Site icon Vistara News

Money Guide: ಐಟಿಆರ್ ಇನ್ನೂ ಸಲ್ಲಿಸಿಲ್ಲವೇ? ಕೊನೆಯ ಕ್ಷಣದ ಗೊಂದಲ ತಪ್ಪಿಸಲು ಈ ಟಿಪ್ಸ್‌ ಫಾಲೋ ಮಾಡಿ

Money Guide

ಬೆಂಗಳೂರು: ಎಲ್ಲ ತೆರಿಗೆದಾರರೇ ಗಮನಿಸಿ. ಆದಾಯ ತೆರಿಗೆ ರಿಟರ್ನ್ (Income Tax Returns) ಫೈಲ್ ಮಾಡಲು ಕೆಲವೇ ದಿನ ಬಾಕಿ ಉಳಿದಿದೆ. ಜುಲೈ 31 ದಂಡ ರಹಿತವಾಗಿ ಐಟಿಆರ್ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಈಗಾಗಲೇ 5 ಕೋಟಿಗೂ ಹೆಚ್ಚು ಐಟಿಆರ್ ಸಲ್ಲಿಸಲಾಗಿದೆ. ತೆರಿಗೆ ಪಾವತಿದಾರರು ಯಾವುದೇ ಗಡುವು ವಿಸ್ತರಣೆಗಾಗಿ ಕಾಯಬೇಡಿ ಮತ್ತು ಈಗಲೇ ಐಟಿಆರ್ ಸಲ್ಲಿಸಿ ಎನ್ನುವುದು ತಜ್ಞರ ಸಲಹೆ. ಐಟಿಆರ್ ಫೈಲ್ ಮಾಡುವಾಗ ಗಮನಿಸಬೇಕಾದ ಕೆಲವು ಅಂಶಗಳ ಬಗ್ಗೆ ಮಾಹಿತಿ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

“ಈ ಹಣಕಾಸು ವರ್ಷದ ಐಟಿಆರ್ ಸಲ್ಲಿಸದೆ ಇರುವವರು ಕೊನೆಯ ಕ್ಷಣದ ಗೊಂದಲವನ್ನು ತಪ್ಪಿಸಲು ಆದಷ್ಟು ಬೇಗ ಫೈಲ್‌ ಮಾಡಿʼʼ ಎಂದು ಆದಾಯ ತೆರಿಗೆ ಇಲಾಖೆ ತನ್ನ ಎಕ್ಸ್‌ ಖಾತೆಯಲ್ಲಿ ತಿಳಿಸಿದೆ. ಕಳೆದ ವರ್ಷದ ಜುಲೈ 27ಕ್ಕೆ ಹೋಲಿಸಿದರೆ ಈ ವರ್ಷ ಅತಿ ಹೆಚ್ಚು ಫೈಲಿಂಗ್‌ ಆಗಿದೆ. ಜುಲೈ 26ರವರೆಗೆ 5 ಕೋಟಿಗೂ ಹೆಚ್ಚು ಐಟಿಆರ್‌ಗಳನ್ನು ಸಲ್ಲಿಸಲಾಗಿದೆ ಎಂದೂ ಹೇಳಿದೆ.

ಅಗತ್ಯವಿರುವ ಎಲ್ಲ ದಾಖಲೆಗಳನ್ನು ಸಂಗ್ರಹಿಸಿ

ಗಡುವು ಮುಗಿಯುವ ದಿನ ಸಮೀಪಿಸುತ್ತಿರುವುದರಿಂದ ತೆರಿಗೆದಾರರು ಐಟಿಆರ್ ಸಲ್ಲಿಸಲು ಪ್ರಾರಂಭಿಸುವ ಮೊದಲು ತಮ್ಮ ದಾಖಲೆಗಳನ್ನು ಸಿದ್ಧವಾಗಿರಿಸಿಕೊಳ್ಳಬೇಕು. ಅಗತ್ಯವಿರುವ ದಾಖಲೆಗಳೆಂದರೆ: ನಿಮ್ಮ ಕಂಪನಿಯಿಂದ ದೊರೆಯುವ ಫಾರ್ಮ್ 16, ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳ ಬಡ್ಡಿ ಪ್ರಮಾಣ ಪತ್ರಗಳು, ಟಿಡಿಎಸ್ ಪ್ರಮಾಣ ಪತ್ರಗಳು, ತೆರಿಗೆ ಕ್ರೆಡಿಟ್ ವಿವರಗಳಿಗಾಗಿ ಫಾರ್ಮ್ 26 ಎಎಸ್, ಟ್ಯಾಕ್ಸ್‌ ಡಿಡಕ್ಷನ್‌ಗಾಗಿ ತೆರಿಗೆ ಸೆಕ್ಷನ್‌ 80 ಸಿ, 80 ಡಿ ಇತ್ಯಾದಿಯಲ್ಲಿನ ಹೂಡಿಕೆಯ ಪುರಾವೆ.

ಫಾರ್ಮ್ 26 ಎಎಸ್‌ (Form 26AS) ಪರಿಶೀಲಿಸಿ

ಫಾರ್ಮ್ 26 ಎಎಸ್‌ನಲ್ಲಿನ ವಿವರಗಳು ನಿಮ್ಮ ಐಟಿಆರ್ ಫಾರ್ಮ್‌ನಲ್ಲಿರುವ ವಿವರಗಳೊಂದಿಗೆ ಹೊಂದಿಕೆಯಾಗುತ್ತವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಫಾರ್ಮ್ 26 ಎಎಸ್‌ ಕಡಿತಗೊಳಿಸಿದ ತೆರಿಗೆ, ಸಂಗ್ರಹಿಸಿದ ತೆರಿಗೆ ಮತ್ತು ಹಣಕಾಸು ವರ್ಷದಲ್ಲಿ ಪಾವತಿಸಿದ ಯಾವುದೇ ಮುಂಗಡ ತೆರಿಗೆಯ ವಿವರಗಳನ್ನು ಒದಗಿಸುತ್ತದೆ.

ಸೂಕ್ತ ಐಟಿಆರ್ ಫಾರ್ಮ್‌ ಆಯ್ಕೆ ಮಾಡಿ

ಸರಿಯಾದ ಐಟಿಆರ್ ಫಾರ್ಮ್ ಅನ್ನು ಆಯ್ಕೆ ಮಾಡುವುದು ಕೂಡ ಮುಖ್ಯ. ಉದಾಹರಣೆಗೆ ವಾರ್ಷಿಕ ಆದಾಯ 50 ಲಕ್ಷ ರೂ. ವರೆಗಿನ ಸಂಬಳ ಪಡೆಯುವ ವ್ಯಕ್ತಿಗಳು ರಿಟರ್ನ್ಸ್ ಸಲ್ಲಿಸಲು ಐಟಿಆರ್ ಫಾರ್ಮ್ 1 ಅನ್ನು ಬಳಸುತ್ತಾರೆ. 50 ಲಕ್ಷ ರೂ. ವರೆಗಿನ ಆದಾಯವು ಸಂಬಳ, ಪಿಂಚಣಿ, ಒಂದು ಮನೆಯ ಆಸ್ತಿಯಿಂದ ಆದಾಯ ಮತ್ತು ಇತರ ಮೂಲಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ 5,000 ರೂ. ವರೆಗಿನ ಕೃಷಿ ಆದಾಯವೂ ಸೇರಿದೆ. ಗಮನಿಸಿ ತಪ್ಪು ಫಾರ್ಮ್ ಅನ್ನು ಬಳಸುವುದು ನಿಮ್ಮ ಐಟಿಆರ್ ತಿರಸ್ಕಾರಕ್ಕೆ ಕಾರಣವಾಗಬಹುದು.

ನಿಮ್ಮೆಲ್ಲ ಆದಾಯ ಮೂಲಗಳನ್ನು ಬಹಿರಂಗಪಡಿಸಿ

ಸಂಬಳ, ಬಡ್ಡಿ, ಬಾಡಿಗೆ ಆದಾಯ, ಬಂಡವಾಳ ಲಾಭಗಳು ಮತ್ತು ಇತರ ಯಾವುದೇ ಮೂಲಗಳು ಸೇರಿದಂತೆ ನಿಮ್ಮ ಎಲ್ಲ ಆದಾಯದ ಮೂಲಗಳನ್ನು ಬಹಿರಂಗಪಡಿಸಿ. ಬಹಿರಂಗಪಡಿಸದಿದ್ದರೆ ದಂಡ ಬೀಳುವ ಸಾಧ್ಯತೆ ಇದೆ.

ವಿನಾಯಿತಿಗಳು

ಆದಾಯ ತೆರಿಗೆ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಬರುವ ಎಲ್ಲ ಅರ್ಹ ಕಡಿತಗಳನ್ನು ಕ್ಲೈಮ್ ಮಾಡುವುದನ್ನು ಮರೆಯಬೇಡಿ. ಇದರಿಂದ ಗರಿಷ್ಠ ತೆರಿಗೆ ಉಳಿತಾಯ ಮಾಡಬಹುದು. ಲಭ್ಯವಿರುವ ಕಡಿತಗಳೆಂದರೆ:

ಸೆಕ್ಷನ್ 80 ಸಿ: ಪಿಪಿಎಫ್, ಎನ್ಎಸ್‌ಸಿ, ಇಎಲ್ಎಸ್ಎಸ್ ಇತ್ಯಾದಿಗಳಲ್ಲಿನ ಹೂಡಿಕೆ.
ಸೆಕ್ಷನ್ 80 ಡಿ: ಆರೋಗ್ಯ ವಿಮಾ ಪ್ರೀಮಿಯಂ.
ಸೆಕ್ಷನ್ 24 (ಬಿ): ಗೃಹ ಸಾಲದ ಮೇಲಿನ ಬಡ್ಡಿ- ಇವಕ್ಕೆ ಸಂಬಂಧಿಸಿ ದಾಖಲೆಗಳನ್ನು ಹೊಂದಿಸಿ.

ವಿನಾಯಿತಿ ಆದಾಯವನ್ನು ವರದಿ ಮಾಡಿ

    ಕೃಷಿ ಆದಾಯದಂತಹ ವಿನಾಯಿತಿ ಆದಾಯವನ್ನು ಐಟಿಆರ್‌ನಲ್ಲಿ ವರದಿ ಮಾಡಿ. ತೆರಿಗೆಗೆ ಒಳಪಡದಿದ್ದರೂ ಅದನ್ನು ನಮೂದಿಸಿಬೇಕು. ಇದು ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ ಮತ್ತು ಭವಿಷ್ಯದಲ್ಲಿ ಕಂಡುಬರಬಹುದಾದ ತೊಡಕುಗಳನ್ನು ತಪ್ಪಿಸುತ್ತದೆ.

    ನಿಮ್ಮ ಬ್ಯಾಂಕ್ ಖಾತೆ ಸಮರ್ಪಕವಾಗಿರಲಿ

    ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಮತ್ತು ಪಾಸ್‌ಬುಕ್‌ಗಳು ಎಲ್ಲ ವಹಿವಾಟು (Transactions)ಗಳನ್ನು ನಿಖರವಾಗಿ ಪ್ರತಿಬಿಂಬಿಸುತ್ತವೆ ಎಂದು ಖಚಿತಪಡಿಸಿಕೊಳ್ಳಿ. ಎಲ್ಲ ತೆರಿಗೆ ಕಡಿತಗಳು ಮತ್ತು ಪಾವತಿಗಳನ್ನು ಲೆಕ್ಕ ಹಾಕಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಅವುಗಳನ್ನು ಫಾರ್ಮ್ 26 ಎಎಸ್‌ನೊಂದಿಗೆ ಕ್ರಾಸ್ ಚೆಕ್ ಮಾಡಿ.

    ಈ ಸಾಮಾನ್ಯ ತಪ್ಪುಗಳನ್ನು ಮಾಡಬೇಡಿ

    ತಪ್ಪಾದ ವೈಯಕ್ತಿಕ ಮಾಹಿತಿಯನ್ನು ನಮೂದಿಸುವುದು, ಬ್ಯಾಂಕ್ ಖಾತೆ ವಿವರಗಳಲ್ಲಿ ದೋಷಗಳು, ಆದಾಯವನ್ನು ತಪ್ಪಾಗಿ ವರದಿ ಮಾಡುವುದು ಅಥವಾ ಕೈಬಿಡುವುದು, ಒಟ್ಟು ಆದಾಯ ಮತ್ತು ತೆರಿಗೆ ಹೊಣೆಗಾರಿಕೆಯ ತಪ್ಪು ಲೆಕ್ಕಾಚಾರದಂತಹ ಸಾಮಾನ್ಯ ದೋಷಗಳ ಬಗ್ಗೆ ಜಾಗರೂಕರಾಗಿರಬೇಕು. ಭರ್ತಿ ಮಾಡಿದ ಬಳಿಕ ಮರುಪರಿಶೀಲಿಸಿ. ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆಧಾರ್ ಒಟಿಪಿ, ನೆಟ್ ಬ್ಯಾಂಕಿಂಗ್ ಅಥವಾ ಲಭ್ಯವಿರುವ ಇತರ ವಿಧಾನಗಳ ಮೂಲಕ ಇ-ಪರಿಶೀಲನೆ ಆಯ್ಕೆಯನ್ನು ಬಳಸಿ.

    ಇದನ್ನೂ ಓದಿ: Income Tax Returns: ಆದಾಯ ತೆರಿಗೆ ರಿಟರ್ನ್ಸ್; ಯಾವ ಆದಾಯದವರಿಗೆ ಯಾವ ಫಾರ್ಮ್?

    ತಜ್ಞರ ನೆರವು ಪಡೆದುಕೊಳ್ಳಿ

    ಐಟಿಆರ್ ಫೈಲಿಂಗ್ ಪ್ರಕ್ರಿಯೆಯ ವೇಳೆ ಯಾವುದೇ ಅನುಮಾನ, ಗೊಂದಲ ಮೂಡಿದರೆ ತಜ್ಞರ ನೆರವು ಪಡೆದುಕೊಳ್ಳಿ.

    ಕೊನೆಯ ಕ್ಷಣದವರೆಗೂ ಕಾಯಬೇಡಿ

    ಗಡುವು ವಿಸ್ತರಿಸುವ ನಿರೀಕ್ಷೆಗಳಿದ್ದರೂ ಅದಕ್ಕಾಗಿ ಕಾಯುವುದು ಸೂಕ್ತವಲ್ಲ. ಆದಾಯ ತೆರಿಗೆ ಇಲಾಖೆ ಅನೇಕ ಮಾಧ್ಯಮಗಳ ಮೂಲಕ ತೆರಿಗೆದಾರರಿಗೆ ಸಾಧ್ಯವಾದಷ್ಟು ಬೇಗ ರಿಟರ್ನ್ ಸಲ್ಲಿಸುವಂತೆ ನೆನಪಿಸುತ್ತದೆ. ಇದರಿಂದ ಕೊನೆಯ ಕ್ಷಣದ ಗೊಂದಲ ನಿವಾರಿಸಬಹುದು ಎನ್ನುವುದೇ ಇದಕ್ಕೆ ಮುಖ್ಯ ಕಾರಣ.

    Exit mobile version