Site icon Vistara News

Money Guide: ನಿಮ್ಮ ಮಕ್ಕಳ ಭವಿಷ್ಯ ಸುಭದ್ರಗೊಳಿಸಲಿದೆ ಎಲ್‌ಐಸಿಯ ಅಮೃತ್‌ಬಾಲ್ ಪಾಲಿಸಿ; ಏನಿದು ಯೋಜನೆ?

Amritbaal

Amritbaal

ಬೆಂಗಳೂರು: ಆಧುನಿಕ ಕಾಲಘಟ್ಟದಲ್ಲಿ ಜೀವ ವಿಮೆ ಮಾಡಿಸುವುದು ಅತೀ ಮುಖ್ಯ ಎಂದು ಆರ್ಥಿಕ ತಜ್ಞರು ಪದೇ ಪದೆ ಹೇಳುತ್ತಿರುತ್ತಾರೆ. ಅನಿರೀಕ್ಷಿತ ಆಘಾತ, ಖರ್ಚಿನಿಂದ ಇದು ನಮ್ಮನ್ನು ರಕ್ಷಿಸುತ್ತದೆ. ಇದೇ ಕಾರಣಕ್ಕೆ ಪ್ರತಿಯೊಬ್ಬರು ಇನ್ಶೂರೆನ್ಸ್‌ ಹೊಂದಿರಬೇಕು ಎಂದು ಸಲಹೆ ನೀಡಲಾಗುತ್ತದೆ. ಅದಕ್ಕೆ ತಕ್ಕಂತೆ ವಿವಿಧ ಕಂಪೆನಿಗಳು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ವಿವಿಧ ಯೋಜನೆಗಳನ್ನು ಪರಿಚಯಿಸುತ್ತವೆ. ದೊಡ್ಡವರು ಮಾತ್ರವಲ್ಲ ಮಕ್ಕಳೂ ಇನ್ಶೂರೆನ್‌ ಹೊಂದಿರಬೇಕು ಎನ್ನುವ ಉದ್ದೇಶದಿಂದ ಇದೀಗ ಭಾರತೀಯ ಜೀವ ವಿಮಾ ನಿಗಮ (LIC) ಪಾಲಿಸಿಯೊಂದನ್ನು ಪರಿಚಯಿಸಿದೆ. ಅಮೃತ್‌ಬಾಲ್ (Amritbaal) ಹೆಸರಿನ ಈ ಯೋಜನೆಯನ್ನು ಮಕ್ಕಳ ಉನ್ನತ ಶಿಕ್ಷಣ ಮತ್ತು ಇತರ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ. ಮಕ್ಕಳ ಭವಿಷ್ಯವನ್ನು ಭದ್ರಪಡಿಸುವ ಈ ಪಾಲಿಸಿಯು ವೈಯಕ್ತಿಕ ಉಳಿತಾಯ ಜೀವ ವಿಮಾ ಯೋಜನೆಯಾಗಿದೆ. ಇದರ ವಿಶಿಷ್ಟ್ಯ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಯಾರೆಲ್ಲ ಅರ್ಹರು?

ಮಕ್ಕಳಿಗೆಂದೇ ರೂಪಿಸಿರುವ ಅಮೃತ್‌ಬಾಲ್ ಯೋಜನೆಯಲ್ಲಿ 1 ತಿಂಗಳ ಹಸುಳೆಯ ಹೆಸರನ್ನೂ ನೋಂದಾಯಿಸಬಹುದು ಎನ್ನುವುದು ವಿಶೇಷ. ಗರಿಷ್ಠ ವಯೋಮಿತಿ 13 ವರ್ಷ. ಇದು ವಿಮಾ ಸುರಕ್ಷತೆ ಜತೆಗೆ ಖಾತರಿಯ ಆದಾಯವನ್ನೂ ನೀಡುತ್ತದೆ. ಮೆಚ್ಯೂರಿಟಿ ಅವಧಿ 18ರಿಂದ 25 ವರ್ಷ. ಬಯಸಿದಲ್ಲಿ ಮೆಚ್ಯೂರಿಟಿ ಮೊತ್ತವನ್ನು ಕಂತುಗಳಲ್ಲಿ ಸ್ವೀಕರಿಸಲು ಅವಕಾಶವೂ ಇದೆ.

ಅವಧಿ

ಈ ಯೋಜನೆಯು ಏಕ ಪ್ರೀಮಿಯಂ ಮತ್ತು ಸೀಮಿತ ಪ್ರೀಮಿಯಂ ಪಾವತಿ ಆಯ್ಕೆಗಳನ್ನು ಒಳಗೊಂಡಂತೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತದೆ. ಪಾಲಿಸಿ ಅವಧಿಯು 5ರಿಂದ 25 ವರ್ಷ. ಸಣ್ಣ ಪ್ರೀಮಿಯಂ ಪಾವತಿಗಾಗಿ 5, 6 ಮತ್ತು 7 ವರ್ಷಗಳ ಆಯ್ಕೆಗಳು ಲಭ್ಯ. ದೀರ್ಘ ಪ್ರೀಮಿಯಂ ಪಾವತಿಯನ್ನು 25 ವರ್ಷಗಳವರೆಗೆ ವಿಸ್ತರಿಸಬಹುದು. ಇಲ್ಲಿ ಬೇಸಿಕ್ ಸಮ್ ಅಶೂರ್ಡ್ ಮೊತ್ತ ಕನಿಷ್ಠ 2 ಲಕ್ಷ ರೂ. ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಪಾಲಿಸಿ ಮಾಡಿಸಬಹುದು. ಅದಕ್ಕೆ ಮಿತಿ ಇಲ್ಲ.

ಫೆಬ್ರವರಿ 17ರಿಂದ ಆರಂಭವಾದ ಈ ವೈಯಕ್ತಿಕ ಉಳಿತಾಯದ ಜೀವ ವಿಮಾ ಯೋಜನೆಯನ್ನು ಆಫ್‌ಲೈನ್‌ ಮತ್ತು ಆನ್‌ಲೈನ್‌ ಮೂಲಕವೂ ಖರೀದಿಸಬಹುದು. ಆನ್‌ಲೈನ್‌ನಲ್ಲಿ ಖರೀದಿಸುವವರಿಗೆ ರಿಯಾಯಿತಿ ಲಭ್ಯವಿದೆ. ʼʼಅಮೃತ್‌ಬಾಲ್ ಪಾಲಿಸಿಯು ಮಗುವಿನ ಅಗತ್ಯತೆಗಳನ್ನು ಪೂರೈಸಲು ಸಾಕಷ್ಟು ಹಣ ಒದಗಿಸಲಿದೆʼʼ ಎಂದು ಎಲ್‌ಐಸಿ ತಿಳಿಸಿದೆ. ಹೆಚ್ಚುವರಿಯಾಗಿ ಪಾಲಿಸಿಯು ಮರಣ ನಂತರದ ಪ್ರಯೋಜನವನ್ನು ನೀಡುತ್ತದೆ.

ಸಾಲ ಸೌಲಭ್ಯ

ವಿಶೇಷ ಎಂದರೆ ಈ ಪಾಲಿಸಿ ಮುಖಾಂತರ ಸಾಲ ಪಡೆದುಕೊಳ್ಳುವ ಆಯ್ಕೆಯೂ ಲಭ್ಯ. ಕನಿಷ್ಠ 2 ಪೂರ್ಣ ವರ್ಷಗಳ ಪ್ರೀಮಿಯಂ ಪಾವತಿಸಿದ್ದರೆ ಪಾಲಿಸಿ ಅವಧಿಯ ಯಾವುದೇ ಸಮಯದಲ್ಲಿ ಸಾಲವನ್ನು ಪಡೆಯಬಹುದು ಎಂದು ಎಲ್‌ಐಸಿ ತಿಳಿಸಿದೆ.

ಇದನ್ನೂ ಓದಿ: Money Guide: ಆಧಾರ್‌ ಕಾರ್ಡ್‌ ಅಪ್‌ಡೇಟ್‌ನಿಂದ ಐಡಿಬಿಐ ಬ್ಯಾಂಕ್‌ನ ವಿಶೇಷ ಎಫ್‌ಡಿವರೆಗೆ; ಈ ತಿಂಗಳಿನಿಂದ ಏನೆಲ್ಲ ಬದಲಾವಣೆ?

ನೀವು ಹತ್ತಿರದ ಎಲ್ಐಸಿಯ ಶಾಖಾ ಕಚೇರಿಗೆ ಭೇಟಿ ನೀಡಿ ಅಗತ್ಯವಿರುವ ಎಲ್ಲ ಮಾಹಿತಿ, ಡಾಕ್ಯುಮೆಂಟ್‌ ನೀಡಿ ಮಗುವಿನ ಹೆಸರು ನೋಂದಾಯಿಸಬಹುದು. ಏಜೆಂಟರು ಅಥವಾ ಮಧ್ಯವರ್ತಿಗಳ ಮೂಲಕವೂ ಪಾಲಿಸಿಯನ್ನು ಖರೀದಿಸಬಹುದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version