ಬೆಂಗಳೂರು: ಈ ಆರ್ಥಿಕ ವರ್ಷದ ಕೊನೆಯ ದಿನಗಳಲ್ಲಿ ನಾವಿದ್ದೇವೆ. ಏಪ್ರಿಲ್ 1ರಿಂದ ಕೆಲವು ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಅದರಲ್ಲೂ ಆದಾಯ ತೆರಿಗೆಗೆ ಸಂಬಂಧಿಸಿದ ಹೆಚ್ಚಿನ ಬಜೆಟ್ ಪ್ರಸ್ತಾಪಗಳು ಈ ದಿನದಿಂದ ಜಾರಿಗೆ ಬರುವುದರಿಂದ ವೈಯಕ್ತಿಕ ಹಣಕಾಸು ದೃಷ್ಟಿಕೋನದಿಂದ ಈ ದಿನ ಮಹತ್ವದ್ದಾಗಿರುತ್ತದೆ. ಹಾಗಾದರೆ ಆದಾಯ ತೆರಿಗೆ ವಿಚಾರದಲ್ಲಿ ಯಾವೆಲ್ಲ ಬದಲಾವಣೆಗಳಾಗುತ್ತವೆ ? ಇದು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮುಂತಾದ ವಿವರ ಇಂದಿನ ಮನಿಗೈಡ್ (Money Guide)ನಲ್ಲಿದೆ.
ಹೊಸ ತೆರಿಗೆ ರೆಜಿಮ್ ಡೀಫಾಲ್ಟ್ ಅಳವಡಿಕೆಯಲ್ಲಿ ಗಮನಾರ್ಹ ಮಾರ್ಪಾಡು ನಡೆಸಲಾಗಿದೆ. ತೆರಿಗೆ ಫೈಲಿಂಗ್ ಕಾರ್ಯವಿಧಾನವನ್ನು ಸುಗಮಗೊಳಿಸುವುದು ಮತ್ತು ಹೊಸ ರೆಜಿಮ್‌ನಲ್ಲಿ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಇದರ ಉದ್ದೇಶ. ಇದರಲ್ಲಿ ವಿನಾಯಿತಿಗಳೊಂದಿಗೆ ಕಡಿಮೆ ತೆರಿಗೆ ದರಗಳನ್ನು ಅಳವಡಿಸಿಕೊಳ್ಳಲಾಗಿದೆ.
ಆದಾಯ ತೆರಿಗೆ ದರಗಳು ಮತ್ತು ಸ್ಲ್ಯಾಬ್ಗಳು ಹಿಂದಿನದ್ದನ್ನೇ ಉಳಿಸಿಕೊಳ್ಳಲಾಗಿದೆ. ಕಳೆದ ಬಜೆಟ್‌ನಲ್ಲಿ ಘೋಷಿಸಿದಂತೆ ಹೊಸ ತೆರಿಗೆ ರೆಜಿಮ್ ಅಡಿಯಲ್ಲಿ ಮೂಲ ವಿನಾಯಿತಿ ಮಿತಿಯನ್ನು 2.5 ಲಕ್ಷ ರೂ.ಗಳಿಂದ 3 ಲಕ್ಷ ರೂ.ಗೆ ಹೆಚ್ಚಿಸಲಾಯಿತು. ಅದು ಹಾಗೆಯೇ ಮುಂದುವರಿಯಲಿದೆ. ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 87 ಎ ಅಡಿಯಲ್ಲಿ ರಿಯಾಯಿತಿಯನ್ನು 5 ಲಕ್ಷ ರೂ.ಗಳಿಂದ 7 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಆದ್ದರಿಂದ ಹೊಸ ರೆಜಿಮ್ ಅಡಿಯಲ್ಲಿ ವೈಯಕ್ತಿಕ ತೆರಿಗೆದಾರರು 7 ಲಕ್ಷ ರೂ. ತನಕದ ಆದಾಯಕ್ಕೆ ತೆರಿಗೆ ಪಾವತಿಸುವುದರಿಂದ ಮುಕ್ತರಾಗುತ್ತಾರೆ.
ಹೊಸ ತೆರಿಗೆ ಸ್ಲ್ಯಾಬ್
- 3 ಲಕ್ಷ ರೂ.ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ.
- 3 ಲಕ್ಷ ರೂ.ಯಿಂದ 6 ಲಕ್ಷ ರೂ. ಆದಾಯಕ್ಕೆ ಶೇ. 5ರಷ್ಟು ತೆರಿಗೆ ವಿಧಿಸಲಾಗುತ್ತದೆ.
- 6 ಲಕ್ಷ ರೂ.ಯಿಂದ 9 ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ. 10ರಷ್ಟು ತೆರಿಗೆ ವಿಧಿಸಲಾಗುತ್ತದೆ.
- 9 ಲಕ್ಷ ರೂ.ಗಳಿಂದ 12 ಲಕ್ಷ ರೂ.ಗಳವರೆಗಿನ ಆದಾಯಕ್ಕೆ ಶೇ. 15ರಷ್ಟು ತೆರಿಗೆ ವಿಧಿಸಲಾಗುತ್ತದೆ.
- 12 ರೂ.ಗಳಿಂದ 15 ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ. 20ರಷ್ಟು ತೆರಿಗೆ ವಿಧಿಸಲಾಗುತ್ತದೆ.
- 15 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಹಣಕ್ಕೆ ಶೇ. 30ರಷ್ಟು ತೆರಿಗೆ ವಿಧಿಸಲಾಗುತ್ತದೆ.
ಈ ಹಿಂದೆ ಹಳೆಯ ತೆರಿಗೆ ರೆಜಿಮ್‌ಗೆ ಮಾತ್ರ ಅನ್ವಯಿಸುತ್ತಿದ್ದ 50,000 ರೂ.ಯ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು ಈಗ ಹೊಸ ತೆರಿಗೆ ರೆಜಿಮ್‌ನಲ್ಲಿ ಸೇರಿಸಲಾಗಿದೆ. ಜತೆಗೆ 5 ಕೋಟಿ ರೂ.ಗಿಂತ ಹೆಚ್ಚಿನ ಆದಾಯದ ಮೇಲೆ ವಿಧಿಸಲಾಗುತ್ತಿದ್ದ ಶೇ. 37ರಷ್ಟು ಸರ್ಚಾರ್ಜ್ ಅಥವಾ ಹೆಚ್ಚುವರಿ ತೆರಿಗೆಯ ದರವನ್ನು ಶೇ. 25ಕ್ಕೆ ಇಳಿಸಲಾಗಿದೆ.
ಜೀವ ವಿಮೆ ಮೇಲಿನ ತೆರಿಗೆ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಘೋಷಿಸಿರುವ ಪ್ರಕಾರ, ಏಪ್ರಿಲ್ 1, 2023ರಂದು ಅಥವಾ ನಂತರ ವಿತರಿಸಲಾದ ಜೀವ ವಿಮಾ ಪಾಲಿಸಿಗಳ ಮೆಚ್ಯೂರಿಟಿ ಆದಾಯ ಮತ್ತು ಒಟ್ಟು ಪ್ರೀಮಿಯಂ 5 ಲಕ್ಷ ರೂ.ಗಿಂತ ಹೆಚ್ಚಿದ್ದರೆ ಅದು ತೆರಿಗೆಗೆ ಒಳಪಟ್ಟಿರುತ್ತದೆ. ಸರ್ಕಾರೇತರ ಉದ್ಯೋಗಿಗಳಿಗೆ ರಜೆ ನಗದೀಕರಣ ತೆರಿಗೆ ವಿನಾಯಿತಿ ಮಿತಿಯನ್ನು 2022ರಿಂದ 3 ಲಕ್ಷ ರೂ.ಗಳಿಂದ ಈಗ 25 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ: Money Guide: ತೆರಿಗೆ ವಿನಾಯಿತಿ ಪಡೆಯಬೇಕೆ? ಮಾ. 31ರೊಳಗೆ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಿ