಇದು ಕಠಿಣ ಪರಿಶ್ರಮದ ಮೂಲಕ ಗಳಿಸಿದ ಸ್ವತ್ತುಗಳನ್ನು ರಕ್ಷಿಸುವ ನಿರ್ಣಾಯಕ ಹೂಡಿಕೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ.

ಯಾಕಾಗಿ ಗೃಹ ವಿಮೆ?

ನಿಮ್ಮ ಮನೆಗೆ ಆಗಬಹುದಾದ ಹಾನಿ ಮತ್ತು ಅದರಲ್ಲಿನ ಬೆಲೆಬಾಳುವ ವಸ್ತುಗಳ ನಷ್ಟಕ್ಕೆ ಪರಿಹಾರ ಒದಗಿಸಲು ಗೃಹ ವಿಮೆ ಅತ್ಯಗತ್ಯ. ಜತೆಗೆ ಬೆಂಕಿ ಆಕಸ್ಮಿಕ, ಕಳ್ಳತನ, ಗಲಭೆ ಆದಾಗಲೂ ಪರಿಹಾರ ನೀಡುತ್ತದೆ. ಒಟ್ಟಿನಲ್ಲಿ ಮನೆಗೆ ಅನಿರೀಕ್ಷಿತವಾಗಿ ಉಂಟಾಗಬಹುದಾದ ಯಾವುದೇ ನಷ್ಟಗಳ ವಿರುದ್ಧ ರಕ್ಷಣೆ ನೀಡುವ ರಕ್ಷಾ ಕವಚದಂತೆ ಗೃಹ ವಿಮೆ ಕೆಲಸ ಮಾಡುತ್ತದೆ. ಹೀಗಾಗಿ ವೈಯಕ್ತಿಕ, ಆರೋಗ್ಯ, ವಾಹನ ವಿಮೆ ಮಾಡಿಸುವಂತೆ ಇದನ್ನು ಕೂಡ ಅತ್ಯಗತ್ಯವಾಗಿ ಮಾಡಿಸಬೇಕು.

ಗೃಹ ವಿಮೆ ಯಾರೆಲ್ಲ ಮಾಡಿಸಬಹುದು?

ಇದರಿಂದೆಲ್ಲ ರಕ್ಷಣೆ

ಗೃಹ ವಿಮೆ ಮಾಡಿಸಿದರೆ ವಿಶೇಷವಾಗಿ ಮಳೆಗಾಲದಲ್ಲಿ ಈ ಎಲ್ಲ ಕಾರಣಕ್ಕೆ ಮನೆಗೆ ಹಾನಿಯಾದರೆ ನಿಮಗೆ ಪರಿಹಾರ ಸಿಗಲಿದೆ.

ವಿಧಗಳು

ಮನೆಯ ರಚನೆ: ಇದು ನಿಮ್ಮ ಮನೆಗೆ ಉಂಟಾಗುವ ಹಾನಿಗೆ ಪರಿಹಾರ ನೀಡುತ್ತದೆ. ಗೃಹಬಳಕೆಯ ಔಟ್‌ಹೌಸ್‌, ಕಾಂಪೌಂಡ್ ಗೋಡೆಗಳು, ಪಾರ್ಕಿಂಗ್ ಸ್ಥಳ, ಸೌರ ಫಲಕಗಳು, ನೀರಿನ ಟ್ಯಾಂಕ್‌ ಮುಂತಾದವುಗಳನ್ನು ಇದು ಒಳಗೊಂಡಿರುತ್ತದೆ.

ಸಾಮಗ್ರಿ: ಈ ವಿಧದ ವಿಮೆ ನಿಮ್ಮ ಮನೆಯಲ್ಲಿನ ಗೃಹೋಪಯೋಗಿ ವಸ್ತುಗಳನ್ನು ಒಳಗೊಂಡಿದೆ. ಟಿವಿ, ರೆಫ್ರಿಜರೇಟರ್, ಪೀಠೋಪಕರಣಗಳು ಮತ್ತಿತರ ವಸ್ತುಗಳ ಹಾನಿಗೆ ಪರಿಹಾರ ನೀಡುತ್ತದೆ. ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ ಆಭರಣಗಳು, ಕಲಾಕೃತಿಗಳು, ಬೆಳ್ಳಿಯ ವಸ್ತುಗಳು, ವರ್ಣಚಿತ್ರಗಳು ಮುಂತಾದ ಅಮೂಲ್ಯವಾದ ವಸ್ತುಗಳನ್ನು ಸಹ ನೀವು ಕವರ್ ಮಾಡಬಹುದು.

ಆಕಸ್ಮಿಕ ಸಾವು: ಈ ಕವರೇಜ್ ವಿಮಾದಾರರ ಸಾವಿನ ಸಂದರ್ಭದಲ್ಲಿ ನೆರವಾಗುತ್ತದೆ.

ಈ ಕೆಳಗಿನ ಕಾರಣಗಳಿಂದ ಮನೆಗೆ ಹಾನಿಯಾದರೆ ಗೃಹ ವಿಮೆಯ ಪರಿಹಾರ ಲಭ್ಯ

ವಿಮಾನ ದುರಂತ, ಗಲಭೆ, ಪ್ರತಿಭಟನೆ, ಕ್ಷಿಪಣಿ ಪ್ರಯೋಗ, ನೆರೆ, ಚಂಡ ಮಾರುತ, ಮಿಂಚು, ಭೂಕಂಪ, ಕಳವು, ಬೆಂಕಿ ಆಕಸ್ಮಿಕ.

ಈ ಕೆಳಗಿನ ಕಾರಣಗಳಿಂದ ಮನೆಗೆ ಹಾನಿಯಾದರೆ ಗೃಹ ವಿಮೆಯ ಪರಿಹಾರ ಲಭಿಸುವುದಿಲ್ಲ

ನಗದು ಕಳವು, ಯುದ್ಧ, ವಿದ್ಯುತ್‌ ಉಪಕರಣಗಳ ಅತಿಯಾದ ಬಳಿಕೆಯಿಂದ ಆಗುವ ಹಾನಿ.

ಇದನ್ನೂ ಓದಿ: Money Guide: ಹೋಮ್‌ ಲೋನ್‌ಗೆ ಇನ್ಶೂರೆನ್ಸ್‌ ಮಾಡಿಸಿದ್ದೀರಾ? ಏನಿದರ ಮಹತ್ವ? ನಿಮ್ಮ ಸಂಶಯಗಳಿಗೆ ಇಲ್ಲಿದೆ ಉತ್ತರ

Exit mobile version