ಬೆಂಗಳೂರು: ಮೊಬೈಲ್ ಫೋನ್ ಈಗ ಕೇವಲ ಕರೆ, ಎಸ್‌ಎಂಎಸ್ ಮಾಡುವ ಗ್ಯಾಜೆಟ್ ಆಗಿ ಉಳಿದಿಲ್ಲ. ವಿಡಿಯೊ ಚಿತ್ರೀಕರಣ, ಸಿನಿಮಾ ವೀಕ್ಷಣೆಯಿಂದ ಹಿಡಿದು ಉದ್ಯೋಗ ನಿರ್ವಹಿಸಲು ಅಗತ್ಯವಾದ ಉಪಕರಣವಾಗಿ ಸ್ಮಾರ್ಟ್ ಫೋನ್ ಬದಲಾಗಿದೆ. ಬಹು ವರ್ಷಗಳ ಹಿಂದೆಯೇ ಮೊಬೈಲ್ ಫೋನ್ ಬಹುಪಯೋಗಿ ಸಾಧನವಾಗಿ, ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಬದಲಾಗಿದೆ. ಹಳ್ಳಿಯಿಂದ ಹಿಡಿದು ನಗರದವರೆಗೆ, ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರು ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ. ಅದಕ್ಕೆ ತಕ್ಕಂತೆ ಮೊಬೈಲ್ ಕಂಪನಿಗಳು ಹೊಸ ಹೊಸ್ ಫೀಚರ್‌ಗಳನ್ನು ಒಳಗೊಂಡ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಗಮನ ಸೆಳೆಯುತ್ತವೆ. ಕೆಲವೊಮ್ಮೆ ದುಬಾರಿ ಬೆಲೆಯ ಕಾರಣದಿಂದ ನಾವು ಅಂದುಕೊಂಡಿರುವ ವೈಶಿಷ್ಟ್ಯಗಳನ್ನು ಒಳಗೊಂಡ ಮೊಬೈಲ್ ಫೋನ್ ಖರೀದಿಸಲು ಸಾಧ್ಯವಾಗುವುದಿಲ್ಲ. ಆಗ ನೆರವಿಗೆ ಬರುವುದೇ ಇಎಂಐ (EMI) ಪಾವತಿ ಮೂಲಕ ಖರೀದಿ ಆಯ್ಕೆ. ಇಎಂಐ ಮೂಲಕ ಮೊಬೈಲ್ ಖರೀದಿಸುವ ಮುನ್ನ ಗಮನಿಸಬೇಕಾದ ಅಂಶಗಳೇನು ಎನ್ನುವ ವಿವರ ಇಲ್ಲಿದೆ (Money Guide).
ಇಎಂಐ ಎಂದರೆ ಸಮಾನ ಮಾಸಿಕ ಕಂತು. ಒಮ್ಮೆಲೆ ಸಂಪೂರ್ಣ ಮೊತ್ತ ಭರಿಸಲು ಸಾಧ್ಯವಾಗದಿದ್ದರೆ ಯಾವುದೇ ಉತ್ಪನ್ನ ಖರೀದಿಸಿ ನಿರ್ದಿಷ್ಟ ಸಮಯದವರೆಗೆ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತ ಪಾವತಿಸುವ ಸೌಲಭ್ಯ ಇದು. ಇದಕ್ಕೆ ಸ್ವಲ್ಪ ಪ್ರಮಾಣದಲ್ಲಿ ಬಡ್ಡಿಯನ್ನೂ ವಿಧಿಸಲಾಗತ್ತದೆ. ಅಮೇಜಾನ್, ಫ್ಲಿಪ್‌ಕಾರ್ಟ್‌ನಂತಹ ಇ-ಕಾಮರ್ಸ್ ತಾಣಗಳು, ಶೋರೂಂಗಳು ಈ ಸೌಲಭ್ಯ ಒದಗಿಸುತ್ತಿವೆ.
ಇಎಂಐ ಮೂಲಕ ಮೊಬೈಲ್ ಖರೀದಿ ಉತ್ತಮವೇ?
ಹಾಗಾದರೆ ಇಎಂಐ ಮೂಲಕ ಮೊಬೈಲ್ ಖರೀದಿ ಉತ್ತಮವೇ ಎನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಈ ಆಪ್ಶನ್ ಆಯ್ಕೆ ಮಾಡುವ ಮುನ್ನ ಬಡ್ಡಿದರಗಳು, ಗುಪ್ತ ಶುಲ್ಕಗಳು ಮತ್ತು ಫೋನ್ ಖರೀದಿಗೆ ಆಗುವ ಒಟ್ಟು ವೆಚ್ಚವನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ನಿಯಮಗಳು ಮತ್ತು ಷರತ್ತುಗಳನ್ನೂ ಅರ್ಥ ಮಾಡಿಕೊಳ್ಳಬೇಕು. ಇದರಿಂದ ಯಾವುದೇ ಹಣಕಾಸಿನ ಅಪಾಯಗಳನ್ನು ತಪ್ಪಿಸಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.
ಮೊಬೈಲ್ ಫೋನ್ ಖರೀದಿಯ ಮುನ್ನ ಈ ಅಂಶ ಗಮನಿಸಿ
- ಹೋಲಿಕೆ ಮಾಡಿ: ಕೆಲವು ವಿಭಿನ್ನ ಸಾಲದಾತರು, ಅಪ್ಲಿಕೇಷನ್, ಇ ಕಾಮರ್ಸ್ ತಾಣಗಳು ಮತ್ತು ಚಿಲ್ಲರೆ ವ್ಯಾಪಾರಿಗಳು ವಿವಿಧ ಕೊಡುಗೆಗಳನ್ನು ನೀಡುತ್ತವೆ. ಹೀಗಾಗಿ ನೀವು ವಿವಿಧ ಕೊಡುಗೆಗಳನ್ನು ಹೋಲಿಸಿ ನೋಡಿ ನಿಮಗೆ ಸೂಕ್ತವಾದುದನ್ನು ಆಯ್ಕೆ ಮಾಡಿ. ಬಡ್ಡಿದರಗಳು, ಸಂಸ್ಕರಣಾ ಶುಲ್ಕಗಳನ್ನು ಗಮನಿಸಿ.
- ಬಜೆಟ್ ಲೆಕ್ಕ ಹಾಕಿ: ಮೊದಲಿಗೆ ನಿಮ್ಮ ಬಜೆಟ್ ಅನ್ನು ಲೆಕ್ಕ ಹಾಕಿ. ಕೊಡುಗೆ ಇದೆ ಎಂದಾಕ್ಷಣ ದುಬಾರಿ ಫೋನ್‌ಗಳನ್ನು ಖರೀದಿಸಲು ಮುಂದಾಗಬೇಡಿ. ಮುಂದೊದು ದಿನ ಸಾಲ ಮುಗಿಸುವುದೇ ದೊಡ್ಡ ತಲೆನೋವಾಗಿ ಪರಿಣಮಿಸಬಹುದು. ಹೀಗಾಗಿ ನಿಮ್ಮ ಆದಾಯ, ಖರ್ಚು ಲೆಕ್ಕ ಹಾಕಿ ಬಜೆಟ್ಗೆ ಅನುಗುಣವಾದ ಫೋನ್ ಆಯ್ಕೆ ಮಾಡಿ.
- ಷರತ್ತುಗಳನ್ನಮು ಎಚ್ಚರಿಕೆಯಿಂದ ಓದಿ: ನೀವು ಯಾವುದೇ ಒಪ್ಪಂದಕ್ಕೆ ಸಹಿ ಹಾಕುವ ಮೊದಲು, ಷರತ್ತುಗಳನ್ನು ಸಂಪೂರ್ಣ ಓದಿ. ಬಡ್ಡಿದರ, ಸಂಸ್ಕರಣಾ ಶುಲ್ಕಗಳು ಮತ್ತು ಅನ್ವಯಿಸಬಹುದಾದ ಯಾವುದೇ ಇತರ ಶುಲ್ಕಗಳನ್ನು ಅರ್ಥ ಮಾಡಿಕೊಳ್ಳಿ. ನೀವು ಪಾವತಿಯನ್ನು ತಪ್ಪಿಸಿಕೊಂಡರೆ ಅನ್ವಯವಾಗುವ ದಂಡ ಇತ್ಯಾದಿ ವಿವರಗಳನ್ನು ಮನನ ಮಾಡಿ.
- ಕಡಿಮೆ ಮಾಸಿಕ ಪಾವತಿಗಾಗಿ ಸಾಲದ ಅವಧಿಯನ್ನು ವಿಸ್ತರಿಸಬೇಡಿ: ಕೆಲವರು ಕಡಿಮೆ ಮಾಸಿಕ ಪಾವತಿಯನ್ನು ಪಡೆಯಲು ಸಾಲದ ಅವಧಿಯನ್ನು ವಿಸ್ತರಿಸಲು ಮುಂದಾಗುತ್ತಾರೆ. ಅನಿವಾರ್ಯವಲ್ಲದ ಹೊರತು ಈ ಆಯ್ಕೆಯನ್ನು ನೆಚ್ಚಿಕೊಳ್ಳಬೇಡಿ. ಯಾಕೆಂದರೆ ಇದಕ್ಕೆ ಹೆಚ್ಚಿನ ಬಡ್ಡಿ ಪಾವತಿಸಬೇಕಾಗುತ್ತದೆ.
- ವಿಮೆ (Insurance) ಪಡೆದುಕೊಳ್ಳಿ: ನಿಮ್ಮ ಫೋನ್ ಹಾನಿಗೊಳಗಾದರೆ ಅಥವಾ ಕಳವಾದರೆ ನೀವು ಇಎಂಐ ಕಟ್ಟಲೇಬೇಕು. ಹೀಗಾಗಿ ಈ ಅನಿರೀಕ್ಷಿತ ವೆಚ್ಚಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಫೋನ್ ವಿಮೆ ಪಡೆಯುವುದನ್ನು ಮರೆಯಬೇಡಿ.
ಇಎಂಐ ಸೌಲಭ್ಯ ಪಡೆಯುವುದು ಹೇಗೆ?
- ಆನ್ಲೈನ್ ವೆಬ್ಸೈಟ್ ಅಥವಾ ಆ್ಯಪ್ ಓಪನ್ ಮಾಡಿ.
- ಯಾವ ಸ್ಮಾರ್ಟ್ ಫೋನ್ ಖರೀದಿಸಲು ನೀವು ಇಚ್ಛಿಸುತ್ತಿದ್ದೀರಿ ಅದನ್ನು ಆಯ್ಕೆ ಮಾಡಿಕೊಳ್ಳಿ.
- ‘Buy Now’ ಆಯ್ಕೆಯನ್ನು ಟ್ಯಾಪ್ ಮಾಡಿ.
- ನಿಮ್ಮ ವಿಳಾಸವನ್ನು ನಮೂದಿಸಿ.
- ಕಂಟಿನ್ಯೂ ಆಯ್ಕೆಯನ್ನು ಒತ್ತಿ. ಇಲ್ಲಿ ಪಾವತಿ ಮೋಡ್ ಅನ್ನು ಇಎಂಐ ಎಂದು ಆಯ್ಕೆ ಮಾಡಿ ಕಂಟಿನ್ಯೂ ಬಟನ್ ಒತ್ತಿ.
- ನಿಮ್ಮ ಕ್ರೆಡಿಟ್ ಕಾರ್ಡ್ನ ಬ್ಯಾಂಕ್ ಆಯ್ಕೆ ಮಾಡಿ.
- ಇಎಂಐಯ ಅವಧಿ ಆಯ್ಕೆ ಮಾಡಿ.
- ಕಾರ್ಡಿನ ವಿವರಗಳನ್ನು ನಮೂದಿಸಿ ಮತ್ತು ಕಂಟಿನ್ಯೂ ಬಟನ್ ಕ್ಲಿಕ್ ಮಾಡಿ.
- ಮೊಬೈಲ್ ನಂಬರ್ಗೆ ಬರುವ ಒಟಿಪಿಯನ್ನು ನಮೂದಿಸಿ ಪಾವತಿಯನ್ನು ಪೂರ್ಣಗೊಳಿಸಿ.
ಶೂರೂಮ್‌ಗೂ ತೆರಳಿ ಆಫ್‌ಲೈನ್ ಮೂಲಕವೂ ಖರೀದಿಸಬಹುದು.
ಇದನ್ನೂ ಓದಿ: Income Tax Returns: ಆದಾಯ ತೆರಿಗೆ ರಿಟರ್ನ್ಸ್; ಯಾವ ಆದಾಯದವರಿಗೆ ಯಾವ ಫಾರ್ಮ್?